Header Ads Widget

Responsive Advertisement

ಸ್ವಾಮಿ ವಿವೇಕಾನಂದರ ವಿಚಾರಧಾರೆ ಪ್ರಚಾರಕ್ಕೆ ಬದ್ದರು; ಶ್ರೀ ರಾಮಕೃಷ್ಣ ಆಶ್ರಮದ ಸಂತರ ಘೋಷಣೆ

ಸ್ವಾಮಿ ವಿವೇಕಾನಂದರ ವಿಚಾರಧಾರೆ ಪ್ರಚಾರಕ್ಕೆ ಬದ್ದರು; ಶ್ರೀ ರಾಮಕೃಷ್ಣ ಆಶ್ರಮದ ಸಂತರ ಘೋಷಣೆ

ಮಡಿಕೇರಿ. ಮಾ. 31: ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಸಮಾಜದ ಯುವ ಪೀಳಿಗೆಗೆ ನಿರಂತರ ಭೋದನೆ ಮಾಡುವದರೊಂದಿಗೆ, ಶ್ರೀ ಕೃಷ್ಣ ಸಂದೇಶದಂತೆ ಸನಾತನ ಹಿಂದೂ ಧರ್ಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಸಂತರು ದೇಶ ವಿದೇಶಗಳಲ್ಲಿ ಸದಾ ಶ್ರಮಿಸುತ್ತಿರುವದಾಗಿ ಶ್ರೀ ಮಠದ ಸಂತರು ಘೋಷಿಸಿದರು. ಇಂದು ಪೊನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದಲ್ಲಿ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮೈಸೂರು ಮಠದ ಶ್ರೀ ಮುಕ್ತಿದಾನಂದ ಮಹಾರಾಜರು ಮಾತನಾಡಿ ಕೊಡಗಿನ ಪೊನ್ನಂಪೇಟೆ ಆಶ್ರಮದಲ್ಲಿ ಸ್ವಾಮಿ ಶಾಂಭವಾನಂದ ಮಹಾರಾಜರ ಆದಿಯಾಗಿ ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ 15ನೇ ಸಂತರಾದ ಶ್ರೀ ಪರಹಿತಾ ನಂದ ಮಹಾರಾಜ್ ತನಕ ಅನೇಕರು ಸೇವೆ ಸಲ್ಲಿಸಿದ್ದಾಗಿ ನೆನಪಿಸಿದರು. ಶ್ರೀ ಮಠದ ಏಳಿಗೆಗೆ ಸದ್ಬಕ್ತರು ನಿರಂತರವಾಗಿ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶ್ರೀ ಪರಹಿತಾ ನಂದ ಮಹಾರಾಜ್ ಕೊಡಗಿನ ಜನರ ಹಾಗೂ ಶ್ರೀ ಮಠದ ವಿಶ್ವಸ್ತರು ಎಲ್ಲ ರೀತಿಯ ಸಹಕಾರದೊಂದಿಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ನಿತ್ಯ ದೇವತಾ ಕೈಂಕರ್ಯಗಳಿಗೆ ತೊಡಗಿಸಿಕೊಳ್ಳಲು ಸಲಹೆ ನೀಡಿದರು. ಶ್ರೀ ಮಠದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಬಳಿಕ ತುರುವೇಕೆರೆ ಶಾಖೆಗೆ ನಿಯೋಜನೆಗೊಂಡು ಈಗ ಬೆಂಗಳೂರಿನ ಹಲಸೂರು ಆಶ್ರಮದ ಅಧ್ಯಕ್ಷರಾಗಿರುವ ಶ್ರೀ ಭೋಧಸ್ವರೂಪಾನಂದ ಮಹಾರಾಜ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದರ ಆಶಯದಂತೆ ಸಹಸ್ರ ಮಾನದ ಹಾದಿಯಲ್ಲಿ ಸಂತಗಣ ಸಮಾಜ ಮುಖಿ ಸೇವೆ ಸಲ್ಲಿಸುವ ಸಂಕಲ್ಪ ಕೈಗೊಂಡಿರುವದಾಗಿ ಘೋಷಣೆ ಮಾಡಿದರು. ಈ ದಿಸೆಯಲ್ಲಿ ಶ್ರೀ ಮಠದಿಂದ ನಡೆಯುವ ನಿತ್ಯ ಉತ್ಸವ ಹಾಗೂ ಆರತಿ ಪೂಜೆಗಳಲ್ಲಿ ಸದ್ಬಕ್ತರು ತೊಡಗಿಸಿಕೊಂಡು ಮನೆ ಮನೆಗೆ ಸಂಸ್ಕಾರ ಪಡೆಯುವಂತೆ ತಿಳಿ ಹೇಳಿದರು. ಶತಮಾನದ ಹೊಸ್ತಿಲಲ್ಲಿ ಇರುವ ಪೊನ್ನಂಪೇಟೆ ಆಶ್ರಮದ ಮುನ್ನಲೆಗೆ ಹಾಗೂ ಆಶ್ರಮದ ಆಸ್ಪತ್ರೆಗೆ ಹೆಚ್ಚಿನ ಕಾಯಕಲ್ಪ ನೀಡುವ ಬಗ್ಗೆ ಸದ್ಬಕ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪೊನ್ನಂಪೇಟೆಯಿಂದ ಮಹಾರಾಷ್ಟ್ರದ ಶ್ರೀ ಮಠ ಶಾಖೆಗೆ ನಿಯೋಜನೆಗೊಂಡಿರುವ ಶ್ರೀ ತತ್ವ ರೂಪಾನಂದ ಮಹಾರಾಜ್ ಕೊಡಗಿನ ಜನತೆಯ ಸಹಕಾರವನ್ನು ಸ್ಮರಿಸಿಕೊಂಡು ಈನಾಡಿನ ಭಾಷೆ ಸಂಸ್ಕೃತಿ ಆಚಾರ ಪರಂಪರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಮಠಕ್ಕೆ ಸಂಬಂಧಿಸಿದ ವಿವಿಧ ಶಾಖೆಗಳ ಸಂತರ ಉಪಸ್ಥಿತಿ ಯಲ್ಲಿ ವೇದಮಂತ್ರ ಪಠನ ಭಜನೆ ಕಾರ್ಯಕ್ರಮ ನಡೆಯಿತು. ವಿಶ್ವಸ್ತರ ಪರವಾಗಿ ಹಿರಿಯರಾದ ಡಾ. ಶಿವಪ್ಪ ಸಿ. ಕೆ. ಉತ್ತಪ್ಪ ಕೆ. ಪಿ. ಉತ್ತಪ್ಪ ಹಾಗೂ ಸದ್ಬಕ್ತರ ಪರವಾಗಿ ಚಿ. ನಾ. ಸೋಮೇಶ್ ಅನಿಸಿಕೆ ಹಂಚಿಕೊಂಡರು. ಮಠದ ಸದ್ಬಕ್ತರ ಸಹಿತ ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಕೇಶವ ಕಾಮತ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.