ಕೊಡವ ಕುಟುಂಬ ತಂಡಗಳ ನಡುವೆ ನಡೆಯಲಿರುವ 24ನೇ ವರ್ಷದ ಹಾಕಿ ಪಂದ್ಯಾವಳಿ ‘ಕುಂಡ್ಯೋಳಂಡ ಹಾಕಿ ನಮ್ಮೆ-2024’ರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೆಸ್ಟ್ ಕೊಳಕೇರಿಯಲ್ಲಿರುವ ಕುಂಡ್ಯೋಳಂಡ ಐನ್ ಮನೆ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಕೈಪಿಡಿ ಅನಾವರಣ ಮಾಡಿದರು.
ಬಳಿಕ ಮಾತನಾಡಿದ ಪಾಂಡಂಡ ಬೋಪಣ್ಣ, ಪಂದ್ಯಾವಳಿ ಆಯೋಜನೆ ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಯಶಸ್ವಿಯಾಗಿ ನಡೆಸಲು ಸಾಧ್ಯ. ಕೊಡವ ಹಾಕಿ ಅಕಾಡೆಮಿ ವತಿಯಿಂದ ಎಲ್ಲಾ ರೀತಿಯ ನೆರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪಂದ್ಯಾವಳಿಗೆ ಒಂದು ವರ್ಷ ಮುಂಚಿತವಾಗಿಯೇ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆರ್ಥಿಕ ಕ್ರೋಢೀಕರಣ ವಿಚಾರದಲ್ಲಿಯೂ ಕುಟುಂಬದ ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕು. ಕೈಪಿಡಿಯನ್ನು ಅಚ್ಚುಕಟ್ಟಾಗಿ, ಆಕರ್ಷಕ ರೀತಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಕಿ ಹಬ್ಬ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ನಮ್ಮದು ಸಣ್ಣ ಕುಟುಂಬ. ಜನಸಂಖ್ಯೆಯಲ್ಲಿಯೂ ಕಡಿಮೆ ಪ್ರಮಾಣದಲ್ಲಿದ್ದೇವೆ. ಪಂದ್ಯಾವಳಿ ಆಯೋಜನೆಯ ದೊಡ್ಡ ಜವಾಬ್ದಾರಿ ನಮ್ಮ ಮೇಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತೇವೆ. ಎಲ್ಲರೂ ಹಾಕಿ ಹಬ್ಬದ ಯಶಸ್ಸಿಗೆ ಸಹಕರಿಸಬೇಕೆಂದರು.
ಹಾಕಿ ಹಬ್ಬ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ನಮ್ಮದು 105 ಮಂದಿ ಸದಸ್ಯರಿರುವ ಪುಟ್ಟ ಕುಟುಂಬ. ಹಾಕಿ ನಮ್ಮೆಯಂಥ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅಕಾಡೆಮಿಯವರ ಸಹಕಾರ ಅತ್ಯಗತ್ಯ. ಅಕಾಡೆಮಿಯ ಪ್ರತಿಯೊಬ್ಬರು ನಮ್ಮೊಂದಿಗಿದ್ದು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪಂದ್ಯಾವಳಿ ಆಯೋಜನೆಗೆ ಸರ್ಕಾರದ ನೆರವಿನ ಅಗತ್ಯವಿದೆ. ಈ ಸಂಬಂಧ ಕೊಡಗಿನ ಜನಪ್ರತಿನಿಧಿಗಳ ಸಹಕಾರ ಪಡೆದು ಸರ್ಕಾರದ ಗಮನಸೆಳೆಯಲಾಗುವುದು. ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ವಾಕೋವರ್ ಇಲ್ಲದೆ ಪಂದ್ಯಾವಳಿ ನಡೆಸಬೇಕೆಂಬುದು ನಮ್ಮ ಕನಸು. 400ಕ್ಕೂ ಹೆಚ್ಚು ತಂಡಗಳ ನೋಂದಣಿ ಮಾಡಿಸಿ, ಎಲ್ಲರೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ವಿಭಿನ್ನವಾಗಿ, ವರ್ಣರಂಜಿತವಾಗಿ ಆಯೋಜನೆಗೊಳ್ಳುವ ಮೂಲಕ ಎಲ್ಲರ ಪಾಲ್ಗೊಳ್ಳುವಿಕೆಯ ಹಬ್ಬವಾಗಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆಂದು ಅನಿಸಿಕೆ ಹಂಚಿಕೊಂಡರು.
ಪಂದ್ಯಾವಳಿ ಆಯೋಜನೆ ಸಂಬಂಧ ಅಧಿಕೃತ ಹಕ್ಕೋಲೆ(ಅನುಮತಿ ಪತ್ರ)ಯನ್ನು ಕೊಡವ ಹಾಕಿ ಅಕಾಡೆಮಿ ಪದಾಧಿಕಾರಿಗಳು ಕುಂಡ್ಯೋಳಂಡ ಹಾಕಿ ನಮ್ಮೆ ಸಮಿತಿಗೆ ಹಸ್ತಾಂತರಿಸಿದರು. ಹಾಕಿ ನಮ್ಮೆ ನಡೆಸುವ ಜವಾಬ್ದಾರಿ ನೀಡಿದ್ದಕ್ಕಾಗಿ ಕುಂಡ್ಯೋಳಂಡ ಕುಟುಂಬದ ಐನ್ಮನೆಯ ಫೋಟೋವನ್ನು ಸ್ಮರಣಿಕೆಯಾಗಿ ಹಾಕಿ ಅಕಾಡೆಮಿಗೆ ಇದೇ ಸಂದರ್ಭ ಕುಟುಂಬಸ್ಥರು ನೀಡಿದರು.
ಕೈಪಿಡಿಯಲ್ಲಿ ಏನಿದೆ..?
12 ಪುಟಗಳ ಕೈಪಿಡಿಯನ್ನು ವಿನ್ಯಾಸಗಾರ ಕುಂಡ್ಯೋಳಂಡ ರೋಶನ್ ಕಾರ್ಯಪ್ಪ ತಯಾರಿಸಿದ್ದಾರೆ. ಕೊಡವರ ಸಾಂಪ್ರದಾಯಿಕ ಕುಪ್ಯ ಚ್ಯಾಲೆಯ ಬಣ್ಣವನ್ನು ಹೋಲುವಂತೆ ಕೈಪಿಡಿ ವಿನ್ಯಾಸಗೊಳಿಸಲಾಗಿದೆ. ಒಳಪಟುಗಳಲ್ಲಿ ಸಮುದಾಯದ ಒಗ್ಗಟ್ಟನ್ನು ಬಿಂಬಿಸುವಂತೆ ವೃತ್ತಾಕಾರದಲ್ಲಿ ಚಿತ್ರಗಳ ಜೋಡಣೆ ಮಾಡಲಾಗಿದೆ. ಹಾಕಿ ಆಟದ ಇತಿಹಾಸ ಕೊಡವರ ಹಿನ್ನೆಲೆ, ಆಚರಣೆಗಳು, ಹಾಕಿ ಮತ್ತು ಕೊಡವರ ನಡುವಿನ ಸಂಬಂಧ, ಕೊಡಗಿನ ಒಲಿಂಪಿಯನ್ಗಳ ಮಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಕಾಫಿ, ಇಗ್ಗುತ್ತಪ್ಪ ದೇವಾಲಯ, ಊರಿನಲ್ಲಿ ಆರಾಧಿಸುವ ದೇವರುಗಳ ವಿವರಣೆ, ಕುಟುಂಬದ ಐನ್ಮನೆ ವಿವರ, ಕಾರೋಣ, ಅಜ್ಜಪ್ಪನ ಕುರಿತಾದ ಮಾಹಿತಿ, ಕುಂಡ್ಯೋಳಂಡ ಕುಟುಂಬದ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಲಾಗಿದೆ.
ಕುಟುಂಬದ ಹಿರಿಯರಾದ ಕುಂಡ್ಯೋಳಂಡ ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷರಾದ ಬಡಕಡ ದೀನಾ ಪೂವಯ್ಯ, ಮಾದಂಡ ಎಸ್. ಪೂವಯ್ಯ, ಕುಕ್ಕೇರ ಜಯ ಚಿಣ್ಣಪ್ಪ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚೈಯ್ಯಂಡ ಸತ್ಯ ಗಣಪತಿ, ಅಕಾಡೆಮಿ ನಿರ್ದೇಶಕರಾದ ಚೇನಂಡ ಸುರೇಶ್ ನಾಣಯ್ಯ, ಕುಲ್ಲೇಟಿರ ಅರುಣ್ ಬೇಬ ಮುಂತಾದವರು ಈ ಸಂದರ್ಭ ಇದ್ದರು.
ಕುಂಡ್ಯೋಳಂಡ ಹೇಮ ಪ್ರಾರ್ಥಿಸಿದರು. ಕುಂಡ್ಯೋಳಂಡ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ಕುಂಡ್ಯೊಳಂಡ ವಿಶು ಪೂವಯ್ಯ ನಿರೂಪಿಸಿದರು. ಕುಂಡ್ಯೋಳಂಡ ಸುರೇಶ್ ಉತ್ತಪ್ಪ ವಂದಿಸಿದರು.
ಕುಂಡ್ಯೋಳಂಡ ಹಾಕಿ ನಮ್ಮೆ-2024’ ಕೈಪಿಡಿಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅನಾವರಣ ಮಾಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network