Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ಪರಿಮಳ ಪಸರಿಸಲು ಪರ್ವಕಾಲ

 (ಅಕ್ಟೋಬರ್ 1, ಅಂತರರಾಷ್ಟ್ರೀಯ ಕಾಫಿ ದಿನ ವಿಶೇಷ ಲೇಖನ)


ಬೆಳಗಿನ ಹೊತ್ತು ಕೈಯಲ್ಲಿ ಒಂದು ಕಪ್ಪು ಕಾಫಿ ಹಿಡಿದು ಹೀರುತ್ತಿರುವಾಗ, ಅದರ ಪರಿಮಳದ ಆನಂದ ಅದೆಷ್ಟು ಆವರಿಸಿರುತ್ತೆಂದರೆ, ಆ ಪರಿಮಳ ಬಂದುದಾದರೂ ಹೇಗೆ? ಕಾಫಿಯಾದರೂ ಎಲ್ಲಿಂದ ಬಂತು? ಅದರ ತಯಾರಿಯನ್ನು ಕಂಡುಹಿಡಿದವರ್ಯಾರು? ಇತ್ಯಾದಿ ಯಾವ ಪ್ರಶ್ನೆಗಳೂ ನೆನಪಾಗುವುದಿಲ್ಲ. ಅಷ್ಟು ಪರಿಮಳವು ಆವರಿಸಿದ್ದರೆ ಆಶ್ಚರ್ಯವಿಲ್ಲ!
    ನಮ್ಮ ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕಾಫಿ, ವಿದೇಶಗಳಿಗೆ ರಫ್ತಾಗುತ್ತದೆ. ಕಾಫಿ ಒಟ್ಟು ಉತ್ಪಾದನೆ ಮತ್ತು ದೇಶದ ಜನಸಂಖ್ಯೆ ಎರಡನ್ನು ಹೋಲಿಸಿ ನೋಡಿದಾಗ ಕಾಫಿ ಆಂತರಿಕ ಬಳಕೆ ಅತ್ಯಂತ ಕಡಿಮೆ ಇದೆ. ದೇಶದೊಳಗೆ ಕಾಫಿ ಬಳಕೆ ಹೆಚ್ಚಿಸುವ ಗುರಿ ಮತ್ತು ಸವಾಲು ನಮ್ಮ ಮುಂದಿದೆ. ಬೆಳೆಗಾರರನ್ನು ರಕ್ಷಿಸಲು ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಕಾಫಿ ಉತ್ಪಾದನೆಗೆ ಇನ್ನಷ್ಟು ಉತ್ತೇಜನ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 1, ಅಂತರರಾಷ್ಟ್ರೀಯ ಕಾಫಿ ದಿನವಾಗಿದ್ದು, ಭಾರತೀಯ ಕಾಫಿಗೆ ಜಾಗತಿಕ ಮನ್ನಣೆ ದೊರೆಯುವಂತೆ ಬೆಳಕು ಚೆಲ್ಲಲು ಈ ವಿಶೇಷ ಲೇಖನ.
    ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ ಅಮೃತ ಎನ್ನಬಹುದು. ಕಾಫಿ ಹೂವು ಬಿಟ್ಟಾಗಲಂತೂ ನೋಡಲು ಎರಡು ಕಣ್ಣು ಸಾಲವು. ಇಡೀ ಕಾಫಿ ತೋಟದಲ್ಲಿ ಅಚ್ಚ ಬಿಳಿಯ ಹೂವುಗಳು ಹಸಿರಿನ ಮೇಲೆ ಮೊಸರು ಚೆಲ್ಲಿದಂತೆ ಕಾಣುತ್ತವೆ. ಹೂವಾಡಿದ ಮೇಲೆ ಕಾಯಿ ತುಂಬಿಕೊಂಡು ಅವುಗಳು ಹಣ್ಣಾಗುವಾಗುವವರೆಗೂ ಅಷ್ಟೇ ಸುಂದರವಾದ ದೃಶ್ಯ ಕಾಫಿ ತೋಟವನ್ನು ಆವರಿಸಿಕೊಂಡಿರುತ್ತದೆ. ಹಸಿರು ಕಾಯಿಗಳು ಬಲಿತಂತೆ ರಂಗು ತುಂಬಿಕೊಳ್ಳುತ್ತವೆ. ಅಪ್ಪಟ ಕೆಂಪು ಬಣ್ಣದ ಹಣ್ಣುಗಳು ಕಾಫಿ ಗಿಡದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. 
    ಅಂತರರಾಷ್ಟ್ರೀಯ ಕಾಫಿ ದಿನವು ಕಾಫಿಯನ್ನು ಒಂದು ಪಾನೀಯವಾಗಿ ಪ್ರಚಾರ ಮಾಡಲು ಮತ್ತು ಆಚರಿಸಲು ಬಳಸಲಾಗುವ ಒಂದು ಸಂದರ್ಭವಾಗಿದೆ, ಜಗತ್ತಿನಾದ್ಯಂತ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಮಾರ್ಚ್ 3, 2014 ರಂದು ನಡೆದ ಒಂದು ಸಭೆಯಲ್ಲಿ, ಎಕ್ಸ್ಪೋ 2015 ರ ಭಾಗವಾಗಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್ನಲ್ಲಿ ಮೊದಲ ಅಧಿಕೃತ ಅಂತರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಲು ತೀರ್ಮಾನಿಸಿತು. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015.
    ಕರ್ನಾಟಕದ ಕಾಫಿಗೆ ಅದರದೆ ಆದ ವಿಶೇಷತೆಯುಂಟು. ಇಲ್ಲಿನದು ಹೆಚ್ಚಾಗಿ ರೊಬಸ್ಟಾ ಮತ್ತು ಅರೆಬಿಕಾ ತಳಿಗಳು. ಆದರೆ ಇಲ್ಲಿನ ಕಾಫೀ ತೋಟಗಳು ನೆರಳಿನಲ್ಲಿ ಅಪ್ಪಟ ಜೈವಿಕ ಸಮೃದ್ಧತೆಯಿಂದ ಇರುವಂತಹಾ ತೋಟಗಳು. ಸಾಕಷ್ಟು ನಿತ್ಯಹರಿದ್ವರ್ಣದ, ಸಾರಜನಕವನ್ನು ಸ್ಥಿರೀಕರಿಸಬಲ್ಲ, ಜೊತೆಗೆ ವಿವಿಧ ಎತ್ತರಗಳ ಎಲೆ ತಾರಸಿಗಳನ್ನು ಹೊಂದಿರುವ ಸಾಕಷ್ಟು ಸಸ್ಯಗಳನ್ನು ತೋಟದಲ್ಲಿ ಕಾಣಬಹುದು. ಈ ದೃಶ್ಯವನ್ನು ಭಾರತ ಬಿಟ್ಟು ಇತರೇ ದೇಶಗಳಲ್ಲಿ ಕಾಣಲಾಗದು. ಗಿಡಮರ ನಾಶಪಡಿಸಿ, ಕಾಫಿ ಬೆಳೆಯುವ ಹೊಸ ಪ್ರಯತ್ನಗಳು ಕಾಫಿ ಕೃಷಿ ಮತ್ತು ಕಾಫಿ ಸಂಸ್ಕೃತಿಯನ್ನೇ ನಾಶಪಡಿಸುತ್ತವೆ. ಇಂತಹ ಪ್ರಯೋಗಗಳಿಂದ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದೂ ಇಲ್ಲ. ಭಾರತದ ಮುಕ್ಕಾಲು ಪಾಲು ಕಾಫಿಯನ್ನು ಕರ್ನಾಟಕ ರಾಜ್ಯದಲ್ಲೇ ಉತ್ಪಾದಿಸಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ನಮ್ಮ ದೇಶವು ಜಗತ್ತಿನಲ್ಲಿ 5ನೆಯ ರಾಷ್ಟ್ರವಾಗಿದೆ. ಅದರ ಮುಕ್ಕಾಲು ಪಾಲಿನ ಕೊಡುಗೆಯು ಕರ್ನಾಟಕ ರಾಜ್ಯದ್ದೇ.
    ನೆರಳಿನ ಆಶ್ರಯ ಮತ್ತು ಪರಿಸರ ಸ್ನೇಹಿ ಕಾಫಿಗೆ ನಮ್ಮ ಕರ್ನಾಟಕ ರಾಜ್ಯ ಪ್ರಸಿದ್ಧಿ. ನಮ್ಮದು ಪರಿಸರಸ್ನೇಹಿ ಕಾಫಿ ಕೃಷಿ. ವಿಶ್ವಮಟ್ಟದಲ್ಲೂ ಹಾಗೆಯೇ ಗುರುತಿಸಿಕೊಂಡಿದ್ದೇವೆ. ಅರೆಬಿಕಾ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆಯಬೇಕು. ನಮ್ಮ ಕಾಫಿ ಉದ್ಯಮವು ಪರಿಸರವನ್ನು ಉಳಿಸಿ, ಬೆಳೆಸುವಂತಿರಬೇಕು. ಜೀವವೈವಿಧ್ಯಗಳನ್ನು ಪೋಷಿಸಿ, ಜಲಮೂಲ ರಕ್ಷಿಸುವಂತಾಗಬೇಕಿದೆ. ಇಂದಿನ ದಿನಗಳಲ್ಲಿ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಾಫಿ ಬೆಳೆಯಲ್ಲಿ ಸಿಗುತ್ತಿರುವ ಆದಾಯ ತೋಟದ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಪೂರಕ ಬೆಳೆಯಾಗಿ ಕಾಳುಮೆಣಸು ಬೆಳೆದಿರುವವರು ಮಾತ್ರ ಚೇತರಿಕೆಯಲ್ಲಿದ್ದಾರೆ.
    ಕಾಫಿ ಮಂಡಳಿಯು ನಿಜ ಅರ್ಥದಲ್ಲಿ ಬೆಳೆಗಾರರು ಮತ್ತು ಸರ್ಕಾರದ ನಡುವಿನ ಸೇತುವೆ ಇದ್ದಂತೆ. ಕಾಫಿ ಕೃಷಿ ಅಥವಾ ಉದ್ಯಮ ಸದಾ ಸವಾಲುಗಳನ್ನೇ ಎದುರಿಸಿಕೊಂಡು ಬಂದಿದೆ. ಬರಗಾಲ, ಅತಿವೃಷ್ಟಿ ಹಾಗೂ ಕಾಫಿ ಗಿಡಗಳಿಗೆ ರೋಗರುಜಿನ ಯಾವಾಗ ಬರುತ್ತದೆ ಎಂದು ಹೇಳಲಾಗದು; ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಬೆಳೆಗಾರರಿಗೆ ಸ್ಪಂದಿಸಬೇಕಾದುದು ಕಾಫಿ ಮಂಡಳಿಯ ಹೊಣೆಗಾರಿಕೆಯಾಗಿದೆ.
    ಅರೆಬಿಕಾ ಕಾಫಿಗೆ ಮಾರಕವಾಗಿರುವ ಕಾಂಡಕೊರಕ ಬಾಧೆಗೆ  ಪರಿಹಾರ ಕಂಡುಹಿಡಿಯಬೇಕಿದೆ. ಕಾಂಡಕೊರಕ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದವರಿಗೆ ₹5 ಕೋಟಿ ಬಹುಮಾನವನ್ನು ಈ ಹಿಂದೆಯೇ ಕಾಫಿ ಮಂಡಳಿ ಘೋಷಿಸಿದೆ. ಇದುವರೆಗೂ ಕಾಂಡಕೊರಕ ಕೀಟ ನಿಯಂತ್ರಣಕ್ಕೆ ಪರಿಣಾಮಕಾರಿ ಕೀಟನಾಶಕ ಕಂಡುಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಸ್ಟೆಮ್‌ ಬೋರರ್‌, ಬೆರ್ರಿ ಬೋರರ್‌, ಫ್ರೂಟ್‌ ಬೋರರ್‌ ನಿಯಂತ್ರಣಕ್ಕೆ ಇಲ್ಲಿಯವರಗೆ ಸೂಕ್ತ ಪರಿಹಾರ ಲಭಿಸಿಲ್ಲ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯ ಕಾಫಿ ಸಂಶೋಧನಾ ವಿಭಾಗ ಮತ್ತು ವಿಜ್ಞಾನಿಗಳು ಕಾರ್ಯಪ್ರವರ್ತರಾಗಬೇಕಿದೆ. ಅರೆಬಿಕಾ ಕಾಫಿ ಉಳಿಸಲು ಕೇಂದ್ರ ಸರ್ಕಾರ ಕೂಡ ಮಧ್ಯ ಪ್ರವೇಶಿಸಬೇಕಾದ ತುರ್ತು ಅಗತ್ಯವಿದೆ.
    ಭಾರತದ ಸಣ್ಣ ಕಾಫಿ ಬೆಳೆಗಾರರಿಗೆ ಅವರು ಬೆಳೆದ ಗುಣಮಟ್ಟದ ಕಾಫಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಮೂಲಕ, ಉತ್ತಮ ಮಾರುಕಟ್ಟೆಯನ್ನು ಕಂಡುಕೊಳ್ಳುವುದಕ್ಕೆ ವೇದಿಕೆಯನ್ನು ಒದಗಿಸಬಲ್ಲ '5ನೇ ವಿಶ್ವ ಕಾಫಿ ಸಮಾವೇಶ ಮತ್ತು ಎಕ್ಸ್ಪೋ ಹಾಗೂ ಕಾಫಿ ಕೃಷಿಕರಿಗೆ ಮಾಹಿತಿ' ಕಾರ್ಯಕ್ರಮ ಸೆ.7 ರಿಂದ ಸೆ.9ರವರೆಗೆ ಏಷ್ಯಾದಲ್ಲೆ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು, ಆದರೆ ಕೊರೊನಾ ವೈರಸ್ ಹಾವಳಿಯಿಂದ 5ನೇ ವಿಶ್ವ ಕಾಫಿ ಸಮಾವೇಶ ಅಲ್ಲಿಗೆ ಸದ್ದು-ಸುದ್ದಿಯಿಲ್ಲದಂತಾಗಿದೆ.
    ಕಾಫಿ ವ್ಯಾಪಾರ ಮುಕ್ತ ಮಾರುಕಟ್ಟೆಯ ಮೇಲೆ ಅವಲಂಬಿಸಿದೆ. ಬೆಲೆ ನಿಗದಿ ಅಂತರರಾಷ್ಟ್ರೀಯ ಮಟ್ಟದ ಖರೀದಿದಾರರ ಕೈಯಲ್ಲಿದೆ. ಪ್ರತಿಷ್ಠಿತ ಕಂಪೆನಿಗಳು, ಮಧ್ಯವರ್ತಿಗಳು ಬೆಲೆ ನಿಯಂತ್ರಿಸುತ್ತಿದ್ದಾರೆ. ಚಿಕೋರಿಗೆ ನಿಯಂತ್ರಣ ಹೇರಬೇಕಿದೆ. ಚಿಕೋರಿ ದಂಧೆಗೆ ಕಡಿವಾಣ ಹಾಕದಿದ್ದರೆ ಕಾಫಿ ಬೆಳೆಯುವವರಿಗೂ, ಕಾಫಿ ಬಳಸುವವರಿಗೂ ತೊಂದರೆ ಕಟ್ಟಿಟ್ಟ ಬುತ್ತಿ. ದೇಶದಲ್ಲಿ ಕಾಫಿ ಪುಡಿ ಉತ್ಪಾದನೆಗಿಂತ ಚಿಕೋರಿ ಉತ್ಪಾದನೆಯೇ ಹೆಚ್ಚಿದೆ ಎನ್ನುವ ಗಂಭೀರ ಆಪಾದನೆ ಇದೆ. ಕಾಫಿಗೆ ಹಿತಮಿತವಾಗಿ ಚಿಕೋರಿ ಬೆರೆಸಬೇಕು. ಚಿಕೋರಿ ಮಿಶ್ರಣದಲ್ಲಿ ನಿಗದಿತ ಮಾನದಂಡ ಮೀರದಂತೆ ಕಟ್ಟುನಿಟ್ಟಿನ ಆದೇಶ ಪಾಲನೆಯಾಗಬೇಕಿದೆ.
    ಕಾಫಿಯನ್ನು ರಾಷ್ಟ್ರೀಯ ಪಾನಿಯ ಎಂದು ಘೋಷಿಸುವ ಆಂದೋಲನ ಕೆಲವು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದು, ಈಗ ಅದು ಕೂಡಾ ಜನಮಾನಸದಲ್ಲಿ ಮರೆಮಾಚುತ್ತಿದೆ. ದೇಶದೊಳಗೆ ಕಾಫಿ ಆಂತರಿಕ ಬಳಕೆ ಹೆಚ್ಚಿಸುವ ಬಗ್ಗೆ ಕಾಫಿ ಮಂಡಳಿ, ಕಾಫಿಗೆ ಸಂಭಂದಿಸಿದ ಸಂಘ ಸಂಸ್ಥೆಗಳು ಹಾಗೂ ಕಾಫಿ ಬೆಳೆಗಾರರು ಕಾರ್ಯಪ್ರವರ್ತರಾಗಬೇಕಿದೆ. ಗುಣಮಟ್ಟದ ಕಾಫಿ ಉತ್ಪಾದಿಸುವ ನಿಟ್ಟಿನಲ್ಲಿ ಅಲೋಚಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಬೇಡಿಕೆ ಹೆಚ್ಚಿಸಬೇಕಾಗಿದೆ.  ಕಾಫಿ ಬಳಕೆ ಮಾಡದಿರುವ ದೇಶಗಳಿಗೆ ಗುಣಮಟ್ಟದ ಕಾಫಿ ರಫ್ತು ಮಾಡಿ, ಜನರು ಕಾಫಿ ಕುಡಿಯುವಂತೆ ಮಾಡಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶದ ಕಾಫಿಗೆ ಬೇಡಿಕೆ ಹೆಚ್ಚುವಂತೆ ಮಾಡುವುದೊಂದೇ ಇದಕ್ಕಿರುವ ಏಕೈಕ ಪರಿಹಾರ. 
    ಮೂರು ಕಪ್ ಕಾಫಿ ಸೇವನೆ ಮಾಡಿದರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆ, ಆರು ಕಪ್‌ಗಿಂತ ಹೆಚ್ಚು ಕುಡಿದರೆ ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಈ ಕೊರೊನಾ ಕಾಲಘಟ್ಟದಲ್ಲಿ ಕುಡಿಯುವ ಕಾಫಿಗೆ ಸ್ವಲ್ಪ ಜಜ್ಜಿದ ಶುಂಟಿ ಹಾಕುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹಾಗಾಗಿ  ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕಾಫಿಯಲ್ಲಿನ ಔಷದಿಯ ಗುಣಗಳಿರುವುದು ಸಂಶೊಧನೆಗಳಿಂದ ಕಂಡು ಬಂದಿದೆ. ಇತ್ತೀಚೆಗೆ ಗ್ರೀನ್ ಕಾಫಿ ಕೂಡ ಬಂದಿದೆ. ವ್ಯಾಯಾಮದ ನಂತರ ಕಾಫಿ ಕುಡಿದರೆ ಸ್ನಾಯು ನೋವು ಕಡಿಮೆ ಆಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲರಿಗು ತಿಳಿದಿರುವಂತೆ ತಲೆ ನೋವು ಕೂಡ ಕಡಿಮೆ ಯಾಗುತ್ತದೆ. ಒಂದು ಹಂತದ ನೈಸರ್ಗಿಕ ನೋವು ನಿವಾರಕ ಈ ಕಾಫಿ ಎಂದರೂ ತಪ್ಪಿಲ್ಲ. ಕಾಫಿಗೆ ಒತ್ತಡವನ್ನು ತಗ್ಗಿಸುವ ಶಕ್ತಿ ಇದೆ ಎಂಬುವುದು ಇತ್ತೀಚೆಗಿನ ಸಂಶೊಧನೆಗಳಿಂದ ಕಂಡು ಬಂದಿದೆ.
    ಕಾಫಿಯ ಗುಣಗಳನ್ನು ಪಟ್ಟಿ ಮಾಡಿದರೆ ಇದನ್ನು ಪೇಯದ ರೂಪದಲ್ಲಿ ಸೇವಿಸಿದ ಬಳಿಕ ದೇಹ ಮತ್ತು ಮನಸ್ಸಿಗೆ ಆಗುವ ಲಾಭಗಳನ್ನೇ ಎಲ್ಲರೂ ಉಲ್ಲೇಖಿಸುತ್ತಾರೆ. ಬೆಳಗ್ಗಿನ ಉಪಾಹಾರದ ಬಳಿಕ ಒಂದು ಲೋಟ ಕಾಫಿ ಕುಡಿದರೆ ಇಡಿಯ ದಿನ ಉಳಿಯುವ ಉಲ್ಲಾಸ, ಸ್ನೇಹಿತರ ಜೊತೆಗೆ ಒಂದು ಕಾಫಿಯ ನೆಪದಲ್ಲಿ ಕಳೆಯುವ ಉತ್ಸಾಹಕರ ಕ್ಷಣ ಮೊದಲಾದವು ಕಾಫಿಯ ಗುಣಗಳನ್ನು ತಿಳಿಸುತ್ತವೆ. ಕಾಫಿ ಉತ್ಪಾದನೆ, ಕಾಫಿ ಬೀಜದಿಂದ ಕಾಫಿ ಬಟ್ಟಲಿನವರೆಗೂ ಕಾಫಿ ಇತಿಹಾಸವನ್ನು ಗ್ರಾಹಕರಿಗೆ ತಿಳಿಸುವ ಕೆಲಸ ಆಗಬೇಕಿದೆ.
    ಪರಿಮಳವ ಸವಿಯದೇ ಕಾಫಿ ಲೋಟಕ್ಕೆ ತುಟಿ ಬಿಚ್ಚುವುದುಂಟೆ? ಮುಂಜಾನೆ ದಿನಪತ್ರಿಕೆಯಲ್ಲಿ ತಲೆಹಾಕಿ ಕೂತಾಗ ಅತ್ತ ಅಡುಗೆಮನೆಯಿಂದ ಬರುವ ಕಾಫಿಯ ಪರಿಮಳ ಮೂಗು ಮನಸ್ಸೆಲ್ಲವನ್ನು ತನ್ನ ಸೆರಗಿಗೆ ಸೆಳೆಯುತ್ತಾಳೆ. ಕ್ಷಣಾರ್ಧದಲ್ಲಿ ಎಲ್ಲವೂ ಕಾಫಿಮಯವಾಗಿ ಅದರ ಪರಿಮಳದಲ್ಲಿ ತೇಲಿ ಬೀಡುವುದುಂಟು. 
     ಜಾಗತಿಕ ಆರ್ಥಿಕತೆಯ ಮೇಲೆ ಕೊರೊನಾ ದಾಳಿಯ ಈ ಸಂದರ್ಭದಲ್ಲಿ ಗುಣಮಟ್ಟದ ಕಾಫಿ ಉತ್ಪಾದಿಸಿ, ಸ್ಥಳೀಯವಾಗಿ ಸಂಸ್ಕರಿಸಿ, ಪುಡಿಮಾಡಿ, ಪ್ಯಾಕಿಂಗ್ ಮಾಡಿ ಅಂತರರಾಷ್ಟ್ರೀಯ ಗುಣಮಟ್ಟದೊಂದಿಗೆ ಜಾಗತಿಕ ಮಾರುಕಟ್ಟೆಗೆ  ಭಾರತೀಯ ಕಾಫಿಯ ಪರಿಮಳ ಪಸರಿಸಲು ಇದು ಪರ್ವಕಾಲ. ಎಲ್ಲಾ ಕಾಫಿ ಪ್ರಿಯರಿಗೆ ಅಂತರರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು.
   
ಲೇಖಕರು: ಅರುಣ್ ಕೂರ್ಗ್
( ಪತ್ರಕರ್ತರು )