Header Ads Widget

Responsive Advertisement

ತ್ರಿವೇಣಿ ಸಂಗಮದ ಬಳಿ ನೂತನವಾಗಿ ನಿರ್ಮಿಸಿರುವ ಮುಡಿ ಶೆಡ್ಡು ಅ.16 ರಂದು ಉದ್ಘಾಟನೆ: ಬಿ.ಎಸ್.ತಮ್ಮಯ್ಯ


ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ನೂತನವಾಗಿ ನಿರ್ಮಿಸಿರುವ ಮುಡಿ ಶೆಡ್ಡು, ಪಿಂಡ ಪ್ರದಾನ, ಶ್ರದ್ಧಾ ಮತ್ತು ಹೋಮ ಕಟ್ಟಡವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಅಕ್ಟೋಬರ್, 16 ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ತಲಕಾವೇರಿ-ಭಗಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ತಿಳಿಸಿದ್ದಾರೆ.

ಭಾಗಮಂಡಲದಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಸುಮಾರು 78 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳಗಳಲಾಗಿದ್ದು, ಅವುಗಳನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ಅಧಿಕಾರಿಗಳ ಜೊತೆ ತಲಕಾವೇರಿ ತುಲಾಸಂಕ್ರಮಣ ಜಾತ್ರೆ ಸಂಬಂಧ ಚರ್ಚಿಸಲಿದ್ದಾರೆ ಎಂದು ತಮ್ಮಯ್ಯ ಅವರು ಮಾಹಿತಿ ನೀಡಿದರು.
ತಲಕಾವೇರಿ ಮತ್ತು ಭಾಗಮಂಡಲ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತ್ರಿವೇಣಿ ಸಂಗಮ ಭರ್ತಿಯಾಗುತ್ತಿದ್ದು, ಭಕ್ತಾಧಿಗಳು ತ್ರಿವೇಣಿ ಸಂಗಮಕ್ಕೆ ಇಳಿಯಬಾರದು ಎಂದು ತಲಕಾವೇರಿ-ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದರು.
ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿರುವುದರಿಂದ ನದಿಗೆ ಇಳಿಯಬಾರದು. ಭಕ್ತಾಧಿಗಳು ತುಂಬಾ ಎಚ್ಚರ ವಹಿಸಬೇಕಿದೆ. ಅಕ್ಟೋಬರ್, 17 ರಂದು ಪಿಂಡ ಪ್ರದಾನ ಕಾರ್ಯಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದೆ. ತುಲಾ ಸಂಕ್ರಮಣ ಜಾತ್ರಾ ವಿಶೇಷ ಪೂಜಾ ಕಾರ್ಯವು ಅಕ್ಟೋಬರ್, 17 ರಿಂದ ನವೆಂಬರ್, 17 ರವರೆಗೆ ಒಂದು ತಿಂಗಳ ಕಾಲ ಜರುಗಲಿದ್ದು, ಭಕ್ತಾಧಿಗಳು ಈ ಸಮಯದಲ್ಲಿ ಆಗಮಿಸಿ ಪೂಜಾ ಕಾರ್ಯ ಕೈಗೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.
ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಬಿ.ಎಸ್.ತಮ್ಮಯ್ಯ ಅವರು ಕೋರಿದರು.

ಕೋವಿಡ್ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಭಕ್ತಾಧಿಗಳು ಯಾವುದೇ ಗೊಂದಲಕ್ಕೆ ಅವಕಾಶ ಮಾಡಬಾರದು. ಗುಂಪು ಸೇರುವುದು ಮತ್ತಿತರ ಕಾರ್ಯವನ್ನು ಮಾಡಬಾರದು. ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣ ಪತ್ರ ತರಬೇಕು. ಭಾವನಾತ್ಮಕವಾಗಿ ಯಾವುದಕ್ಕೂ ಅವಕಾಶ ಮಾಡಬಾರದು ಎಂದು ತಮ್ಮಯ್ಯ ಅವರು ಕಳಕಳಿಯಿಂದ ಮನವಿ ಮಾಡಿದರು.
ತಲಕಾವೇರಿಗೆ ಆಗಮಿಸುವ ಭಕ್ತಾಧಿಗಳಿಗೆ ತೀರ್ಥ ನೀಡಲಾಗುವುದು. ಇದಕ್ಕಾಗಿ 30 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಜೊತೆಗೆ ತೀರ್ಥ ಪ್ರೋಕ್ಷಣೆ ಮಾಡಲಾಗುವುದು ಎಂದರು.
ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬರ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಅದರಂತೆ ನಡೆದುಕೊಳ್ಳಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವವರನ್ನು ಯಾವುದೇ ಕಾರಣಕ್ಕೂ ತಡೆಯಬಾರದು ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದರು.
ಅಕ್ಟೋಬರ್, 17 ರಂದು ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಸೂಕ್ತ ಬಂದೋ ಬಸ್ತನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಡಿಸೆಂಬರ್, 18 ರೊಳಗೆ ಸಂಗಮ ಬಳಿ ನಾಗ ಪ್ರತಿಷ್ಠಾಪನಾ ಮಾಡಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.
ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿಡ್ಯಮಲೆ ಮೀನಾಕ್ಷಿ ಸುರೇಶ್, ಕೆದಂಬಾಡಿ ಟಿ.ರಮೇಶ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಇತರರು ಇದ್ದರು.