Header Ads Widget

ಸರ್ಚ್ ಕೂರ್ಗ್ ಮೀಡಿಯ

ನವರಾತ್ರಿ ಹಾಗೂ ವಿಜಯದಶಮಿ ಆಚರಣೆಯ ಹತ್ತು ದಿನಗಳ ವಿಶೇಷತೆ


ದಸರಾ ಉತ್ಸವದ ಆಚರಣೆಯ ಒಂದು ಅಂಗ ನವರಾತ್ರಿ. ಈ ಉತ್ಸವನ್ನು ಶರನ್ನವರಾತ್ರಿ ಎಂತಲೂ ಕರೆಯುತ್ತಾರೆ. ದುರ್ಗಾದೇವಿಯನ್ನು ಒಂದೊಂದು ದಿನ ೯ ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ೧೦ ನೇ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಪೂಜೆ ಮಾಡಿದರೇ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಒಂಭತ್ತು ದಿನಗಳ ಕಾಲ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ, ಕೊನೆಗೆ ಹತ್ತನೆಯ ದಿನದಂದು ಅಂದ್ರೆ ದಶಮಿಯಂದು ದಶಕಂಠ ರಾವಣನನ್ನು ಸಂಹರಿಸುವುದರ ಮೂಲಕ ವಿಜಯೋತ್ಸವನ್ನು ಅಚರಿಸಲಾಯ್ತು. ಈ ವಿಜಯೋತ್ಸವವನ್ನೇ ವಿಜಯದಶಮಿ ಎಂದು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ.

ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.. ದುರ್ಗಾ ಮಾತೆಯ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

೧. ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಶಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ. ನಂದಾದೀಪ ಹಚ್ಚಿ ೯ ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕು.

೨. ನವರಾತ್ರಿಯ ಎರಡನೆಯ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ.

೩. ನವರಾತ್ರಿಯ ಮೂರನೆಯ ದಿನದಂದು ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ ಒಂಭತ್ತನೆಯ ದಿನ ಮಹಾ ಮಾತೆಯು ಸಂಪನ್ನಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಾಳೆ. ಒಂಬತ್ತು ಈ ದಿನಗಳಲ್ಲಿ ಶಕ್ತಿ ದೆವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರೂ ನೆರವೇರುತ್ತವೆ ಎಂಬ ನಂಬಿಕೆ ಕೂಡ ಇವೆ.

೪. ನವರಾತ್ರಿಯ ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ.  ಈ ದಿನದಂದು ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.  ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ.

೫. ನವರಾತ್ರಿಯ ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಐದನೇ ದಿನವಾದ್ದರಿಂದ, ಪಂಚ ರಾತ್ರೋತ್ಸವವನ್ನು ಅಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿಸುವುದು ಈ ದಿನದಲ್ಲಿ ಉತ್ತಮವಾಗಿರುತ್ತದೆ.

೬. ನವರಾತ್ರಿಯ ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಧನ ಲಕ್ಷ್ಮಿಯನ್ನು ಪೂಜಿಸುವಾಗ, ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ಧತಿಯೂ ಇದೆ.  ದೀಪಗಳಿಂದ ಮಹಾ ಮಾತೆಯನ್ನು ಬೆಳಗಿ, ಅಷ್ಟ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ.

೭. ನವರಾತ್ರಿಯ ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಶಾಂತ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ಬೇಡಿದ ವರವನ್ನು ಶಾಂತಿಯಿಂದ ಅನುಗ್ರಹಿಸುವಳು ಎಂಬ ನಂಬಿಕೆಯಿದೆ.

೮. ನವರಾತ್ರಿಯ ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ.  ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದಂದು ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ದೇವಿಗೆ ಪೂಜಿಸಿ, ಉಪವಾಸ ವ್ರತ ಮಾಡುತ್ತಾರೆ. ಈ ದಿನಗಳಲ್ಲಿ ಕುಂಕುಮಾರ್ಚನೆ ನಡೆಯುತ್ತದೆ.

ದೇವಾನು ದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ೯.ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ. ಈ ದಿನ ಮನೆಗಳಲ್ಲಿ ಇರುವಂಥ ವಾಹನಗಳು, ವಿವಿಧ ಬಗೆಯ ಅಸ್ತ್ರಗಳು, ಎತ್ತುಗಳು, ಬಿತ್ತನೆಗೆ ಬಳಸುವ ನೇಗಿಲು ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ದೇವರ ಮನೆಯಲ್ಲಿಟ್ಟು, ಅವುಗಳಿಗೆ ನಿಯಮಬದ್ಧವಾಗಿ ಪೂಜೆ ಸಲ್ಲಿಸಲಾಗುತ್ತದೆ.  


೧೦. ನವರಾತ್ರಿಯ ಹತ್ತನೆಯ ದಿನ, ಅಂದರೆ ವಿಜಯದಶಮಿಯಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ ಪಾಪ-ಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ ದೊರೆಯುತ್ತದೆ. ವಿಜಯ ದಶಮಿಯ ದಿನ ಎಲ್ಲರೂ ಶಮೀ(ಬನ್ನಿ) ವೃಕ್ಷಕ್ಕೆ ಕುಟುಂಬ ಸಮೇತ ಹೋಗಿ ಶ್ರದ್ಧಾಭಕ್ತಿಯಿಂದ ಪೂಜಿಸಬೇಕು.  ಹೀಗೆ ನವರಾತ್ರಿಯನ್ನು ಅಚರಿಸಿ ತಾಯಿಯ ಆಶೀರ್ವಾದವನ್ನು ಪಡೆಯುತ್ತಾರೆ.


ಲೇಖಕರು: ಕಾನತ್ತಿಲ್‌ ರಾಣಿ ಅರುಣ್