Header Ads Widget

ಸರ್ಚ್ ಕೂರ್ಗ್ ಮೀಡಿಯ

ಪವಿತ್ರ ತೀರ್ಥೋದ್ಭವ ಹಾಗೂ ದಸರಾ ಸಂದರ್ಭ ಕೋವಿಡ್ ನಿಯಮ ಪಾಲಿಸಲು ಜಿಲ್ಲಾಡಳಿತ ಮನವಿ


ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಕಳೆದ ಎರಡು ವಾರಗಳಿಂದ ಹೆಚ್ಚಾಗುತ್ತಿದ್ದು, ಪರೀಕ್ಷೆಗೆ ಒಳಪಟ್ಟ ನೂರು ಜನರಲ್ಲಿ ಹದಿನೆಂಟು ಮಂದಿಗೆ ಪಾಸಿಟಿವ್ ಬರುತ್ತಿದೆ. ಜೊತೆಗೆ ಮರಣ ಪ್ರಮಾಣ ಶೇ.1.4 ರಷ್ಟು ಇದ್ದು, ಇದನ್ನು 1 ಕ್ಕಿಂತ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದ್ದರಿಂದ ದಸರಾ ಮತ್ತು ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಸಂದರ್ಭದಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ದಸರಾ ಸಮಿತಿ ಹಾಗೂ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅವರ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.
ದಸರಾ ಮತ್ತು ತಲಕಾವೇರಿ ಪವಿತ್ರ ತೀರ್ಥೋದ್ಭವವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ. ಗಣೇಶೋತ್ಸವ ಸಂದರ್ಭದಲ್ಲಿ ಅನುಸರಿಸಿದ ಮಾರ್ಗಸೂಚಿಗಳನ್ನು ಈ ಸಂದರ್ಭದಲ್ಲಿಯೂ ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದಂತೆ ಹಣ ಬಿಡುಗಡೆಯಾಗಲಿದೆ. ಕರಗ ಉತ್ಸವದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ಅಕ್ಟೋಬರ್, 14 ಮತ್ತು 15 ರಂದು ಕೋವಿಡ್ ಪರೀಕ್ಷೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ನಿರ್ದೇಶನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕರಗ ಉತ್ಸವದಲ್ಲಿ ಪಾಲ್ಗೊಳ್ಳುವವರನ್ನು ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಇಂತವರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.
ದಸರಾ ಸಂದರ್ಭದ ವಿಜಯ ದಶಮಿಯಂದು ರಾತ್ರಿ 10 ಗಂಟೆಯೊಳಗೆ ಮಂಟಪ ಪೂಜಾ ಕಾರ್ಯಗಳು ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕರಗ ಉತ್ಸವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳಬೇಕು. ಮಡಿಕೇರಿ ನಗರದಲ್ಲಿ ಬೀದಿ ದೀಪ ಅಳವಡಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಅಕ್ಟೋಬರ್, 17 ಮತ್ತು 26 ರಂದು ಎರಡು ದಿನದ ಮಟ್ಟಿಗೆ ರಾಜಾಸೀಟು ಮತ್ತು ಅಬ್ಬಿಪಾಲ್ಸ್ ಪ್ರವಾಸಿ ಕೇಂದ್ರಗಳು ಮುಚ್ಚಿರುತ್ತವೆ. ಆದ್ದರಿಂದ ಪ್ರವಾಸಿಗರು ಸಹಕರಿಸುವಂತೆ ಅನೀಸ್ ಕಣ್ಮಣಿ ಜಾಯ್ ಅವರು ಅವರು ಕೋರಿದರು.
ದಸರಾ ಸಂದರ್ಭದಲ್ಲಿ ಬೀದಿ ಬದಿ ತಾತ್ಕಾಲಿಕ ಶೆಡ್ಡು ನಿರ್ಮಿಸಿ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ. ಹೋಂ ಸ್ಟೇ, ರೆಸಾರ್ಟ್ಗಳು, ಲಾಡ್ಜ್ಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂಬಂಧ ದಿಢೀರ್ ಭೇಟಿ ನೀಡಲು ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ತಲಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದೇವಸ್ಥಾನ ಸಮಿತಿ ಅಭಿಪ್ರಾಯದಂತೆ ಆರ್ಟಿಪಿಸಿಆರ್ ಮೂಲಕ ಅಕ್ಟೋಬರ್, 14 ಮತ್ತು 15 ರಂದು ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಕೋವಿಡ್ ಪರೀಕ್ಷೆಯ ನೆಗೆಟಿವ್ ವೈದ್ಯಕೀಯ ಸರ್ಟಿಫಿಕೇಟ್ ಪ್ರಮಾಣ ಪತ್ರ ಇರುವವರಿಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಡಿಕೇರಿ, ಭಾಗಮಂಡಲ ಮತ್ತು ತಲಕಾವೇರಿ ಮಾರ್ಗ ಪ್ರತಿ ನಿತ್ಯ ಓಡಾಡುವ ಬಸ್ಗಳು ಇರಲಿವೆ. ಉಳಿದಂತೆ ವಿಶೇಷ ಬಸ್ಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.
ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶವಿದೆ. ಆ ಸಂದರ್ಭದಲ್ಲಿಯೂ ನಿಯಮಗಳನ್ನು ಪಾಲಿಸಬೇಕು. ಬೀದಿ ದೀಪ ಅಳವಡಿಸಲಾಗುತ್ತದೆ. ಭಾಗಮಂಡಲ-ತಲಕಾವೇರಿಯಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಮಾತನಾಡಿ ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಪೊಲೀಸ್ ಬಂದೋ ಬಸ್ತ್ ಮಾಡಿಕೊಳ್ಳಲಾಗಿದ್ದು, ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.