Header Ads Widget

ಸರ್ಚ್ ಕೂರ್ಗ್ ಮೀಡಿಯ

ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಕಾವೇರಿ ತೀರ್ಥೋದ್ಭವ ಆಚರಣೆ: ಕೊಡಗು ಜಿಲ್ಲಾಧಿಕಾರಿ


ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿಯ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಮಾತ್ರವೇ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.
ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮತ್ತು ಸರಳ ರೀತಿಯಲ್ಲಿ ತೀರ್ಥೋದ್ಭವವನ್ನು ಆಚರಿಸುವಂತಾಗಬೇಕು. ಹೆಚ್ಚು ಜನ ಸೇರಿದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಜಿಲ್ಲೆಯ ಜನತೆ ಪ್ರಸ್ತುತ ಪರಿಸ್ಥಿಯನ್ನು ಅರ್ಥಮಾಡಿಕೊಂಡು ಪ್ರವಾಸಿಗರು, ಹಿರಿಯರು, ಮಕ್ಕಳು, ಗರ್ಭಿಣಿ ಮಹಿಳೆಯರು, ಇನ್ನಿತರ ಆರೋಗ್ಯ ಸಮಸ್ಯೆಯಿರುವವರು ಮನೆಯಿಂದಲೇ ಮಾಧ್ಯಮಗಳ ಮೂಲಕ ನೇರಪ್ರಸಾರ ವೀಕ್ಷಣೆ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದರು.
ಕೋವಿಡ್-19 ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದೆ. ತೀರ್ಥೋದ್ಭವ ಸಂದರ್ಭ ಹೆಚ್ಚಿನ ಜನ ಆಗಮಿಸಿದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಈ ಸಂಬಂಧ ವಿರಾಜಪೇಟೆ ಕ್ಷೇತ್ರ ಶಾಸಕರಾದ ಕೆ.ಜಿ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆದಿದ್ದು. ಸಭೆಯ ನಿರ್ಧಾರದಂತೆ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಆದ್ಯಕ್ಷರಾದ ತಮ್ಮಯ್ಯ ಅವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರು ಮಾತನಾಡಿ ಸ್ವಯಂ ಸೇವಕರು, ಪೂಜೆ ಸಲ್ಲಿಸುವ ಅರ್ಚಕರು ಭಾಗಮಂಡಲ ವ್ಯಾಪ್ತಿಯ ವರ್ತಕರು ಸೇರಿದಂತೆ ಮತ್ತಿತರರಿಗೆ ಜಾತ್ರಾ ಮಹೋತ್ಸವಕ್ಕೂ ಮುಂಚಿತವಾಗಿ ಕೋವಿಡ್ ಪರೀಕ್ಷೆಯನ್ನು ಆರ್ಟಿಪಿಸಿಆರ್ ಮುಖಾಂತರ ನಡೆಸಬೇಕು. 2 ಮೊಬೈಲ್ ತಪಾಸಣಾ ಘಟಕವನ್ನು ಭಾಗಮಂಡಲಕ್ಕೆ ಕಳುಹಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅವರು ಮಾತನಾಡಿ ಅಕ್ಟೋಬರ್ 14 ಮತ್ತು 15 ರಂದು ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷಾ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.
ಭಾಗಮಂಡಲ ತಲಕಾವೇರಿಯಲ್ಲಿನ ಬೀದಿ ದೀಪಗಳನ್ನು ಸರಿಪಡಿಸಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಬಾಕಿ ಇರುವ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಇದರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯಲ್ಲಿರುವ ಮರಗಳನ್ನು 2 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಎಂದಿನಂತೆ ಸಾಮಾನ್ಯ ಮಾರ್ಗದ ಬಸ್ಗಳು ಸಂಚರಿಸಲಿವೆ. ಬಸ್ನಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಳ್ಳದಂತೆ ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಧಿಕಾರಿ ಅವರು ಮಡಿಕೇರಿ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ, ಮಡಿಕೇರಿ ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆಯ ಇಇ ಮದನ್ ಮೋಹನ್, ಎಇಇ ಶಿವರಾಂ, ಚೆಸ್ಕಾಂ ಇಇ ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ದಿವಾಕರ್, ಮೇದಪ್ಪ, ಅನೂಪ್ ಮಾದಪ್ಪ, ಮಡಿಕೇರಿ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಾದ ಗೀತಾ, ಭಗಂಡೇಶ್ವರ ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಭಾಗಮಂಡಲ ಪಿಡಿಒ ಅನಿತಾ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್.ಎಂ ಕಾವೇರಪ್ಪ, ಉದಿಯಂಡ ಸುಭಾಷ್ ಇತರರು ಇದ್ದರು.