Header Ads Widget

Responsive Advertisement

ಮಡಿಕೇರಿ ದಸರಾ ಸರಳ ಆಚರಣೆಗೆ ಆದ್ಯತೆ; MLC ಎಂ.ಪಿ ಸುನೀಲ್ ಸುಬ್ರಮಣಿ


ಪ್ರತೀ ವರ್ಷವು ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ದಸರಾವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ ಸುನೀಲ್ ಸುಬ್ರಮಣಿ ಅವರು ಹೇಳಿದರು.

ನಗರದ ನಗರಸಭೆ ಕೌನ್ಸಲಿಂಗ್ ಸಭಾಂಗಣದಲ್ಲಿ ಮಡಿಕೇರಿ ದಸರಾ ಸಂಬಂಧ ಸಭೆ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ಕಾರ್ಯವಾಗಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಸಾಂಪ್ರದಾಯಕವಾಗಿ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾ ಆರಂಭಗೊಳ್ಳುತ್ತದೆ. ಈ ನಿಟಿನಲ್ಲಿ ಸಂಪ್ರದಾಯ ಬದ್ಧವಾಗಿ ಕರಗದ ಆಚರಣೆ ನಡೆಯುವಂತಾಗಲಿ. ಜೊತೆಗೆ ಕರಗ ಹೊರುವವರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸುನೀಲ್ ಸುಬ್ರಮಣಿ ಅವರು ಸಲಹೆ ನೀಡಿದರು.
ಪಂಪಿನ ಕೆರೆಯಲ್ಲಿ ಅಕ್ಟೋಬರ್ 17 ರ ಸಂಜೆ 5 ಗಂಟೆಗೆ ಕರಗ ಪೂಜೆ ಆರಂಭಗೊಳ್ಳುತ್ತದೆ. ಈ ಸಂದರ್ಭ 4 ಕರಗಗಳು ಪಂಪಿನ ಕೆರೆಯಿಂದ ಸುಮಾರು ಅರ್ಧ ಗಂಟೆಗಳ ಅಂತರದಲ್ಲಿ ಹೊರ ಬಂದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಕರಗದ ಜೊತೆಗೆ ಸಾಗುವವರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸರ್ಕಾರದ ನಿಯಮಾವಳಿಯನ್ನು ಪಾಲಿಸುವಂತಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ ಕರಗ ಮತ್ತು ದಸರಾ ಆಚರಣೆ ಸಂಬಂಧ ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು. ಜಿಲ್ಲಾಡಳಿತದೊಂದಿಗೆ ಸಮನ್ವಯತೆಯಿಂದ ದಸರಾ ಆಚರಣೆಯನ್ನು ಸರಳವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಈ ಬಾರಿ ಸರಳ ದಸರಾಗೆ ಒತ್ತು ನೀಡಬೇಕಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದೆ. ಈ ನಿಟ್ಟಿನಲ್ಲಿ ಜನರ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದರು.

ಈ ಸಂದರ್ಭ ದಶಮಂಟಪ ಸಮಿತಿ ಅಧ್ಯಕ್ಷರಾದ ಗುರುರಾಜ್, ಕರಗ ಸಮಿತಿಯ ಪಿ.ಪಿ ಚಾಮಿ, ಎಂ.ಹರೀಶ್, ರವಿಕುಮಾರ್, ದಿನೇಶ್ ಪೂಜಾರಿ ಅವರು ಕರಗ ಆಚರಣೆಯ ಸಂಬಂಧ ಸಭೆಗೆ ಹಲವು ಮಾಹಿತಿ ನೀಡಿದರು.
ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ ನಗರದ ಕೆಲ ರಸ್ತೆಗಳು ಗುಂಡಿ ಬಿದ್ದಿದ್ದು ದಸರಾಗೂ ಮುಂಚಿತವಾಗಿಯೆ ಗುಂಡಿ ಮುಚ್ಚುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಸದ್ಯ ಮಳೆ ಇರುವುದರಿಂದ ಗುಂಡಿ ಮುಚ್ಚುವ ಕಾರ್ಯ ಸ್ಥಗಿತವಾಗಿದೆ. ಮಳೆ ನಿಂತ ತಕ್ಷಣವೇ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಲಾಗುವುದು ಎಂದರು.
ಅಲ್ಲದೆ ನಗರದಲ್ಲಿ ಪ್ರತಿಯೊಂದು ಬೀದಿ ದೀಪವನ್ನು ಪರಿಶೀಲಿಸಬೇಕು. ದುರಸ್ತಿಗೊಂಡಿರುವ ಬೀದಿ ದೀಪಗಳನ್ನು ತಕ್ಷಣವೇ ಸರಿಪಡಿಸುವ ಕಾರ್ಯವಾಗಬೇಕು ಎಂದು ನಗರಸಭೆ ಕಮಿಷನರ್ ಅವರಿಗೆ ಸೂಚನೆ ನೀಡಿದರು.
ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ದರ್ಶನ್, ನಗರಸಭೆ ಪೌರಾಯುಕ್ತರಾದ ರಾಮ್ದಾಸ್, ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಅನೂಪ್ ಮಾದಪ್ಪ, ದಸರಾ ಸಮಿತಿಯ ಪದಾಧಿಕಾರಿಗಳು ಮತ್ತು ದಶಮಂಟಪ ಸಮಿತಿ ಸದಸ್ಯರು ಇತರರು ಇದ್ದರು.