Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಪ್ರದಾಯದಂತೆ ಸರಳವಾಗಿ ಆಚರಿಸಲು ನಿರ್ಧಾರ

 


ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಂಪ್ರದಾಯದಂತೆ ಸರಳವಾಗಿ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸಂಸದರಾದ ಪ್ರತಾಪ್ ಸಿಂಹ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸಭೆಯ ಆರಂಭದಲ್ಲಿ ಮಾತನಾಡಿ ಕೋವಿಡ್-19 ಹಿನ್ನೆಲೆ ಸರಳ ಹಾಗೂ ಸಂಪ್ರದಾಯವಾಗಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸೂಕ್ಷ್ಮತೆಯಿಂದ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕಿದೆ. ಸಂಪ್ರದಾಯ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಚಾರ ಅಥವಾ ಲೋಪ ಉಂಟಾಗದಂತೆ ದಸರಾ ಆಚರಿಸಬೇಕು ಎಂದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಮಡಿಕೇರಿ ದಸರಾದ ನಾಡಹಬ್ಬವನ್ನು ಸಂಪ್ರದಾಯದಂತೆ ಆಚರಿಸಬೇಕು. ಆದರೆ ಪ್ರಸ್ತುತ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಆಚರಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಕರಗ ಉತ್ಸವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಂಪ್ರದಾಯದಂತೆ ನಡೆಯಲಿದೆ. ಕರಗ ಉತ್ಸವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಕ್ಲಿಷ್ಟ ಪರಿಸ್ಥಿತಿ ಸಂದರ್ಭದಲ್ಲಿ ಜನರ ಆರೋಗ್ಯ ಗಮನಿಸಬೇಕು ಎಂದರು.
ದಸರಾ ಸಂದರ್ಭದಲ್ಲಿ ಮಂಟಪಗಳನ್ನು ಪಿಕ್ಆಫ್ ವಾಹನದಲ್ಲಿ ಶಾಸ್ತ್ರೋಕ್ತವಾಗಿ ನಡೆಸಬೇಕು. ಗೋಣಿಕೊಪ್ಪ ದಸರಾ ಚಾಮುಂಡೇಶ್ವರಿ ಪೂಜೆಯೊಂದಿಗೆ ಆಚರಿಸಬೇಕು ಎಂದು ಅವರು ಸಲಹೆ ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ದಸರಾ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ದಸರಾ ಸಂದರ್ಭದಲ್ಲಿ ಎಷ್ಟು ಜನರನ್ನು ಕಡಿಮೆ ಮಾಡಬಹುದು. ಅಷ್ಟನ್ನು ಕಡಿಮೆ ಮಾಡಬೇಕು ಎಂದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಾಗೂ ಉಮೇಶ್ ಸುಬ್ರಮಣಿ ಅವರು ಸಂಪ್ರದಾಯದಂತೆ ಸರಳವಾಗಿ ದಸರಾ ಆಚರಿಸಲಾಗುವುದು ಎಂದರು.
ಬಳಿಕ ಮಾತನಾಡಿದ ಸಚಿವರಾದ ವಿ.ಸೋಮಣ್ಣ ಅವರು ಸರ್ಕಾರ ತಮ್ಮ ಜೊತೆಗಿದೆ. ಸಂಪ್ರದಾಯದಂತೆ ದಸರಾವನ್ನು ಸರಳವಾಗಿ ಆಚರಿಸುವಂತೆ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಇತರರು ಇದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ 15 ಲಕ್ಷ ರೂ ನೀಡಲಾಗುವುದು ಎಂದು ತಿಳಿಸಿದರು.