Header Ads Widget

ಸರ್ಚ್ ಕೂರ್ಗ್ ಮೀಡಿಯ

CNC ಆಶ್ರಯದಲ್ಲಿ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಎಸ್.ಟಿ. ಪಟ್ಟಿಯಲ್ಲಿ ಸೇರಿಸುವ ಕುರಿತು ವಿಚಾರಗೋಷ್ಠಿ


ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಎಸ್.ಟಿ. ಪಟ್ಟಿಯಲ್ಲಿ ಸೇರಿಸಬೇಕು, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕೆಂಬ ವಿಚಾರಗೋಷ್ಠಿಯು ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ ನಲ್ಲಿ ದಿನಾಂಕ :- 04-10-2020-ಭಾನುವಾರ ಬೆಳಗ್ಗೆ 10 ಗಂಟೆ CNC ಆಶ್ರಯದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ  “ಶ್ರೀ ಬಿ.ಕೆ.ಹರಿಪ್ರಸಾದ್” MLC ಮತ್ತು “ಡಾ.ಹನಿಯೂರ್ ಚಂದ್ರೇಗೌಡ” ಬುಡಕಟ್ಟು ಜಾನಪದ ತಜ್ಞರು ಭಾಗವಹಿಸಲಿದ್ದಾರೆ. ಎಂದು CNC ಸಂಚಾಲಕರಾದ ಎನ್.ಯು. ನಾಚಪ್ಪ ಕೊಡವ ಅವರು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡವರ ಪ್ರಧಾನ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರ ಅಧ್ಯಯನ ಅಂತಿಮ ಘಟ್ಟದಲ್ಲಿದ್ದು ಈ ಸಂಬಂಧ ಸಂವಿಧಾನಿಕ ಕಸರತ್ತು ಆರಂಭಿಸಬೇಕು ಎಂಬ ಹಕ್ಕೊತ್ತಾಯ ಮುಂದಿರಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕೊಡವ ಬುಡಕಟ್ಟು ಜನರ ಸಂವಿಧಾನಿಕ ಆಶೋತ್ತರ ಮತ್ತು ಆಕಾಂಕ್ಷೆಗಳ ಸ್ಪಷ್ಟ ಸಂದೇಶವನ್ನು ರವಾನಿಸುವ ಸಲುವಾಗಿಯೂ ಮತ್ತು ಕೊಡವ ಬುಡಕಟ್ಟು ಕುಲ ತಮ್ಮ ಪ್ರಧಾನ ಹಕ್ಕೊತ್ತಾಯಕ್ಕಾಗಿ ಸ್ಥಿತ ಪ್ರಜ್ಞರಾಗಿ ಏಕಾಗ್ರತೆಯಿಂದ ಅಚಲವಾಗಿ ಮುನ್ನಡೆಯುವ ಸಲುವಾಗಿಯೂ ಸ್ಪೂರ್ತಿದಾಯಕವಾದ ಮಾರ್ಗದರ್ಶನ ನೀಡುವ ಹಿನ್ನಲೆಯಲ್ಲಿ ಕೊಡವ ನ್ಯಾಶನಲ್ ಕೌನ್ಸಿಲ್ ಆಶ್ರಯದಲ್ಲಿ “ಕ್ಯಾಪಿಟಲ್ ವಿಲೇಜ್”ನಲ್ಲಿ ಒಂದು ಮಹತ್ವಪೂರ್ಣ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಎನ್.ಯು. ನಾಚಪ್ಪ ಕೊಡವ ಅವರು ತಿಳಿಸಿದರು.

ಈ ವಿಚಾರ ಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಗಳಾಗಿಯೂ ಮುಖ್ಯ ಅತಿಥಿಗಳಾಗಿಯೂ ಈ ರಾಷ್ಠ್ರದ ಹಿರಿಯ ರಾಜಕೀಯ “ಮುತ್ಸದಿ” ಹಾಗೂ ವಿಖ್ಯಾತ ಸಂಸದೀಯ ಪಟುಗಳು, ರಾಜ್ಯಸಭೆಯ ಮಾಜಿ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯರೂ ಆದಂತಹ ಮಾನ್ಯ “ಶ್ರೀ ಬಿ.ಕೆ.ಹರಿಪ್ರಸಾದ್” ರವರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರು  ಹಾಗೂ “ಬಿರ್ಸಾ ಮುಂಡ ಟ್ರೈಬಲ್ ರೀಸರ್ಚ್ ಇನ್ಸ್‍ಟಿಟ್ಯೂಟ್”ನ ವ್ಯವಸ್ಥಾಪಕರ ನಿರ್ದೇಶಕರು ಹಾಗೂ ಹೆಸರಾಂತ ಬುಡಕಟ್ಟು ಜಾನಪದ ತಜÐರೂ ಆದ “ಡಾ.ಹನಿಯೂರ್ ಚಂದ್ರೇಗೌಡ” ರವರು ಭಾಗವಹಿಸುವುದರ ಮೂಲಕ ಸಂವಿಧಾನದ 340 ಮತ್ತು 342 ನೇ ವಿಧಿ ಹಾಗೂ ಸಂವಿಧಾನದ 244-244ಎ ರೆಡ್/ವಿತ್ 6ನೇ ಮತ್ತು 8ನೇ ಶೆಡ್ಯೂಲ್ ಪ್ರಕಾರ ಎಸ್.ಟಿ. ಪಟ್ಟಿ ಮತ್ತು ಭೂರಾಜಕೀಯ ಸ್ವಾಯತ್ತತೆಯನ್ನು ಗಳಿಸಲಿರುವ ಎಲ್ಲಾ ಹಕ್ಕು ಹಾಗೂ ಅರ್ಹತೆ ಕೊಡವರಿಗೆ ಇದ್ದು ಅದನ್ನು ಪಡೆಯುವ ನಿಟ್ಟಿನಲ್ಲಿ ಸ್ಪೂರ್ತಿದಾಯಕ ಉಪನ್ಯಾಸ ನೀಡಲಿದ್ದಾರೆ. ಎಂದು ಎನ್.ಯು. ನಾಚಪ್ಪ ಕೊಡವ ಅವರು ತಿಳಿಸಿದರು.

ಕೊಡವ ಬುಡಕಟ್ಟಿಗೆ ಎಸ್.ಟಿ. ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದು ಕೊಡವರ ರಾಜ್ಯಾಂಗದತ್ತ ಹಕ್ಕಾಗಿದ್ದು ಇದನ್ನು ಯಾರಿಂದಲೂ ನಿರಾಕರಿಸಲು-ವಿರೋಧಿಸಲು ಸಾಧ್ಯವಿಲ್ಲ. ಅದೇ ರೀತಿ ಅದನ್ನು ಕೇಳಿ ಪಡೆಯುವುದು ಭಿಕ್ಷೆಯೂ ಅಲ್ಲ ಅದು ಜನತಂತ್ರ ಭಾರತದ ಸಂವಿಧಾನದಲ್ಲಿ ಕೊಡವರ ಅತೀ ಪ್ರಧಾನ ಹಕ್ಕಾಗಿದ್ದು ಇದನ್ನು ಗಳಿಸಿಕೊಳ್ಳಬೇಕೆಂಬ ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು ನಾಡಿನ ಎಲ್ಲಾ ಕೊಡವ ಬಂಧುಗಳು ಹಾಗೂ ಕೊಡವರ ಈ ರಾಜ್ಯಾಂಗದತ್ತ ಮಾನವೀಯ ಹಕ್ಕನ್ನು ಗೌರವಿಸುವ ಎಲ್ಲರೂ ಬಂದು ಸಾಕ್ಷಿಯಾಗಿ ಯಶಸ್ವಿಗೊಳಿಸಬೇಕೆಂದು ವಿನಂಮ್ರವಾಗಿ ಆಹ್ವಾನಿಸುತ್ತಿದ್ದೇವೆ. ನಾಚಪ್ಪ ಅವರು ತಿಳಿಸಿದರು.


ವಿಷಯ ಸೂಚಿ :
ಶ್ರೀ ಬಿ.ಕೆ. ಹರಿಪ್ರಸಾದ್‍ರವರು 3 ಬಾರಿ ಪಾರ್ಲಿಮೆಂಟ್‍ನಲ್ಲಿ ಕೊಡವ ಹಕ್ಕೋತ್ತಾಯದ ಕುರಿತು ಪ್ರಸ್ತಾಪಿಸಿ, ಚರ್ಚೆ ನಡೆಸಿರುತ್ತಾರೆ. ಹಾಗೂ ಒಮ್ಮೆ ವಿಧಾನಪರಿಷತ್‍ನಲ್ಲಿ ಕೊಡವರ ಕುರಿತು ಚರ್ಚಿಸಿರುತ್ತಾರೆ. 

1. ಸಿ.ಎನ್.ಸಿ. ಯ ಅಭಿಲಾಷೆಯ ಮೇರೆಗೆ 2016 ಮತ್ತು 2017 ರಲ್ಲಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕೆಂಬ ಖಾಸಗಿ ಮಸೂದೆ (2016ರ ಸಂವಿಧಾನ ತಿದ್ದುಪಡಿ ಮಸೂದೆ) ಮಂಡಿಸಿ, ಕೊಡವರ ಹಕ್ಕೋತ್ತಾಯದ ಬಗ್ಗೆ ರಾಷ್ಟ್ರದ ಗಮನ ಸೆಳೆದಿದ್ದರು. ಈ ಕುರಿತು ಅಂದಿನ ಗೃಹಮಂತ್ರಿಗಳು ಕೊಡವ ಭಾಷೆಯನ್ನು ಭಾಷಾತಜ್ಞ ಪಂಡಿತ್ ಸೀತಾಕಾಂತ್ ಮಹಾಪಾತ್ರ ವರದಿಯನ್ವಯ 8ನೇ ಶೆಡ್ಯೂಲ್‍ಗೆ ಸೇರಿಸುವ ಭರವಸೆಯನ್ನು ಪಾರ್ಲಿಮೆಂಟ್‍ನಲ್ಲಿ ನೀಡಿದ್ದರು.

2. ಭಾರತದ ಶಶಸ್ತ್ರ ಕಾಯ್ದೆ ತಿದ್ದುಪಡಿ ಮಸೂದೆ 2019 ಪಾರ್ಲಿಮೆಂಟ್‍ನ ಮುಂದೆ ಬಂದಾಗ 2019ರ ಡಿಸೆಂಬರ್ ಅಧಿವೇಶನದಲ್ಲಿ ಕೊಡವರ ಧಾರ್ಮಿಕ ಸಂಸ್ಕಾರವಾದ “ಬಂದೂಕದ ವಿನಾಯಿತಿ ಹಕ್ಕು” ಯಾವುದೇ ನಿರ್ಭಂದವಿಲ್ಲದೆ ಅಭಾದಿತವಾಗಿ ಮುಂದುವರಿಯಬೇಕೆಂದು ಪ್ರತಿಪಾದಿಸಿದ್ದರು. 

3. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಶ್ರೀ ಕುಪೇಂದ್ರ ರೆಡ್ಡಿಯವರು 2019ರ ಎಸ್.ಸಿ., ಎಸ್.ಟಿ. ಸಂವಿಧಾನ ತಿದ್ದುಪಡಿ ಮಸೂದೆಯ ಚರ್ಚೆಯಲ್ಲಿ (ಕೊಡವ ಬುಡಕಟ್ಟನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು) ಬಲವಾಗಿ ಪ್ರತಿಪಾದಿಸಿದಾಗ ಆ ಪ್ರತಿಪಾದನೆಗೆ ತಮ್ಮದೇ ಆದ ಸಮರ್ಥನೀಯ ವಾದವನ್ನು ಮಂಡಿಸುತ್ತಾ ಈ ದೇಶದ ವೈಭವೀಕೃತ ಬುಡಕಟ್ಟು ಸಮುದಾಯವಾದ ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ವಿಶೇಷ ರೀತಿಯ ವಾದಸರಣಿ ಮುಂದಿಟ್ಟರು.

4. 23.09.2020 ರಂದು 30 ವರ್ಷಗಳ ಹಿಂದೆ ರಚನೆಯಾಗಿ ನೆನೆಗುದಿಗೆ ಬಿದ್ದಿದ್ದ ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲಿರುವ ಡಾ| ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಕುರಿತು ಮಸೂದೆ ವಿಧಾನಪರಿಷತ್‍ನಲ್ಲಿ ಚರ್ಚೆಗೆ ಬಂದಾಗ ಕನ್ನಡಿಗರು ಎಂದರೆ ಯಾರು? ವಿಶಾಲ ಕರ್ನಾಟಕ ರಚನೆಯಾದ ಮೇಲೆ ಕನ್ನಡ ಮಾತೃಭಾಷೆಯಲ್ಲದ ಕೊಡವರು, ತುಳುವರು, ಕೊಂಕಣಿಗರು ಕರ್ನಾಟಕ ರಾಜ್ಯದ ಒಂದು ಭಾಗವೇ ಆಗಿದ್ದಾಗ ಈ ವರದಿಯ ಅನುಷ್ಠಾನದಲ್ಲಿ ಅವರ ಭವಿಷ್ಯತ್ತು ಮತ್ತು ಬದುಕಿನ ಬಗ್ಗೆ ಯಾವ ವ್ಯಾಖ್ಯಾನ ಮತ್ತು ಭದ್ರತೆ ನೀಡುತ್ತೀರಿ ಎನ್ನುವ ಕುರಿತು ಗಮನಸೆಳೆದು ಸರ್ಕಾರ ಈ ಕೊಡವರು ಸೇರಿದಂತೆ ಈ ಮೂರು ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗೆ ಆದ್ಯತೆ ನೀಡಲಿದೆ ಎಂಬ ಭರವಸೆ ಪಡೆದುಕೊಂಡರು.

ಈ ರೀತಿ ಸತತವಾಗಿ ಕೊಡವರ ಪರ ಆಪದ್ಭಾಂದವರಾಗಿ ಕಾರ್ಯನಿರ್ವಹಿಸುತ್ತ ಕೊಡವರ ಕಣ್ಮಣಿಯಾಗಿ ಕಂಗೊಳಿಸುತ್ತಿರುವ ಶ್ರೀ ಬಿ.ಕೆ. ಹರಿಪ್ರಸಾದ್‍ರವರ ಆಗಮನ ಮತ್ತು ಭಾಗವಹಿಸುವಿಕೆ ನಮಗೆ ಸಂತೋಷವನ್ನುಂಟುಮಾಡಿದೆ ಎಂದು CNC ಸಂಚಾಲಕರಾದ ಎನ್.ಯು. ನಾಚಪ್ಪ ಕೊಡವ ಅವರು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.