Header Ads Widget

ಸರ್ಚ್ ಕೂರ್ಗ್ ಮೀಡಿಯ

ಎಂ.ಎ. ಪೊನ್ನಪ್ಪ ಎಂಬ ದೈತ್ಯ ಆಲದ ಮರ


ಹತ್ತು ಹದಿನೈದು ವರ್ಷಗಳ ಹಿಂದೆ ಅದೊಂದು ದಿನ ಬೆಂಗಳೂರಿಗೆ ಹೋಗಿದ್ದ ನನಗೆ ಬೆಂಗಳೂರು ಪ್ರೆಸ್ ಕ್ಲಬ್ ನೋಡಬೇಕೆನಿಸಿತು.  ಸಂಜೆ ಅಂದಾಜು 8 ಗಂಟೆ ಸಮಯಕ್ಕೆ ತಲುಪಿದೆ.  ಪತ್ರಕರ್ತರ ಸಂಘದ/ಪ್ರೆಸ್ ಕ್ಲಬ್ ನ ಗುರುತಿನ ಚೀಟಿ ಏನೂ ಇರಲಿಲ್ಲ.  ಬೆಂಗಳೂರು ಪ್ರೆಸ್ ಕ್ಲಬ್ ನೋಡುವ ಆಸೆ, ಭಂಡ ದೈರ್ಯ ಮಾತ್ರ ನನ್ನದು.

ಯಾರೂ ಪರಿಚಯವಿಲ್ಲ ಒಳಗೆ ಹೋದವನು ಕ್ಲಬ್ಬಿನ ಆವರಣ ನೋಡುತ್ತಿದ್ದೆ.  ಯಾರಾದರೂ ಸಿಗಬಹುದೇ ಎಂದು ಕಣ್ಣು ಅದರ ಪಾಡಿಗೆ ಬೇಟೆ ನಡೆಸುತ್ತಿತ್ತು.

ನೀಳಕಾಯದ ಚಂದದ ಒಬ್ಬ ಮನುಷ್ಯ ಬಂದು ಮಾತನಾಡಿಸಿದ (ಮನಸ್ಸು ಕ್ಲಬ್ಬಿನ ಮ್ಯಾನೇಜರ್ ಇರಬಹುದೆಂದು ........ ) ಪ್ರೀತಿಯಿಂದ ಕೂರಲು ಹೇಳಿ ನನ್ನ ಜಾತಕ ವಿಚಾರಿಸಿದ.  ಮಡಿಕೇರಿಯಿಂದ ಬಂದವನೆಂದಾಗ ಮಾತು ಕೊಡವ ಭಾಷೆಗೆ ತಿರುಗಿತು.  ನನ್ನ ಉದ್ದೇಶ ತಿಳಿಸಿದೆ.   “ಸರಿ ನಿನಗೇನು ಬೇಕೋ ತೆಗೆದುಕೊ 5 ನಿಮಿಷ ಬಿಟ್ಟು ಬರುತ್ತೇನೆ.  ಅದ್ಯಾರೋ VIP ಬಂದಿದಾರೆ ಅವರನ್ನು ಬೀಳ್ಕೊಟ್ಟು ಬರುತ್ತೀನಿ.  ಬಿಲ್ಲು ಕೊಡಲು ಹೋಗಬೇಡ, ಬೇಗ ಬರ್ತೀನಿ” .  ಅಪರಿಚಿತ ಜಾಗದಲ್ಲಿ ಇಂಥಾ ಆತಿಥ್ಯ! ವಾಹ್ ...........!?

ಆ ನಂತರ ಆ ಮನುಷ್ಯನನ್ನು ಕಂಡಿದ್ದು ಮಾದ್ಯಮ ಅಕಾಡೆಮಿ ಕೊಡಗಿನಲ್ಲಿ ಕಾರ್ಯಾಗಾರ ಒಂದನ್ನು ನಡೆಸಿದಾಗ.   ಆಗಲೇ ಗೊತ್ತಾಗಿದ್ದು ಅವರೇ ಇವರು ಶ್ರೀ ಮನೆಯಪಂಡ ಪೊನ್ನಪ್ಪ ಎಂದು.  

ಕೆಲವು ದಿನಗಳ ಹಿಂದೆ ಅವರ ಅಭಿನಂದನಾ ಗ್ರಂಥದ ಬಗ್ಗೆ ಗಾಳಿ ಸುದ್ದಿಯೊಂದು ಕಿವಿಗೆ ಬಿದ್ದಾಗ ಪೋನಾಯಿಸಿದ್ದೆ.  ಮಾರನೇ ದಿನವೇ ಪುಸ್ತಕ ಕೈಸೇರಿತ್ತು.  ಪುಸ್ತಕದ ಮುಖಪುಟ ನೋಡಿದೊಡನೆ ಪ್ರೀತಿಯಿಂದ ನೇವರಿಸಿದೆ.  ಮುನ್ನುಡಿ ಓದಿ ಬರೆದವರ ಹೆಸರುಗಳನ್ನು ಓದಿದೆ.  

ಆ ದಿನ ನನ್ನನ್ನು ಸತ್ಕರಿಸಿದ್ದು ಒಂದು ಆಲದ ಮರ, ಆ ಮರದ ಬೇರಿನ ಆಳ ಊಹಿಸದಾದೆ, ಅದರ ಕೊಂಬೆಗಳ ವಿಸ್ತಾರ ಪ್ರಪಂಚದ ಉದ್ದಕ್ಕೆ ಚಾಚಿಕೊಂಡಿದೆ.  ಹಾಗೆಯೇ ಅದರ ಬಿಳಲುಗಳು ನೆಲ ಮುಟ್ಟುತ್ತಿದೆ ಮತ್ತು ಮತ್ತಷ್ಟು ಜನರನ್ನು ತನ್ನತ್ತ ಸೆಳೆದುಕೊಳ್ಳಲು,  ಅಪ್ಪಿಕೊಳ್ಳಲು.  

ಎಂ.ಎ. ಪೊನ್ನಪ್ಪ ಎಲ್ಲರ ಪ್ರೀತಿಯ “ಪೊನ್ನು” ಆಗಿದ್ದಾರೆ.  “ಪೊನ್ನು” ಎಂಬುದು ಅಚ್ಚಗನ್ನಡ ಹಾಗೂ ಮೂಲ ದ್ರಾವಿಡ ಶಬ್ದ.  ಪೊನ್ನು ಎಂದರೆ ಹೊನ್ನು, ಚಿನ್ನ (ನಾಡೋಜ ಪ್ರೊ. ಹಂಪ ನಾಗರಾಜಯ್ಯರ ನುಡಿಗಳು)  

ಈ ಪೊನ್ನು ಪೊನ್ನಂಪೇಟೆಯಲ್ಲಿ ಅಕ್ಷರ ಅಗಿಯಲು ಆರಂಭಿಸಿ ಮಡಿಕೇರಿಯ ಶಾಲೆಯೊಂದರಲ್ಲಿ ವಿಧ್ಯಾಬ್ಯಾಸ ಕಲಿತು ಬೆಂಗಳೂರಿನ “ಗ್ಯಾಸ್” ಕಾಲೇಜಿನಲ್ಲಿ ವಿದ್ಯಾಭಾಸ ಪೂರ್ಣಗೊಳಿಸಿದ ವಿವರಗಳು.... 

ಕೊಡಗಿನ ಕೊಟ್ಟೆ ಹಣ್ಣು, ನೇರಳೆ, ಕಾಡು ಮಾವಿನ ಹಣ್ಣು, ತೊರೆ ತೋಡಿನಲ್ಲಿನ ಈಜಾಟಗಳು ಗ್ರಂಥದಲ್ಲಿ ಜಾಗ ಪಡೆದುಕೊಂಡಿದೆ. 

ವಿಧ್ಯಾಭ್ಯಾಸದ ನಂತರ ದಿವಂಗತ ಎ.ಕೆ. ಸುಬ್ಬಯ್ಯನವರ ಶಿಫಾರಸ್ಸು ಪತ್ರ ಹಿಡಿದುಕೊಂಡು ಸಂದರ್ಶನವಿಲ್ಲದೆ “ವಿಜಯಾ ಬ್ಯಾಂಕ್” ನಲ್ಲಿ ಹುದ್ದೆಗೆ ಸೇರಿದ್ದು, ಅಲ್ಲಿಂದ ಕೆಲಸಮಯದಲ್ಲೇ ಕೊಡಗಿನ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಪೂಣಚ್ಛರ ಶಿಫಾರಸ್ಸು ಪತ್ರವನ್ನು ಹಾಗೂ ಕೊಡಗಿನ “ಶಕ್ತಿ “ ಪತ್ರಿಕೆಯ ಅನುಭವ ಪ್ರಮಾಣ ಪತ್ರದೊಂದಿಗೆ ಆ ದಿನಗಳ ಪ್ರತಿಷ್ಠಿತ ಪತ್ರಿಕೆ “ಲೋಕವಾಣಿ” ಯಲ್ಲಿ ಕೆಲಸಕ್ಕೆ ಸೇರಿದ್ದು, ಎರಡು ಮೂರು ಕ್ರೀಡಾ ಸುದ್ದಿಗೆ ಸೀಮಿತಗೊಂಡಿದ್ದ ಲೋಕವಾಣಿ ಪೊನ್ನುವಿನಿಂದಾಗಿ ಕೆಲ ದಿನಗಳಲ್ಲೇ ಕ್ರೀಡಾಸುದ್ದಿಗೆ ಪೂರ್ಣ ಒಂದು ಹಾಳೆಗೆ ವಿಸ್ತರಿಸಿದ್ದು, ಇದನ್ನು ಗಮನಿಸಿದ “ಸಂಯುಕ್ತ ಕರ್ನಾಟಕ” ಪತ್ರಿಕೆ ಇವರನ್ನು ಕರೆದು ಇವರ ಉತ್ಸಾಹವನ್ನು ಪ್ರೋತ್ಸಾಹಿಸಿದ್ದು, ಆ ನಂತರದಲ್ಲಿ “ಪ್ರಜಾವಾಣಿ” ಪತ್ರಿಕೆಯ ಕಚೇರಿಯಲ್ಲಿ ಇವರಿಗೆ ಅಲುಗಾಡದ “ಪೀಠ” ವನ್ನು ಒದಗಿಸಿದ ಕಥೆಗಳ ಅಭಿನಂದನಾ ಗ್ರಂಥವಿದು.  (‘ಪೀಠ” ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ.  ಆ ಪದದೊಂದಿಗೆ ಪೊನ್ನುವಿನ ಮೇಲೆ ಒಂದೊಳ್ಳೆ ಜೋಕ್ ಹುಟ್ಟಿಕೊಂಡಿದೆ ಪುಸ್ತಕದಲ್ಲಿ ಓದಿ ಆನಂದಿಸಿ)

ಆ ದಿನಗಳಲ್ಲಿ ಶಿಫಾರಸ್ಸು ಪತ್ರ ಹಿಡಿದುಕೊಂಡು ಓಡಾಡಿದ ಪೊನ್ನು ಇದೀಗ ಕೇವಲ ಪೋನ್ ನಲ್ಲೇ  ಏನೆಲ್ಲಾ ಕೆಲಸ ಮಾಡಿಸಿಕೊಡಬಹುದು ಎಂಬುದಕ್ಕೆ ಕೆಲವರು ಸಾಕ್ಷಿ ನುಡಿದಿದ್ದಾರೆ.  ಆ ಮಟ್ಟಕ್ಕೆ ಪೊನ್ನು ದೈತ್ಯ ಆಲದ ಮರವಾಗಿ ಬೆಳೆದು ನಿಂತ ಕಥೆಗಳನ್ನು ಅಭಿನಂದನಾ ಗ್ರಂಥ ಸಮಿತಿ ಸಂಗ್ರಹಿಸಿದೆ.  

ಅದೊಂದು ದಿನ ಪ್ರೆಸ್ ಕ್ಲಬ್ ನ ಗುಂಡು ಮೇಜಿನಲ್ಲಿ ಪ್ರೆಸ್ ನ ಪ್ರಧಾನ ಕಾರ್ಯದರ್ಶಿ ಚಿಂತಾಕ್ರಾಂತನಾಗಿ ಕೂತಿರುತ್ತಾನೆ, ವಿಚಾರಿಸಿದಾಗ “ನಾಳೆ ಕ್ಲಬ್ ನ ಸಮಾರಂಭ, ಉಟೋಪಚಾರಕ್ಕೆ ಹಣದ ವ್ಯವಸ್ಥೆ ಆಗಿಲ್ಲ” ಎನ್ನುತ್ತಾನೆ.  ಪೊನ್ನು ಗುಂಡಾಕು ತಲೆ ಬಿಸಿ ಮಾಡ್ಕೊಬೇಡ ಬೇಗ ಮನೆ ಹೋಗು ಎಲ್ಲಾ ಸರಿ ಮಾಡುತ್ತೇನೆ ಎಂದು ಹೊರಟು ಹೋಗುತ್ತಾರೆ.  ಮುಂಜಾನೆ ಆತ ಹಾಸಿಗೆಯಿಂದ ಏಳುವ ಮೊದಲೇ ದೂರವಾಣಿ ರಿಂಗಣಿಸುತ್ತದೆ ಅತ್ತ ಕಡೆಯಿಂದ  “ ಹಲೋ ನಾನು ಪೊನ್ನು ಎಟ್ರಿಯಾ ಹೊಟೇಲ್ ನಲ್ಲಿ ಎಲ್ಲಾ ವ್ಯವಸ್ಥೆ ಮಾಡಿದೀನಿ, ಬೇರೆ ಕೆಲಸದ ಕಡೆ ಗಮನ ಕೊಡು” ಪೋನ್ ಕಟ್.   ಇಂದಿಗೂ ಹೊಟೇಲ್ ಬಿಲ್ 7 ½ ಲಕ್ಷ ರೂಪಾಯಿ ಪೊನ್ನು ಹೇಗೆ ಯಾರಿಂದ ವ್ಯವಸ್ಥೆ ಮಾಡಿದ್ದು ಎಂದು ಯಾರಿಗೂ ಗೊತ್ತಿಲ್ಲ.  

ಮತ್ತೊಮ್ಮೆ ಕೊಡಗಿನ ಪತ್ರಕರ್ತರೊಬ್ಬರಿಗೆ ಹೃದಯದ ಸಮಸ್ಯೆ ಆಗಿರುತ್ತದೆ.  ಇದು ತಡವಾಗಿ ಪೊನ್ನುವಿನ ಅರಿವಿಗೆ ಬಂದಾಗ ಕರೆಮಾಡಿ ಆರೋಗ್ಯ ವಿಚಾರಿಸಿ ಆ ಸಂದರ್ಭದಲ್ಲಿ ಮೊದಲೇ ಗೊತ್ತಿದ್ದರೆ ನಿಮಗೆ ಆಸ್ಪತ್ರೆಯ ಖರ್ಚಿನಲ್ಲಿ 50% ಕಡಿತ ಮಾಡಿಸಿಕೊಡುತ್ತಿದ್ದೆ ಎಂದು ಹೇಳುತ್ತಾರೆ.

ಮುಂದೊಂದು ದಿನ ಅವರಿಗೆ ಬೇಕಾಗಿದ್ದ ಒಬ್ಬರಿಗೆ ಹೃದಯದ ಸಮಸ್ಯೆ ಉಂಟಾಗುತ್ತದೆ.  ಪೊನ್ನುವನ್ನು ಸಂಪರ್ಕಿಸುತ್ತಾರೆ.  ಪೊನ್ನು “ಸರಿ ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಕರೆ ಮಾಡಿ”  ಅಷ್ಟೇ ಮಾತು.  ಇವರುಗಳು ಆಸ್ಪತ್ರೆ ತಲಪುವಷ್ಟರಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದರು. ಎಲ್ಲವೂ ಪೋನ್ ನಲ್ಲೇ.  ಪುಸ್ತಕ ಇಂತಹ ದಂತಕಥೆಗಳನ್ನೂ ಸಂಪಾದಿಸಿದೆ.

ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಅತೀ ಹೆಚ್ಚು ಬಾರಿ ಚುನಾವಣೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದು, ದನದ ಕೊಟ್ಟಿಗೆಯಂತಿದ್ದ ಮಾದ್ಯಮ ಅಕಾಡೆಮಿ ಕಚೇರಿಯನ್ನು ಕಾರ್ಪೋರೇಟರ್ ಕಚೇರಿಯಂತ್ತಾಗಿಸಿದ್ದು, ಹೊಸ ಚಿಂತನೆಗಳಿಂದ ಅಕಾಡೆಮಿಗೊಂದು ನಿಜ ಅರ್ಥವನ್ನು ನೀಡಿದ ಸಾಧನೆಗಳ ಬಗ್ಗೆ ಹಲವು ಕೋನಗಳಲ್ಲಿ ಅಕ್ಷರ ದಾಖಲಿಸಿದ್ದಾರೆ. 

ಹಾಕಿ ಪ್ರೇಮಿ ಪೊನ್ನು ಕ್ರೀಡಾ ವರದಿಗಾರರಾಗಿದ್ದುಕೊಂಡೇ ಪೌರ ಕಾರ್ಮಿಕರಿಂದ ಹಿಡಿದು ಮುಖ್ಯ ಮಂತ್ರಿಗಳಿಗೂ ಚಿರ ಪರಿಚಿತವಾಗಿರುವ ಸೋಜಿಗದ ಕಥೆಗಳಿವೆ.  ಅಮೆರಿಕದ ಅಧ್ಯಕ್ಷ ಟ್ರಂಪ್ ರನ್ನು ಬಿಟ್ಟು ಎಲ್ಲರಿಗೂ ಇವನನ್ನು ಗೊತ್ತು ಎಂದು ಒಬ್ಬರು ಕಿಚಾಯಿಸಿದ್ದಾರೆ.  ಶ್ರೀಕಂಠದತ್ತ ಒಡೆಯರ್ ಹಾಗೂ ಮಹಾತ್ಮ ಗಾಂಧಿ ಮೊಮ್ಮಗಳು ಸುಮಿತ್ರಾಬಾಯಿ ಕುಲಕರ್ಣಿಯವರ ಪರಿಚಯಗಳೂ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.   ತಾಳ್ಮಾ ಮೂರ್ತಿ ಪತ್ರಕರ್ತ ಸಂಗಡಿಗರೊಂದಿಗೆ ವೀರಪ್ಪ ಮೊಯ್ಲಿ ಯವರನ್ನು ಅವರ ಮನೆಯಲ್ಲಿ ಭೇಟಿಯಾಗಲು ಹೋಗಿದ್ದಾಗ ಪೊನ್ನುವಿನ ದುರ್ವಾಸ ಮುನಿ ಅವತಾರದ ಬರಹಗಳಿವೆ.  

ಉತ್ಪ್ರೇಕ್ಷೆ ಇಲ್ಲದ ಬರಹಗಳು, ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೂ ಗಟ್ಟಿ ಸಂಬಂಧ ಬೆಳೆಸಿಕೊಂಡ ಪೊನ್ನು ಅವರುಗಳ ನಡುವೆ ಕಾಯ್ದಿಟ್ಟುಕೊಂಡ “ಅಂತರ” ಗಳನ್ನು ಅಕ್ಷರಗಳು ಹೇಳುತ್ತವೆ.

ಬೆಂಗಳೂರಿನಲ್ಲಿದ್ದುಕೊಂಡೇ ಕೊಡಗಿನ ಅಭಿವೃದ್ದಿಗೆ ಶ್ರಮಿಸಿದ ಸಾಕ್ಷ್ಯ ನುಡಿಗಳು ಅವರ ಕೊಡಗಿನ ಪ್ರೇಮವನ್ನು ಸೂಚಿಸುತ್ತದೆ.  ರಾಜಕಾರಣಿಗಳು ಮತ್ತು ಇತರೆ ಸಂಬಂಧಗಳನ್ನು ಸ್ವಾರ್ಥಕ್ಕೆ ಬಳಸದೆ ಇರುವುದರ ಬಗ್ಗೆ ಕೆಲವು ಲೇಖನಗಳು ಮಾತನಾಡಿವೆ.

ಪೊನ್ನು ಬಗ್ಗೆ ಹತ್ತು ಹಲವರಿಗಿದ್ದ ಉಡಾಫೆ ಚುನಾವಣಾ ಸಂಧರ್ಭದಲ್ಲಿ ಕೆಲವರ ಗೂಂಡಾವರ್ತನೆ, ಆ ನಂತರದಲ್ಲಿ ಅವರೊಂದಿಗೆ ದ್ವೇಷ ಸಾಧಿಸದೆ ಗೌತಮ ಬುದ್ದನ ಹಾಗೆ ಅವರುಗಳ ಮನಪರಿವರ್ತಿಸಿದ ವಿಚಾರಗಳೂ ಗ್ರಂಥದಲ್ಲಿ ಪ್ರಸ್ತಾಪವಾಗಿದೆ.  

ಮಾದ್ಯಮ ಲೋಕದ ಖ್ಯಾತ ಛಾಯಾ ಚಿತ್ರಗ್ರಾಹಕ ಕೆ.ಯಂ.ವೀರೇಶ ಇವರ ಬಹುದೊಡ್ಡ ಗುಣವಾದ ಡಾಟಾ ಬ್ಯಾಂಕಿಂಗ್ ನಿಂದಾಗಿ ಕಳೆದ ಮೂರು ದಶಕಗಳಲ್ಲಿ ಸಮಯ ಸಿಕ್ಕಾಗ ಸೆರೆಹಿಡಿದ ಪೊನ್ನುವಿನ ಆಯ್ದ ಫೋಟೋಗಳನ್ನು ಓದುಗರು ನೋಡುವ ಅವಕಾಶ ಒದಗಿಸಿಕೊಟ್ಟರೆ, ಹೆಸರಾಂತ ವ್ಯಂಗ್ಯ ಚಿತ್ರಕಾರ (ಬಿ.ಜಿ.ಗುಜ್ಜಾರಪ್ಪ) ಗುಜ್ಜಾರ್ 1973ನೇ ಇಸವಿ ಗ್ಯಾಸ್ ಕಾಲೇಜಿನ ದಿನಗಳ ಮತ್ತು ನಂತರದ “ಪೊನ್ನು” ದಿನಗಳ ಬಗ್ಗೆ ರೇಖಾ ಚಿತ್ರ ಕಥೆ ಪ್ರಜಾಮತ, ಸುಧಾ ಪತ್ರಿಕೆಗಳನ್ನು ನೆನಪಿಗೆ ತರಿಸುವಂತಿದೆ.  

ಪೊನ್ನು ಅದೆಂತಹ ಪ್ರೀತಿ ಸಂಪಾದನೆ ಮಾಡಿದ್ದಾರೆ ಅಂದರೆ ಅದೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ.  ಈ ಅಭಿನಂದನಾ ಗ್ರಂಥದ ಕನಸು  ಶ್ರೀ. ಕೆ ಎನ್. ನಾಗೇಶರದ್ದು.  ಅವರ ಆತ್ಮೀಯರ ಬಳಗದಿಂದ ಗ್ರಂಥ ಬೆಳಕು ಕಾಣಲು ಹಾತೊರೆಯುತ್ತಿದೆ.  ಕರೋನಮ್ಮನ ಆಗಮನದಿಂದ ತಡವಾಗಿದೆ.  ಹಾಗೆ ಒಳಿತೂ ಆಗಿದೆ ಅನ್ನಬಹುದೇನೋ? ಕರೋನ ಸಮಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕವನ ಕಥೆಗಳು ಹುಟ್ಟಿವೆ.  ಇಲ್ಲಿ ಶ್ರೀ ಕೆ. ಎನ್. ನಾಗೇಶರು “ಪೊನ್ನು”ವಿನ ವಿಚಾರವಾಗಿ ದಿಢೀರ್ ಸಾಹಿತ್ಯ ರಚಿಸಿದ್ದಾರೆ.  ಅದಕ್ಕೆ ಖ್ಯಾತ ಹಾಡುಗಾರ ರಂಗಾಯಣದ ಮಾಜಿ ನಿರ್ದೇಶಕ ಜೆನ್ನಿ ರಾಗ ಸಂಯೋಜಿಸಿದರೆ ಅವರ ಮಗ ಖ್ಯಾತ ಸಂಗೀತಗಾರ ಚಿಂತನ್ ಸೇರಿ ಹಾಡನ್ನು ರೆಡಿ ಮಾಡಿದ್ದಾರೆ.  ಅಭಿನಂದನಾ ಗ್ರಂಥ ಬಿಡುಗಡೆಯಂದು ವೇದಿಕೆಯಲ್ಲಿ ಹಾಡಲಿದ್ದಾರೆ.  

ವಿಶೇಷವಾಗಿ ಮೂಡಿ ಬಂದಿರುವ ಗ್ರಂಥ ಅದಕ್ಕೆ ಮತ್ತಷ್ಟು ಗತ್ತು, ಮೆರಗನ್ನು ಆ ಹಾಡು ನೀಡಲಿದೆ.  ಅದೂ ಜೆನ್ನಿ ಮತ್ತು ಸಂಗಡಿಗರ ಸ್ವರದಲ್ಲಿ.....   


ಪೊನ್ನಪ್ಪನವರಿಗೆ  ಅಭಿನಂದಿಸಲು ಹಾಗೂ ಪುಸ್ತಕ ಕಾಯ್ದಿರಿಸಲು 9845049032 

ಲೇಖಕರು: ಅಲ್ಲಾರಂಡ ವಿಠಲ ನಂಜಪ್ಪ

9448312310