Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾವೇರಿ ಮಹಿಳಾ ಪಡೆ ಅಸ್ತಿತ್ವಕ್ಕೆ


ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಹೊಸದಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಕಾವೇರಿ ಪಡೆಯನ್ನು ಅಸ್ತಿತ್ವಕ್ಕೆ ತಂದಿದೆ. 

18 ಸಿಬ್ಬಂದಿಗಳನ್ನು ಒಳಗೊಂಡಿರುವ ನೂತನ ಕಾವೇರಿ ಪಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ  ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. 

ಇಬ್ಬರು ಸಹಾಯಕ ಉಪ ನಿರೀಕ್ಷಕರು ಮತ್ತು ಇತರ 16 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಿರುವ ಈ ಕಾವೇರಿ ಪಡೆ ಮಹಿಳೆಯರು ಮತ್ತು ಯುವತಿಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಸಾರ್ವಜನಿಕ ಶೋಷಣೆಯ ವಿರುದ್ದ ಕಾರ್ಯಾಚರಣೆ ನಡೆಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ತಿಳಿಸಿದರು. 

ಶಾಲಾ ಕಾಲೇಜು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಸತಿ ಗೃಹಗಳು, ಜನ ನಿಬಿಡ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ರ್ತೀ ಶೋಷಣೆ, ಕಿರುಕುಳ, ದೌರ್ಜನ್ಯದ ವಿರುದ್ದ ಈ ಕಾವೇರಿ ಪಡೆ ಕಣ್ಣಿಡಲಿದೆ.

ಅಗತ್ಯವಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣವನ್ನೂ ಕೂಡ ಈ ಪಡೆ ದಾಖಲು ಮಾಡಲಿದೆ. ಈ ಮಹಿಳಾ ಸಿಬ್ಬಂದಿಗಳು ಮಹಿಳಾ ಶೋಷಣೆ, ಕಿರುಕುಳ ಮಾತ್ರವಲ್ಲದೇ ಬಂದೋಬಸ್ತ್ ಸಂದರ್ಭವೂ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. 

ಶಸ್ತ್ರಾಸ್ತ್ರ ತರಬೇತಿ, ಕಾನೂನು ಸುವ್ಯವಸ್ಥೆ, ಮಾತ್ರವಲ್ಲದೇ ಈ ಸಿಬ್ಬಂದಿಗಳು ಮಹಿಳಾ ಸುರಕ್ಷತೆ ಮತ್ತು ಕಾನೂನು ವಿಚಾರದಲ್ಲಿ ಪರಿಣಿತಿಯನ್ನೂ ಕೂಡ ಪಡೆದಿದ್ದು ಅಂತಹ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಈ ಪಡೆಗೆ ನೇಮಕ ಮಾಡಿರುವುದು ಈ ಕಾವೇರಿ ಪಡೆಯ ವಿಶೇಷವಾಗಿದೆ.

ಈಗಾಗಲೇ ಉಡುಪಿಯಲ್ಲಿ ಅಬ್ಬಕ್ಕ ಪಡೆ, ಮೈಸೂರಿನಲ್ಲಿ ಚಾಮುಂಡಿ ಪಡೆ, ಚಿತ್ರದುರ್ಗದಲ್ಲಿ ಓಬವ್ವ ಪಡೆಗಳನ್ನೂ ರಚಿಸಲಾಗಿದ್ದು, ಅದೇ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲೂ ಕಾವೇರಿ ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕಾವೇರಿ ಪಡೆ ಗಸ್ತು ತಿರುಗಲಿದ್ದು, ಜಿಲ್ಲೆಯ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಸಂಚಾರ ನಡೆಸಲಿದೆ. 

ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಈ ತಂಡ ಹೆಚ್ಚಿನ ನಿಘಾ ವಹಿಸಲಿದ್ದು, ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವ ಪುಂಡರ ಪಾಲಿಗೆ ಸ್ವಪ್ನವಾಗಿ ಕಾಡಲಿದೆ. 

ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಕಾವೇರಿ ಪಡೆಯ ಸೇವೆ ಬೇಕಾದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣವೇ ಸ್ಪಂದಿಸಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಇದೀಗ ಪ್ರಾರಂಭವಾಗಿರುವ ಕಾವೇರಿ ಪಡೆಯ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಮೊಬೈಲ್ ಸಂಖ್ಯೆ ನೀಡುವಂತೆ ಮೇಲಿನ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಮೊಬೈಲ್ ಸಂಖ್ಯೆ ದೊರೆತ ತಕ್ಷಣವೇ ಆ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.