Header Ads Widget

ಸರ್ಚ್ ಕೂರ್ಗ್ ಮೀಡಿಯ

ನ.30 ರಿಂದ ಸಕಾಲ ಸಪ್ತಾಹ


ಸಾರ್ವಜನಿಕರಿಗೆ ಕಾಲ ಮಿತಿಯಲ್ಲಿ ಸರ್ಕಾರದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೊಳಿಸಲಾಗಿದ್ದು, 98 ಇಲಾಖೆಗಳಲ್ಲಿ 1025 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದ್ದು, ಆ ದಿಸೆಯಲ್ಲಿ ಸಕಾಲ ಯೋಜನೆಯನ್ನು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 3 ಹಂತದಲ್ಲಿ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಕಾಲ ಯೋಜನೆಯ ಹೆಚ್ಚುವರಿ ನಿರ್ದೇಶಕರಾದ ಡಾ. ಬಿ.ಆರ್.ಮಮತ ಅವರು ತಿಳಿಸಿದ್ದಾರೆ.

ವಿಡಿಯೊ ಸಂವಾದ ಮೂಲಕ ಮಾಹಿತಿ ನೀಡಿದ ಅವರು ಕಂದಾಯ, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ನವೆಂಬರ್, 30 ರಿಂದ ಡಿಸೆಂಬರ್, 05 ರವರೆಗೆ ಮೊದಲ ಹಂತದ ಸಪ್ತಾಹ ನಡೆಯಲಿದೆ.
ಎರಡನೇ ಹಂತದಲ್ಲಿ ಡಿಸೆಂಬರ್, 07 ರಿಂದ 11 ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಬಂಧಿಸಿದಂತೆ ಹಾಗೂ ಡಿಸೆಂಬರ್, 14 ರಿಂದ 19 ರವರೆಗೆ ಉಳಿದ ಎಲ್ಲಾ ಇಲಾಖೆಗಳ ಸಕಾಲ ಸೇವೆಗಳಿಗೆ ಸಂಬಂಧಿಸಿದಂತೆ ಸಪ್ತಾಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಕಾಲ ಸೇವೆಯ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸಕಾಲ ಸೇವೆಗೆ ಸಂಬಂಧಿಸಿದಂತೆ ಇನ್ನಷ್ಟು ವಿಶ್ವಾಸ ಮೂಡಿಸಬೇಕು. ಸಕಾಲ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಅವರು ಹೇಳಿದರು.
ಆಯಾಯ ಇಲಾಖಾ ವ್ಯಾಪ್ತಿಗಳಲ್ಲಿ ಸಕಾಲ ಸೇವೆಗಳ ಬಗ್ಗೆ ನಾಮಫಲಕ ಅಳವಡಿಸಬೇಕು. ಸಕಾಲ ಸಂಬಂಧ ಪ್ರತೀದಿನ ಸ್ವೀಕರಿಸುವ ಅರ್ಜಿಗಳ ಮಾಹಿತಿಯನ್ನು ಒದಗಿಸಬೇಕು. ತಂಡಗಳನ್ನು ನಿಯೋಜಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಆಯಾಯ ಇಲಾಖಾ ವ್ಯಾಪ್ತಿಯಲ್ಲಿ ಪ್ರತೀ ಕಚೇರಿಯಲ್ಲಿ ಹೆಲ್ಫ್ ಡೆಸ್ಕ್ ಮಾಡಿಕೊಳ್ಳಬೇಕು ಎಂದು ಡಾ. ಬಿ.ಆರ್.ಮಮತ ಅವರು ವಿಡಿಯೋ ಸಂವಾದ ಮೂಲಕ ಮನವಿ ಮಾಡಿದರು.
ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು. ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ವಿಲೇ ಮಾಡುವುದು. ಸಾರ್ವಜನಿಕರಲ್ಲಿ ಸಕಾಲ ಕುರಿತು ಅರಿವು ಮೂಡಿಸುವುದು. ಸಕಾಲದ ಕುರಿತು ಇತರೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲಿ ಸಕಾಲ ಮಿಷನ್ಗೆ ಮಾಹಿತಿ ಒದಗಿಸುವುದು. ಇಲಾಖೆಯ ಕಚೇರಿಗಳಲ್ಲಿ ಸಕಾಲ ಸೇವೆಗಳ ವಿವರಗಳನ್ನೊಳಗೊಂಡ ಬ್ಯಾನರ್ಗಳನ್ನು ಪ್ರದರ್ಶಿಸುವುದು. ಸಪ್ತಾಹದ ಅಂತ್ಯದಲ್ಲಿ ವಿಲೇವಾರಿಯಾದ ಅರ್ಜಿಗಳ ಕುರಿತು ಸಕಾಲ ಮಿಷನ್ಗೆ ವರದಿ ನೀಡುವದು. ಸಕಾಲ ಸಪ್ತಾಹ ಆಚರಣೆ ಬಗ್ಗೆ ಸಕಾಲ ಮಿಷನ್ ತಂಡವು ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವುದು ಮತ್ತಿತರ ಕಾರ್ಯ ಕೈಗೊಳ್ಳಬೇಕಿದೆ ಎಂದು ಡಾ.ಬಿ.ಆರ್.ಮಮತಾ ಅವರು ವಿಡಿಯೊ ಸಂವಾದದಲ್ಲಿ ತಿಳಿಸಿದ್ದಾರೆ.
ವಿಡಿಯೊ ಸಂವಾದದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್, ನೋಂದಣಿ ಇಲಾಖೆಯ ಉಪ ನಿರ್ದೇಶಕರಾದ ಸಿದ್ದೇಶ್, ಸಕಾಲ ವಿಭಾಗದ ರಾಕೇಶ್ ಇತರರು ಇದ್ದರು.