ಮಡಿಕೇರಿ: ನಗರದ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ 6ನೇ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನು ಕೋರೋನಾ ಮಹಾಮಾರಿಯ ಕಾರಣ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರಾದ ಅಪ್ಪು ಮಹೇಶ್‌ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೀಪಗಳ ಉತ್ಸವ, ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿಯು ಭಾರತದ ಅತಿ ದೊಡ್ಡ ಹಬ್ಬವಾಗಿದೆ. ಸಮೃದ್ಧತೆ ಮತ್ತು ಕುಟುಂಬದ ಒಗ್ಗೂಡುವಿಕೆಯ ಒಂದು ವಿಭಿನ್ನ ಸನ್ನಿವೇಶ ದೀಪಾವಳಿ. ಹಾಗಾಗಿ ಈ ಹಬ್ಬವನ್ನು ಸಂಭ್ರಮದಿಂದ ವಿಭಿನ್ನವಾಗಿ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಕಳೆದ ಐದು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕೋರೋನಾ ಮಹಾಮಾರಿಯ ಕಾರಣ ಅತ್ಯಂತ ಸರಳ ರೀತಿಯಲ್ಲಿ ದಿನಾಂಕ 16-11-2020 ರ ಸೋಮವಾರದಂದು ಕಲಾನಗರದ ಮುಖ್ಯ ಬೀದಿಗಳಲ್ಲಿ ಹಾಗೂ ಮನೆ-ಮನೆಗಳಲ್ಲಿ ದೀಪಗಳನ್ನು ಹಚ್ಚುವ ಮುಖಾಂತರ ಆಚರಿಸಲಾಗುತ್ತಿದೆ ಎಂದು ಅಪ್ಪು ಮಹೇಶ್‌ರವರು ತಿಳಿಸಿದ್ದಾರೆ.
ಈ ಬಾರಿ ಕೊರೋನಾ ಬಂದು ಎಲ್ಲರನ್ನೂ ಕಂಗಾಲಾಗುವಂತೆ ಮಾಡಿದೆ. ಕೊರೋನಾ ಕಾರ್ಮೋಡದಲ್ಲಿಯೇ ದೀಪಗಳ ಹಬ್ಬ ದೀಪಾವಳಿ ನಡೆಯುತ್ತಿದೆ. ಪರಿಸರ ಸ್ನೇಹಿ ಹಬ್ಬ ಆಚರಿಸುವುದಕ್ಕೆ ಸರ್ಕಾರ ಕರೆ ನೀಡಿದೆ. ಹಾಗಾಗಿ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ "ಪ್ರೀತಿ, ಕಾಳಜಿ ಮತ್ತು ಹಂಚುವಿಕೆಯ ಹಣತೆ ಬೆಳಗಿಸುವ ಮೂಲಕ, ಭವಿಷ್ಯದ ಬಗ್ಗೆ ಹತಾಶೆ ಹೊಂದಿರುವವರು ಹಾಗೂ ನಿರ್ಗತಿಕರ ಜೀವನದಲ್ಲಿ ಸಂತೋಷವನ್ನು ತರಲಿ" ಎನ್ನುವ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ ಎಂದು ಅಧ್ಯಕ್ಷರಾದ ಅಪ್ಪು ಮಹೇಶ್‌ರವರು ತಿಳಿಸಿದ್ದಾರೆ.
ದೀಪಾವಳಿಯು ಮಾನವೀಯತೆಯ ಬೆಳಕಿನ ಆಚರಣೆಯಾಗಿದ್ದು, ಅಂಧಕಾರದಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಬುದ್ಧಿವಂತಿಕೆಯ ಕಡೆಗೆ ಮತ್ತು ವಿಷಣ್ಣತೆಯಿಂದ ಆನಂದದ ಕಡೆಗೆ ಸಾಗಲು ದೀಪಗಳು ನಮಗೆ ಪ್ರೇರಣೆ ನೀಡುತ್ತದೆ. ದೀಪಾವಳಿಯು ಭರವಸೆ ಮೂಡಿಸುವ ಹಬ್ಬ. ಕೊರೋನಾ ಎಂಬ ಕತ್ತಲೆಯನ್ನು ಶಪಿಸುವ ಬದಲು ದೀಪವಗಳನ್ನು ಬೆಳಗಿಸುತ್ತಾ, ಸದಾಚಾರದ ಹಾದಿಯನ್ನು ತೋರಿಸಿ ನಾವು ಉತ್ತಮ, ಹೆಚ್ಚು ಮಾನವೀಯ, ಶಾಂತಿಯುತ ಮತ್ತು ಸಹಾನುಭೂತಿಯ ಜಗತ್ತನ್ನು ನಿರ್ಮಿಸುವ ಪ್ರಯತ್ನವನ್ನು ಮುಂದುವರಿಸಿಕೊಂಡು, ಈ ಬಾರಿಯ ದೀಪಾವಳಿ ಹಬ್ಬವು ನಮ್ಮ ಜೀವನದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ, ಎಂದು ಮಡಿಕೇರಿಯ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ಪರವಾಗಿ ಅಧ್ಯಕ್ಷರಾದ ಅಪ್ಪು ಮಹೇಶ್‌ರವರು ಆಶಿಸಿದ್ದಾರೆ.
Search Coorg Media