Ad Code

Responsive Advertisement

8.23 ಕೋಟಿ ರೂ. ನಿವ್ವಳ ಲಾಭ ಮತ್ತು 17.20 ಕೋಟಿ ಒಟ್ಟು ಲಾಭ; ಶತಮಾನೋತ್ಸವ ವರ್ಷ ಆಚರಿಸಿಕೊಳ್ಳುವ ಹೊಸ್ತಿಲಿನಲ್ಲಿ ನಿಂತಿರುವ ಕೊಡಗು ಡಿಸಿಸಿ ಬ್ಯಾಂಕ್


2021 ರಲ್ಲಿ ಶತಮಾನೋತ್ಸವ ವರ್ಷ ಆಚರಿಸಿಕೊಳ್ಳುವ ಹೊಸ್ತಿಲಿನಲ್ಲಿ ನಿಂತಿರುವ ಡಿಸಿಸಿ ಬ್ಯಾಂಕ್ ಜಿಲ್ಲೆಯ ಶೇ.70 ರಷ್ಟು ರೈತರಿಗೆ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ರೈತಪರ ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದು, 2020 ಮಾರ್ಚ್ ಅಂತ್ಯಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್  8.23 ಕೋಟಿ ರೂ. ನಿವ್ವಳ ಲಾಭ ಮತ್ತು 17.20 ಕೋಟಿ ಒಟ್ಟು ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದ್ದಾರೆ.

ಮಡಿಕೇರಿಯ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಡ್‌ ಗಣಪತಿ, ರೈತರ ದಾಖಲಾತಿಗಳು ಸಮರ್ಪಕವಾಗಿದ್ದಲ್ಲಿ ಬ್ಯಾಂಕ್ ಯಾವುದೇ ಸಂದರ್ಭದಲ್ಲು ಬಂಡವಾಳ ಕೊರತೆ ಅಥವಾ ಇನ್ನಾವುದೇ ಕಾರಣಗಳಿಗಾಗಿ ರೈತರ ಸಾಲದ ಅರ್ಜಿಗಳನ್ನು ತಿರಸ್ಕರಿಸಿದ ಪ್ರಕರಣಗಳಿಲ್ಲವೆಂದು ಸ್ಪಷ್ಟಪಡಿಸಿದರು. ಬ್ಯಾಂಕ್ ವಿವಿಧ ರೀತಿಯ ಠೇವಣಿ ಸಂಗ್ರಹಿಸುತ್ತಿದ್ದು, ವಾರ್ಷಿಕ ಗರಿಷ್ಠ ಬಡ್ಡಿದರ ಶೇ.6 ಆಗಿದೆ. ಇತರೆ ಬ್ಯಾಂಕ್‍ಗಳಿಗೆ ಹೋಲಿಸಿದರೆ ಡಿಸಿಸಿ ಬ್ಯಾಂಕಿನ ಬಡ್ಡಿದರ ಗರಿಷ್ಠ ಮಟ್ಟದಲ್ಲಿದ್ದು, ಹಿರಿಯ ನಾಗರಿಕರಿಗೆ ಶೇ.0.50 ಯಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ ಎಂದರು.


1921 ರಲ್ಲಿ ಸ್ಥಾಪನೆಯಾದ ಡಿಸಿಸಿ ಬ್ಯಾಂಕ್‍ನಲ್ಲಿ 284 ಸಹಕಾರ ಸಂಘಗಳಿದೆ. ಬ್ಯಾಂಕ್‍ನ ಪಾಲು ಬಂಡವಾಳ 2442.10 ಲಕ್ಷಗಳು, ಸ್ವಂತ ಬಂಡವಾಳ 9357ಲಕ್ಷಗಳು, ದುಡಿಯುವ ಬಂಡವಾಳ 138412.88 ಲಕ್ಷಗಳು, ಠೇವಣಿ ಸಂಗ್ರಹಣೆ 92694 ಲಕ್ಷಗಳು, ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲಗಳು 29573.50 ಲಕ್ಷಗಳು, ಹೂಡಿಕೆಗಳು 33160.49 ಲಕ್ಷಗಳು, ವಿತರಣೆಯಾಗಿರುವ ಒಟ್ಟು ಸಾಲ 71152.04 ಲಕ್ಷಗಳು, ಕೃಷಿ ಸಾಲ 48492.99 ಲಕ್ಷಗಳು, ಕೃಷಿಯೇತರ ಸಾಲ 22659.05 ಲಕ್ಷಗಳು, ಹೊರಬಾಕಿ ನಿಂತ ಒಟ್ಟು ಸಾಲ 86467.24 ಲಕ್ಷಗಳು, ಕೃಷಿ ಸಾಲದ ಹೊರ ಬಾಕಿ 53860.81 ಲಕ್ಷಗಳು, ಕೃಷಿಯೇತರ ಸಾಲದ ಹೊರ ಬಾಕಿ 32606.43 ಲಕ್ಷಗಳು, ಒಟ್ಟು ಸಾಲದ ವಸೂಲಾತಿ ಪ್ರಮಾಣ ಶೇ.96.69, ಕೃಷಿ ಸಾಲದ ವಸೂಲಾತಿ ಶೇ.99.36, ಕೃಷಿಯೇತರ ಸಾಲದ ವಸೂಲಾತಿ ಶೇ.88.79 ಎಂದು ಗಣಪತಿ ಮಾಹಿತಿ ನೀಡಿದರು.

ಪ್ರಸ್ತುತ ವರ್ಷ ದೇಶವ್ಯಾಪಿ ಹರಡಿದ್ದ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ., ಜಿಲ್ಲೆಯ 105 ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ವಾರಿಯರ್ಸ್‍ಗಳಿಗೆ ತಲಾ 3 ಸಾವಿರ ರೂ.ಗಳಂತೆ 3.15 ಲಕ್ಷ ರೂ. ಸಹಾಯಧನ ವಿತರಣೆ ಮಾಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 6.50 ಲಕ್ಷ ವೆಚ್ಚದ 2 ಮೊಬೈಲ್ ವೆಂಟಿಲೇಟರ್‍ನ್ನು ಕೊಡುಗೆಯಾಗಿ ನೀಡಲಾಗಿದೆ. ಕೋವಿಡ್‍ಗೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್ ಇಲ್ಲಿಯವರೆಗೆ ಒಟ್ಟು 19.65 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದೆಯೆಂದು ಗಣಪತಿ ಮಾಹಿತಿ ನೀಡಿದರು.

ಕೋವಿಡ್ ಪ್ರತಿಕೂಲ ಪರಿಣಾಮವನ್ನು ದೃತಿಗೆಡದೆ ಎದುರಿಸಲು ರೈತರ ಹಾಗೂ ಸಹಕಾರ ಸಂಘಗಳ ಅವಶ್ಯ ಸಾಲಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು. ಬ್ಯಾಂಕಿನ 2019-20ನೇ ಸಾಲಿನ 95ನೇ ವಾರ್ಷಿಕ ಮಹಾಸಭೆ ನ.3 ರಂದು ಬೆಳಗ್ಗೆ 10.30ಗಂಟೆಗೆ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆಯೆಂದು ತಿಳಿಸಿದರು.

ಬ್ಯಾಂಕ್ ಶೇ.9.50 ಬಡ್ಡಿ ದರದಲ್ಲಿ ರೈತರಿಗೆ 60 ಲಕ್ಷಗಳವರೆಗೆ ಅಲ್ಪಾವಧಿ ಬೆಳೆ ಸಾಲ, ಶೇ.8 ಬಡ್ಡಿ ದರದಲ್ಲಿ ಮಾಸಿಕ ಮರುಪಾವತಿ ಆಧಾರಿತ ಅಥವಾ ಶೇ.9ರ ಬಡ್ಡಿ ದರದ ವಾರ್ಷಿಕ ಮರುಪಾವತಿಯಡಿ ತ್ವರಿತ ವಾಹನ ಸಾಲ ಹಾಗೂ ರೈತರಿಗೆ ಶೇ.7.50 ದರದಲ್ಲಿ ಪಿಕ್ ಅಪ್ ವಾಹನ ಖರೀದಿ ಸಾಲ ನೀಡಲಾಗುತ್ತಿದೆ. ಇದರೊಂದಿಗೆ ಸಾರ್ವಜನಿಕರಿಗೆ ಸೆಕೆಂಡ್ ಹ್ಯಾಂಡ್ ನಾಲ್ಕು ಚಕ್ರದ ವಾಹನ ಖರೀದಿಗೆ ಸಾಲ ನೀಡುವ ಹೊಸ ಯೋಜನೆಯನ್ನು ಕೂಡ ಆರಂಭಿಸಲಾಗಿದೆ ಎಂದರು. ಬ್ಯಾಂಕ್ ಗ್ರಾಹಕರ ಬೇಡಿಕೆಗೆ ಅನುಸಾರ ವಿವಿಧ ಯೋಜನೆಗಳಿಗಾಗಿ ಗರಿಷ್ಠ 60 ಲಕ್ಷ ಮತ್ತು ಕಂಪೆನಿಗಳಾದಲ್ಲಿ ನಬಾರ್ಡ್ ಮಾನದಂಡದಡಿ ಗರಿಷ್ಠ 20 ಕೋಟಿಯವರೆಗೆ ದೊಡ್ಡ ಮೊತ್ತದ ಸಾಲ ಸೌಲಭ್ಯ ನೀಡಲಾಗುವುದು ಎಂದು ಗಣಪತಿ ಹೇಳಿದರು.

2020-21ನೇ ಸಾಲಿಗೆ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು ರಿಯಾಯ್ತಿ ಬಡ್ಡಿ ದರ ಅನ್ವಯವಾಗುವಂತೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಇದೇ ಅ.15 ರಂದು ಹೊರಡಿಸಿರುವ ಸುತ್ತೋಲೆ ಆಘಾತಕಾರಿಯಾಗಿದೆಯೆಂದು ತಿಳಿಸಿರುವ ಗಣಪತಿ, ಮಹಾಸಭೆಯಲ್ಲಿ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು.

2020-21ನೇ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆ, ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಬಾಳೆಲೆಯಲ್ಲಿ ನೂತನ ಮೂರು ಶಾಖೆಗಳನ್ನು ಉದ್ಘಾಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 20 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಶತಮಾನೋತ್ಸವದ ನೆನಪಿಗಾಗಿ 21ನೇ ಶಾಖೆಯನ್ನು ಕೊಡ್ಲಿಪೇಟೆಯಲ್ಲಿ 2021 ಜನವರಿ 1 ರಂದು ಉದ್ಘಾಟಿಸಲು ನಿರ್ಧರಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಾದಾಪುರ ಮತ್ತು ಸಂಪಾಜೆಯಲ್ಲೂ ನೂತನ ಶಾಖೆಗಳನ್ನು ಆರಂಭಿಸಲಾಗುವುದೆಂದು ಗಣಪತಿ ತಿಳಿಸಿದರು.


ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಸಲೀಂ ಮಾತನಾಡಿ, 2018ರ ಸಾಲ ಮನ್ನಾ ಯೋಜನೆಯಡಿ ಅಲ್ಪಾವಧಿ ಬೆಳೆ ಸಾಲ ಪಡೆದು, ಹೊರ ಬಾಕಿ ಉಳಿಸಿಕೊಂಡಿದ್ದ 32903 ರೈತ ಫಲಾನುಭವಿಗಳ 25481.96 ಲಕ್ಷ ಅರ್ಹ ಮೊತ್ತದ ಮಾಹಿತಿಯನ್ನು ಸರ್ಕಾರ ಒದಗಿಸಿದ್ದ ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಈ ಪೈಕಿ 26342 ರೈತರ ಸಾಲ ಮನ್ನಾ ಮೊತ್ತ 20416.88 ಲಕ್ಷ ರೂ. ಸಂಬಂಧಿಸಿದ ರೈತರ ಖಾತೆಗೆ ನೇರವಾಗಿ ಜಮೆಯಾಗಿದೆಯೆಂದು ತಿಳಿಸಿದರು. ಉಳಿದ 6561 ರೈತರ 5065.08 ಲಕ್ಷ ರೂ. ಮನ್ನಾ ಅರ್ಹತೆಯು ವಿವಿಧ ಕಾರಣಗಳಿಂದಾಗಿ ಸರ್ಕಾರದ ಪರಿಶೀಲನೆಯ ಹಂತದಲ್ಲಿದೆಯೆಂದು ಅವರು ಸ್ಪಷ್ಟಪಡಿಸಿದರು.

6561 ರೈತರ ಪೈಕಿ 3157 ರೈತರು ಒಂದೇ ಕುಟುಂಬದ ಸದಸ್ಯರು, ವೇತನದಾರರು, ಪಿಂಚಣಿದಾರರು ಎರಡು ಸಹಕಾರ ಸಂಘದಲ್ಲಿ ಸಾಲ ಪಡೆದ ಸದಸ್ಯರುಗಳಾಗಿದ್ದು, ಯೋಜನೆಯ ಅನ್ವಯ ಅನರ್ಹತೆಯನ್ನು ಹೊಂದಿದ್ದಾರೆ. ಉಳಿದ 3404 ರೈತರಿಗೆ ಸಾಲ ಮನ್ನಾ ಸೌಲಭ್ಯ ದೊರಕಿಸಿಕೊಡುವಂತೆ ಬ್ಯಾಂಕಿನಿಂದ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೆಂದು ಸಲೀಂ ತಿಳಿಸಿದರು. 2017 ರ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಮನ್ನಾ ಮೊತ್ತ ಬಿಡುಗಡೆಗೊಳ್ಳುವುದು ತಡವಾಗುವುದನ್ನು ಮನಗಂಡು ಬ್ಯಾಂಕ್ ತನ್ನ ಸ್ವಂತ ಬಂಡವಾಳದಿಂದ 150 ಕೋಟಿ ರೂ.ಗಳಷ್ಟು ಸಹಕಾರ ಸಂಘಗಳ ಪರವಾಗಿ ಭರಿಸಿದೆ. ಇಂದಿಗೂ ಸರ್ಕಾರದಿಂದ 9.91 ಕೋಟಿ ರೂ. ಬಿಡುಗಡೆಯಾಗಲು ಬಾಕಿ ಇದೆಯೆಂದು ಸಲೀಂ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕ ಕಿಮ್ಮುಡಿರ ಜಗದೀಶ್ ಹಾಗೂ ಪ್ರಧಾನ ವ್ಯವಸ್ಥಾಪಕ ಕೋಡೀರ ಪೂವಯ್ಯ ಉಪಸ್ಥಿತರಿದ್ದರು.

Search Coorg Media