ಕೋವಿಡ್-19 ಲಸಿಕೆ ಕಂಡು ಹಿಡಿಯುವ ತನಕ ಶಾಲೆಗಳನ್ನು ಆರಂಭಿಸದಿರಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಯಿತು.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಕೋವಿಡ್-19 ಲಸಿಕೆ ಲಭಿಸುವವರೆಗೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ವ್ಯಕ್ತವಾಯಿತು.
ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಸಹ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಕಡಿವಾಣ ಹಾಕಬೇಕಿದೆ ಎಂದು ಸದಸ್ಯರಾದ ಸಿ.ಕೆ.ಬೋಪಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಖಾಸಗಿ ಶಾಲೆಗಳಲ್ಲಿ ಪ್ರಥಮ ಹಂತದ ಶುಲ್ಕ ಪಡೆಯಲಾಗಿದ್ದರೂ ಸಹ ದ್ವಿತೀಯ ಹಂತದ ಶುಲ್ಕ ಪಾವತಿಸುವಂತೆ ಪೋಷಕರಲ್ಲಿ ಒತ್ತಾಯ ಮಾಡುತ್ತಿರುವುದು ಸರಿಯಲ್ಲ ಎಂದು ಸಿ.ಕೆ.ಬೋಪಣ್ಣ ಅವರು ಪ್ರಶ್ನಿಸಿದರು.
ಈ ಕುರಿತು ಮಾತನಾಡಿದ ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳಾ ಮತ್ತು ಸದಸ್ಯರಾದ ಸುನಿತಾ ಅವರು ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳು ಸಹ ಶುಲ್ಕ ವಸೂಲಿ ಮಾಡುತ್ತಿವೆ. ಇದನ್ನು ತಡೆಯಬೇಕು ಎಂದು ಅವರು ಹೇಳಿದರು.
ಸದಸ್ಯರಾದ ವಿಜು ಸುಬ್ರಮಣಿ ಮತ್ತು ಬಾನಂಡ ಪ್ರಥ್ಯು ಅವರು ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ತಾತ್ಕಾಲಿಕವಾಗಿ ಮಾನ್ಯತೆ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸದಸ್ಯರಾದ ಶಿವು ಮಾದಪ್ಪ ಅವರು ಮಾತನಾಡಿ ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ಪಾಠ ಪ್ರವಚನ ಮಾಡುತ್ತಿದ್ದು, ಶಿಕ್ಷಕರಿಗೆ ವೇತನ ಪಾವತಿಸಬೇಕಿದೆ. ಆದ್ದರಿಂದ ಖಾಸಗಿ ಶಾಲೆ ನಿರ್ವಹಣೆಗೆ ಸಾಧ್ಯವಾದಷ್ಟು ಶುಲ್ಕ ಪಾವತಿಸಬೇಕಿದೆ. ಸದ್ಯ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಅವರು ಧ್ವನಿಗೂಡಿಸಿದರು.
ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಕೆಲವು ಖಾಸಗಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ನೇರವಾಗಿ ಬರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು, ಈ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಿದೆ. ಈ ಬಗ್ಗೆ ವರದಿ ಸಿದ್ಧ್ದಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮುರಳಿ ಕರುಂಬಮ್ಮಯ್ಯ ಸೇರಿದಂತೆ ಇತರರು ಔಷಧಿ ದೊರೆಯುವ ತನಕ ಶಾಲೆ ಆರಂಭಿಸಬಾರದು ಎಂದು ಧ್ವನಿಗೂಡಿಸಿದರು.
ಸದಸ್ಯರಾದ ಪುಟ್ಟರಾಜು ಅವರು ಬೆಸ್ಸೂರು ಸರ್ಕಾರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರು ನಿಯೋಜನೆ ಮೇರೆ ತೆರಳಿದ್ದು, ಬೇರೆಯವರನಾದರೂ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಜಿ.ಪಂ. ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ.ಸದಸ್ಯರಾದ ವಿಜು ಸುಬ್ರಮಣಿ ಕೋವಿಡ್-19 ನಿರ್ವಹಣೆಯನ್ನು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದರು.
ಅಬ್ದುಲ್ ಲತೀಫ್ ಅವರು ಕೋವಿಡ್-19 ವಾರಿಯರ್ಸ್ ಆಗಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಿದ್ದೇನೆ ಎಂದರು. ಇದಕ್ಕೆ ಹಲವು ಸದಸ್ಯರು ಅಭಿನಂದನೆ ಸಲ್ಲಿಸಿದರು.
ಕೋವಿಡ್-19 ನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳು ಬರುತ್ತಿವೆ ಎಂದು ಲತೀಫ್ ಅವರು ಸಭೆಯ ಗಮನಕ್ಕೆ ತಂದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್-19 ಪಾಸಿಟಿವ್ ಬಂದವರ ಸ್ಥಿರತೆಯನ್ನು ಗಮನಿಸಿ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕೇ ಅಥವಾ ಮನೆಯಲ್ಲಿಯೇ ಇರಿಸಿ ಉಪಚರಿಸಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಊಟೋಪಚಾರ ಹೊರತುಪಡಿಸಿ, ಉಳಿದಂತೆ ಔಷಧಿ ಮತ್ತು ಮಾತ್ರೆಗಳು ರಾಜ್ಯದಿಂದ ಬರಲಿದೆ ಎಂದು ಅವರು ಮಾಹಿತಿ ನೀಡಿದರು.
ಸದಸ್ಯರಾದ ಸರೋಜಮ್ಮ ಮತ್ತು ಸುನಿತಾ ಅವರು ತಮ್ಮ ಜಿ.ಪಂ.ವ್ಯಾಪ್ತಿಯ ಶನಿವಾರಸಂತೆ ಮತ್ತು ಚೆಟ್ಟಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿದೆ. ವೈದ್ಯರನ್ನು ನಿಯೋಜಿಸಬೇಕು ಎಂದು ಅವರು ಹೇಳಿದರು.
ಚೆಟ್ಟಳ್ಳಿ ಆಸ್ಪತ್ರೆಗೆ ಶ್ರುಶ್ರೂಷಕರನ್ನು, ಶನಿವಾರಸಂತೆಗೆ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಡಿಎಚ್ಒ ಅವರು ಹೇಳಿದರು. ಶನಿವಾರಸಂತೆಯಲ್ಲಿ ಜನೌಷಧಿ ಕೇಂದ್ರ ಆರಂಭಿಸಬೇಕು ಎಂದು ಸರೋಜಮ್ಮ ಅವರು ಮನವಿ ಮಾಡಿದರು.
ಇದಕ್ಕೆ ಮಾಹಿತಿ ನೀಡಿದ ಡಿಎಚ್ಒ ಅವರು ಸ್ಥಳೀಯರು ಮುಂದೆ ಬಂದಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಸದಸ್ಯರಾದ ಪಂಕಜ ಅವರು ಕೋವಿಡ್-19 ನಿಂದ ಮೃತಪಟ್ಟವರನ್ನು ನೋಡಲು ಅವಕಾಶ ಮಾಡಬೇಕು ಎಂದು ಅವರು ಕೋರಿದರು.
ಜಿಲ್ಲೆಯಲ್ಲಿ ಮಳೆಗಾಲ ಮುಗಿದಿದ್ದು, ಈಗಾಲಾದರೂ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ಸದಸ್ಯರಾದ ಶ್ರೀನಿವಾಸ್, ಕಿರಣ್ ಕಾರ್ಯಪ್ಪ, ಮುರಳಿ ಕರುಂಬಮ್ಮಯ್ಯ, ಪೂರ್ಣಿಮಾ ಗೋಪಾಲ್, ಅಪ್ಪಚಂಡ ಮಹೇಶ್, ಬಿ.ಜೆ.ದೀಪಕ್, ಪಂಕಜ, ಪ್ರಥ್ಯು ಅವರು ಒತ್ತಾಯಿಸಿದರು.
ಪೂರ್ಣಿಮಾ ಗೋಪಾಲ್ ಅವರು ಮಾತನಾಡಿ ರಸ್ತೆಯನ್ನು ನಿರ್ಮಿಸುವಾಗ ಚರಂಡಿ ಕಾಮಗಾರಿಯನ್ನು ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಕವಿತಾ ಪ್ರಭಾಕರ್ ಅವರು ಮಾತನಾಡಿ ಭಾಗಮಂಡಲ-ಕರಿಕೆ ರಸ್ತೆ ತುಂಬಾ ಹದಗೆಟ್ಟಿದ್ದು, ಇದನ್ನು ಸರಿಪಡಿಸಬೇಕು. ಹಾಗೆಯೇ ಮಡಿಕೇರಿ ಭಾಗಮಂಡಲ ರಸ್ತೆ ಗುಂಡಿ ಮುಚ್ಚುವ ಕಾರ್ಯವಾಗಬೇಕು ಎಂದರು. ಪಂಕಜ ಅವರು ರಸ್ತೆ ಬದಿ ಕಾಡು ಕಡಿಯಬೇಕು ಎಂದು ತಿಳಿಸಿದರು. ಮುರಳಿ ಕರುಂಬಮ್ಮಯ್ಯ ಅವರು ಎಮ್ಮೆಮಾಡು ರಸ್ತೆ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಬೇಕಿದೆ ಎಂದರು.
ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಎಇಇ ಶಿವರಾಮ್ ಅವರು ಮಳೆ ಹಾನಿ ಕಾಮಗಾರಿಗಳ ಸಂಬಂಧ ಅಂದಾಜು ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಅನುಮೋದನೆ ನೀಡಿದ ನಂತರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ಸದಸ್ಯರಾದ ಪ್ರಥ್ಯು ಅವರು ಗ್ರಾಮ ಜ್ಯೋತಿ ಕಾರ್ಯಕ್ರಮವು ಸಮರ್ಪಕವಾಗಿ ಪ್ರಗತಿ ಆಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಈ ಕುರಿತು ಮಾಹಿತಿ ನೀಡಿದ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಸೋಮಶೇಖರ್ ಅವರು ಬೊಮ್ಮಾಡುವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು ಈ ಬಗ್ಗೆ ಆಯಾಯ ಸಂದರ್ಭದಲ್ಲಿಯೇ ಸಾರ್ವಜನಿಕರು ಸಹಾಯವಾಣಿ 1912 ಅಥವಾ ಹತ್ತಿರದ ಸೆಸ್ಕ್ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಅವರು ಕೋರಿದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಇರುವುದಿಲ್ಲ. ಬೇಸಿಗೆ ಅವಧಿಯಲ್ಲಾದರು ವಿದ್ಯುತ್ ಬೇಡವೇ ಎಂದು ಮುರಳಿ ಕರುಂಬಮ್ಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.
ಬೊಮ್ಮಾಡು ಹಾಡಿಯಲ್ಲಿ ಸೋಲಾರ್ ವಿದ್ಯುತ್ ಘಟಕ ಸಂಬಂಧಿಸಿದಂತೆ ತನಿಖೆಯಾಗಲಿ ಎಂದು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಣ ಪಾವತಿಸದಿರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸದೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಜಿ.ಪಂ. ಹಲವು ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯರಾದ ಪುಟ್ಟರಾಜು ಅವರು ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮವೊಂದರ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಅವರು ಹೇಳಿದರು.
ಅಪ್ಪಚಂಡ ಮಹೇಶ್ ಅವರು ಹಲವು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಸೋಮಶೇಖರ್ ಅವರು ವಿದ್ಯುತ್ ಸಂಪರ್ಕ ಕಲ್ಪಿಸಲು ಸುಮಾರು 75 ಕಾಮಗಾರಿಗಳ ಅರ್ಜಿ ಬಂದಿದ್ದು, ಹಣ ಪಾವತಿಸದಿರುವುದರಿಂದ ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಅವರು ಫೆಬ್ರವರಿ ಅಂತ್ಯದೊಳಗೆ ವಿದ್ಯುತ್ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕುಡಿಯುವ ನೀರು ಸಂಬಂಧ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಮುರಳಿ ಕರುಂಬಮ್ಮಯ್ಯ ಅವರು ಹೇಳಿದರು.
ಪಂಕಜ ಅವರು ಗಿರಿಜನ ಹಾಡಿಗಳಿಗೆ ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು 60 ಗಂಗಾ ಕಲ್ಯಾಣ ಯೋಜನೆಯಡಿ 38 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇದೆ ಎಂದು ಅವರು ತಿಳಿಸಿದರು.
ಚೆಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಬೇಕು. ಕೂಡ್ಲೂರು-ಚೆಟ್ಟಳ್ಳಿ ಗ್ರಾಮದ 227 ಕುಟುಂಬಗಳಿದ್ದು, ಸಮರ್ಪಕ ಕುಡಿಯುವ ನೀರು ಯೋಜನೆಗಳು ಸೇರಿದಂತೆ ಹಲವು ಕಾರ್ಯಗಳು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಿ.ಪಂ. ಸದಸ್ಯರಾದ ಪ್ರಥ್ಯು ಅವರು ಅನುಪಾಲನಾ ವರದಿಯಲ್ಲಿ ಕೆಲವು ಇಲಾಖಾ ಅನುಪಾಲನೆ ಸಂಬಂಧಿಸಿದಂತೆ ಖಾಲಿ ಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅನುಪಾಲನಾ ವರದಿಯಲ್ಲಿ ಸಮರ್ಪಕವಾಗಿ ಮಾಹಿತಿ ಒದಗಿಸುವಂತೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್, ಸದಸ್ಯರಾದ ವಿಜು ಸುಬ್ರಮಣಿ ಅವರು ಸೂಚಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಸಮರ್ಪಕವಾಗಿ ಮಾಹಿತಿ ನೀಡದ ಅಧಿಕಾರಿಗಳಿಂದ ಶೋಕಾಸ್ ನೋಟೀಸ್ ನೀಡಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ, ಕೆ.ಆರ್.ಮಂಜುಳ, ಸದಸ್ಯರಾದ ಮೂಕೊಂಡ ಪಿ.ಸುಬ್ರಮಣಿ ಇತರರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.