Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”

ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸೇರಿ, ಹುತ್ತರಿ ಮುಹೂರ್ತವನ್ನು ನಿಶ್ಚಯಿಸುತ್ತಾರೆ.

ಜ್ಯೋತಿಷ್ಯರು, ದೇವತಕ್ಕರು, ನಾಡ ಮುಖ್ಯಸ್ಥರು ಸೇರಿ ಸಮಯ ನಿಗದಿಪಡಿಸಿದ್ದು, ಅದರಂತೆ ಶ್ರೀ ಪಾಡಿ ಇಗ್ಗುತ್ತಪ್ಪ ಸನ್ನಿಧಾನದಲ್ಲಿ ನವೆಂಬರ್  20ರಂದು ಸಂಜೆ 07:35 ಗಂಟೆಗೆ ನೆರೆಕಟ್ಟಿ, ಸಂಜೆ 8:35  ಗಂಟೆಗೆ ಕದಿರು ತೆಗೆದು, ಸಂಜೆ 9.35  ಗಂಟೆಗೆ ಪ್ರಸಾದ ವಿತರಣೆ ಆಗಲಿದೆ. ಈ ಬಾರಿ ರೋಹಿಣಿ ನಕ್ಷತ್ರ, ಮಿಥುನ ಲಗ್ನದಲ್ಲಿ ಹುತ್ತರಿ ಹಬ್ಬ ಆಚರಣೆ ನಡೆಯುತ್ತಿದೆ. ಅದರಂತೆ ಹುತ್ತರಿ ಹಬ್ಬದ ಆಚರಣೆಗೆ ಕೊಡಗಿನ ಜನತೆ ಮುಂದಾಗಿದ್ದಾರೆ.

ಸರ್ವರಿಗೂ ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಕೊರೋನಾ ಮಹಾಮಾರಿ ಹಾಗೂ ಪ್ರಕೃತಿ ವಿಕೋಪದಿಂದ ಬತ್ತಿದ ಬದುಕಿಗೆ ಭತ್ತದ ಕದಿರು ಸಮೃದ್ದಿ-ನೆಮ್ಮದ್ದಿಯನ್ನು ನೀಡಲಿ ಎಂಬುದೇ ನಮ್ಮ ಹಾರೈಕೆ.

ಸರ್ಚ್‌ ಕೂರ್ಗ್‌ ಮೀಡಿಯಾ ಬಳಗ.



ಹುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಹುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ. 

ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ'' ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ 'ಹುತ್ತರಿ ಹಬ್ಬ' ಎಂದು ಆಚರಿಸುತ್ತಾರೆ. ಹುತ್ತರಿ ಎಂದರೆ ಪುದಿಯ(ಹೊಸ), ಅರಿ(ಅಕ್ಕಿ), ಪುತ್ತರಿ(ಹೊಸ ಅಕ್ಕಿ), ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಹುತ್ತರಿ ಹಬ್ಬ. ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

ಹುತ್ತರಿ ಹಬ್ಬದ ಆಚರಣಾ ರೀತಿ–ರಿವಾಜುಗಳು: 

ಹುತ್ತರಿ ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್ಬೊಳಕ್' (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು' ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ' ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್ನ ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು (“ಕದಿರು” ಎಂದರೆ ಭತ್ತದ ಕಟ್ಟು) ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ “ಕುತ್ತಿ''ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ ಪೊಲಿ ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ ಪೊಲಿ ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವನ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು ಮುಖ್ಯ ವಸ್ತುಗಳಿಗೆ ಇದನ್ನು ಕಟ್ಟುತ್ತಾರೆ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, 'ಪರೆಯಕಳಿ'ಗಳನ್ನು ಆಡಿ ಸಂಭ್ರಮಿಸುತ್ತಾರೆ. 

ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆಯ ಇತಿಹಾಸ-ಹಿನ್ನಲೆ: 

ಕೊಡಗಿನಲ್ಲಿ ಪ್ರಮುಖವಾಗಿ ಆರಾಧನೆಗೆ ಒಳಪಡುತ್ತಿರುವ “ಇಗ್ಗುತಪ್ಪ, ಪಾಲುರಪ್ಪ, ಬೇಂದ್ರುಕೋಲಪ್ಪ, ಪೆಮ್ಮಯ್ಯ, ಕಾಂಚರಾಟಪ್ಪ, ತಿರಚಂಬರಪ್ಪ” ಈ ಸಹೋದರರ ಕೊನೆಯ ತಂಗಿ “ಪನ್ನಂಗಾಲ ತಮ್ಮೆ” ಇವರು ಕೇರಳದಿಂದ ಬಂದು ಕೊಡಗಿನಲ್ಲಿ ಪೂಜಿಸಲ್ಪಡುತ್ತಿರುವವರು. ಇವರಲ್ಲಿ ಇಗ್ಗುತಪ್ಪ, ಪಾಲೂರಪ್ಪ, ತಿರುನೆಲ್ಲಿ ಪೆಮ್ಮಯ್ಯ ಇವರು ಕೇರಳದಿಂದ ಕೊಡಗಿಗೆ ಬಂದು ತಾವು ಬಿಟ್ಟ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ, ಅಲ್ಲಿ ಹೋಗಿ ನೆಲೆ ನಿಲ್ಲೋಣಾ ಎಂದು ನಿಶ್ಚಯಿಸಿ, ಅದರಂತೆ ಇಗ್ಗುತಪ್ಪ್ಪ ಕೊಡಗಿನಲ್ಲಿ ನೆಲೆಸಿ ಕೊಡಗಿನವರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾರೆ. ಒಮ್ಮೆ ಇಗ್ಗುತಪ್ಪನು ಕೊಡಗಿನಲ್ಲಿ ಸುಗ್ಗಿಯ ಸಂಭ್ರಮವನ್ನು ಆಚರಿಸಲು ಯಾವುದೇ ಆಚರಣೆಗಳು ಇಲ್ಲದಿದ್ದಾಗ ಕೇರಳದಲ್ಲಿ ನೆಲೆಸಿರುವ ತನ್ನ ಸಹೋದರನಾದ ಬೇಂದ್ರುಕೋಲಪ್ಪನ ಬಳಿ ತೆರಳಿ ಕೇರಳದಲ್ಲಿ ಸುಗ್ಗಿಯನ್ನು ಆಚರಿಸಲು ಓಣಂ ಇರುವಂತೆ ಕೊಡಗಿನಲ್ಲೂ ಸುಗ್ಗಿ ಆಚರಣೆಗೆ ಒಂದು ಮುಹೂರ್ತ ವಿಧಿ ವಿಧಾನಗಳು ಆಗಬೇಕೆಂದು ಕೇಳಿಕೊಂಡಾಗ ಬೇಂದ್ರುಕೋಲಪ್ಪನು “ಓಣತಮ್ಮೆ” ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ಪ್ರತೀ ವರ್ಷ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸಿದ ತೊಂಬತ್ತು ದಿನಗಳ ನಂತರದ ಮೊದಲ ರೋಹಿಣಿ ನಕ್ಷತ್ರದ ಹುಣ್ಣಿಮೆಯಂದು ಸುಗ್ಗಿ ಹಬ್ಬವನ್ನು ನಿಶ್ಚಯಿಸುತ್ತಾನೆ. ಅದರಂತೆ ಅದಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಪಾಡಿ ಇಗ್ಗುತಪ್ಪನ ಸನ್ನಿಧಾನಕ್ಕೆ ತೆರಳಿ ಎಲ್ಲರಿಗೂ ವಿಷಯ ತಿಳಿಸಿ ಬಾ ಎಂದು ಕಳುಹಿಸುತ್ತಾನೆ. ಅಂತೆಯೇ ಒಬ್ಬ ಮಹಿಳೆಯ ರೂಪದಲ್ಲಿ ಬಂದ 'ಓಣತಮ್ಮೆ' ಇಗ್ಗುತಪ್ಪನ ಸನ್ನಿಧಿಗೆ ಬಂದು ಅಲ್ಲಿನ ಮುಖ್ಯಸ್ಥರಿಗೂ, ಕಣಿಯರಿಗೂ ಈ ವಿಷಯ ತಿಳಿಸುತ್ತಾಳೆ. ಅದರ ಪ್ರಕಾರ ಕೊಡಗಿನಲ್ಲಿ ಇಗ್ಗುತಪ್ಪನಿಂದಲೇ ಈ ಹಬ್ಬ ಪ್ರಾರಂಭವಾಯಿತೆಂದು ಎಲ್ಲರೂ ನಂಬುತ್ತಾರೆ.

ವಿಶೇಷ ಲೇಖನ: ಅರುಣ್ ಕೂರ್ಗ್

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,