Header Ads Widget

Responsive Advertisement

ತಾರ್ಕಿಕ ಅಂತ್ಯದತ್ತ ಆರ್ಜಿ ಗೋಮಾಳ ಜಾಗ ವಿವಾದ

ತಾರ್ಕಿಕ ಅಂತ್ಯದತ್ತ ಆರ್ಜಿ ಗೋಮಾಳ ಜಾಗ ವಿವಾದ: 

ಕಾರ್ಯಾಚರಣೆಗೆ ಭಾರೀ ಸಂಖ್ಯೆಯಲ್ಲಿ ಸೇರಿದ ಸಂಘಪರಿವಾರ ಕಾರ್ಯಕರ್ತರು:     


1982 ನೇ ಇಸವಿಯಿಂದಲೂ ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿನ 89.06 ಏಕರೆ ಗೋಮಾಳ ಜಾಗದ ಸಂರಕ್ಷಣೆಗಾಗಿ ನಡೆಯುತ್ತಿದ್ದ ಹೋರಾಟವು  ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಇದೀಗ ತಾರ್ಕಿಕ ಅಂತ್ಯದತ್ತ ಸಾಗಿದ್ದು ಅದರ ಭಾಗವಾಗಿ 24-11-2020ರ ಮಂಗಳವಾರದಂದು ಸುಮಾರು 15 ಏಕರೆಯಷ್ಟು ಗೋಮಾಳ ಜಾಗದ ಸುತ್ತಲೂ ತಂತಿ ಬೇಲಿ ಹಾಕುವ ಮೂಲಕ ಸಂರಕ್ಷಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.


ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಸಂಘ ಪರಿವಾರದ ಕಾರ್ಯಕರ್ತರು ತಹಶೀಲ್ದಾರ್ ಮತ್ತು ಪೋಲೀಸರ ಸಮ್ಮುಖದಲ್ಲೇ ಕೆಲವೇ ಗಂಟೆಗಳಲ್ಲಿ 15 ಏಕರೆಯಷ್ಟು  ಗೋಮಾಳ ಜಾಗಕ್ಕೆ ತಂತಿಬೇಲಿ ಹಾಕಿ ಸೂಚನಾ ಫಲಕಗಳನ್ನು ಅಳವಡಿಸಿದರು. ಇದಕ್ಕೂ ಮೊದಲು ಗೋಮಾಳ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖರ ಉಪಸ್ಥಿತಿಯಲ್ಲಿ  ಸ್ಥಳೀಯ ವಾಲ್ಮೀಕಿ ಭವನದಲ್ಲಿ ಸಭೆ ನಡೆಯಿತು. 

ಒಂದು ತಿಂಗಳ ಹಿಂದೆಯಷ್ಟೇ 89.06 ಏಕರೆ ಗೋಮಾಳ ಜಾಗದಲ್ಲಿ ಸುಮಾರು 30 ಏಕರೆಯಷ್ಟು ಗೋಮಾಳ ಜಾಗವನ್ನು ಮೊದಲ ಹಂತದಲ್ಲಿ ಸಂರಕ್ಷಿಸಲು ಕ್ರಮಕೈಳ್ಳಲಾಗಿರುವುದಾಗಿ ಮೌಖಿಕವಾಗಿ ತಿಳಿಸಿದ್ದ ವೀರಾಜಪೇಟೆ  ತಹಶೀಲ್ದಾರರು ಆ ದಿನ ತಮ್ಮ ವರಸೆ ಬದಲಾಯಿಸಿ ಕೇವಲ 15 ಏಕರೆ ಗೋಮಾಳ ಜಾಗವನ್ನು ಮಾತ್ರ ಮೊದಲ ಹಂತದಲ್ಲಿ ವಶಕ್ಕೆ ಪಡೆಯುವುದಾಗಿ ತಿಳಿಸಿದಾಗ ನೆರೆದಿದ್ದ ಹೋರಾಟ ಸಮಿತಿಯ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.   


ರಾಜ್ಯ ಉಚ್ಚನ್ಯಾಯಾಲಯದ ಆದೇಶವಿದ್ದರೂ ಅದರ ಪ್ರಕಾರ ಕಾರ್ಯನಿರ್ವಹಿಸದೇ ಸತಾಯಿಸಲು ತಮ್ಮ ಮೇಲೆ ಒತ್ತಡ ಹಾಕುತ್ತಿರುವವರ ಹೆಸರನ್ನು ಬಹಿರಂಗ ಪಡಿಸುವಂತೆ ನೆರೆದಿದ್ದ ಪ್ರಮುಖರು ತಹಶೀಲ್ದಾರರನ್ನು ಆಗ್ರಹಿಸಿದರು. ಅಂತಿಮವಾಗಿ ಮುಂದಿನ ಒಂದು ತಿಂಗಳೊಳಗೆ ಗೋಮಾಳ ಜಾಗವನ್ನು ವಶಕ್ಕೆ ಪಡೆಯಲು ಕ್ರಮವಹಿಸುವುದಾಗಿ ತಹಶೀಲ್ದಾರರು ಲಿಖಿತವಾಗಿ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.  ಈ ಸಂಧರ್ಭ ಗೋಮಾಳ ಸಂರಕ್ಷಣೆಗಾಗಿ ಮೂರು  ದಶಕಗಳಿಗೂ ಹೆಚ್ಚು ಕಾಲ ಹೋರಾಟ ನಡೆಸಿದ ಹಿರಿಯರಾದ ಪುರುಷೋತ್ತಮ, ಜಿ.ಕೆ. ರಾಮಯ್ಯ, ದಿವಂಗತ ಕೆ.ಸಿ. ಸುಬ್ಬಯ್ಯರವರ ಪುತ್ರ ಸೇರಿದಂತೆ ಆರ್.ಎಸ್.ಎಸ್. ನ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ, ಪ್ರಿನ್ಸ್ ಗಣಪತಿ, ಟಿ.ಸಿ. ಚಂದ್ರನ್, ಕುಟ್ಟಂಡ ಮಿರನ್, ಭಾ.ಜಾ.ಪಾ. ಮಾಜಿ ಜಿಲ್ಲಾಧ್ಯಕ್ಷರುಗಳಾದ ಸುಜಾ ಕುಶಾಲಪ್ಪ, ಮಾಚಿಮಾಡ ರವೀಂದ್ರ, ತಾಲ್ಲೂಕು ಅಧ್ಯಕ್ಷರಾದ ನೆಲ್ಲೀರ ಚಲನ್, ಸುವಿನ್ ಗಣಪತಿ, ಚೆಪ್ಪುಡಿರ ಮಾಚಯ್ಯ, ಕಿಲನ್ ಗಣಪತಿ, ಖಾದೀರ ಉಮೇಶ್  ಹಾಗೂ ಹಿಂದು ಜಾಗರಣ ವೇದಿಕೆಯ  ಲಾಲ ಅಯ್ಯಣ್ಣ, ಜೀವನ್, ಮೇವಡ ಅಯ್ಯಣ್ಣ, ಮಹೇಶ್  ವಿಶ್ವ ಹಿಂದು ಪರಿಷತ್-ಬಜರಂಗದಳದ ಪ್ರಮುಖರು-ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್-ದುರ್ಗಾ ವಾಹಿನಿ-  ಭಾ.ಜಾ.ಪಾ. ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಈ ಗೋಮಾಳ ಸಂರಕ್ಷಣಾ ಕರಸೇವೆಯಲ್ಲಿ  ಪಾಲ್ಗೊಂಡರು.