Header Ads Widget

Responsive Advertisement

2019-20 ನೇ ಸಾಲಿನಲ್ಲಿ ರೂ.33.19 ಲಕ್ಷ ಲಾಭದಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್


2019-20 ನೇ ಸಾಲಿನಲ್ಲಿ
ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್  ರೂ.33.19 ಲಕ್ಷ ಲಾಭಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರ ಬಾಪ್ತುಗಳಿಗೆ ಕಾದಿರಿಸಿದ ನಂತರ ರೂ.12.80 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ತಿಳಿಸಿದ್ದಾರೆ.

ಮಡಿಕೇರಿ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ಅವರು 2019-20 ನೇ ಸಾಲಿನ ಬ್ಯಾಂಕ್‍ನ ಮಹಾಸಭೆ ಡಿ.12 ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಲಿದ್ದು, ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಪರಿಸ್ಥಿತಿಯ ಹಿನ್ನೆಲೆ ಬ್ಯಾಂಕ್ ವ್ಯವಹಾರ ಕುಂಠಿತಗೊಂಡಿರುವ ಹಿನ್ನೆಲೆ ಲಾಭ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಆರ್.ಬಿ.ಐ. ಆದೇಶದನ್ವಯ ಸದಸ್ಯರುಗಳಿಗೆ ಲಾಭಾಂಶ ಘೋಷಣೆ ಮಾಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಬ್ಯಾಂಕ್ ಪ್ರಸ್ತುತ 2434 ಮಂದಿ ಸದಸ್ಯರುಗಳನ್ನು ಹೊಂದಿದ್ದು, ಅಧಿಕೃತ ಪಾಲು ಬಂಡವಾಳ ರೂ.123,93 ಲಕ್ಷವಾಗಿದೆ. ಬ್ಯಾಂಕ್‍ನ ದುಡಿಯುವ ಬಂಡವಾಳ ರೂ.3580.32 ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ.378, 85 ಲಕ್ಷದಷ್ಟು ಅಧಿಕವಾಗಿದೆ. ಬ್ಯಾಂಕ್ ಪ್ರಸ್ತುತ ರೂ.3259.19 ಲಕ್ಷದಷ್ಟು ವಿವಿಧ ರೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ.228.49 ಲಕ್ಷದಷ್ಟು ಏರಿಕೆ ಕಂಡಿದೆ. ಅಲ್ಲದೆ ತಾನು ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಡಿಪಾಸಿಟ್ ಇನ್‍ಶ್ಯೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌ನಲ್ಲಿ ವಿಮೆ ಇಳಿಸಲಾಗಿದ್ದು, ಬ್ಯಾಂಕಿನಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.
 
ಸುಮಾರು ರೂ.572.44 ಲಕ್ಷದಷ್ಟು ವಿವಿಧ ಬ್ಯಾಂಕುಗಳಲ್ಲಿ ಮತ್ತು ಸರ್ಕಾರಿ ಭದ್ರತಾ ಪತ್ರದಲ್ಲಿ ರೂ.1026.64 ಲಕ್ಷದಷ್ಡು ಧನ ವಿನಿಯೋಗಿಸಲಾಗಿದೆ. ಗ್ರಾಹಕರುಗಳಿಗೆ ರೂ.1924.68 ಲಕ್ಷದಷ್ಟು ವಿವಿಧ ರೂಪದ ಸಾಲಗಳನ್ನು ನೀಡಿದ್ದು, ಈ ಪೈಕಿ ರೂ.419 ಲಕ್ಷ ಜಾಮೀನು ಸಾಲ, ರೂ.617.34 ಲಕ್ಷ ಗಿರ್ವಿ ಸಾಲ ಹಾಗೂ ರೂ.771.28 ಲಕ್ಷದಷ್ಟು ಬೆಲೆಯ ಚಿನ್ನಾಭರಣಗಳ ಈಡಿನ ಮೂಲಕ ಸಾಲ ನೀಡಲಾಗಿದ್ದು, ಒಟ್ಟು ಸಾಲ ನೀಡಿಕೆಯಲ್ಲಿ ಅನುತ್ಪಾದಕ ಆಸ್ತಿಯ ಪ್ರಮಾಣವು ರೂ.150.70 ಲಕ್ಷ ಆಗಿದ್ದು, ಸಾಲ ವಸೂಲಾತಿ ಶೇ.94.69 ರಷ್ಟಾಗಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ತಿಳಿಸಿದರು.

ಆರ್.ಬಿ.ಐ. ನಿಯಮದಂತೆ ರೂ.922.18 ಲಕ್ಷ ಸಾಲವನ್ನು ಆದ್ಯತಾ ವಲಯಕ್ಕೆ ನೀಡಿದ್ದು, ಪ್ರಸ್ತುತ ಸಾಲಿನಲ್ಲಿ ಬ್ಯಾಂಕ್ ರೂ.356.40 ಲಕ್ಷದಷ್ಟು ವಹಿವಾಟು ನಡೆಸಿದೆ. ಪ್ರಸ್ತುತ ಬ್ಯಾಂಕ್ ತನ್ನ ಜಿ.ಟಿ ರಸ್ತೆ ಶಾಖೆಯಲ್ಲಿ ರೂ.2541.66 ಲಕ್ಷದಷ್ಟು ವ್ಯವಹಾರ ನಡೆಸಿದ್ದು, ಲಾಭದಾಯಕವಾಗಿ ನಡೆಯುತ್ತಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ ರೂ.739.81 ಲಕ್ಷ ಠೇವಣಿ ಹೊಂದಿದ್ದು, ರೂ.352.84 ಲಕ್ಷದಷ್ಟು ವಿವಿಧ ಸಾಲ ನೀಡಿದೆ. ಸದಸ್ಯರುಗಳಿಗೆ ಬ್ಯಾಂಕಿನ ಸೌಲಭ್ಯ ನೀಡುವುದರೊಂದಿಗೆ, ಶಾಖೆಯ ವ್ಯವಹಾರಗಳನ್ನು ವೃದ್ಧಿಸಿ ಲಾಭದಾಯಕವಾಗಿ ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಗಿದೆ ಎಂದರು.

ಬ್ಯಾಂಕಿನಲ್ಲಿಡುವ ಠೇವಣಾತಿಗಳಿಗೆ ಕನಿಷ್ಠ ಶೇ.4 ರಿಂದ ಗರಿಷ್ಠ ಶೇ.6.50 ವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ, ಒಂದು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಇಡುವಂತಹ ಠೇವಣಿಗಳಿಗೆ ಶೇ.0.50 ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ  ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಇದರ ಸದುಪಯೋಗ ಸದಸ್ಯರು ಪಡೆದುಕೊಳ್ಳಬೇಕಾಗಿ ಬ್ಯಾಂಕ್‍ನ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎಂ.ರಾಜೇಶ್, ನಿರ್ದೇಶಕರುಗಳಾದ ಕೋಡಿ ಚಂದ್ರಶೇಖರ್, ಬಿ.ಕೆ.ಜಗದೀಶ್, ಎಸ್.ಸಿ.ಸತೀಶ್ ಹಾಗೂ ಕೆ.ಆರ್.ನಾಗೇಶ್ ಉಪಸ್ಥಿತರಿದ್ದರು.

Search Coorg Media: Coorg's Largest Online Media Network