Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರತೀ ತುತ್ತಿಗೂ ರೈತರನ್ನು ಸ್ಮರಿಸೋಣ {ಡಿಸೆಂಬರ್‌ 23 ರಾಷ್ಟ್ರೀಯ ರೈತರ ದಿನ ವಿಶೇಷ ಲೇಖನ}


ರೈತರು ಭಾರತದ ಬೆನ್ನೆಲುಬು. ಅವರು ನಮ್ಮ ದೇಶದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸುತ್ತಿದ್ದಾರೆ. ಇಂಥ ರೈತರ ಕೆಲಸವನ್ನು ಗೌರವಿಸಲು, ಅವರು ಪಡುತ್ತಿರುವ ಕಷ್ಟದ ಜೀವನವನ್ನು ಸುಧಾರಿಸಲು ಭಾರತ ಸರ್ಕಾರ ಕಿಸಾನ್‌ ದಿವಸ್‌ ಎಂದು ಜನಪ್ರಿಯವಾಗಿರುವ ರಾಷ್ಟ್ರೀಯ ರೈತರ ದಿನವನ್ನು ಪ್ರತಿವರ್ಷ ಡಿಸೆಂಬರ್‌ 23 ರಂದು ಆಚರಿಕೊಂಡು ಬರುತ್ತಿದೆ. 

    ದೇಶದ ಐದನೇ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನವಾದ ಡಿಸೆಂಬರ್‌ 23ರಂದು ಪ್ರತಿ ವರ್ಷ ರಾಷ್ಟ್ರೀಯ ರೈತ ದಿನವನ್ನು ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಗೌರವಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಚರಣ್‌ ಸಿಂಗ್‌ ಅವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದರು. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಸ್ವತಃ ಕೃಷಿಕರಾಗಿದ್ದ ಚರಣ್‍ಸಿಂಗ್, ಭಾರತದ ಕೃಷಿಕರ ಉನ್ನತಿಗಾಗಿ ಮಾಡಿದ ಕೆಲಸಗಳು ಇಂದಿಗೂ ಸ್ಮರಣೀಯ, ಜಮೀನ್ದಾರಿಕೆ ನಿರ್ಮೂಲನೆ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು. ಹೀಗಾಗಿ ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. 

    ರೈತರ ದಿನ ಡಿಸೆಂಬರ್‌ 23 ರಂದು  ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತುಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗ ಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ.

    ಮಳೆ, ಗಾಳಿ, ಹಗಲು-ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುವ ರೈತರ ಸ್ಥಿತಿಗತಿ, ಕಷ್ಟವನ್ನು ತಿಳಿಯಲು ಇದೊಂದು ದಿನವನ್ನು ಆಚರಿಸಲಾಗುತ್ತದೆ. ಅನ್ನದಾತರು ಚೆನ್ನಾಗಿದ್ದರೆ ದೇಶವೇ ಸುಭೀಕ್ಷವಾಗಿರುತ್ತದೆ. ಇಂತಹ ನಿಸ್ವಾರ್ಥ ಮಣ್ಣಿನ ಮಕ್ಕಳಿಗೆ ಪ್ರತಿಯೊಬ್ಬರು ಗೌರವ ಕೊಡಲೇಬೇಕು. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳ ವ್ಯಾಮೋಹದಿಂದಾಗಿ ಯುವಕರು ತಮ್ಮ ಪೂರ್ವಜರ ಕುಲಕಸುಬು ಕೃಷಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ. ಅದರಲ್ಲೂ ಸಹ ಕೆಲ ರೈತರು ತಂತ್ರಜ್ಞಾನ ಬಳಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

    ಭಾರತವು ಮುಖ್ಯವಾಗಿ ಗ್ರಾಮಗಳ ಭೂಮಿಯಾಗಿದೆ ಮತ್ತು ಹಳ್ಳಿಗಳಲ್ಲಿ ವಾಸಿಸುವ ಬಹುಪಾಲು ರೈತರಿಗೆ ಕೃಷಿ ಆದಾಯ ಪ್ರಮುಖ ಮೂಲವಾಗಿದೆ. 70% ಭಾರತೀಯರು ಈಗಲೂ ಕೃಷಿ ಮೂಲಕ ಉತ್ಪತ್ತಿಯಾದ ಆಹಾರ ಹಾಗೂ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ. 

    ಮುಂಜಾನೆ ಎದ್ದು ಸೇವಿಸುವ ಕ್ಷೀರದಿಂದ ಹಿಡಿದು ತರಕಾರಿ, ಅಕ್ಕಿ, ಕಾಳು ಸೇರಿದಂತೆ ಮತ್ತಿತರ ಆಹಾರ ಉತ್ಪನ್ನಗಳು ಬರುವುದು ಅನ್ನದಾತನಿಂದ. ಸೈನಿಕರು ಗಡಿಕಾಯ್ದು ದೇಶರಕ್ಷಿಸಿದರೆ ಅನ್ನದಾತರು ಹೊಲ ಕಾಯ್ದು ನಮ್ಮ ಉದರ ತುಂಬಿಸುತ್ತಾರೆ. ಆದರೆ, ಅವರ ಶ್ರಮ ಮಾತ್ರ ಯಾರಿಗೂ ಕಾಣುವುದಿಲ್ಲ. 

    ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.

    ಒಂದೊಂದು ಅಕ್ಕಿಯ ಕಾಳಿನಲ್ಲೂ ತಿನ್ನೋರ ಹೆಸರು ಕೆತ್ತಿಹುದು… ಆ ಕಾಳಿನ ಹಿಂದೆ ಅದೆಷ್ಟು ಅನ್ನದಾತನ ಶ್ರಮವಿದೆಯೋ… ದೇಶದ ಬೆನ್ನೆಲುಬು ರೈತ. ಆತನಿಲ್ಲದ ಜಗತ್ತನ್ನು ಕಲ್ಪಿಸಲು ಅಸಾಧ್ಯ. ನಾವು ದಿನನಿತ್ಯ ಸೇವಿಸುವ ಆಹಾರದ ಹಿಂದೆ ರೈತನ ಶ್ರಮ ಅಡಗಿರುತ್ತದೆ. ಆದರೆ ಅವನ ಶ್ರಮ ಮಾತ್ರ ತೆರೆಮರೆಯಲ್ಲಿರುತ್ತದೆ. ಅದು ನಮಗ್ಯಾರಿಗೂ ಕಾಣುವುದೇ ಇಲ್ಲ. 

    ಅನ್ನದಾತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ರಾತ್ರಿ ಹಗಲೆನ್ನದೆ ಸ್ವಾಭಿಮಾನದಿಂದ ದುಡಿದು ಈ ದೇಶದ ಜನರ ಹಸಿವು ನೀಗಿಸುವ ನಿಜವಾದ ಯೋಗಿ. ಅಂತಹ ಅನ್ನದಾತರಿಗೆ ನಾವು ಸದಾಕಾಲ ಕೃತಜ್ಞರಾಗಿರಬೇಕು. ಆದರೆ ಆ ರೈತ ಸುರಿಸಿದ ಬೆವರ ಹನಿಯ ಶ್ರಮಕ್ಕೆ ಅರ್ಧದಷ್ಟು ಬೆಲೆಯೂ ಸಿಗದೇ ಇರುವುದು ಈ ದೇಶದ ದುರಂತವೇ ಸರಿ. ನಾವೇಲ್ಲರೂ ಜೊತೆಯಾಗಿ ಈ ದಿನವನ್ನು ಆಚರಿಸೋಣ. ನಮಗೆಲ್ಲ ಅನ್ನ ಕೋಡುವ ರೈತರ ಸಲುವಾಗಿ ಎನನ್ನಾದರೂ ಒಳ್ಳೆಯದನ್ನು ಮಾಡೋಣ.

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)


Search Coorg Media: 

Coorg's Largest Online Media Network