ಕೊರೊನ ಸೋಂಕು ನಿವಾರಣೆಗೆ ಲಸಿಕೆ ಪಡೆದ ನಂತರವೂ ಹಲವು ದಿನಗಳವರೆಗೆ, ಮಾಸ್ಕ್ ಧಾರಣೆ, ದೈಹಿಕ ಅಂತರ ಹಾಗು ಕೈಗಳ ಶುಚಿತ್ವವನ್ನು ಮುಂದುವರಿಸಬೇಕು ಎಂದು ʼಕೋವಿಡ್ ಹಾಗು ಲಸಿಕೆʼ ಕುರಿತ ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾಶಾಖೆ – ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಆಯೋಜಿಸಿದ್ದ ಕೋವಿಡ್ ಹಾಗು ಲಸಿಕೆ ವೆಬಿನಾರ್ ನಲ್ಲಿ ಲಸಿಕೆ : ಸುರಕ್ಷತೆ ಮತ್ತು ಪರಿಣಾಮ ಕುರಿತು ಮಾತನಾಡಿದ ಬಿಎಂಸಿಆರ್‌ಐ ನ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ. ಶಶಿಭೂಷಣ್, ಲಸಿಕೆ ಯ ಪರಿಣಾಮದ ಬಗ್ಗೆ ಪ್ರಯೋಗ ಹಾಗು ಪರೀಕ್ಷ ನಡೆಯುತ್ತಿವೆ. ಸೋಂಕು ತಗುಲಬಹುದಾದ ಅಪಾಯ ಇರುವ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಆದ್ಯತೆ. ಅನಂತರ ಉಳಿದ ಗುಂಪುಗಳಿಗೆ ನೀಡಲಾಗುತ್ತದೆ. ಬೇರೆ ಬೇರೆ ಕಂಪೆನಿಗಳು ಲಸಿಕೆ ತಯಾರಿಸುತ್ತಿದ್ದು ಅವುಗಳನ್ನು ಹೇಗೆ, ಎಷ್ಟು ಬಾರಿ ಕೊಡಬೇಕು ಎಂಬ ಬಗ್ಗೆ ತರಬೇತಿಗಳೂ ನಡೆಯುತ್ತಿವೆ. ಲಸಿಕೆಯಿಂದ ಪರಿಣಾಮ ಉಂಟಾದರೂ ಅದಕ್ಕೆ ತಕ್ಕ ಶುಶ್ರೂಷೆ ಸಹ ಇರುತ್ತದೆ ಎಂದು ಹೇಳಿದರು.
ಲಸಿಕೆ ತಯಾರಿಕೆಗೆ ಉತ್ತೇಜನ: ಸಿದ್ಧತೆ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಕರ್ನಾಟಕ ಉಪ ಪ್ರಾದೇಶಿಕ ತಂಡದ ನಾಯಕ ಡಾ. ಲೋಕೇಶ್ ಅಲಹರಿ ರಾಜ್ಯದಲ್ಲಿ ಲಸಿಕೆ ನೀಡಿಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡಿದರು. ಯಾವ ಗುಂಪು ಅಪಾಯದಲ್ಲಿದೆಯೋ ಅದನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ಹಾಗಾಗಿ ಆರೋಗ್ಯ ಕಾರ್ಯಕರ್ತರಿಗೆ ಮೊದಲಿಗೆ ಲಸಿಕೆ ನೀಡಲಾಗುವುದು ರಾಜ್ಯದಲ್ಲಿ ಲಸಿಕೆ ನೀಡಿಕೆಗೆ ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ೨೮೦೦ ಕೋಲ್ಡ್ ಚೈನ್ ಪಾಯಿಂಟ್ಸ್ ಇದ್ದು ಲಸಿಕೆ ಸಂರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಪರಿಣಾಮಕಾರಿ ಸಂವಹನಕ್ಕೂ ಸಿದ್ಧತೆ ನಡೆಸಲಾಗಿದೆ ಎಂದರು.
PIB