Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೃಹ ಭಾಗ್ಯದಡಿ ಪೌರ ಕಾರ್ಮಿಕರಿಗೆ ಶೀಘ್ರ ಮನೆ ನಿರ್ಮಾಣಕ್ಕೆ ಚಾಲನೆ: ಅಪ್ಪಚ್ಚು ರಂಜನ್


ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ನಗರದ ಉಕ್ಕುಡ ಬಳಿ ಒಂದು ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ನಿವೇಶನ ಕಲ್ಪಿಸುವುದರ ಜೊತೆಗೆ ಮನೆ ನಿರ್ಮಿಸಿಕೊಡಲಾಗುವುದು. ಆ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಅಪ್ಪಚ್ಚುರಂಜನ್ ಅವರು ಪ್ರಕಟಿಸಿದರು.
ಪೌರ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕು. ಇತರರಂತೆ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಶ್ರಮವಹಿಸಿ ದುಡಿದಿದ್ದಾರೆ. ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಿದ್ದಾರೆ. ಪೌರ ಕಾರ್ಮಿಕರ ಕೆಲಸಕ್ಕೆ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಅಪ್ಪಚ್ಚು ರಂಜನ್ ಅವರು ನುಡಿದರು.
ಪೌರ ಕಾರ್ಮಿಕರು ನೆಮ್ಮದಿಯ ಜೀವನ ನಡೆಸಬೇಕು. ಮದ್ಯಪಾನದಿಂದ ದೂರವಿರಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕುಟುಂಬ ನಿರ್ವಹಣೆ ಕಡೆ ಗಮನಹರಿಸಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.
ಹೊಸ ವರ್ಷ ಹಿನ್ನೆಲೆ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನು ಬಿಸಾಡುತ್ತಿದ್ದಾರೆ. ಇದರಿಂದ ಪರಿಸರ ಹಾಳಾಗುತ್ತಿದೆ. ಆದ್ದರಿಂದ ಹೆದ್ದಾರಿ ವ್ಯಾಪ್ತಿಯ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆಯಾಯ ವ್ಯಾಪ್ತಿಯವರು ಡಸ್ಟ್ಬಿನ್ಗಳನ್ನು ಇಡುವಂತಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಮಾತನಾಡಿ ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೋವಿಡ್ನಿಂದಾಗಿ ತಡವಾಗಿ ಪೌರ ಕಾರ್ಮಿಕರ ದಿನಾಚರಣೆ ಆಯೋಜಿಸಲಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಡಿಕೇರಿಯನ್ನು ಸುಂದರ ನಗರವನ್ನಾಗಿ ಮಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಅವರು ಶ್ಲಾಘಿಸಿದರು.
ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಗರದ ಉಕ್ಕುಡ ಬಳಿ ಜಿಲ್ಲಾಡಳಿತದಿಂದ ಒಂದು ಎಕರೆ ಜಾಗವನ್ನು ಗುರುತಿಸಲಾಗಿದ್ದು, ನಿವೇಶನ ಕಲ್ಪಿಸುವಲ್ಲಿ ಶಾಸಕರ ಪ್ರಯತ್ನ ಹೆಚ್ಚಿನದ್ದಾಗಿದೆ. ಈಗಾಗಲೇ ಸುದರ್ಶನ ಅತಿಥಿ ಗೃಹ ಬಳಿ ಗುರುತಿಸಲಾಗಿದ್ದ ಜಾಗ ಸೂಕ್ತವಲ್ಲ ಎಂದು ಕಂಡು ಬಂದ ಹಿನ್ನೆಲೆ ಉಕ್ಕುಡ ಬಳಿ ಜಾಗ ಗುರುತಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆ ನಿರ್ದೇಶಕರಾದ ಆರತಿ ಸೋಮಯ್ಯ ಅವರು ಮಾತನಾಡಿ ಸ್ವಸ್ಥ ಸಂಸ್ಥೆ ಹಾಗೂ ಅಮ್ಮತ್ತಿಯ ಆರ್ಐಎಚ್ಪಿ ಆಸ್ಪತ್ರೆ ವತಿಯಿಂದ ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ 2 ಸಾವಿರ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರೀನ್ ಸಿಟಿ ಫೋರಂನ ಚೆಯ್ಯಂಡ ಸತ್ಯ, ಚೇಂಬರ್ ಆಫ್ ಕಾಮರ್ಸ್ನ ಮೋಂತಿ ಗಣೇಶ್, ನಗರಸಭೆಯ ಎಇಇ ರಾಜೇಂದ್ರ ಕುಮಾರ್, ಕಿರಿಯ ಎಂಜಿನಿಯರ್ ಜಿ.ಎಚ್.ನಾಗರಾಜು, ಪರಿಸರ ಎಂಜಿನಿಯರ್ ರೀತು ಸಿಂಗ್, ತಾಹಿರ್, ಹರಿಣಿ, ಜಯಲಕ್ಷ್ಮಿ, ಒಬ್ಳಿ, ಇತರರು ಇದ್ದರು.
ಪೌರ ಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಖಾಯಂ ಪೌರ ಕಾರ್ಮಿಕರಿಗೆ ಮೂರುವರೆ ಸಾವಿರ ರೂ.ಗಳ ಧನ ಸಹಾಯದ ಚೆಕ್ನ್ನು ಶಾಸಕರು ವಿತರಿಸಿದರು.
ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ಕಾರ್ಯ ನಿರ್ವಹಿಸಿರುವ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನಗರಸಭೆಯ ಹರಿಣಿ, ಅನಿತಾ, ಸುಮಾ ಪ್ರಾರ್ಥಿಸಿದರು, ನಗರಸಭೆಯ ಕಂದಾಯ ಅಧಿಕಾರಿ ತಾಹಿರ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.