Header Ads Widget

Responsive Advertisement

"ತುಳು ಲಿಪಿ"ಯ ನಾಮ ಫಲಕವನ್ನು ತುಳು ಲಿಪಿಯಲ್ಲಿ ಬರೆಯಿಸಿ ಕೊಡಗಿನಲ್ಲಿ ವಿತರಣೆ


ತುಳು ಭಾಷೆ-ಸಂಸ್ಕೃತಿಯ ಮೂಲ ಮೌಲ್ಯವನ್ನು ತಿಳಿಯುವ ಉದ್ದೇಶದಿಂದ 'ತುಳು ಲಿಪಿ' ಕಲಿಯಬೇಕು. ಜನರಿಗೆ ಕಲಿಸಬೇಕು, ತುಳುಲಿಪಿಯಲ್ಲಿ ಬರೆಯಲಾದ ಸಾಹಿತ್ಯವನ್ನು ಓದಬೇಕು ಎಂಬ ಉದ್ದೇಶಗಳಿಂದ 'ತುಳು ಲಿಪಿ'ಯ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ  ಕೊಡಗಿನಲ್ಲಿ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಅವರು ತಿಳಿಸಿದರು.

ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ.ಸಿ. ಮೋಹನ್‌ರವರಿಗೆ  ತುಳು ಲಿಪಿಯ ನಾಮ ಫಲಕವನ್ನು ಹಸ್ತಾಂತರಿಸಿ ಮಾತನಾಡಿದ ಪಿ.ಎಂ.ರವಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಲು ಎಲ್ಲಾ ರೀತಿಯ ಪ್ರಯತ್ನಗಳೂ ಆಗುತ್ತಿವೆ.ಕರಾವಳಿಯಾದ್ಯಂತ ತುಳು ಲಿಪಿಯ ಬಳಕೆ ಹೆಚ್ಚಾಗುತ್ತಿದ್ದು, ಎಲ್ಲೆಡೆ ತುಳು ಲಿಪಿಯ ಫಲಕಗಳು, ಬರವಣಿಗೆಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಹಾಗೇ ಕೊಡಗು ಜಿಲ್ಲೆಯಲ್ಲೂ ಸರಿ ಸುಮಾರು ಒಂದು ಲಕ್ಷದ ಅರವತ್ತೂ ಸಾವಿರಕ್ಕೂ ಹೆಚ್ಚು ತುಳು ಭಾಷಿಕರು ಇದ್ದಾರೆ, ಈ ನಿಟ್ಟಿನಲ್ಲಿ ಅವರಿಗೂ ತುಳು ಲಿಪಿಯ ಪರಿಚಯ ಮಾಡುವ ಮೊದಲ ಪ್ರಯತ್ನ ಇದಾಗಿದೆ ಎಂದು ರವಿ ನುಡಿದರು. 

ಭಾಷೆ ಬೇರೆ ಲಿಪಿ ಬೇರೆ. ಭಾಷೆಗೂ ಲಿಪಿಗೂ ನೇರ ಸಂಬಂಧವಿಲ್ಲ. ಯಾವುದೇ ಭಾಷೆಯನ್ನೂ ಯಾವುದೇ ಲಿಪಿಯಲ್ಲೂ ಬರೆಯಬಹುದು. ಆ ಕಾರಣದಿಂದಲೇ ಜಗತ್ತಿನಲ್ಲಿ ಪ್ರಚಲಿತವಿರುವ ಸಾವಿರಾರು ಭಾಷೆಗಳನ್ನು ಬರೆಯಲು ಕೇವಲ ಹತ್ತಿಪ್ಪತ್ತು ಲಿಪಿಗಳಷ್ಟೇ ರೂಢಿಯಲ್ಲಿವೆ. ಬಹು ಜನಪ್ರಿಯವಾದ ಇಂಗ್ಲೀಷ್ ಭಾಷೆಗೂ ಸ್ವಂತ ಲಿಪಿಯಿಲ್ಲ. ಅದು ಉಪಯೋಗಿಸುತ್ತಿರುವುದು ರೋಮನ್ ಲಿಪಿಯನ್ನು ಎಂದು ಈ ಸಂದರ್ಭದಲ್ಲಿ ರವಿ ತಿಳಿಸಿದರು.

ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮೊದಲ ಬಾರಿಗೆ ಸದಸ್ಯ ಸ್ಥಾನ ದೊರೆತಿದ್ದು, ಆ ಅವಕಾಶವನ್ನು ಆದಷ್ಟು ಮಟ್ಟದಲ್ಲಿ ಸದುಪಯೋಗಪಡಿಸಿ ಅಕಾಡೆಮಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಪಿ.ಎಂ.ರವಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ತುಳುವೆರ ಜನಪದ ಕೂಟದ ಸಲಹೆಗಾರ ಐತಪ್ಪ ರೈ, ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ  ಕಾರ್ಯದರ್ಶಿ ಸುರೇಶ್‌ ಆಚಾರ್ಯ, ಖಜಾಂಚಿ ಪಿ.ಬಿ. ಪ್ರವೀಣ್‌, ಸದಸ್ಯರಾದ ಅಶೋಕ್‌ ಆಚಾರ್ಯ, ಪ್ರಕಾಶ್ ಆಚಾರ್ಯ,‌ ಜಗದೀಶ್‌ ಆಚಾರ್ಯ, ಬಾಬು ಆಚಾರ್ಯ, ಸುರೇಶ್‌ ಆಚಾರ್ಯ, ಜಯಾನಂದ ಆಚಾರ್ಯ ಸೇರಿದಂತೆ ಇನ್ನಿತ್ತರ ಪದಾಧಿಕಾರಿಗಳು ಹಾಗೂ ಸದ್ಯರು ಉಪಸ್ಥಿತರಿದ್ದರು.


Search Coorg Media: Coorg's Largest Online Media Network