Header Ads Widget

Responsive Advertisement

“ಕಿಪ್ಪರ್” ಎಂದೇ ಜನರ ಮನಸ್ಸಿನ ಅಂತರಾಳದಲ್ಲಿ ಉಳಿದಿರುವ ದೇಶದ ಮೊದಲ ಸೇನಾ ಕಮಾಂಡರ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ

ಜ.28 .ವಿಶ್ವ ಕಂಡ ಮಹಾನ್ ಸೇನಾನಿಗಳಲ್ಲಿ ಒಬ್ಬರಾಗಿರುವ ಭಾರತ ಸೇನೆಯ ಪಿತಾಮಹಾ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 122ನೇ ಜನ್ಮದಿನಾಚರಣೆ. ವಿಶೇಷ ಲೇಖನ:


ಒಮ್ಮೆ ಮೈಸೂರಿನಿಂದ ಮಡಿಕೇರಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕಾರು ಅಕಸ್ಮಿಕವಾಗಿ ಒಂದು ದನಕ್ಕೆ ಡಿಕ್ಕಿಹೊಡೆಯಿತು, ಅರೆಜೀವವಾಗಿ ನೆಲದಲ್ಲಿ ಬಿದ್ದಿದ್ದ ದನವನ್ನು ನೋಡಿ ಊರಿನ ಜನರೆಲ್ಲಾರೂ ಆತನ ಕಾರನ್ನು ತಡೆದು ಚಾಲಕನನ್ನು ತಳಿಸಲು ಮುಂದಾದರು. ಪರಿಸ್ಥಿತಿ ವಿಪರೀತವಾಗುವ ಮೊದಲೇ  ಆ ಕಾರಿನಿಂದ ವ್ಯಕ್ತಿಯೊಬ್ಬರು ಹೊರಕ್ಕೆ ಬಂದು ದನದ ಮಾಲಿಕನನ್ನು ಕರೆದು ಆತನಿಗೆ ಆತ ಕೇಳಿದ ಪರಿಹಾರದ ಪೂರ್ಣ ಹಣವನ್ನು ನೀಡಿ ಹೊರಡಲು ಮುಂದಾದರು. ಆದರೆ ಪ್ರಾಣ ಯಾತನೆಯಿಂದ ನರಳುತ್ತಿದ್ದ ಆ ದನವನ್ನು  ಅಲ್ಲಿ ಹಾಗೆಯೇ ಬಿಟ್ಟು ಹೋಗಲು ಮನಸ್ಸು ಬಾರದೆ, ಇದು ಅಂಗ ವಿಕಲತೆಯಿಂದ ನರಳುವುದು ಬೇಡ ಎಂದು ನಿರ್ಧರಿಸಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆದು ಅದಕ್ಕೆ ಶೂಟ್ ಮಾಡಿದರು. ನಂತರವೇ ಅಲ್ಲಿನ ಗ್ರಾಮಸ್ಥರಿಗೆ ತಿಳಿದದ್ದು ಇವರು ಸಾಮಾನ್ಯ ವ್ಯಕ್ತಿಯಲ್ಲ, ಈ ದೇಶದ ಸೇನೆಯಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ವೀರ ಸೇನಾನಿ ಎಂದು. ನಂತರ ಕಳೆಬರವನ್ನು ಗ್ರಾಮಸ್ಥರಿಂದ ಗುಂಡಿ ತೆಗೆಸಿ ಅದನ್ನು ಮಣ್ಣು ಮಾಡಿಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದವರು ಬೇರೆ ಯಾರು ಅಲ್ಲಾ ಅವರೇ ಕೊಡಗಿನ ಹೆಮ್ಮೆಯ ಕುವರ ಫಿ.ಮಾ ಕೊಡಂದೇರ ಎಂ ಕಾರ್ಯಪ್ಪ.

ಅದು 1947ರ ಸಮಯ ಸ್ವಾತಂತ್ರ್ಯವನ್ನು ಅಂಗ್ಲರ ಆಧಿಪತ್ಯದಿಂದ ಪಡೆಯುವ ಸಂದರ್ಭ ನಮ ಹೆಮ್ಮೆಯ ಸೇನಾನಿ ಕೊಡಂದೇರ ಎಂ. ಕಾರ್ಯಪ್ಪನವರು ತಮ್ಮ ಸೈನಿಕರನ್ನು ಉದ್ಧೇಶಿಸಿ   ಇಸ್ ವಕ್ತ್ ಆಪ್ ಮಪ್ತ್, ಹಮ್ ಮಪ್ತ್, ಮುಲ್ಕ್ ಮಪ್ತ್, ಸಭ್ ಕುಛ್ ಮಪ್ತ್ ಹೈ ಎಂದು ಹೇಳಿ ಸೈನಿಕರಿಗೆ ಸ್ವಾತಂತ್ರ್ಯದ ಬಗ್ಗೆ ಅಭಿಮಾನ ಮೂಡಿಸಿದ ಫಿ.ಮಾ ಕಾರ್ಯಪ್ಪ ಭಾರತೀಯ ಸೇನಾ ಪಡೆಗಳ (ಭೂ ಸೇನೆ, ವಾಯು ಸೇನೆ, ನೌಕಾಪಡೆ) ಪ್ರಥಮ ಮುಖ್ಯಸ್ಥ ಪ್ರಥಮ ಕಮಾಂಡರ್ ಇನ್ ಚೀಫ್ ಪಧವಿಯನ್ನು ಜನವರಿ 15 ರಂದು 1949 ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಜನರಲ್ ರಾಯ್ ಬುಚ್ಚರ್ ನಿಂದ ಅಧಿಕಾರವನ್ನು ತೆಗೆದುಕೊಂಡರು. ಅತ್ಯಂತ ಉನ್ನತ ಹುದ್ದೆಗೇರಿದ ಈ ಕೊಡವರ ಮನೆಯ ಹುಡುಗ ನಂತರ  ಹಿಂತಿರುಗಿ ನೋಡಲೇ ಇಲ್ಲ. 

ಅಧಿಕಾರಿಯಾದರೂ ಶತ್ರು ಪಾಳೆಯದೊಳಗೆ ತಾನೇ ಮೊದಲು ಮುನ್ನುಗ್ಗುತಿದ್ದ ಈ ಕೊಡವರ ಮನೆಯ ಹುಡುಗ ಒಮ್ಮೆ ಭಾರತ ಪಾಕಿಸ್ಥಾನ ಯುದ್ದ ಸಂದರ್ಭದಲ್ಲಿ  ಅಂದಿನ ಜನರಲ್ ಕೆ.ಎಂ ಕಾರ್ಯಪ್ಪ ಭಾರತದ ಗಡಿ ದಾಟಿ ಪಾಕಿಸ್ಥಾನದ ನೆಲದಲ್ಲಿ ನಿಂತು ಜನರಲ್ ಕಾರಿಯಪ್ಪ ವಾಂಟ್ಸ್ ಟು ಮೀಟ್ ಯುವರ್ ಜನರಲ್ ಎಂದು ಎತ್ತರದ ಧ್ವನಿಯಲ್ಲಿ ಕರೆಕೊಟ್ಟರು. ತಕ್ಷಣ ಪೊದೆಯಲ್ಲಿ ಅಡಗಿ ಕುಳಿತಿದ್ದ ಪಾಕ್ ಯೋಧರು ಎದ್ದು ನಿಂತು ಶತ್ರು ಸೇನಾನಿಗೆ ಸಲ್ಯೂಟ್ ಹೊಡೆದು ಅವರನ್ನು ಅವರ ಸೇನಾನಿಯ ಬಳಿಗೆ ಕರೆದುಕೊಂಡು ಹೋದರು. ಇಂತಹ ಘಟನೆ ಇಡಿ ವಿಶ್ವದ ಇತಿಹಾಸದಲ್ಲಿ ಎಲ್ಲಿಯೂ ನಡೆದಿರಲಿಲ್ಲ ಎಲ್ಲಾದಕ್ಕೂ ಕಾರ್ಯಪ್ಪ ಮೊದಲಿಗರು ಎಂದರೆ ತಪ್ಪಲ್ಲ. ಅಂದು ಭಾರತದ ಈ ಸೇನಾನಿಯನ್ನು ಹೊಡೆದು ನೆಲಕ್ಕೆ ಉರುಳಿಸಲು ಶತ್ರು ಸೈನ್ಯಕ್ಕೆ ಕೇವಲ ಒಂದೇ ಒಂದು ಬುಲೆಟ್ ಸಾಕಾಗಿತ್ತು. ಆದರೆ ಜನರಲ್ ಕೆ. ಎಂ. ಕಾರ್ಯಪ್ಪನವರ ವ್ಯಕ್ತಿತ್ವ ಬಗ್ಗೆ ತಿಳಿದಿದ್ದ ಸೈನಿಕರು ಶತ್ರುಗಳಾಗಿದ್ದರೂ ಅವರು ನೀಡಿದ ಗೌರವ ಇನ್ಯಾರಿಗೂ ಸಿಗಲಾರದು ಎಂದರೆ ತಪ್ಪಲ್ಲ. 

ಅದು 1965 ರ ಪಾಕ್ ಯುದ್ಧ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರ್ಯಪ್ಪನವರ ಪುತ್ರ ಫೈಟ್ ಲೆಪ್ಟಿನೆಂಟ್ ಕೆ. ಸಿ. ನಂದಾ ಕಾರ್ಯಪ್ಪ (ನಂತರ ಏರ್ ಮಾರ್ಷಲ್ ಆಗಿ ಸೇವೆ ಸಲ್ಲಿಸಿದವರು) ನವರ ಹಂಟರ್ ಏರ್ ಕ್ರಾಫ್ಟನ್ನು  ಶತ್ರು ಸೈನ್ಯ ಹೊಡೆದು ಉರುಳಿಸಿ 1966 ರ ವರೆಗೆ ಯುದ್ಧ ಖೈದಿಯನ್ನಾಗಿರಿಸಿದರು. ಆ ಸಂದರ್ಭದಲ್ಲಿ ಕಾರ್ಯಪ್ಪನವರ ಅಧೀನದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಫಿ. ಮಾ. ಅಯೂಬ್ ಖಾನ್ ರವರು ಮಡಿಕೇರಿಯಲ್ಲಿದ್ದ ಕಾರ್ಯಪ್ಪ ನವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅವರ ಮಗನನ್ನು ಶತ್ರು ಪಡೆಯಿಂದ ಬಿಡುಗಡೆ ಮಾಡುವಂತೆ ಶತ್ರು ರಾಷ್ಟ್ರದ ಮುಖ್ಯಸ್ಥರನ್ನು ಕೋರಿಕೊಳ್ಳಲು ಸೂಚಿಸಿದರು. ತಕ್ಷಣ ಕಾರ್ಯಪ್ಪನವರು ಆತ ಈವಾಗ ನನ್ನ ಮಗನಲ್ಲ ಆತನೀಗ ದೇಶದ ಮಗ ಇನ್ನಿತರ ಖೈದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೊ ಅದೇ ರೀತಿ ನಡೆಸಿಕೊಳ್ಳಲಿ. ಒಂದು ಸಮಯ ಎಲ್ಲಾ ಖೈದಿಗಳನ್ನು ಬಂದ ಮುಕ್ತವಾಗಿಸಿದರೆ ಮಾತ್ರ ಬಿಡುಗಡೆ ಮಾಡಲಿ, ಅವನಿಗೆ ಮಾತ್ರ ವಿಶೇಷ ಸವಲತ್ತು ನೀಡುವುದು ಬೇಡಾ ಎಂದು ಪ್ರತಿಕ್ರಿಯೆ ನೀಡಿದರು. ಈ ವಿಚಾರ ಪಾಕ್ ಸೇನಾನಿಗಳ ಗಮನಕ್ಕೆ ಬಂದು ಎಲ್ಲಾ ಬಂದಿತ ಯುದ್ದ ಖೈದಿಗಳನ್ನು ಗೌರವದಿಂದ ಭಾರತಕ್ಕೆ ಕಳುಹಿಸಿಕೊಟ್ಟರು.  ಕಾರ್ಯಪ್ಪನವರ ಈ ರೀತಿಯಾದ ಮಾತೃಭೂಮಿಯ ಮೇಲಿರುವ ಅಭಿಮಾನವೇ ಭಾರತೀಯ ಸೈನ್ಯದ ಪ್ರತಿಯೊಬ್ಬ ಯೋಧನಿಗೆ ದೇಶ ಸೇವೆ ಸಲ್ಲಿಸುವ ಪ್ರೇರಣೆಯಾಗಿದೆ ಎಂದರೆ ತಪ್ಪಲ್ಲ. ಆದರೆ ಇಂತಹ ಅಮೂಲ್ಯ ರತ್ನಕ್ಕೆ ಇನ್ನೂ ಭಾರತ ರತ್ನ ನೀಡದಿರುವುದು ವಿಷಾದನೀಯವೇ ಸರಿ. ಇನ್ನಾದರೂ ಈ ದೇಶದ ಎರಡು ಅಮೂಲ್ಯ ರತ್ನಗಳಾದ ಫೀ.ಮಾ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯನವರಿಗೆ ಮರಣೋತ್ತರ ಭಾರತ ರತ್ನ ನೀಡುವಂತಾಗಲಿ.


✍️ಚಮ್ಮಟೀರ ಪ್ರವೀಣ್ ಉತ್ತಪ್ಪ

9880967573


Search Coorg Media: Coorg's Largest Online Media Network