Header Ads Widget

Responsive Advertisement

ಫೆ.4 ರಂದು ಕೊಡಗು ಗೌಡ ಸಮಾಜದ ನೂತನವಾಗಿ ನಿರ್ಮಿಸಿರುವ ‘ಸಭಾ ಭವನ’ ಮತ್ತು ನವೀಕೃತ ಹಳೆಯ ಕಟ್ಟಡದ ಉದ್ಘಾಟನಾ ಸಮಾರಂಭ


ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಗೌಡ ಸಮಾಜ  ‘ಸಭಾ ಭವನ’ ಮತ್ತು ನವೀಕೃತ ಹಳೆಯ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.4 ರಂದು ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ತಿಳಿಸಿದ್ದಾರೆ.

ಮಡಿಕೇರಿ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿರುವ ಕೊಡಗು ಗೌಡ ಸಮಾಜದ ಶಿಥಿಲಗೊಂಡಿದ್ದ ಹಳೆಯ ಕಟ್ಟಡದ ನವೀಕರಣ ಮತ್ತು ಸುಸಜ್ಜಿತ ನೂತನ ಸಭಾಭವನದ ನಿರ್ಮಾಣವಾಗಿದೆ. ಇದನ್ನು ಫೆ.4 ರಂದು ಬೆಳಗ್ಗೆ 10.30ಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ನಿರ್ಮಾಲಾನಂದನಾಥ ಮಹಾಸ್ವಾಮೀಜಿಗಳು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪ್ರಸನ್ನ ಸ್ವಾಮೀಜಿಗಳು ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ದೇವರಗುಂಡ ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಗೌಡ, ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ವಸತಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷ ಪೇರಿಯನ ಜಯಾನಂದ ಮಾಹಿತಿ ನೀಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಎಸ್.ಬಿ. ಕುಶಾಲಪ್ಪ, ಕೊಡಗು ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಹಾಗೂ ಮೈಸೂರು ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಾಸು, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ, ಕೊಡಗು ಜಿಲ್ಲಾ ಒಕ್ಕಲಿಗ ಸಮಾಜದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಆರ್ಕಿಟೆಕ್ಟ್ ಇಂಜಿನಿಯರ್ ಮುಕ್ಕಾಟಿ ಮನೋಜ್‍ಕುಮಾರ್ ಭಾಗವಹಿಸಲಿದ್ದಾರೆ ಅಧ್ಯಕ್ಷ ಪೇರಿಯನ ಜಯಾನಂದ ತಿಳಿಸಿದರು.


ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, 
ಕೋವಿಡ್ ಸಂದರ್ಭದಲ್ಲೂ ದಾನಿಗಳು ಸಹಕಾರ ನೀಡಿದ್ದು, ಕೊಡಗಿನ ಸಂಸ್ಕøತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಸಮಾಜದ ನೂತನ ಮುಖ್ಯ ದ್ವಾರಕ್ಕೆ ‘ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ’ರ ಹೆಸರಿಡಲಾಗಿದೆ. ಅಲ್ಲದೇ, ಒಳಭಾಗದಲ್ಲಿ ಸುದರ್ಶನ ವೃತ್ತದಲ್ಲಿರುವ ಹುತಾತ್ಮರ ಪ್ರತಿಮೆಯ ಮಾದರಿಯಲ್ಲಿಯೇ ಸಣ್ಣ ಪ್ರತಿಮೆಯೊಂದನ್ನು ಅಳವಡಿಸಲಾಗಿದೆಯೆಂದು ವಿವರಿಸಿ, ನೂತನ ಸಭಾ ಭವನವನ್ನು ಜಾತ್ಯತೀತ ನೆಲೆಗಟ್ಟಿನಲ್ಲಿ ಎಲ್ಲರೂ ಬಳಸಿಕೊಳ್ಳುವಂತೆ ಮನವಿ ಮಾಡಿದರು.

1980ರಲ್ಲಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ ದೇವೇಗೌಡರ ಸಮ್ಮುಖದಲ್ಲಿ ಉದ್ಘಾಟನೆಗೊಂಡ ಕೊಡಗು ಗೌಡ ಸಮಾಜದ ಕಟ್ಟಡವನ್ನು ಇದೀಗ ಸುಸಜ್ಜಿತವಾಗಿ ಮರು ನಿರ್ಮಿಸಲಾಗಿದೆ. ಇದಕ್ಕಾಗಿ ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಂಜೂರಾಗಿದ್ದ 75ಲಕ್ಷ ಅನುದಾನದಲ್ಲಿ 56 ಲಕ್ಷ ರೂ. ಬಿಡುಗಡೆಯಾಗಿದೆ. ಸಂಸದರ ನಿಧಿಯಿಂದ ಅನುಮೋದನೆಗೊಂಡ 25 ಲಕ್ಷ ರೂ.ಗಳಲ್ಲಿ 12 ಲಕ್ಷ ಬಿಡುಗಡೆಯಾಗಿದ್ದರೆ, ಸಮಾಜ ಬಾಂಧವರು ಹಾಗೂ ದಾನಿಗಳಿಂದ 1.50 ಕೋಟಿ ನೆರವು ಸಂಗ್ರಹವಾಗಿದ್ದು, ಇದನ್ನು ಬಳಸಿ ನೂತನ ಸಭಾ ಭವನ ಹಾಗೂ ಹಳೇ ಕಟ್ಟಡ ನವೀಕರಗೊಳಿಸಲಾಗಿದೆ. ಇನ್ನೂ 50 ಲಕ್ಷ ರೂ.ಗಳ ಅಗತ್ಯವಿದೆಯೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಖಜಾಂಚಿ ಕುಯ್ಯಮುಡಿ ಕೆ.ವಸಂತ, ನಿರ್ದೇಶಕರಾದ ಪೈಕೇರ ಎಂ.ಮನೋಹರ್ ಹಾಗೂ ಕೋಳುಮುಡಿಯನ ಆರ್.ಅನಂತ್‍ಕುಮಾರ್ ಉಪಸ್ಥಿತರಿದ್ದರು.


Search Coorg Media: Coorg's Largest Online Media Network