Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಂಗಳಾದೇವಿ ನಗರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ


ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಏಳು ದಿನಗಳ ಕಾಲ ಮಡಿಕೇರಿ ನಗರದ ಮಂಗಳಾದೇವಿ ನಗರ ಬಡಾವಣೆಯಲ್ಲಿರುವ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀರಾಜರಾಜೇಶ್ವರಿ, ಶ್ರೀಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಜ.12 ರಿಂದ 18ರ ವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಗೌರವ ಸಲಹೆಗಾರ ಕೆ.ಕೆ.ಮಹೇಶ್ ಮಡಿಕೇರಿ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದರು.

ಜ.12 ರಂದು: ಸಂಜೆ 5.30 ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ಅಸ್ತ್ರಕಲಶಪೂಜೆ, ದಿಶಾಬಲಿ ಜರುಗಲಿದ್ದು, ಸಂಜೆ 7 ಗಂಟೆಯಿಂದ ಮಡಿಕೇರಿಯ ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಸೇವೆ ನಡೆಯಲಿದೆ.


ಜ.13 ರಂದು: ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಕ್ಷಾಲನಾದಿ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಹೋಮಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ 5.30ರಿಂದ ದುರ್ಗಾಪೂಜೆ, ವನದುರ್ಗಾಹವನ, ಮೂಲಾಲಯದಲ್ಲಿ ವಾಸ್ತ್ವಾದಿ ಶುದ್ಧಿಗಳು, ಪ್ರಸನ್ನ ಪೂಜೆ, ಸಂಜೆ 7 ಗಂಟೆಯಿಂದ ಮಡಿಕೇರಿಯ ಶೃತಿಲಯ ಭಜನಾ ಮಂಡಳಿಯಿಂದ ಭಜನೆ ಸೇವೆ ನಡೆಯಲಿದೆ.


ಜ.14 ರಂದು: ಬೆಳಗ್ಗೆ 7 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ತತ್ವಹೋಮ, ನವಗ್ರಹ ಹೋಮ, ತತ್ವಕಲಶಾಭಿಷೇಕ, ಜೀವೋದ್ವಾಸನೆ ಜರುಗಲಿದ್ದು, ಸಂಜೆ 5 ಗಂಟೆಯಿಂದ ದುರ್ಗಾಪೂಜೆ, ಶಯ್ಯಾಧಿವಾಸ, ಧ್ಯಾನಾದಿವಾಸಾದಿಗಳು, ಶಿರಸ್ತತ್ವಹೋಮ, ಶಕ್ತಿ ದಂಡಕ ಮಂಡಲ ಪೂಜೆ, ಅಧಿವಾಸಹೋಮ ನಡೆಯಲಿದೆ. ಸಂಜೆ 7 ಗಂಟೆಯಿಂದ ಮಡಿಕೇರಿಯ ಶ್ರೀ ವಿಜಯ ವಿನಾಯಕ ಭಜನಾ ಮಂಡಳಿಯಿಂದ ಭಜನೆ ಸೇವೆ ಜರುಗಲಿದೆ.


ಜ.15 ರಂದು: ಬೆಳಗ್ಗೆ 6 ಗಂಟೆಯಿಂದ ಪುಣ್ಯಾಹ, ಗಣಪತಿ ಹವನದ ನಂತರ 9.50ರಿಂದ 10.20ರ ಧನಿಷ್ಠ ನಕ್ಷತ್ರ, ಮೀನ ಲಗ್ನ ಶುಭ ಮೂಹೂರ್ತದಲ್ಲಿ ಶ್ರೀದೇವರುಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಂತರ ಸಂಜೆ 3 ಗಂಟೆಗೆ ನಗರದ ಬನ್ನಿಮಂಟಪದಿಂದ ಮಂಗಳಾದೇವಿ ನಗರ, ಶ್ರೀ ರಾಜರಾಜೇಶ್ವರಿ ದೇವಾಲಯದವರೆಗೆ ಶ್ರೀ ರಾಜರಾಜೇಶ್ವರಿ ದೇವಿಯ ಭವ್ಯ ಅಲಂಕೃತ ಶೋಭಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಯಿಂದ ದಿಕ್ಪಾಲ ಹೋಮಗಳು, ದಿಕ್ಪಾಲ ಪ್ರತಿಷ್ಠೆ, ದುರ್ಗಾಪೂಜೆ, ಮಹಾಬಲಿಪೀಠಾಧಿವಾಸ, ಕವಾಟ ಬಂಧನ ನಂತರ ಸಂಜೆ 7 ಗಂಟೆಯಿಂದ ಮಡಿಕೇರಿಯ ಶ್ರೀಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿಯಿಂದ ಭಜನೆ ಸೇವೆ ನಡೆಯಲಿದೆ.


ಜ.16 ರಂದು: ಬೆಳಗ್ಗೆ ಪುಣ್ಯಾಹ, ಗಣಪತಿ ಹವನ, ಮಹಾಬಲಿಪೀಠಪ್ರತಿಷ್ಟೆ, ಚಂಡಿಕಾಯಾಗ, ನಾಗದೇವರಿಗೆ ಕಲಶಪೂಜೆ, ಆಶ್ಲೇಷಬಲಿ, ಪವಮಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದ್ದು, ಸಂಜೆ 5.30ಕ್ಕೆ ಮಂಟಪ ಸಂಸ್ಕಾರ, ದುರ್ಗಾಪೂಜೆ, ಲಲಿತಾ ಸಹಸ್ರನಾಮ ಹವನ, ಪ್ರಸನ್ನ ಪೂಜೆ, ಹಾಗೂ ಸಂಜೆ 7 ಗಂಟೆಯಿಂದ ಮಡಿಕೇರಿಯ ಶ್ರೀರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಸೇವೆ ಜರುಗಲಿದೆ.


ಜ.17 ರಂದು: ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಶಾಂತಿ ಹೋಮಗಳು, ಪ್ರಾಯಶ್ಚಿತ ಹೋಮಗಳು, ತತ್ತ್ವಹೋಮ, ಕಲಶಾಭಿಷೇಕಗಳು, ಕಲಶಮಂಡಲ ರಚನೆ, ಕ್ಷೇತ್ರಪಾಲ ಪ್ರತಿಷ್ಠೆ, ಪ್ರಸನ್ನ ಪೂಜೆ ಜರುಗಲಿದ್ದು, ಸಂಜೆ 5 ಗಂಟೆಗೆ ಕುಂಭೇಶ, ಕರ್ಕರಿ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ, ಗಣಪತಿ ದೇವರ ಕಲಶಪೂಜೆಗಳು, ಅಧಿವಾಸ ಹೋಮ, ಕಲಶಾಧಿವಾಸ ನಡೆಯಲಿದೆ. ಸಂಜೆ 6 ಗಂಟೆಯಿಂದ ಆದಿಚುಂಚನಗಿರಿ ಶ್ರೀ ರವಿ ಭೂತನಕಾಡು ಮತ್ತು ತಂಡದಿಂದ ಭಜನೆ ಸೇವೆ ನಡೆಯಲಿದೆ.


ಜ.18 ರಂದು: ಬೆಳಿಗ್ಗೆ 6 ಗಂಟೆಯಿಂದ ಪುಣ್ಯಾಹ, ಗಣಪತಿ ಹವನ, 9.45 ಗಂಟೆಗೆ ಸಲ್ಲುವ ಕುಂಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಜರುಗಲಿದೆ. ಮಧ್ಯಾಹ್ನನ 12 ಗಂಟೆಗೆ ಮಹಾಪೂಜೆ, ಪಲ್ಲಪೂಜೆ ಜರುಗಲಿದ್ದು, ಸಂಜೆ 6 ಗಂಟೆಗೆ ಸಾಯಂಪೂಜೆ, 7 ಗಂಟೆಗೆ ರಂಗಪೂಜೆ, 7.30ಕ್ಕೆ ಉತ್ಸವ ಬಲಿ, ಸಂಪ್ರೋಕ್ಷಣೆ ನಡೆಯಲಿದೆ. ಸಂಜೆ 7 ಗಂಟೆಯಿಂದ ಮಡಿಕೇರಿಯ ವೆಂಕಟೇಶ್ವರ ಕಲಾತಂಡದಿಂದ ಭಜನೆ ಸೇವೆ ನಂತರ ಮೂಲಕ ಪೂಜಾವಿಧಿ ವಿಧಾನಗಳು ಸಂಪನ್ನಗೊಳ್ಳಲಿದೆ ಎಂದರು.



ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಭಕ್ತಾಧಿಗಳಿಗೆ ಏಳು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಲಿದ್ದು, ಸಾರ್ವಜನಿಕರು ದೇವತಾ ಕಾರ್ಯಕ್ಕೆ ಹಾಜರಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ  ಕೆ.ಕೆ. ಮಹೇಶ್ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಎಸ್.ಚೇತನ್, ಕಾರ್ಯದರ್ಶಿ ಸುರೇಶ್, ಖಜಾಂಚಿ ವಸಂತ್ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ ಮನುಮಂಜುನಾಥ್ ಉಪಸ್ಥಿತರಿದ್ದರು.


Search Coorg Media: Coorg's Largest Online Media Network