Header Ads Widget

ಸರ್ಚ್ ಕೂರ್ಗ್ ಮೀಡಿಯ

ಒಣ ಸಂಸ್ಕರಣೆ ವೇಳೆ ಉತ್ತಮ ಗುಣಮಟ್ಟದ ಕಾಫಿ ತಯಾರಿಸಲು ತೋಟಗಳಲ್ಲಿ ಅನುಸರಿಸಬೇಕಾದ ಒಳ್ಳೆಯ ತಯಾರಿಕಾ ಪದ್ದತಿಗಳು (Good Manufacturing Practices)


1.
ಶೇ. 90 ರಷ್ಟು ಕಾಫಿ ಹಣ್ಣಾದಾಗ ಕೊಯ್ಲು ಮಾಡಬೇಕು.

2. ಕೊಯ್ದ ಹಣ್ಣುಗಳನ್ನು ಬಹಳ ಸಮಯದವರೆಗೆ ರಾಶಿ ಹಾಕುವುದು ಅಥವಾ ಗೋಣಿ ಚೀಲಗಳಲ್ಲಿ ಶೇಖರಿಸಿ ಇಡಬಾರದು. ಇದರಿಂದ ಮೋಲ್ಡ್ ಬೆಳವಣಿಗೆ ಆಗಿ ಕಾಪಿಯ ಗುಣಮಟ್ಟವನ್ನು ಹಾಳು ಮಾಡುತ್ತದೆ.

3. ಕಾಪಿಯನ್ನು ಒಣಗಿಸಲು ಹರಡುವ ಮುನ್ನ, ಎಲ್ಲಾ ಹಸಿರು ಕಾಯಿಗಳು, ಅತಿಯಾದ ಹಣ್ಣುಗಳು, ಗಿಡದಲ್ಲೇ ಒಣಗಿದ ಕಾಪಿ, ಮತ್ತು ಹಾಳಾದ ಕಾಪಿಯನ್ನು ಪ್ರತ್ಯೇಕಿಸಿ, ಒಳ್ಳೆಯ ಹಣ್ಣುಗಳನ್ನು ಒಣಗಿಸಲು ಹರಡುವುದು. ಅತಿಯಾದ ಹಣ್ಣುಗಳು, ಗಿಡದಲ್ಲೇ ಒಣಗಿದ ಕಾಪಿ, ಮತ್ತು ಹಾಳಾದ ಕಾಪಿಯು ಮೋಲ್ಡ್ ಹಾಗೂ ಬೂಸ್ಟುಗಳ ಕಲ್ಮಶಗಳಿಗೆ ಪ್ರಮುಖ ಮೂಲಗಳು ಹಾಗೂ ಮೋಲ್ಡ್ ಕಾಪಿಯ ಉತ್ಪಾದನೆಗೆ ಕಾರಣವಾಗುತ್ತವೆ. ಮೋಲ್ಡ್ ಕಾಪಿಗಳು ಕಾಪಿಗೆ ಮೋಲ್ಡ್ ಅಥವಾ ಹಳಸಲು ರುಚಿಯನ್ನು ನೀಡುತ್ತವೆ.

4. ಬೇರ್ಪಡಿಸಿದ ನಂತರ, ಕಾಪಿ ಹಣ್ಣುಗಳನ್ನು ಮೊದಲ 3-4 ದಿನಗಳವರೆಗೆ 4 ಸೆಂ.ಮೀ. ಗಿಂತ ಕಡಿಮೆ ದಪ್ಪದ ಪದರದಲ್ಲಿ ಸಮನಾಗಿ ಸ್ವಚ್ಛವಾದ ಕಣದಲ್ಲಿ ಹರಡುವುದು. 3-4 ದಿನಗಳ ನಂತರ, ಪದರವನ್ನು 7-8 ಸೆಂ.ಮೀ. ದಪ್ಪಕ್ಕೆ ಹೆಚ್ಚಿಸುವುದು. 

5. ಕಾಪಿಯನ್ನು ಸ್ವಚ್ಛವಾದ ಸಿಮೆಂಟ್ ಅಥವಾ ಟೈಲ್ಸ್ ಕಣದಲ್ಲಿ ಒಣಗಿಸುವುದು. ಮಣ್ಣಿನ ಮೇಲೆ ಅಥವಾ ಬರಿಯ ನೆಲದ ಮೇಲೆ ಒಣಗಿಸಬಾರದು. ಮಣ್ಣು ಹಾಗೂ ಬರಿಯ ನೆಲದ ಮೇಲೆ ಒಣಗಿಸಿದ ಕಾಪಿಯ ರುಚಿಯು ಮಣ್ಣಿನ ರುಚಿಯನ್ನು ನೀಡುತ್ತದೆ. ಅಲ್ಲದೆ, ಮಣ್ಣಿನಲ್ಲಿರುವ ಮೋಲ್ಡ್ ಬೀಜಾಣುಗಳೊಂದಿಗೆ ಸಂಪರ್ಕ ಹೊಂದಿ ಕಲುಷಿತವಾಗುತ್ತದೆ. 

6. ಹೊಸದಾಗಿ ಕೊಯ್ದ ಕಾಪಿಯನ್ನು ಹಿಂದಿನ ದಿನದ ಕಾಪಿಯೊಂದಿಗೆ ಮಿಶ್ರ ಮಾಡಬಾರದು. ಇದರಿಂದ, ಕಾಪಿ ಒಣಗುವಿಕೆ ಒಂದೇ ಸಮಾನವಾಗಿ ಆಗುವುದಿಲ್ಲ

7. ಕಾಫಿಯನ್ನು ಒಣಗಿಸುವಾಗ, ದಿನದಲ್ಲಿ 6-8 ಬಾರಿ ನಿಯಮಿತವಾಗಿ ಕಾಲಾಡಿಸುತ್ತಾ ಹಣ್ಣುಗಳನ್ನು ಒಂದೇ ಸಮನಾಗಿ ಒಣಗಿಸಬೇಕು.

8. 3-4 ದಿನಗಳು ಒಣಗಿದ ನಂತರ, ಕಾಪಿಯನ್ನು ಪ್ರತಿ ದಿನ ಸಂಜೆ ಸ್ವಚ್ಛವಾದ ಪ್ಲಾಸ್ಟಿಕ್ ಹಾಳೆಯಿಂದ ಕಾಫಿಯು ಮರು ತೇವಗೊಳ್ಳದಂತೆ ತಡೆಯಲು ಮುಚ್ಚಬೇಕು.

9. ಕಾಫಿಯನ್ನು ಶಿಫಾರಸು ಮಾಡಿದ ತೂಕಕ್ಕೆ ಬುಶೆಲ್ ಅಥವಾ ಫೋರ್ಲಿಟ್ ಗೆ 18 ಕೆಜಿ ಲೆಕ್ಕದಲ್ಲಿ ಒಣಗಿಸವುದು. ಇದು ಕಾಪಿಯ 11-12 % ತೇವಾಂಶಕ್ಕೆ ಅನುಗುಣವಾಗಿರುತ್ತದೆ. ಇದರಿಂದ ತೋಟದಲ್ಲಿ ಕಾಫಿಯು ಸಾಧ್ಯವಿದ್ದಷ್ಟು ಮಟ್ಟಿಗೆ ಮೋಲ್ಡ್ ನಿಂದ ಕಲುಷಿತ ಆಗದಂತೆ ತಡೆಯಬಹುದು.

10. ಕಾಪಿಯು ಒಣಗಿದ ನಂತರ, ಅದರಲ್ಲಿರುವ ಧೂಳು, ಒಣ ಕಸ ಕಡ್ಡಿಗಳನ್ನು ತೆಗೆಯಲು ಕಾಫಿಯನ್ನು ತೂರಿ, ನಂತರ ಸ್ವಚ್ಛವಾದ ಗೋಣಿ ಚೀಲಗಳಲ್ಲಿ ತುಂಬುವುದು.

11. ತೋಟಗಳಲ್ಲಿ ಕಾಪಿಯನ್ನು ಶೇಖರಿಸಿ ಇಡುವಾಗ, ಸ್ವಚ್ಛ ಹಾಗೂ ಗಾಳಿಯಾಡುವ, ನೀರು ಅಥವಾ ತೇವಾಂಶ ಒಳಬರದ ಗೋದಾಮುಗಳಲ್ಲಿ, ಗೋಡೆಯಿಂದ ಅಂತರವಿಟ್ಟು, ಎತ್ತರದಲ್ಲಿ ಇರುವ ಹಲಗೆಗಳ ಮೇಲೆ ಜೋಡಿಸಿ ಇಡಬೇಕು. ಇದರಿಂದ, ಒಣಗಿದ ಕಾಪಿಯು ಮರು ಜಲೀಕರಣ ಅಥವಾ ಒದ್ದೆಯಾಗುವುದು ಮತ್ತು ಆ ಮೂಲಕ ಮೋಲ್ಡ್ ಬೆಳೆಯುವುದನ್ನು ತಡೆಗಟ್ಟಬಹುದು.

12. ತೋಟಗಳಲ್ಲಿ ಒಣಗಿದ ಕಾಪಿಯನ್ನು ಮೇ ತಿಂಗಳ ನಂತರವೂ ಶೇಖರಿಸಿ ಇಡುವುದು ಒಳ್ಳೆಯದಲ್ಲ. ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಮುಂಗಾರಿನ ವಾತಾವರಣದ ತೇವಾಂಶ ಹೆಚ್ಚು ಇರುವುದರಿಂದ, ಕಾಪಿಯ ಗುಣಮಟ್ಟ ಹಾಳಾಗುತ್ತದೆ.

ಮಾಹಿತಿ:- SLO COFFEE BOARD


Search Coorg Media: Coorg's Largest Online Media Network