Header Ads Widget

Responsive Advertisement

ಜಿಲ್ಲೆಯ ಹಾಡಿಗಳಲ್ಲಿ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಲು ಜಿ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ


ಜಿಲ್ಲೆಯ ವಿವಿಧ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಜನರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ನಗರದ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಾಗರಹೊಳೆ ವ್ಯಾಪ್ತಿಯ ಚೈನಿಹಡ್ಲು, ಕಾರೆಕಂಡಿ, ಬೊಂಬುಕಾಡು, ಮಜ್ಜಿಗೆ ಹಳ್ಳ ಫಾರಂ ಮತ್ತು ಬೊಮ್ಮಾಡು ಪ್ರದೇಶದಲ್ಲಿನ ಗಿರಿಜನ ಹಾಡಿಯ ಸುಮಾರು 307 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಅರಣ್ಯ ಹಕ್ಕುಪತ್ರಗಳನ್ನು ನೀಡಲಾಗಿದ್ದರೂ ಸಹ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರು ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಅಲ್ಲಿನ ಹಾಡಿಯ ನಿವಾಸಿಗಳು ಅವಲತ್ತುಕೊಂಡಿದ್ದು, ಈ ಹಿನ್ನೆಲೆ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸೂಚಿಸಿದರು.
ನಾಗರಹೊಳೆ ವ್ಯಾಪ್ತಿಯ ಆದಿವಾಸಿಗಳಿಗೆ ಅರಣ್ಯ ಹಕ್ಕುಪತ್ರ ನೀಡಿದ್ದರೂ ಸಹ ಹುಲಿ ಸಂರಕ್ಷಣಾ ನೆಪದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಗಿರಿಜನರು ಖುದ್ದು ಭೇಟಿ ಮಾಡಿದ್ದು, ಈ ಸಂಬಂಧ ಕೂಡಲೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸುವಂತೆ ಜಿ.ಪಂ.ಅಧ್ಯಕ್ಷರು ನಿರ್ದೇಶನ ನೀಡಿದರು.
ಅನಾದಿ ಕಾಲದಿಂದಲೂ ಕಾಡಿನಲ್ಲಿ ಗಿರಿಜನರು ವಾಸ ಮಾಡಿಕೊಂಡು ಬಂದಿದ್ದು, ವಸತಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ, ಅಂಗನವಾಡಿ, ಶಾಲೆ ಮತ್ತಿತರ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕಲ್ಲವೇ ಎಂದು ಬಿ.ಎ.ಹರೀಶ್ ಅವರು ಪ್ರಶ್ನಿಸಿದರು.
ಜಿ.ಪಂ.ಸದಸ್ಯರಾದ ಪಂಕಜ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ಪಡೆದುಕೊಂಡಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಗೆ ಬೆಲೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಜಿ.ಪಂ.ಸದಸ್ಯರಾದ ಶಿವುಮಾದಪ್ಪ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ಪಡೆದುಕೊಂಡವರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ನಾಗರಹೊಳೆ ಹುಲಿ ಸಂರಕ್ಷಣಾ ವ್ಯಾಪ್ತಿಯಲ್ಲಿ ಬರುವ ಚೈನಿಹಡ್ಲು(79 ವೈಯಕ್ತಿಕ ಅರಣ್ಯ ಪತ್ರ ನೀಡಿರುವುದು) ಕಾರೆಕಂಡಿ(57), ಮಜ್ಜಿಗೆ ಹಳ್ಳ ಫಾರಂ(75), ಬೊಂಬುಕಾಡು(27) ಮತ್ತು ಬೊಮ್ಮಾಡು (69) ಹಾಡಿಯ ಒಟ್ಟು 307 ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಸದ್ಯ ಇವರು ಮನೆ ನಿರ್ಮಿಸಿಕೊಳ್ಳಲು ಮುಂದಾದಾಗ ಅರಣ್ಯ ಇಲಾಖೆಯ ಹೊಸ ಆದೇಶದಂತೆ ತಡೆದಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ಸದ್ಯದಲ್ಲಿಯೇ ಆದೇಶ ಬರಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಸಲ್ಲಿಕೆಯಾಗಿದ್ದ 2825 ವೈಯಕ್ತಿಕ ಅರ್ಜಿಗಳಲ್ಲಿ 1762 ವೈಯಕ್ತಿಕ ಅರ್ಜಿಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಹಾಗೆಯೇ ಇತರೆ ಅರಣ್ಯ ಹಕ್ಕು ಯೋಜನೆಯಡಿ ಸಲ್ಲಿಕೆಯಾಗಿದ್ದ 1,184 ಅರ್ಜಿಗಳಲ್ಲಿ 291 ಅರ್ಜಿಗಳಿಗೆ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಸಮುದಾಯ ಅರಣ್ಯ ಹಕ್ಕು ಪತ್ರ ಯೋಜನೆಯಡಿ ಸಲ್ಲಿಕೆಯಾಗಿರುವ 57 ಅರ್ಜಿಗಳಲ್ಲಿ 45 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರು ಮಾತನಾಡಿ ಕಾಡಾನೆ ಹಾವಳಿಯಿಂದ ಮೃತಪಟ್ಟ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಪಾವತಿಸಬೇಕು. ಆದರೆ ಈ ಕಾರ್ಯ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಿವು ಮಾದಪ್ಪ ಅವರು ಸರ್ಕಾರ ಟ್ಯೂಷನ್ ಶುಲ್ಕ ಪಡೆಯಬಹುದಾಗಿದೆ ಎಂದು ತಿಳಿಸಿದರೂ ಸಹ ಬೇರೆ ಬೇರೆ ರೀತಿಯ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಸದಸ್ಯರಾದ ಸುನಿತಾ ಅವರು ಮಾತನಾಡಿ ವಾಲ್ನೂರು ಶಾಲೆಗೆ ನೀಡಲಾಗಿದ್ದ ಜಾಗ ಸಂಬಂಧಿಸಿದಂತೆ ಇದುವರೆಗೆ ಆರ್ಟಿಸಿ ಆಗಿಲ್ಲ. ಕೂಡಲೇ ಆರ್ಟಿಸಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರೌಢಶಾಲೆಗಳಿಗೆ 21 ಮಂದಿ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿದ್ದು, ಅದರಂತೆ ಕ್ರಮವಹಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಕಾಂತರಾಜು ಅವರು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸ್ಥಳೀಯ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ಮಾಡಿದರು.
ಸದಸ್ಯರಾದ ಪುಟ್ಟರಾಜು ಅವರು ಮಾತನಾಡಿ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಇರುವ ಅತಿಥಿ ಶಿಕ್ಷಕರನ್ನು ಅಲ್ಲಿಯೇ ಮುಂದುವರೆಸಬೇಕು ಎಂದು ಅವರು ಸಲಹೆ ಮಾಡಿದರು.
ಸೋಮವಾರಪೇಟೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸುಮಾರು 10 ವಿದ್ಯಾರ್ಥಿಗಳನ್ನು ಬೇರೆ ಕಡೆಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿ ಕಳುಹಿಸಲಾಗಿದೆ ಎಂದು ಸದಸ್ಯರಾದ ಪೂರ್ಣಿಮ ಗೋಪಾಲ್ ಅವರು ಬೇಸರ ವ್ಯಕ್ತಪಡಿಸಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಶಾಲಾ ದಾಖಲಾತಿ ಸರಿಪಡಿಸಿಕೊಳ್ಳುವ ಸಂಬಂಧ ನ್ಯಾಯಾಲಯ ಮತ್ತು ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಬಗ್ಗೆ ಮಾಹಿತಿ ಒದಗಿಸುವಂತೆ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಸದಸ್ಯರಾದ ಸಿ.ಕೆ.ಬೋಪಣ್ಣ ಅವರು ಶಾಲೆಗಳಲ್ಲಿ ಶುಲ್ಕ ಪಡೆಯುತ್ತಿರುವ ಬಗ್ಗೆ ಮಾತನಾಡಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳಾ ಅವರು ಗುಮ್ಮನಕೊಲ್ಲಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಸುಮಾರು 87 ಮಕ್ಕಳಿದ್ದು, ಆದರೂ ಶಾಲೆಯನ್ನು ಮುಚ್ಚಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಡೋಲಾಯಾನಮಾನ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಬಾರದು ಎಂದು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಮೂರು ವರ್ಷದ ಹಿಂದೆಯೇ ಅಲ್ಲಿನ ದೇವಾಲಯ ಸಮಿತಿಗೆ ಆರ್ಟಿಸಿ ಆಗಿದ್ದು, ನ್ಯಾಯಾಲಯವು ಕೂಡ ಈ ಸಂಬಂಧ ತೀರ್ಪು ನೀಡಿದೆ ಎಂದು ಸಭೆಯ ಗಮನಕ್ಕೆ ತಂದರು.
ಮಂಜುಳಾ ಅವರು ಮಕ್ಕಳ ಭವಿಷ್ಯ ಮುಖ್ಯ. ಮಕ್ಕಳನ್ನು ಯಾವ ಶಾಲೆಗೆ ದಾಖಲಿಸುವುದು. ಆದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಅವರು ಗಮನ ಸೆಳೆದರು.
ಈ ಕುರಿತು ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ನ್ಯಾಯಾಲಯ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಕಜ ಅವರು ತಿತಿಮತಿಯಲ್ಲಿ ಪ್ರೌಢಶಾಲೆ ಇದ್ದು, 200 ರಿಂದ 300 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯ ದಾಖಲಾತಿ ಸರಿಪಡಿಸಿಕೊಳ್ಳಬೇಕಿದೆ ಎಂದರು.
ಸದಸ್ಯರಾದ ಸುನಿತಾ ಅವರು ಮಾತನಾಡಿ ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ವೈದ್ಯರು ಮತ್ತು ಶ್ರುಶ್ರೂಷಕರನ್ನು ನಿಯೋಜಿಸಬೇಕಿದೆ ಎಂದು ಅವರು ಹೇಳಿದರು.
ಬಾನಂಡ ಪ್ರಥ್ಯು ಅವರು ಮಾತನಾಡಿ ದಕ್ಷಿಣ ಕೊಡಗಿನ ಗೋಣಿಕೊಪ್ಪ, ಬಾಳೆಲೆ, ತಿತಿಮತಿ, ಶ್ರೀಮಂಗಲ, ಕುಟ್ಟ ಮತ್ತಿತರ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಸಮಸ್ಯೆ ಉಂಟಾಗುತ್ತದೆ ಎಂದು ಅವರು ಗಮನ ಸೆಳೆದರು.
ಆಗಾಗ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಈ ಸಂಬಂಧ ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಿ.ಕೆ.ಬೋಪಣ್ಣ ಅವರು ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಇದನ್ನು ಸರಿಪಡಿಸಲು ಕಷ್ಟ ಸಾಧ್ಯವೇನೋ ಎಂಬಂತಾಗಿದೆ ಎಂದರು.
ಸುನಿತಾ ಅವರು ಮಾತನಾಡಿ ಜಿಲ್ಲೆಯ ಹಲವು ಕಡೆಗಳಲ್ಲಿ ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅವರು ದೂರಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ, ಸದಸ್ಯರಾದ ಕಿರಣ್ ಕಾರ್ಯಪ್ಪ, ಸರೋಜಮ್ಮ, ವಿಜು ಸುಬ್ರಮಣಿ, ಮೂಕೊಂಡ ಸುಬ್ರಮಣಿ, ಅಪ್ಪಚಂಡ ಮಹೇಶ್ ಗಣಪತಿ, ಯಾಲದಾಳು ಪದ್ಮಾವತಿ, ಕಲಾವತಿ ಪೂವಪ್ಪ, ಕೆ.ಕೆ.ಕುಮಾರ, ಪುಟ್ಟರಾಜು, ಬಿ.ಜೆ.ದೀಪಕ್, ಅಬ್ದುಲ್ ಲತೀಫ್ ಇತರರು ಹಲವು ವಿಷಯಗಳ ಕುರಿತು ಮಾತನಾಡಿದರು.