Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ: ಪ್ರಭು ಚವ್ಹಾಣ್


ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಗೋಮಾತೆಯನ್ನು ಪೂಜಾ ಭಾವನೆಯಿಂದ ಕಾಣುತ್ತೇವೆ. ಆ ನಿಟ್ಟಿನಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು, ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪಶುಸಂಗೋಪನಾ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಹಾಗೂ ಪಶುಪಾಲನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ಪಶುಪಾಲನಾ ಇಲಾಖೆ ಅಧಿಕಾರಿಗಳು,. ಪೊಲೀಸ್, ಜಿ.ಪಂ., ಕಂದಾಯ ಹೀಗೆ ಹಲವು ಇಲಾಖೆಗಳ ಸಹಕಾರ ಪಡೆದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಗೋವು ರಕ್ಷಣೆ ಮೊದಲ ಆದ್ಯತೆ ಎಂಬುದನ್ನು ಮರೆಯಬಾರದು ಎಂದರು.
ಪಶುಪಾಲನಾ ಇಲಾಖೆ ಅಧಿಕಾರಿಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾನುವಾರು ಲಸಿಕೆ ನೀಡಬೇಕು ಎಂದು ಅವರು ಸೂಚಿಸಿದರು.
ಪಾಲಿಕ್ಲಿನಿಕ್, ಪಶು ಸಂಜೀವಿನಿ, ಕೃತಕ ಗರ್ಭಧಾರಣೆ ಯೋಜನೆ ಮತ್ತಿತರ ಕಾರ್ಯಕ್ರಮಗಳನ್ನು ಕೃಷಿಕರಿಗೆ ತಲುಪಿಸಬೇಕು. ಗಂಡು ಕರು ಹುಟ್ಟಿದಲ್ಲಿ ಮೂರು ತಿಂಗಳ ಕಾಲ ಸಾಕಬೇಕು. ನಂತರ ಗೋಶಾಲೆಗೆ ಬಿಡಬೇಕು ಎಂದು ಸಚಿವರು ಸಲಹೆ ಮಾಡಿದರು. ಜಿಲ್ಲೆಯಲ್ಲಿನ ಗೋಮಾಳವನ್ನು ಸಂರಕ್ಷಣೆ ಮಾಡಬೇಕು. ಜೊತೆಗೆ ಮೇವು ಸಂಗ್ರಹಣೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಜಾನುವಾರು ಸಂರಕ್ಷಣೆ ಹಾಗೂ ಇಲಾಖೆಯ ಅಭಿವೃದ್ಧಿ ಸಂಬಂಧಿಸಿದಂತೆ ಎಲ್ಲಾ ಪಶು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಈ ಸಂಬಂಧ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಗೆ ಸಂಬಂಧಿಸಿದಂತೆ ಆಗಬೇಕಿದ ಕಾರ್ಯಗಳಿಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಜಿಲ್ಲೆಯಲ್ಲಿ ಹಲವು ಗೋಮಾಳ ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಗೋಮಾಳ ಸಂರಕ್ಷಣೆ ಮಾಡಿದಲ್ಲಿ ಜಾನುವಾರುಗಳನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 72,364 ದನ, 5,412 ಎಮ್ಮೆ, 684 ಕುರಿ, 7,622 ಮೇಕೆ, 8,625 ಹಂದಿ, ಹಾಗೆಯೇ 1 ಲಕ್ಷ ಹೆಚ್ಚು ಕೋಳಿ ಇದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 18 ಪಶು ಆಸ್ಪತ್ರೆಗಳಿದ್ದು, 22 ಪಶು ಚಿಕಿತ್ಸಾಲಯಗಳಿವೆ. 1 ಪಾಲಿಕ್ಲಿನಿಕ್, 1 ಕೋಳಿ ಸಾಕಾಣಿಕಾ ತರಬೇತಿ ಕೇಂದ್ರ ಇದೆ ಎಂದು ಅವರು ತಿಳಿಸಿದರು.
ಪಶುಪಾಲನಾ ಇಲಾಖೆಯಿಂದ ಕೃತಕ ಗರ್ಭಧಾರಣೆ, ಗರ್ಭ ತಪಾಸಣೆ, ಕಾಲುಬಾಯಿ ರೋಗ, ಕೊಕ್ಕರೆ ರೋಗದ ವಿರುದ್ದ ಲಸಿಕೆ, ಮೇವು ಬೀಜ ಕಿರು ಪೊಟ್ಟಣಗಳ ವಿತರಣೆ, ಪಶು ಆರೋಗ್ಯ ಶಿಬಿರಗಳು, ಗಿರಿರಾಜ ಕೋಳಿ ಮರಿಗಳ ವಿತರಣೆ, ರೈತರಿಗೆ ತರಬೇತಿ, ಮಿಶ್ರ ತಳಿ ಕರು ಪ್ರದರ್ಶನ, ರೇಬಿಸ್ ಜಾಗೃತಿ ಶಿಬಿರ, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ(ವಿರಾಜಪೇಟೆ) ಡಾ.ತಮ್ಮಯ್ಯ ಅವರು ಮಾತನಾಡಿ ಪ್ರತೀ ಜಾನುವಾರಿಗೂ ವಿಮೆ ಮಾಡಿಸಿಕೊಂಡಲ್ಲಿ ವಿಮೆ ಪಾವತಿಸಲು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಜಾನುವಾರುಗಳು ತುತ್ತಾಗುತ್ತಿದ್ದು, ಇದರಿಂದ ಜಾನುವಾರು ಪರಿಹಾರ ಪಾವತಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಪ್ರತಿ ಜಾನುವಾರಿಗೆ ವಿಮಾ ಕಾಯ್ದೆ ಜಾರಿಯಾಗಬೇಕು ಎಂದು ಅವರು ಸಲಹೆ ಮಾಡಿದರು.
ಡಾ. ಶಿವು ಬಾದಾಮಿ(ಸೋಮವಾರಪೇಟೆ) ಅವರು ಜಿಲ್ಲೆಯ ಕೂಡಿಗೆ ಬಳಿ 2016-17ನೇ ಸಾಲಿನಲ್ಲಿ ಆಡು ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಕಟ್ಟಡವಾಗಿದೆ. ಆದರೆ ಮುಂದುವರೆದ ಕೆಲಸಗಳು ಆಗಿಲ್ಲ. ಆದ್ದರಿಂದ ಈ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಮಾಡಬೇಕೆಂದು ಸಚಿವರ ಗಮನಕ್ಕೆ ತಂದರು. ಡಾ.ಪ್ರಸನ್ನ, ಡಾ.ಚಿದಾನಂದ, ಅವರು ಹಲವು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಹೊಸದಾಗಿ ಜಾರಿಗೊಳಿಸಿಲ್ಲ. ಹಿಂದೆ ಇದ್ದ ಕಾಯ್ದೆಯನ್ನೇ ಕೆಲವು ಬದಲಾವಣೆ ಮಾಡಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ 180 ಗೋಶಾಲೆಗಳಿದ್ದು, ಗೋ ಶಾಲೆಗಳಿಗೆ ಸಹಾಯಧನ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪಶು ಸಂಜೀವಿನಿ ಕಾರ್ಯಕ್ರಮದಡಿ ಈಗಾಗಲೇ 15 ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಇನ್ನೂ 15 ಜಿಲ್ಲೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಈಗಾಗಲೇ ಸಹಾಯವಾಣಿ ಆರಂಭಿಸಲಾಗಿದ್ದು, ಈ ಸಹಾಯವಾಣಿಗೆ ಜಾನುವಾರು ಸಂರಕ್ಷಣೆ ಸಂಬಂಧಿಸಿದಂತೆ ಮಾಹಿತಿ ನೀಡಬಹುದಾಗಿದೆ ಎಂದರು. ಜಾನುವಾರು ಸಾಗಣೆ ತಡೆಯುವ ನಿಟ್ಟಿನಲ್ಲಿ ಚೆಕ್ಪೋಸ್ಟ್ಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದರು.
ಈಗಾಗಲೇ ಖಾಸಗಿಯಾಗಿ ನಡೆಸುತ್ತಿರುವ ಗೋಶಾಲೆಗಳಿಗೆ ಸರ್ಕಾರದಿಂದ ಸಹಾಯಧನ ಕಲ್ಪಿಸಲಾಗುತ್ತಿದೆ. ಸರ್ಕಾರದಿಂದ ಗೋಶಾಲೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೋಹತ್ಯೆ ನಿಷೇಧ ಜಾರಿಯಾದ ನಂತರ ಹಾಸನ ಮತ್ತು ವಿಜಯಪುರದಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರೂಪ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ, ಡಿವೈಎಸ್ಪಿ ದಿನೇಶ್ ಕುಮಾರ್, ನಗರಸಭೆ ಆಯುಕ್ತರಾದ ರಾಮದಾಸ, ತಹಶೀಲ್ದಾರ್ ಮಹೇಶ್, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಇತರರು ಇದ್ದರು.
ಇನ್ನಷ್ಟು ಮಾಹಿತಿ : ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಪಶುಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಅಧಿಕಾರಿಗಳು ಮೊದಲು ಅಧ್ಯಯನ ಮಾಡಬೇಕು. ಕಾಯ್ದೆಯ ಬಗ್ಗೆ ಮಾಹಿತಿ ಇಲ್ಲವಾದರೆ ಸಾರ್ವಜನಿಕರಿಗೆ ಹೇಗೆ ಅರಿವು ಮೂಡಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಗೋವುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದೆ. ಗೋವಿಗೆ ದೇಶದಲ್ಲಿ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಕಾಯ್ದೆಯ ಉಲ್ಲಂಘನೆ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರಿಂದ ದೂರುಗಳು ಬಂದಲ್ಲಿ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು. ದೂರುಗಳಿಗೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಯಾವುದೇ ರೀತಿಯ ಗೋವುಗಳ ಅಕ್ರಮ ಸಾಗಾಟ ಹಾಗೂ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟವಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಇರುವ ಗೋಮಾಳ ಜಾಗವನ್ನು ಗುರುತಿಸಬೇಕು. ಗೋಮಾಳಗಳನ್ನು ಅತಿಕ್ರಮಣ ಮಾಡಿದವರ ವಿರುದ್ದ ಕ್ರಮಕೈಗೊಳ್ಳಬೇಕು. ಒತ್ತುವರಿಯಾದ ಗೋಮಾಳವನ್ನು ತೆರವುಗೊಳಿಸಿ ಅಲ್ಲಿ ಮೇವು ಬೆಳೆಯಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ಹಕ್ಕಿಜ್ವರದ ಪ್ರಕರಣ, ಕಾಲುಬಾಯಿ ರೋಗ ನಿಯಂತ್ರಣ, ಕೃತಕ ಗರ್ಭಧಾರಣೆ, ಲಂಪಿಸ್ಕಿನ್, ಮೇವಿನ ಲಭ್ಯತೆ, ಕಿಸಾನ್ ಸಂಪರ್ಕ, ಜಾನುವಾರುಗಳಿಗೆ ಆರೋಗ್ಯ ಶಿಬಿರ ಕುರಿತು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆಯ ಮಾಹಿತಿ ಪಡೆದು ಮಾತನಾಡಿದ ಸಚಿವರು ಅಧಿಕಾರಿಗಳು ರೈತರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಬೇಕು. ಔಷಧಗಳನ್ನು ಉಚಿತವಾಗಿ ಪೂರೈಕೆ ಮಾಡಬೆಕು. ಔಷಧಗಳನ್ನು ಹೊರಗಡೆಯಿಂದ ತೆಗೆದುಕೊಂಡು ಬರುವಂತೆ ತಿಳಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸದ್ಯದಲ್ಲೇ ಪಶು ಸಂಜೀವಿನಿ ಪಶು ಚಿಕಿತ್ಸಾ ವಾಹನವನ್ನು ಜಿಲ್ಲೆಗೆ ನೀಡಲಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಪಶುಪಾಲನಾ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.