ಹೆಣ್ಣು ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕಬೇಕು. ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಸೀಮಿತವಾಗಿರಬಾರದು ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸ ಅವರು ಹೇಳಿದರು.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಶಿಶು ಅಭಿವೃದ್ಧಿ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದ ಬಾಲಕಿಯರ ಬಾಲಮಂದಿರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸ ಅವರು ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯಗಳು ಹೆಚ್ಚಾಗಿರುವಾಗ ಆಕೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದುವರಿಯಬೇಕು ಎಂದರು.
ಮಹಿಳೆಯರು ಯಶಸ್ಸಿನ ಹಾದಿಯಲ್ಲಿ ಸಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗುರಿ ಮುಟ್ಟುವ ತನಕ ಮುಂದುವರಿಯಬೇಕು. ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಾಲಂ ಅವರ ಪುಸ್ತಕ ಓದಬೇಕು. ತಾವು ಓದುವ ಶಾಲೆ ಕಾಲೇಜುಗಳಿಗೆ ಹೆಸರನ್ನು ತಂದು ಜೀವನದಲ್ಲಿ ಸಂತೋಷದಿಂದ ಸಾಧನೆ ಮಾಡಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ನುಡಿದರು.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜು ಅವರು ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕು ನಡೆಸಬೇಕು. ಅಕ್ಷರಸ್ತರಾಗಿ ಉನ್ನತ ಹುದ್ದೆಗಳಿಗೆ ಹೋಗುವಂತೆ ಮಕ್ಕಳನ್ನು ಪ್ರೋತ್ಸಾಹಿಸಿದರು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಲ್ಲಿಕಾರ್ಜುನ ಅವರು ಹೆಣ್ಣು ಸಂಸಾರದ ಕಣ್ಣು, ದೊಡ್ಡ ಸಾಧನೆ ಮಾಡಲು ನಮ್ಮ ಆದರ್ಶ ವ್ಯಕ್ತಿಗಳನ್ನು ಅನುಸರಿಸಬೇಕು, ಒಳ್ಳೆಯ ವಾತಾವರಣ ಇರುವಾಗ ಒಳ್ಳೆಯ ಶಿಕ್ಷಣ ಪಡೆಯಬಹುದು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ದಿವಾಕರ್ ಬಿ.ಎಂ. ಅವರು ಮಾತನಾಡಿ ಉನ್ನತವಾದ ಧ್ಯೇಯ ಉದ್ದೇಶ ಇಟ್ಟುಕೊಂಡಾಗ ಮುಂದಿನ ಬೆಳವಣೆಗೆ ಒಳ್ಳೆಯದಾಗಿರುತ್ತದೆ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ತಮ್ಮ ಅನಿಸಿಕೆ ಬರೆಯುವ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ನಂತರ ಜಾಥ ಕಾರ್ಯಕ್ರಮ ಮಾಡಲಾಯಿತು.
ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಅರುಂಧತಿ ಟಿ.ಎಸ್, ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ವನಿತ ಕೆ.ಬಿ ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮಲ್ಲಿಕಾರ್ಜುನ, ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿ ದಿವಾಕರ್ ಅವರು ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿ ಕೇಶಿನಿ ಎಸ್. ಆರ್ ಸ್ವಾಗತಿಸಿ/ವಂದಿಸಿದರು.