ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಂತ ಹಂತವಾಗಿ ಮೈಕ್ರೋ ಎಟಿಎಂಗಳನ್ನು ವಿತರಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಕೃಷಿಕರು ಉಪಯೋಗಿಸಿಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ(ಡಿಸಿಸಿ) ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ.
ನಗರದ ಡಿಸಿಸಿ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮೈಕ್ರೋ ಎಟಿಎಂ ವಿತರಿಸಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಸಹಕಾರ ಬ್ಯಾಂಕುಗಳಲ್ಲೂ ಹಲವು ಡಿಜಿಟಲೀಕರಣ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಆ ದಿಸೆಯಲ್ಲಿ ಪ್ರಥಮ ಹಂತದಲ್ಲಿ ಜಿಲ್ಲೆಯ 21 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂಗಳನ್ನು ವಿತರಿಸಲಾಗುತ್ತಿದ್ದು, ಈ ಪ್ರಯೋಜನವನ್ನು ಕೃಷಿಕರು ಉಪಯೋಗಿಸಿಕೊಳ್ಳುವಂತಾಗಬೇಕು ಎಂದು ಬಾಂಡ್ ಗಣಪತಿ ಅವರು ನುಡಿದರು.
‘ಬ್ಯಾಂಕಿನ ಹಾಗೂ ಸಹಕಾರ ಸಂಘಗಳ ಗ್ರಾಹಕರ ಅನುಕೂಲಕ್ಕಾಗಿ ಮೈಕ್ರೋ ಎಟಿಎಂ ಅಳವಡಿಕೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 21 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಎಟಿಎಂ ಅಳವಡಿಸಲಾಗುತ್ತಿದೆ. ಮೈಕ್ರೋ ಎಟಿಎಂ ಅಳವಡಿಕೆಯ ಯೋಜನೆಯನ್ನು ನಬಾರ್ಡ್‍ನ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳ ಬೇಡಿಕೆಯ ಅನುಸಾರ ಎಟಿಎಂಗಳ ಅಳವಡಿಕೆ, ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಮೈಕ್ರೋ ಎಟಿಎಂ ಅಳವಡಿಕೆ ಮಾಡಲಾಗುತ್ತದೆ ಎಂದರು’.
ಡಿಸಿಸಿ ಬ್ಯಾಂಕ್‍ಗೆ ದೂರದ ಕೃಷಿಕರು ಬರುವುದು ಕಷ್ಟಸಾಧ್ಯವಾಗಿರುವುದರಿಂದ ಹತ್ತಿರದ ಆಯಾಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೇ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಮೈಕ್ರೋ ಎಟಿಎಂ ಸಹಕಾರಿಯಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಿಳಿಸಿದರು.
ಜಿಲ್ಲೆಯಲ್ಲಿ 73 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಈ ಸಹಕಾರ ಸಂಘಗಳಲ್ಲಿ ರೈತರು ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗಲಿದೆ. ಸಾಲ ಪಡೆಯುವುದು, ಉಳಿತಾಯ ಖಾತೆ, ಸಾಲ ಬಿಡುಗಡೆ ಹೀಗೆ ಹಲವು ರೀತಿಯ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಹಣ ಪಡೆಯುವುದರ ಜೊತೆಗೆ ಹಣ ಜಮೆ ಮಾಡುವುದಕ್ಕೆ ಮೈಕ್ರೋ ಎಟಿಎಂ ಸಹಕಾರಿಯಾಗಲಿದೆ. ಜೊತೆಗೆ ರೂಪೇ ಕಾರ್ಡ್ ಮೂಲಕ ಆರ್ಥಿಕ ಚಟುವಟಿಕೆ ನಡೆಸಬಹುದಾಗಿದೆ ಎಂದು ಅವರು ನುಡಿದರು.
ಶೇ.90 ರಷ್ಟು ಹಣವನ್ನು ನಬಾರ್ಡ್ ವತಿಯಿಂದ, ಶೇ.10 ರಷ್ಟು ಹಣವನ್ನು ಡಿಸಿಸಿ ಬ್ಯಾಂಕ್ ಮೂಲಕ ಒದಗಿಸಲಾಗುತ್ತಿದ್ದು, ಸಂಘಗಳಿಗೆ ಯಾವುದೇ ರೀತಿಯ ಹೊರೆಯಾಗದಂತೆ ಗಮನಹರಿಸಲಾಗಿದೆ ಎಂದು ಬಾಂಡ್ ಗಣಪತಿ ಅವರು ನುಡಿದರು.
‘ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮೊಬೈಲ್ ವಾಹನ ಮೂಲಕ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಚಿಂತನೆ ಇದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಬಾಂಡ್ ಗಣಪತಿ ಅವರು ತಿಳಿಸಿದರು’.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕರಿಕೆ, ಮರಗೋಡು, ಮದೆ, ಸಂಪಾಜೆಯ ಪಯಸ್ವಿನಿ. ವಿರಾಜಪೇಟೆ ತಾಲ್ಲೂಕಿನ ಹಾತೂರು, ಹುದಿಕೇರಿ, ರುದ್ರಗುಪ್ಪೆ, ತಿತಿಮತಿ, ಶ್ರೀಮಂಗಲ, ಕಾನೂರು, ದೇವಣಗೇರಿ, ಬಿರುನಾಣಿ, ಬೈರಂಬಾಡ, ಮಾಯಾಮುಡಿ. ಸೋಮವಾರಪೇಟೆ ತಾಲ್ಲೂಕಿನ ರಾಮೇಶ್ವರ ಕೂಡುಮಂಗಳೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ಹಂಡ್ಲಿ, ಆಲೂರು ಸಿದ್ದಾಪುರ ಮತ್ತು ತೊರೆನೂರು ಇಲ್ಲಿ ಮೈಕ್ರೋ ಎಟಿಎಂ ಅಳವಡಿಸಲಾಗುತ್ತಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಂ ಅವರು ಮಾತನಾಡಿ ಸಹಕಾರ ಬ್ಯಾಂಕ್‍ಗಳ ಸೌಲಭ್ಯಗಳನ್ನು ಎಲ್ಲಾ ಕೃಷಿಕರಿಗೂ ತಲುಪಿಸುವ ದಿಸೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯಲ್ಲಿಯೇ ಸಹಕಾರ ಸಂಘದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೂಪೇ ಕಾರ್ಡುಗಳನ್ನು ಎಲ್ಲಾ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತ ಅವರು ಮೈಕ್ರೋ ಎಟಿಎಂ ಪಡೆದು ಮಾತನಾಡಿ ಮೈಕ್ರೋ ಎಟಿಎಂ. ಸೌಲಭ್ಯ ಕಲ್ಪಿಸುವುದರಿಂದ ಗ್ರಾಮೀಣ ಪ್ರದೇಶದ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ಡಿಸಿಸಿ ಬ್ಯಾಂಕಿನ ಪ್ರದಾನ ವ್ಯವಸ್ಥಾಪಕರಾದ ಕೆ.ಕೆ.ಪೂವಯ್ಯ, ಸಂಪಾಜೆ ಸಹಕಾರ ಸಂಘದ ಸಿಇಒ ಆನಂದ್, ಬ್ಯಾಂಕಿನ ಅಧಿಕಾರಿಗಳು ಇದ್ದರು.