Ad Code

Responsive Advertisement

ಆಗಮನ ನಿರ್ಗಮನ ದಾಖಲೆ

ಆಗಮನ ನಿರ್ಗಮನ ದಾಖಲೆ

(ಕವನ)ಬಂದಿದ್ದರು ಅವರು

ಅಂದು

ಉಳಿದಿದ್ದಾರೆ ಮನದಲ್ಲಿ

ಹಚ್ಚ ಹಸಿರಾಗಿಯೇ

ದಾಖಲಾಗಿ ಹೋಗಿದೆ

ಆ ದಿನದ ಕ್ಷಣಕ್ಷಣಗಳ

ಸಂಭ್ರಮ ಸಡಗರ


ಬಂದು ಹೋದರು ಇವರೂ

ಇಂದು

ಶಿಷ್ಟಾಚಾರ, ಬಿಗಿ ಬಿಗಿ ಭದ್ರತೆ

ಉಲ್ಲಾಸದಾಯಕ ವಾತಾವರಣದಲ್ಲೂ

ಉಸಿರುಗಟ್ಟಿಸಿದ ಅನುಭವ

ಕರ್ತವ್ಯ ಪಾಲಿಸಿದ

ಆಡಳಿತ ಯಂತ್ರದ ರೋಬೋಟುಗಳು


ಅವರ ಆಗಮನ ನಿರ್ಗಮನ

ಜನ ಮನಗಳು ತಕ್ಕಡಿಯಿಟ್ಟು

ತೂಗಿ ತೂಗಿ ಅಳೆದಿವೆ

ಹೌದು

ಆಗಮನ ನಿರ್ಗಮನಗಳು ದಾಖಲಾದವು


ಆನ್‌ಲೈನ್ ಕ್ಲಾಸ್ ಮುಗಿಸಿ

ಬಿಡುವಾಗಿದ್ದ ಮೊಮ್ಮಕ್ಕಳು

ಅಜ್ಜ ಅಜ್ಜಿಯರೊಂದಿಗೆ ಸೇರಿದ್ದರು

ಗುಡ್ಡದ ಮೇಲಿನ ಕಾಫಿ ತೋಟದಲ್ಲಿ

ಹಸಿರೊಂದಿಗೆ ಪೈಪೋಟಿಸಿ 

                ಕೆಂಪು ಕೆಂಪಾದ

ಹಣ್ಣುಗಳ ಬಿಡಿಸಲು


ಹಾರಾಡುತ್ತಿತ್ತು ಬೆರಳೆಣಿಕೆ

ಉಕ್ಕಿನ ಹಕ್ಕಿಗಳು

ಓ ಓ ಅದೋ ನೋಡು ನೋಡಲ್ಲಿ

ದೊರೆ

ಅಜ್ಜ ಆಗಸ ತೋರಿ ಹೇಳಿದನು


ಬೆಟ್ಟ ಬಳಸಿದ ಕರಿನಾಗರದಲ್ಲಿ

ಇರುವೆ ಸಾಲಿನ ರಥ ಒಂದನ್ನು

ಬೆರಳು ಮಾಡಿತು ಅಜ್ಜಿ

ಮಕ್ಕಳೇ ನೋಡಿ ರಾಷ್ಟ್ರಪತಿ


ಪಿಳಿಪಿಳಿ ಕಣ್ಣು ಮಾಡಿ

ತಲೆಕೆರೆದುಕೊಳ್ಳುತ್ತಾ ಮೊಮ್ಮಕ್ಕಳು

ಅಜ್ಜ ಅಜ್ಜಿ

ನೋಡಿರಲ್ಲಿ ಆ ಬೆಟ್ಟದಲ್ಲಿ

ಕಾಣಿಸುತ್ತಿದೆ

ಸಾಲುಗಟ್ಟಿದ ಇರುವೆ ಸಾಲುಗಳು


ಲೇಖಕರು:    ಅಲ್ಲಾರಂಡ ವಿಠಲ ನಂಜಪ್ಪ

ಅಲ್ಲಾರಂಡ ರಂಗ ಚಾವಡಿ