ಸೋಮವಾರಪೇಟೆ ತಾಲ್ಲೂಕಿನ ಹಟ್ಟಿಹೊಳೆ ಬಳಿಯ ಹಾಡಗೇರಿ ಗ್ರಾಮದಲ್ಲಿ ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ಮಹಾದೇವರ ಕ್ಷೇತ್ರದಲ್ಲಿ ಮಹಾದೇವರ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವವು ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಾಲಯ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರು ಮತ್ತು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.
ಸ್ವಸ್ತಿ ಶ್ರೀ ಶಾರ್ವರಿ ನಾಮ ಸಂವತ್ಸರ ಕುಂಭ ಮಾಸ ಸಲ್ಲುವ ಕಾಲ ಮಾಘ ಮಾಸ, ಶುಕ್ಲಪಕ್ಷ, ಅಷ್ಠಮಿಯ ದಿನದಿಂದ ಮೂರು ದಿನಗಳ ಕಾಲ ಹಾಡಗೇರಿ ಗ್ರಾಮದ ಸಪರಿವಾರ ಮಹಾದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವೇದ ಬ್ರಹ್ಮ ನಗರದ ವಿಜಯ ವಿನಾಯಾಯಕ ದೇವಾಲಯದ ಕೆ.ಕೃಷ್ಣ ಉಪಾಧ್ಯ ವೇದ ಬ್ರಹ್ಮ ಶ್ರೀ ಶ್ರೀನಿವಾಸ, ಉಡುಪಿ, ತಂತ್ರಿಗಳ ಪುರೋಹಿತ್ಯದಲ್ಲಿ ಜರುಗಿತು. ಗ್ರಾಮಸ್ಥರು ಹಾಗೂ ಹಲವು ಕಡೆಗಳಿಂದ ಕುಟುಂಬ ಸಮೇತರಾಗಿ ಆಗಮಿಸಿದ್ದ ಭಕ್ತರು ಶ್ರೀದೇವರ ಕೃಪೆಗೆ ಪಾತ್ರರಾದರು.
ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಹಾಗೂ ವಿರಾಜಪೇಟೆ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಬಸವ ಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವ ಲಿಂಗ ಸ್ವಾಮೀಜಿ, ಕೊಡ್ಲಿಪೇಟೆಯ ಕಲ್ಲುಮಠದ ಮಹಂತ ಸ್ವಾಮೀಜಿ, ಮುದ್ದಿನಕಟ್ಟೆ ಪೀಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿಯ ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ ಸ್ವಾಮೀಜಿ, ಚಿಲುಮೆ ಮಠದ ಜಯಾನಂದ ಸ್ವಾಮೀಜಿ, ಶನಿವಾರಸಂತೆಯ ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಅವರು ಮಹಾದೇವರ ಪುನರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರು ಹಾಗೂ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಪ್ರತಿಯೊಂದು ಗ್ರಾಮದಲ್ಲಿ ಒಂದು ದೇವಾಲಯ ಮತ್ತು ಒಂದು ಶಾಲೆ ಕಡ್ಡಾಯವಾಗಿ ಇರಬೇಕು ಎಂದು ಪ್ರತಿಪಾದಿಸಿದರು.
ದೇವಾಲಯವಿದ್ದಲ್ಲಿ ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಬದುಕು ಕಾಣಲು ಸಾಧ್ಯ. ಅದೇ ರೀತಿ ಶಾಲೆಯಿದ್ದಲ್ಲಿ ಶಿಕ್ಷಣ ಕಲಿತು ಜ್ಞಾನಾರ್ಜನೆ ಬೆಳೆಸಿಕೊಂಡು ಬದುಕು ಕಟ್ಟಿಕೊಳ್ಳಬಹುದು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ನುಡಿದರು.
ದೇವಾಲಯ ಪುನರ್ ಪ್ರತಿಷ್ಠಾಪನೆಯನ್ನು ಗ್ರಾಮಸ್ಥರು ಹಾಗೂ ಹಲವು ಜನರ ಸಹಕಾರದಿಂದ ಮಾಡಲಾಗಿದೆ. ದೇವರನ್ನು ನಂಬಿದಲ್ಲಿ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಅವರು ಹೇಳಿದರು.
ಸಮಾಜ ನಿಂತಿರುವುದೇ ನಂಬಿಕೆ ಮೇಲೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಗಬೇಕು ಎಂದು ಅವರು ಸಲಹೆ ಮಾಡಿದರು. ಕೊರೊನಾ ಎರಡನೇ ಅಲೆ ತಲುಪಿತ್ತಿದೆ. ಇದು ದೇಶದಿಂದ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ 1200 ವರ್ಷಗಳಿಗೂ ಹೆಚ್ಚು ಹಳೆಯದಾದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದ್ದು, ಮೆಚ್ಚುವಂತದ್ದು ಎಂದು ಅವರು ತಿಳಿಸಿದರು.
ಬಹಳ ಹಿಂದೆಯೇ ದೇವಾಲಯ ಜೀರ್ಣೋದ್ಧಾರವಾಗಬೇಕಿತ್ತು, ಸದ್ಯ ಈಗಲಾದರೂ ಶಾಸಕರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪನೆ ಆಗಿರುವುದು ಶ್ಲಾಘನೀಯ. ಪ್ರತಿಯೊಬ್ಬರ ಸುಖ ಶಾಂತಿ ನೆಮ್ಮದಿಗೆ ದೇವಾಲಯ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಕಳೆದ 2008 ರಿಂದ 2013 ರವರೆಗಿನ ಅವಧಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಮಹಾದೇವರ ದೇವಾಲಯದಲ್ಲಿ ಪ್ರತಿವರ್ಷಕ್ಕೊಮ್ಮೆ ಹಬ್ಬ ಹರಿದಿನಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಸಲಹೆ ಮಾಡಿದರು.
ಒಂದು ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ಪ್ರತಿಷ್ಠಾಪನೆ ಮಾಡಲಾಗಿದ್ದು, ಪ್ರತಿನಿತ್ಯ ಪೂಜಾ ಕಾರ್ಯಗಳು ನಡೆಯಬೇಕು. ಇದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ನಾಡಿಗೆ ಹೆಸರು ತರುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಒಳ್ಳೆಯ ಬದುಕು ಕಾಣಲು ಶಿಕ್ಷಣದ ಜೊತೆ ಸಂತರು, ಶರಣರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಯಬೇಕು. ಸಮಾಜದ ಪರಿವರ್ತನೆಗೆ ಪ್ರತಿಯೊಬ್ಬರೂ ಬೆಳಕಾಗಬೇಕು. ಅಂತರಂಗದಲ್ಲಿರುವ ಕಲ್ಮಶಗಳನ್ನು ತೊಡೆದು ಹಾಕಲು, ಶ್ರದ್ಧೆ, ಭಕ್ತಿ ಇರಬೇಕು ಎಂದರು.
ಉತ್ತಮ ಬದುಕು ಕಟ್ಟಿಕೊಳ್ಳಲು ಜ್ಞಾನ ಸಂಪಾದನೆ ಮಾಡಬೇಕು. ರಾಷ್ಟ್ರದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಬೇಕು. ಭರತ ಖಂಡದಲ್ಲಿ ಹುಟ್ಟಿರುವುದೇ ಪುಣ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಅವರು ನುಡಿದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಸಹ ಆಂತರಿಕವಾಗಿ ನೆಮ್ಮದಿ ಬದುಕಿಗೆ ದೇವಾಲಯಗಳು ಅತ್ಯವಶ್ಯಕ ಎಂದರು.
ಮುದ್ದಿನಕಟ್ಟೆ ಸ್ವಾಮೀಜಿ ಅವರು ಮಾತನಾಡಿ ಪ್ರತಿಯೊಬ್ಬರೂ ದೇವಾಲಯದಲ್ಲಿ ಪ್ರಾರ್ಥನೆ/ ಬೇಡಿಕೆ ಸಲ್ಲಿಸುತ್ತಾರೆ. ಭಿಕ್ಷುಕ ದೇವಾಲಯದ ಹೊರಗೆ ಬೇಡುತ್ತಾನೆ. ಶ್ರೀಮಂತ ಒಳ ಪ್ರವೇಶಿಸಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಒಟ್ಟಾರೆ ಪ್ರತಿಯೊಬ್ಬರೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ ಎಂದು ನುಡಿದರು.
ಕಲ್ಲುಮಠದ ಸ್ವಾಮೀಜಿ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ಸಂಸ್ಕಾರ ಇರಬೇಕು. ಗುರು ಹಿರಿಯರನ್ನು ಗೌರವಿಸಬೇಕು. ನೆರೆಹೊರೆಯವರನ್ನು ಸಮಾನವಾಗಿ ಕಾಣಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.
ಬಸವ ಪಟ್ಟಣದ ಸ್ವಾಮೀಜಿ ಅವರು ಮಾತನಾಡಿ ಶಾಲೆ ಜ್ಞಾನವನ್ನು ನೀಡಿದರೆ, ದೇವಾಲಯ ಶ್ರದ್ಧೆ ಭಕ್ತಿಯನ್ನು ನೀಡುತ್ತದೆ. ಏಕಾಗ್ರತೆ ಶ್ರದ್ಧೆಯಿಂದ ನಾಡಿಗೆ ಒಳ್ಳೆಯದಾಗಲಿ ಎಂದು ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಗುರುಕುಲಗಳು ಸ್ಥಗಿತಗೊಂಡಿದ್ದು, ಗುರುಕುಲ ಆರಂಭಿಸಬೇಕು ಎಂದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಮಹೇಶ್ ನಿರೂಪಿಸಿದರು. ಎಸ್.ಆರ್.ಸೋಮೇಶ್ ವಂದಿಸಿದರು.