Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಾರತದ ಜಾದುರಂಗದ ಪಿತಾಮಹ ಪಿ.ಸಿ. ಸರ್ಕಾರ್‌

ಫೆಬ್ರವರಿ 23 ರಂದು "ಜಾದುಗಾರರ ದಿನ"ನಿಮಿತ್ತ ಈ ವಿಶೇಷ ಲೇಖನ:


ಭಾರತದ ಜಾದುರಂಗದ ಪಿತಾಮಹ ಮಹಾನ್ ಜಾದೂಗಾರ ಪ್ರೊತುಲ್ ಚಂದ್ರ ಸರ್ಕಾರ್ (ಪಿ.ಸಿ. ಸರ್ಕಾರ್)  ಸೀನಿಯರ್ ಇವರ ಹುಟ್ಟಿದ ದಿನ ಫೆಬ್ರವರಿ 23. ಈ ದಿನವನನ್ನು ಭಾರತದಲ್ಲಿ "ಜಾದುಗಾರರ ದಿನ " ಎಂದು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಕೇವಲ ಬೀದಿ ಬದಿಯ ಆಟವಾಗಿದ್ದ ಜಾದುವನ್ನು ರಂಗಕಲೆಯ ಉತ್ತುಂಗಕ್ಕೆ ಏರಿಸಿದ ಕೀರ್ತಿ ಶ್ರೀ ಪಿ.ಸಿ.ಸರ್ಕಾರ್‌ರಿಗೆ ಸಲ್ಲುತ್ತದೆ. ಫೆಬ್ರವರಿ 23 ಇಂದ್ರಜಾಲ ವಿದ್ಯೆ ಪ್ರದರ್ಶಿಸುವವರಿಗೆ, ಜಾದೂ ಇಷ್ಟಪಡುವವರಿಗೆ ಸ್ಮರಣೀಯ ದಿನ.

1913 ರ ಫೆಬ್ರವರಿ 23 ರಂದು ಬಂಗಾಳದ ಟ್ಯಾಂಗೈಲ್ ಜಿಲ್ಲೆಯ ಆಶೆಕ್ಬುರ್ ಗ್ರಾಮದ ಜಾದುಗಾರರ ವಂಶದಲ್ಲಿ ಜನಿಸಿದ ಸರ್ಕಾರ್, ಪ್ರತಿಭಾವಂತ ವಿದ್ಯಾರ್ಥಿ. ಶಾಲಾ ದಿನಗಳಲ್ಲಿ ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಸರ್ಕಾರ್ ಗಮನ ನಂತರ ಜಾದೂ ಕಡೆಗೆ ವಾಲಿತು. ಶಾಲಾ ದಿನಗಳಲ್ಲಿ ಕೆಲವೊಂದು ಚಿಕ್ಕಪುಟ್ಟ ಜಾದೂ ಪ್ರದರ್ಶನ ಮಾಡಿ ಗಮನ ಸೆಳೆಯುತ್ತಿದ್ದ ಅವರು, ಯುವಕನಾದ ಬಳಿಕ ಜಾದೂಗಾರನಾಗಿ ವಿದೇಶಿ ನೆಲದಲ್ಲಿ ಹೆಸರು ಮಾಡಬೇಕು ಎಂಬ ಜಿದ್ದಿಗೆ ಬಿದ್ದಿದ್ದರು.

ಪಿ.ಸಿ. ಸರ್ಕಾರ್‌ರವರು ತಮ್ಮ ಇಡೀ ಜೀವನವನ್ನು ಇಂದ್ರಜಾಲವಿದ್ಯೆಗೆ ಮೀಸಲಿಟ್ಟರು. ತಮ್ಮ ಹೆಚ್ಚಿನ ಜಾದೂ ಪ್ರಯೋಗಗಳು ರಂಗ ಪರಿಕರಗಳೊಂದಿಗೆ ಭ್ರಮಾಲೋಕ ಸೃಷ್ಟಿಸುತ್ತಿದ್ದರು. ಇದರೊಂದಿಗೆ ವಿಜ್ಞಾನ, ಮನೋವಿಜ್ಞಾನ ಮತ್ತು ನಾಟಕವನ್ನು ಬೆಸೆದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅಳಿವಿನ ಅಂಚಿನಲ್ಲಿದ್ದ ಈ ವಿದ್ಯೆಯನ್ನು ಮೇಲ್ತರಲು ಬಹಳ ಕಷ್ಟ ಪಡಬೇಕಾಯಿತು. ಆಗಿನ ಕಾಲದಲ್ಲಿ ಜಾದೂ ಎಂದರೆ ಮಾಟ-ಮಂತ್ರವಿರಬಹುದೆಂದು ಪೋಷಕರ‍್ಯಾರು ಮುಂದೆ ಬರಲಿಲ್ಲ. ಇತರ ರಸ್ತೆ ಬದಿಯ ಜಾದೂಗಾರರು ಬಡತನದಿಂದ ಹಾಗೂ ಸಮಾಜದ ನಿರ್ಲಕ್ಷದಿಂದ ಈ ಕಲೆ ಬೆಳೆಯದಾದಾಗ, ಸರ್ಕಾರ್‌ರವರು ಒಂಟಿಯಾಗಿ ನಿಂತು ಹಗಲು ರಾತ್ರಿ ಕಷ್ಟಪಟ್ಟು ದಂತ ಕಥೆಯೇ ಆದರು.

ಪಾತಾಳದಲ್ಲಿದ್ದ ಈ ಜಾದೂ ವಿದ್ಯೆಯನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ದು ಪ್ರಸಿದ್ಧ ಕಲೆಗಳಾದ ಸಂಗೀತ, ನಾಟಕ, ನಾಟ್ಯ ಮತ್ತು ಚಿತ್ರಕಲೆಯ ಸಾಲಿಗೆ ತಂದ ಕೀರ್ತಿ ಇವರದು. ತಮ್ಮ ಅಂತರಾಳದ ಜ್ಞಾನದಿಂದ ಜಾದೂ ವಿದ್ಯೆಯನ್ನು, ವೈಜ್ಞಾನಿಕ ದೃಷ್ಟಿಕೋನದಿಂದ ಅದ್ಭುತ ಪ್ರದರ್ಶನಗಳಿಂದ ಭಾರತದ ಜಾದೂ ಅಮರವಾಯಿತು. ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಿತು.

ಅದು 1950 ರ ದಶಕ. ಪಾಶ್ಚತ್ಯ ಇಂದ್ರಜಾಲ ವಿದ್ಯೆಯ ನಡುವೆ ಭಾರತೀಯ ಜಾದುಗಳು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಜಾದುವನ್ನೇ ಜೀವನ ಎನಿಸಿಕೊಂಡಿದ್ದ ಭಾರತದ ಮಹಾನ್ ಜಾದುಗಾರ ಪಿ.ಸಿ. ಸರ್ಕಾರ್ ವಿದೇಶಿ ನೆಲದ ಪನೋರಮಾದಲ್ಲಿ ಹೇಗಾದರೂ ದಾಖಲೆ ಬರೆಯಬೇಕು ಎಂದು ಕನಸು ಕಾಣುತ್ತಿದ್ದ ದಿನಗಳವು. ಇದಕ್ಕಾಗಿ ರಾತ್ರಿ ಹಗಲು ಪ್ರಯತ್ನ ಪಡುತ್ತಿದ್ದ ಸರ್ಕಾರ್ ಗೆ ಆರಂಭದಲ್ಲಿ ವಿದೇಶದಲ್ಲಿ ಅಂದುಕೊಂಡ ಪ್ರೋತ್ಸಾಹ ಸಿಗಲಿಲ್ಲ. ವಿದೇಶಿಯರ ನಿರೀಕ್ಷಿತ ಜಾದುಗಳ ಎದುರು ಭಾರತೀಯರ ಮಾಂತ್ರಿಕ ವಿದ್ಯೆ ಆ ಜನರಿಗೆ ಹಿಡಿಸುತ್ತಿರಲಿಲ್ಲ. ಹೀಗಾಗಿ ಪಿ.ಸಿ. ಸರ್ಕಾರ್ ಅವರ ಜಾದು ಪ್ರದರ್ಶನಕ್ಕೆ ಜನರು ಅತ್ಯಂತ ಕಡಿಮೆ ಎನ್ನುವಷ್ಟು ಬರುತ್ತಿದ್ದರು. ಹೀಗಾಗಿ ಪಿ.ಸಿ. ಸರ್ಕಾರ್ ವಿನೂತನ ವಿಧಾನಗಳ ಮೂಲಕ ಜನರನ್ನು ಸೆಳೆಯಲು ನಿರಂತರ ಯತ್ನಿಸುತ್ತಲೇ ಇದ್ದರು. ಅಳಿವಿನ ಅಂಚಿನಲ್ಲಿದ್ದ ಈ ವಿದ್ಯೆಯನ್ನು ಮುಖ್ಯವೇದಿಕೆಗೆ ತರಲು ಬಹಳ ಕಷ್ಟಪಡಬೇಕಾಯಿತು. 

1937ರಲ್ಲಿದ್ದ ಬಂಗಾಳದ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ತು ಎಲ್ಲಾ ಮಂತ್ರಿಗಳ ಹಸ್ತಾಕ್ಷರ ಪಡೆದು ಆ ಪತ್ರವನ್ನು ರಾಜಿನಾಮೆ ಪತ್ರವನ್ನಾಗಿಸಿ ಇಡೀ ದೇಶದಲ್ಲಿ ಸಂಚಲನ ತಂದು ಬೆಳಗಾಗುವುದರೊಳಗೆ ಖ್ಯಾತ ನಾಮರಾದವರೇ ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್, ಹಸ್ತಾಕ್ಷರ ಹಾಕಿದವನೆಂದರೆ ಸಚಿವರಾದ ಫಜಲುಲ್ ಹಕ್, ಸುಹ್ರಾವಾರ್ಡಿ, ನಜೀಮುದ್ದೀನ್. ಮಾರನೇ ದಿನ ಮುಖಪುಟದಲ್ಲಿ ಕ್ಯಾಬಿನೇಟ್‌ನಲ್ಲಿ ವಿಚಿತ್ರ ಮಾಡಿ ಸಚಿವರಿಂದ ರಾಜೀನಾಮೆ ಪಡೆದ ಪಿ.ಸಿ. ಸರ್ಕಾರ್ ಎಂದು ಪ್ರಕಟವಾಗಿತ್ತು. (ಸ್ವಾತ್ರಂತ್ರ್ಯ ಪೂರ್ವದಲ್ಲಿ ಅಂದಿನ ರಾಜ್ಯ ಮುಖ್ಯಮಂತ್ರಿಗಳಿಗೆ ಪ್ರಧಾನ ಎಂದೇ ಸಂಭೋದಿಸಲ್ಪಡುತ್ತಿತ್ತು).

ಮತ್ತೊಂದು ಭಯಾನಕ ಜಾದೂವೆಂದರೆ ಚೈನಾದೇಶದಲ್ಲಿ ಸರ್ಕಾರ್‌ರವರಿಗೆ ಕೈಕೋಳ ಹಾಕಿ ರೈಲ್ವೆ ಹಳಿಗಳ ಮೇಲೆ ಕಟ್ಟಿಹಾಕಲಾಗಿತ್ತು. ಅದೇ ಮಾರ್ಗವಾಗಿ ಕೆಲ ನಿಮಿಷಗಳಲ್ಲಿ ಎಕ್ಸ್‌ಪ್ರೆಸ್ ರೈಲು ಬಂಡಿ ಹಾದು ಹೋಗುವುದಿತ್ತು. ತನ್ನ ಕೈಕೋಳ ಹಾಗೂ ಹಗ್ಗದ ಬಂಧನದಿಂದ ತಪ್ಪಿಸಿಕೊಂಡು ಹಳಿದಾಟಿದ ಕೆಲವೇ ಕ್ಷಣದಲ್ಲಿ ಭಯಂಕರ ಶಬ್ದಮಾಡುತ್ತಾ ರೈಲು ಬಂಡಿ ಹಾದು ಹೋಯಿತು! ಬ್ರಿಟಿಷ್ ಮಾಧ್ಯಮಗಳು ಅಂದೆ ಜಾದೂಗಾರ ಹೌದಿನಿ ನಂತರದ ಚತುರ ಜಾದೂಗಾರನೆಂದು ಪಿ.ಸಿ.ಸರ್ಕಾರ್ ರವರನ್ನು ಹೊಗಳಿತು.

1955 ರ ನವೆಂಬರ್‌ ನಲ್ಲಿ ಪ್ಯಾರಿಸ್‌ ನಲ್ಲಿ ನೀಡಿದ ಇಂದ್ರಜಾಲ ಪ್ರದರ್ಶನ ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಯಿತು. ಜಗತ್ತನ್ನು ಮತ್ತೊಮ್ಮೆ ಕೌತುಕ ಮಯ ಮಾಡಿದರು. ಅದೇನೆಂದರೆ ಪ್ಯಾರಿಸ್ ನಗರದ ಪ್ರಸಿದ್ಧ ಸ್ಥಳವಾದ ಪ್ಯಾಲೇಸ್ ಡೆ ಒಪೇರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದರು. ಆಗ ಲಕ್ಷಾಂತರ ಅಭಿಮಾನಿ ಬಳಗ ಹುಟ್ಟಿಕೊಂಡಿತು.

ಭಾರತದ ಜಾದುವನ್ನು ವಿಶ್ವದ ಎಲ್ಲೆಡೆ ಪ್ರದರ್ಶನ ಮಾಡಿ ನಮ್ಮ ದೇಶಕ್ಕೆ ಅಪಾರ ಕೀರ್ತಿ ಮತ್ತು ಹೇರಳ ವಿದೇಶಿ ವಿನಿಮಯ ತಂದು ಕೊಟ್ಟ, ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್‌ರವರು ಕಲಾ ರಾಯಭಾರಿಯಾಗಿ ನಮ್ಮ ದೇಶದ ಹೆಮ್ಮೆಯಾದರು. 1962ರಲ್ಲಿ ನಮ್ಮ ಭಾರತ ಸರ್ಕಾರ ಪದ್ಮಶ್ರೀ ಬಿರುದು ಕೊಟ್ಟು ಸನ್ಮಾನಿಸಿದರು ಮತ್ತು ಅವರು ನಿಧನರಾದ 8 ವರ್ಷದ ಬಳಿಕ ಅವರು ವಾಸಿಸುತ್ತಿದ್ದ ರಸ್ತೆಗೆ ಇವರ ಹೆಸರನ್ನಿಡಲಾಯಿತು. ಹಾಗೂ ಫೆಬ್ರವರಿ 2010ರಂದು ಇವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಭಾರತ ಸರ್ಕಾರದ ಅಂಚೆ ಇಲಾಖೆ ಬಿಡುಗಡೆ ಮಾಡಿತು. ಈ ಗೌರವಾರ್ಥ ಬರಿ ಪಿ.ಸಿ. ಸರ್ಕಾರ್‌ಗೆ ಸಂದ ಗೌರವವಾಗದೆ ಇಡೀ ಭಾರತದ ಎಲ್ಲಾ ಜಾದೂಗಾರರಿಗೂ ಹೆಮ್ಮೆಯ ವಿಷಯವಾಗಿದೆ.

ವಿದೇಶಿ ಪ್ರೇಕ್ಷಕ ಬಯಸುವಂತಹ ವೈಶಿಷ್ಯ ಪೂರ್ಣ ಮತ್ತು ಮನರಂಜನಾತ್ಮಕ ಜಾದು ಪ್ರದರ್ಶನ ಗಮನ ಸೆಳೆಯಿತು.ಸರ್ಕಾರ್ ಅವರ ಜಾದೂಗೆ ತಿರುವು ಸಿಕ್ಕಿದ್ದೇ ಪನೋರಮಾ ಕಾರ್ಯಕ್ರಮದಲ್ಲಿ. ಯಾರು ಸರ್ಕಾರ್ ಅವರನ್ನು ದೂಷಿಸುತ್ತಿದ್ದರೋ ಅಂತಹ ವಿದೇಶಿಯರೇ ಬರಿಗಾಲಿನಲ್ಲಿ ನಿಂತು ನಮನ ಸಲ್ಲಿಸುವಂತಹ ಕಾರ್ಯಕ್ರಮವನ್ನು ನೀಡಿದರು. ಕೊಂಚ ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರ್, ವೈದ್ಯರ ಸಲಹೆಯನ್ನು ಕಡೆಗಣಿಸಿ 1970 ರ ಡಿಸೆಂಬರ್‌ ನಲ್ಲಿ ಜಪಾನ್‌ ನಲ್ಲಿ ನಾಲ್ಕು ತಿಂಗಳ ಕಾಲ ಕಾರ್ಯಕ್ರಮ ನೀಡುವ ಸಲುವಾಗಿ ಪ್ರಯಾಣ ಬೆಳೆಸಿದರು. 1971 ರ ಜನವರಿ 6 ರಂದು ಹೊಕ್ಕೈಡೋ ದ್ವೀಪದ ಶಿಬಿಟ್ಸು ನಗರದಲ್ಲಿ ಇಂದ್ರಜಾಲ ಕಾರ್ಯಕ್ರಮವನ್ನು ಪ್ರದರ್ಶಿಸಿ ಹೊರನಡೆದ ಸರ್ಕಾರ್, ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು.


ಲೇಖಕರು: ಅರುಣ್‌ ಕೂರ್ಗ್


Search Coorg Media

Coorg's Largest Online Media Network