Ad Code

Responsive Advertisement

ನಾಯಿ ಜಗತ್ತಿನ ಸಿಂಹ; ರೊಟ್ಟ್ ವೈಲರ್ ಎಂಬ ಪುರಾತನ ನಾಯಿ ತಳಿ


ರೊಟ್ಟ್ ವೈಲರ್ ಅತ್ಯಂತ ಪುರಾತನ ನಾಯಿ ತಳಿ. ರಾಟ್ಟವೈಲೀ ಎಂಬ ಸ್ಥಳ ಇವರ ಮೂಲವಾದ್ದರಿಂದ ಇವರಿಗೆ ರೊಟ್ಟ್ ವೈಲರ್, ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ರೊಮ್ ನ ರಾಜ ಮನೆತನದ ಸಾಕುನಾಯಿಗಳ ಆಗಿದ್ದವು ಇವು. ನಂತರದ ದಿನಗಳಲ್ಲಿ ರೊಮ್ ನ ಸೈನ್ಯದಲ್ಲಿಯೂ ರೊಟ್ಟ್ ವೈಲರ್ ಗಳು ಸೇವೆ ಸಲ್ಲಿಸಿದ್ದಾಗಿ ತಿಳಿದುಬರುತ್ತದೆ. ದನ ಕರುಗಳನ್ನು ಸಾಕುವವರು, ಕುರಿ-ಮೇಕೆ ಸಾಕುವವರು, ತಮ್ಮ ಪ್ರಾಣಿಗಳ ಸಂರಕ್ಷಣೆಗಾಗಿ ಈ ತಳಿಯ ನಾಯಿಗಳನ್ನು ಇಟ್ಟುಕೊಳ್ಳುತ್ತಿದ್ದರು. 

ಕೆಲವು ಕಡೆಗಳಲ್ಲಿ ಸರಕು ಸಾಮಾನುಗಳನ್ನು ಸಾಗಿಸುವ ಗಾಡಿಗಳನ್ನು (ಎತ್ತಿನ ಬಂಡಿ ಯಂತಹ ಚಿಕ್ಕ ಬಂಡಿ) ಎಳೆಯಲು ಉಪಯೋಗಿಸುತ್ತಿದ್ದರು.  ಆ ದಿನಗಳಲ್ಲಿ ವ್ಯಾಪಾರಿಗಳ ಹಣದ ಚೀಲವನ್ನು ಈ ನಾಯಿಗಳ ಕತ್ತಿನಲ್ಲಿ ಕಟ್ಟುತ್ತಿದ್ದರಂತೆ ತನ್ನ ಯಜಮಾನನ ಹೊರತುಪಡಿಸಿ ಬೇರೆ ಯಾರು ಅದನ್ನು ಮುಟ್ಟಲು, ಧೈರ್ಯ ಪಡುತ್ತಿರಲಿಲ್ಲ. 

ಇಂದಿನ ದಿನಗಳಲ್ಲಿ ಅನೇಕ ವಿದೇಶಿ ಪೊಲೀಸ್ ಹಾಗೂ ಸೈನ್ಯಗಳಲ್ಲಿ ಈ ತಳಿಯ ಸೇವೆಯನ್ನು ಕಾಣಬಹುದು. ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ ರಾಟ್ ವೈಲರ್ ಗಳು.

ರೊಟ್ಟ್ ವೈಲರ್ ಗಳು Medium Sized Large Dog ಗುಂಪಿಗೆ ಸೇರುತ್ತವೆ ಪೂರ್ಣ ಬೆಳವಣಿಗೆಯಾದ ಹೆಣ್ಣು 50ರಿಂದ 55 ಮತ್ತು ಗಂಡು 60ರಿಂದ 65 ಕೆಜಿ ಅಥವಾ ಅದಕ್ಕೂ ಮೇಲೆ ತೂಗುತ್ತವೆ. ಈ ತಳಿಯ ನಾಯಿಗಳ ಬಣ್ಣಗಳಲ್ಲಿ ವ್ಯತ್ಯಾಸವಿರುವುದಿಲ್ಲ ಪ್ರತಿ ರಾಟ್ ವೈಲರ್ ಗಳ ಬಣ್ಣ ಬ್ಲಾಕ್ ಅಂಡ್ ಟೇನ್ ಆಗಿರುತ್ತದೆ, ಎದೆಭಾಗ ಮೂಗಿನ ಪಕ್ಕ ಮತ್ತು ಕಣ್ಣುಗಳ ಮೇಲಿನ ಎರಡು ಚುಕ್ಕೆಗಳು ಕಂದು ಬಣ್ಣ ಮತ್ತು ಬಾಕಿ ಪೂರ್ಣ ಕರಿ ಬಣ್ಣ ಹೊಂದಿರುತ್ತವೆ.


ರೊಟ್ಟ್ ವೈಲರ್‌ಗಳು ಅಪಾಯಕಾರಿಗಳೇ?

ಖಂಡಿತ ಅಲ್ಲ. ಈ ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಪ್ರಾಣಿ ಕೆಲವು ಮನುಷ್ಯರು ಮಾತ್ರ. ಬೇರೆಲ್ಲ ಪ್ರಾಣಿಗಳು ಮನುಷ್ಯರಿಂದ ದೂರವಿರಲು ಬಯಸುತ್ತವೆ. ಆದರೆ ನಾಯಿಗಳು ಮಾತ್ರ ತನ್ನ ಯಜಮಾನ ಎಷ್ಟೇ ಕ್ರೂರಿ ಆದರೂ ಆತನ ಸಾಮಿಪ್ಯವನ್ನು  ಬಯಸುತ್ತವೆ. ಆದ್ದರಿಂದ ನಾಯಿಗಳನ್ನು ನಂಬಬಹುದು ಎಂದು ಹೇಳುತ್ತಾರೆ.

ರೊಟ್ಟ್ ವೈಲರ್ ಗಳು ಅತ್ಯಂತ ಶಾಂತ ಮತ್ತು ಗಂಭೀರ ಸ್ವಭಾವದ ನಾಯಿಗಳು ತನ್ನ ಯಜಮಾನ ಮನೆಯವರು ಮತ್ತು ಆತನ ಆಸ್ತಿಯ ಪೂರ್ಣ ರಕ್ಷಣೆ ತನ್ನದೆಂದು ಜೀವಿಸುವ ಜೀವಿಗಳು.

ತನ್ನ ಯಜಮಾನನ ಮನೆಯವರು ಮತ್ತು ಮನೆಯಲ್ಲಿರುವ ಇತರ ಪ್ರಾಣಿಗಳು ಅಂದರೆ ಕೋಳಿ-ಕುರಿ ಹಸು ಇತ್ಯಾದಿಗಳನ್ನು  ಹೊರತುಪಡಿಸಿ ಬೇರೆ ಯಾವುದೇ ಮನುಷ್ಯ ಅಥವಾ ಪ್ರಾಣಿಗಳು ಅವರ ಜಗದೊಳಗೆ ಪ್ರವೇಶಿಸಿದ್ದನ್ನು ಇವರು ಒಪ್ಪಲಾರರು. ಯಜಮಾನನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ನಾಯಿ ತಳಿಗಳಲ್ಲಿ ರೊಟ್ಟ್ ವೈಲರ್ ಗಳು ಕೂಡ ಒಂದು. ಆದ್ದರಿಂದಲೇ ಇವರನ್ನು One Master Dog ಎಂದು ಕರೆಯುತ್ತಾರೆ. 
ಮಕ್ಕಳೊಂದಿಗೆ ಮತ್ತು ಮನೆಯ ಇತರರೊಂದಿಗೆ ಇವರ ಸ್ವಭಾವ:

ಪ್ರತಿಯೊಂದು ನಾಯಿಗಳ ಸ್ವಭಾವಕ್ಕೆ ಅದನ್ನು ಸಾಕುವ ಯಜಮಾನನೇ ನೇರ ಹಾಗೂ ಪೂರ್ಣ ಹೊಣೆಗಾರರಾಗಿರುತ್ತಾರೆ ಆದ್ದರಿಂದಲೇ ಹೇಳುತ್ತಾರೆ There Is No Bad Dog On This Planet Only Bad Owners.

ರೊಟ್ಟ್ ವೈಲರ್ ಗಳು ಅತ್ಯಂತ ಬುದ್ಧಿವಂತ ನಾಯಿ ತಳಿ ಇವುಗಳನ್ನು ಪಳಗಿಸುವುದು ಬಲು ಸುಲಭ ಸದಾ ಇವರ ಬೇಡಿಕೆ ಯಜಮಾನನ ಸಾಮಿಪ್ಯ ಮತ್ತು ಸ್ನೇಹ ಹಾಗೆ ಸ್ವಲ್ಪ ವ್ಯಾಯಾಮ. ಬೇಜವಾಬ್ದಾರಿ ಯಜಮಾನರು ಮತ್ತು ಸಮಯದ ಅಭಾವವಿರುವವರು ರೊಟ್ಟ್ ವೈಲರ್ ಗಳನ್ನು ಸಾಕಲು ಮುಂದಾಗಬಾರದು ಎಂಬುವುದು ನನ್ನ ಅನಿಸಿಕೆ. ಯಜಮಾನ ಮಾತನ್ನು ಅತ್ಯಂತ ವೇಗವಾಗಿ ಅರ್ಥೈಸುವ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಚಾಣಾಕ್ಷತೆಯನ್ನು ಹೊಂದಿವೆ, ಆದರೆ ಯಜಮಾನನಿಗೆ ಪ್ರತಿನಿತ್ಯ ಅವರೊಂದಿಗೆ ಕಾಲಕಳೆಯುವ ಗುಣ ಇರಬೇಕಷ್ಟೇ. 

ನಮ್ಮ ಮನೆಯ ನಾಯಿಗಳು ಕೆಟ್ಟ ವರ್ತನೆ ತೋರುತ್ತಿದ್ದರೆ, ಅದಕ್ಕೆ ನೇರ ಕಾರಣ ನಾವೇ ಆಗಿರುತ್ತೇವೆ. ಆದಕಾರಣ ಇವರ ಸ್ವಭಾವದಲ್ಲಿ ಬೇಕಾಬಿಟ್ಟಿ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಾಗುತ್ತದೆ. ತನ್ನ ಮನೆ ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತವೆ ರೊಟ್ಟ್ ವೈಲರ್,  ಆದರೆ  ಮಕ್ಕಳನ್ನು ಯಾವುದೇ ನಾಯಿಗಳೊಂದಿಗೆ ಆಟವಾಡಲು ಬಿಡುವಾಗ ಸದಾ ಹಿರಿಯರು ಜೊತೆಗಿರಬೇಕು.

ಆಹಾರ ಮತ್ತು ಆಯಸ್ಸು:

ನಾಯಿಗಳು ಮಾಂಸಹಾರಿಗಳು ಆದರೆ ಶತಮಾನಗಳ ಮಾನವ ಸಂಪರ್ಕದಿಂದ ಮನುಷ್ಯ ಸೇವಿಸುವ ಎಲ್ಲಾ ಆಹಾರಗಳನ್ನು ಇವು ಸೇವಿಸುತ್ತವೆ. ರೊಟ್ಟ್ ವೈಲರ್ ಗಳಿಗೆ ಆರರಿಂದ ಎಂಟು ತಿಂಗಳವರೆಗೆ ಮಾತ್ರ ಕಡ್ಡಾಯವಾಗಿ ಮೂರು ಹೊತ್ತಿನ ಆಹಾರವನ್ನು ನೀಡಬೇಕು ನಂತರ ದಿನಕ್ಕೆ ಎರಡು ಬಾರಿ ನೀಡಿದರೆ ಸಾಕಾಗುತ್ತದೆ.

ರೊಟ್ಟ್ ವೈಲರ್ ಗಳು ಅತ್ಯಂತ ವೇಗವಾಗಿ ತಮ್ಮ ದೇಹದ ತೂಕವನ್ನು ಮತ್ತು ಗಾತ್ರವನ್ನು ಹೊಂದುತ್ತವೆ, ಆದ್ದರಿಂದ ಅವರಿಗೆ ಅತಿ ಹೆಚ್ಚಿನ ಆಹಾರ ನೀಡಿ ವಯಸ್ಸಿಗೆ ಮೀರಿದ ಕೊಬ್ಬು ಸಂಗ್ರಹಣೆ ಯಾದರೆ ಹೃದಯಾಘಾತ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಹಸುವಿನ ಹಾಲು ಹೆಚ್ಚಾಗಿ ಕೊಡುವ ಅವಶ್ಯಕತೆ ಇರುವುದಿಲ್ಲ ಕೊಡದಿದ್ದರೂ ತೊಂದರೆಯೇನಿಲ್ಲ. ಮೊಸರು ವಾರಕ್ಕೆ ಎರಡು ಅಥವಾ ಮೂರು ಬಾರಿ ನೀಡಬಹುದು ಮೂಳೆಗಳನ್ನು ಹೆಚ್ಚಾಗಿ ನೀಡಬೇಕು, ಕಾರಣ ನಾಯಿಗಳ ಆಯುಧವೇ ಅವರ ಬಾಯಿ ಆಗಿದೆ, ಮೂಳೆಗಳನ್ನು ಹೆಚ್ಚಾಗಿ ಜಗಿಯುವುದರಿಂದ ಅವರ ಹಲ್ಲು ಮತ್ತು ದವಡೆ ಬಲಿಷ್ಠವಾಗುತ್ತದೆ ಹಾಗೆಯೇ, ಇದು ಅವರಿಗೆ ಇಷ್ಟ ಕೂಡ. 

ರೊಟ್ಟ್ ವೈಲರ್ ಗಳು 10 ರಿಂದ 14 ವರ್ಷ ಜೀವಿಸುತ್ತವೆ ಅದಕ್ಕಿಂತಲೂ ಹೆಚ್ಚು ಜೀವಿಸಿರುವ ಕೆಲವು ಉದಾಹರಣೆಗಳನ್ನು ಕಾಣಬಹುದು ಆದರೆ ಅವೈಜ್ಞಾನಿಕ ತಳಿ ಸಂವರ್ಧನೆ( Improper Breeding) ಮತ್ತು ಪೋಷಣೆ ಇಂದಾಗಿ ಅನೇಕ ರೊಟ್ಟ್ ವೈಲರ್ ಗಳು ಆರರಿಂದ ಏಳು ವರ್ಷದೊಳಗೆ ಮರಣ ಹೊಂದುತ್ತಿರುವುದನ್ನು ಕಾಣಬಹುದು.

ಗಮನಿಸಬೇಕಾದ ಗುಣಗಳು:

ರೊಟ್ಟ್ ವೈಲರ್ ಗಳು ಸುಮಾರು 18 ತಿಂಗಳು ಪ್ರಾಯದವರೆಗೂ ಅಂದರೆ ಒಂದುವರೆ ವರ್ಷ ದವರೆಗೂ ಮಕ್ಕಳ ಆಟಿಕೆ ಬುದ್ಧಿಯನ್ನು ಹೊಂದಿರುತ್ತವೆ ಅಂದರೆ ಸದಾ ಓಡಾಡಿಕೊಂಡು ಚಿಕ್ಕಪುಟ್ಟ ಚೇಷ್ಟೆ ಗಳನ್ನು ಮಾಡುತ್ತಾ, ಸಂತೋಷವಾಗಿ ಕಾಲ ಕಾಯುತ್ತವೆ. ಈ ಸಮಯದೊಳಗೆ ಇವರಿಗೆ ಬೇಕಾದ ತರಬೇತಿಗಳನ್ನು ನೀಡುವುದು ಸೂಕ್ತ.

18 ತಿಂಗಳ ನಂತರ ಇವರು ಪ್ರೌಢಾವಸ್ಥೆಗೆ ಕಾಲಿಡುವ ಸಮಯ, ಈ ಸಮಯದಲ್ಲಿ ಅವರು ತಮ್ಮ ಸ್ವಭಾವದಲ್ಲಿ ಪೂರ್ಣ ಬದಲಾವಣೆಯನ್ನು ಮಾಡಿಕೊಂಡಿರುತ್ತಾರೆ ಆಟ, ಓಟ, ಇತ್ಯಾದಿ ಗಳನ್ನು ಕಡಿಮೆ ಮಾಡಿ ಜವಾಬ್ದಾರಂತೆ ವರ್ತಿಸುತ್ತಾ, ಶಾಂತವಾದ ಹಾಗೂ ಗಂಭೀರವಾದ ಮುಖಭಾವದಿಂದ ಕಾಲಕಳೆಯುತ್ತಾರೆ, ತನ್ನ ಯಜಮಾನನನ್ನು ಕಂಡರೆ ಮಾತ್ರ ಪ್ರಸನ್ನ ಮುಖರಾಗುತ್ತಾರೆ. ಈ ಸಮಯದಲ್ಲಿ ಇವರನ್ನು ಪಳಗಿಸುವುದು ಅಷ್ಟು ಸುಲಭವಾಗಿರುವುದಿಲ್ಲ, ಹಾಗೆಯೇ ಅನುಭವಸ್ಥ ಯಜಮಾನನಿಗೆ ಅದು ಕಷ್ಟಕರವಲ್ಲ.


ಪ್ರೌಢಾವಸ್ಥೆಯ ಗುಣಲಕ್ಷಣಗಳು:

ಈ ಸಮಯದಲ್ಲಿ ಇವರು ಅತ್ಯಂತ ಶಾಂತ ಮತ್ತು ಗಂಭೀರ ಸ್ವಭಾವದಲ್ಲಿ ಇರುತ್ತಾರೆ, ಅಂದರೆ ಅವಶ್ಯಕತೆಗೆ ಮಾತ್ರ ಪ್ಪ್ರತಿಕ್ರಿಯಿಸುವುದು ತನ್ನ ಪರಿಸರವನ್ನು ಸದಾ ನಿರೀಕ್ಷಿಸುತ್ತಿರುವುದು ಇತರ ಜೀವಿಗಳ ಆಗಮನವನ್ನು ತಡೆಯುವುದು. ತನ್ನ ಯಜಮಾನನ ಮನೆ ಮತ್ತು ಆಸ್ತಿಯ ಒಳಗೆ ಬೇರೆ ಯಾವುದೇ ಅಪರಿಚಿತ ಜೀವಿಗಳಿಗೆ ಪ್ರವೇಶ ನಿರಾಕರಿಸುವುದು ಒಂದು ಸಿಂಹದ ಹಾಗೆ ನಿಂತು ಕಾವಲು ಕಾಯುವ ಕೆಲಸವನ್ನು ಮಾಡುತ್ತವೆ.

ರೊಟ್ಟ್ ವೈಲರ್ ಯಾರಿಗೆ ಸೂಕ್ತ:

ಒಂಟಿ ಮನೆಯಲ್ಲಿ ಅಥವಾ ಒಂಟಿಯಾಗಿ ವಾಸ ಮಾಡುತ್ತಿರುವವರು, ಜಾನುವಾರುಗಳನ್ನು ಸಾಕು ಇರುವವರು, ರೈತರು, ಎಸ್ಟೇಟ್ ಮಾಲೀಕರು, ಕಳ್ಳರ ಮತ್ತು ಪುಂಡರ ಹಾವಳಿ ಇರುವಂತಹ ಪ್ರದೇಶದಲ್ಲಿ ವಾಸ ಮಾಡುವವರು, ವ್ಯಾಪಾರಿಗಳು ಹೀಗೆ ಯಾರಿಗೆ ಬೇಕಾದರೂ ಈ ತಳಿಯ ನಾಯಿಗಳನ್ನು ಸಾಕಬಹುದು.


ರೊಟ್ಟ್ ವೈಲರ್ ಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಬೆಲೆ:

ಈ ತಳಿ ನಾಯಿಗಳ ವಿಶಿಷ್ಟ ಗುಣ ಮತ್ತು ಸಾಮರ್ಥ್ಯದಿಂದಾಗಿ ಅನುಭವಸ್ಥರು ಎಷ್ಟೇ ದೂರವಿದ್ದರೂ, ದುಬಾರಿಯಾದರೂ, ಗುಣಮಟ್ಟದ ಮರಿಗಳನ್ನು ಖರೀದಿಸುತ್ತಾರೆ. ನಮ್ಮ ದೇಶದಲ್ಲಿ ಇಂದಿನ ದಿನಗಳಲ್ಲಿ ಈ ತಳಿ ಮರಿಗಳಿಗೆ 15,000 ಇಂದ 50,000 ರವರೆಗೆ ಮಾರಾಟವಾಗುತ್ತದೆ. ಕೆಲವು ಕಡೆಗಳಲ್ಲಿ ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ಮಾರಾಟವಾಗುತ್ತದೆ.


ಮರಿಗಳ ಆಯ್ಕೆ:

ಅವಸರವಸರವಾಗಿ ಮರಿಗಳನ್ನು ಆಯ್ಕೆಮಾಡಿ ಖರೀದಿಸುವುದು ಹೆಡ್ಡತನ ವಾಗುತ್ತದೆ. ನಮ್ಮ ಸುತ್ತಮುತ್ತಲಿನ ನಮಗೆ ತಿಳಿದಿರುವ ಉತ್ತಮ ಗುಣಮಟ್ಟದ ಗಂಡು ಮತ್ತು ಹೆಣ್ಣುನ್ನು ನೋಡಿ ತಿಳಿದು ಅದರ ಮರಿಗಳನ್ನು ಖರೀದಿಸುವುದು ಉತ್ತಮ. ಮರಿಗಳನ್ನು ಖರೀದಿಸುವಾಗ ಮರಿಗಳಿಗೆ ಕನಿಷ್ಠ 50ರಿಂದ 90 ದಿನಗಳ ಪ್ರಾಯ ಇರಬೇಕು. ಆರೋಗ್ಯವಂತವಾಗಿ ಓಡಾಡಿಕೊಂಡಿರುವ ಮರಿಗಳ ಗುಂಪಿನಿಂದ ಮರಿಗಳನ್ನು ಆಯ್ಕೆ ಮಾಡಬೇಕು. ಮರಿಗಳ ತುಟಿ ಕಣ್ಣಿನ ರೆಪ್ಪೆ ಹೊಟ್ಟೆ ಭಾಗದಲ್ಲಿ ಯಾವುದೇ ಗಾಯ ಅಥವಾ ಕಜ್ಜಿಗಳನ್ನು ಪರೀಕ್ಷಿಸಬೇಕು. ಸಾಧ್ಯವಾದಷ್ಟು ಮಧ್ಯವರ್ತಿಗಳಿಂದ ದೂರವಿರಬೇಕು. ಚುಚ್ಚುಮದ್ದು ಮತ್ತು ಅವಶ್ಯ ಔಷಧಗಳ ಬಗ್ಗೆ ತಿಳಿದುಕೊಳ್ಳಬೇಕು.

ಅವೈಜ್ಞಾನಿಕ ತಳಿ ಸಂವರ್ಧನೆಯಿಂದಾಗಿ ಈ ತಳಿಯ ನಾಯಿಗಳು ಆಕಾರ, ಆರೋಗ್ಯ, ಮತ್ತು ಆಯಸ್ಸು, ಬದಲಾಗಿರುವುದನ್ನು ಕಾಣಬಹುದು ಆದ್ದರಿಂದ ನೈಜ ತಳಿಗಳನ್ನು ಆರಿಸುವುದು ಉತ್ತಮವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿವರಗಳನ್ನು ಪಡೆಯಬಹುದು. 'ಈ ಭೂಮಿಯ ಮೇಲೆ ಯಾವುದೇ ತಳಿಯ ನಾಯಿ ಅಥವಾ ಜೀವಿಯು ಕೆಟ್ಟದು ಇರುವುದಿಲ್ಲ, ಕೆಲ ಮನುಷ್ಯರನ್ನು ಹೊರತುಪಡಿಸಿ.'

ಇತರ ತಳಿಯ ನಾಯಿಗಳು ಮತ್ತು ನಮ್ಮ ದೇಶೀ ತಳಿಗಳು ಸೂಕ್ತವಲ್ಲ ಎಂಬ ಅಭಿಪ್ರಾಯ ಈ ಲೇಖನದ್ದಲ್ಲ, ಮುಂದಿನ ಭಾಗದಲ್ಲಿ ಮತ್ತೊಂದು ತಳಿಯ ವಿವರಗಳನ್ನು ವಿವರಿಸಲಾಗುತ್ತದೆ. ನಮಸ್ಕಾರ

ಲೇಖಕರು: 

ಸಚಿನ್ ಕುಂಞ್ಞಪ್ಪ, 

ನಂಜರಾಯಪಟ್ಟಣ, 

ಕೊಡಗು.


Search Coorg Media

Coorg's Largest Online Media Network