ಕುಶಾಲನಗರ ವ್ಯಾಪ್ತಿಯ ಗುಡ್ಡೆಹೊಸೂರು ಪಂಚಾಯಿತಿಗೆ ಒಳಪಟ್ಟ ಬಸವನಹಳ್ಳಿ ಗ್ರಾಮದ ಸರ್ವೇ ನಂಬ್ರ ಎರಡು ಎಂದು ನಮೂದು ಆಗಿರುವ ದೊಡ್ಡಮ್ಮ ದೇವಿಯ ದೇವರಕಾಡು ಒಂದಿದೆ.
ಈ ದೇವರಕಾಡು ಗುಡ್ಡೆಹೊಸೂರು ಸಿದ್ದಾಪುರ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಗೇಟೆಡ್ ಸಮುದಾಯ ಅಂದರೆ (ವಿಲಾಸಿ ಜೀವನ ನಡೆಸಲು ಹಲವು ಮನೆಗಳನ್ನು ನಿರ್ಮಿಸಿ ಅದರ ಉಸ್ತುವಾರಿಯನ್ನು ನಿರ್ಮಿಸಿದವನೇ ನೋಡಿಕೊಳ್ಳುವುದು. )
ಅದರ ಕಾಂಪೌಂಡ್ ಒಳಗಡೆ ಇದ್ದಂತಿದೆ. ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಎಂಬಂತೆ ಒಂದು ಫಲಕವನ್ನು ಹಾಕಿ ಅದರ ಕಂಪೌಂಡಿನ ಮೇಲೆ ನೇತು ಹಾಕಿದ್ದಾರೆ. ಆ ಫಲಕದಲ್ಲಿ ಬಸವನಹಳ್ಳಿ ಗ್ರಾಮದ ಸರ್ವೇ ನಂಬರ್ 10 ರಲ್ಲಿ 2.60 ಎಕರೆ ವಿಸ್ತೀರ್ಣ ಎಂದು ನಮೂದಿಸಲಾಗಿದೆ.ಆದರೆ ಅದರ ಹಿಂದೆ ಸುತ್ತಲೂ ವಿಲಾಸಿ ಮನೆಗಳ ಕಾಂಪೌಂಡ್ ಇದ್ದು ಅದಕ್ಕೊಂದು ಬೃಹತ್ ಕಬ್ಬಿಣದ ಗೇಟನ್ನು ಅಳವಡಿಸಿದ್ದಾರೆ. ಒಳಗಡೆ ಕಬ್ಬಿಣದ ತಂತಿ ಬೇಲಿ ಕಾಣಿಸುತ್ತಿದ್ದು ಈ ಎರಡು ಎಕರೆ ಜಾಗ ಮಾತ್ರ ಕಾಣಿಸುತ್ತಿಲ್ಲ. ಬದಲಿಗೆ ಕಾವೇರಿ ಹೊಳೆಗೆ ಮೇಲಿನ ಗದ್ದೆಯಿಂದ ಹರಿದು ಬರುವ ನೀರಿನ ಸಣ್ಣ ತೋಡು ಅದರ ಒಳಗಿದೆ.
ಇನ್ನಾದರೂ ಇದಕ್ಕೆ ಸಂಬಂಧ ಪಟ್ಟವರು ಈ ಮೇಲಿನ ಫಲಕವನ್ನು ಸರಿಯಾಗಿ ಅಳವಡಿಸಿ,ಸರಕಾರದ ಈ ಜಾಗಕ್ಕೆ ಯಾರಾದರೂ ಅಕ್ರಮವಾಗಿ ಉಸ್ತುವಾರಿಕೆ ಹೊಂದಿದ್ದರೆ ಅದನ್ನು ಈ ಕೂಡಲೇ ತೆರವುಗುಳಿಸಿ ಕೋಟಿಗಟ್ಟಲೆ ಬೆಲೆಬಾಳುವ ಈ ಆಸ್ತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬುದು ಅಲ್ಲಿನ ನಾಗರಿಕರ ಅಭಿಪ್ರಾಯವಾಗಿದೆ.
ಸುದ್ದಿ-ಚಿತ್ರ: ಪುತ್ತರೀರ ಪಪ್ಪು ತಿಮ್ಮಯ್ಯ