Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾದ “ದುಡಿಯೋಣ ಬಾ” ಅಭಿಯಾನ


ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಹಮ್ಮಿಕೊಂಡಿರುವ ‘ದುಡಿಯೋಣ ಬಾ’ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.

2021-22 ನೇ ಆರ್ಥಿಕ ಸಾಲಿಗೆ ದಿನವೊಂದಕ್ಕೆ ಕನಿಷ್ಟ ಕೂಲಿ ದರ ರೂ. 289 ಆಗಿದ್ದು, ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ಮಾಡಿದಲ್ಲಿ ರೂ. 17,340 ಗಳನ್ನು ಗಳಿಸಬಹುದು ಮತ್ತು ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರ ಖರೀದಿ, ಮಕ್ಕಳ ಶಾಲೆ ಮತ್ತು ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ. ಅಲ್ಲದೇ, ವೈಯಕ್ತಿಕ ಮತ್ತು ಸಾಮುದಾಯಿಕ ಕಾಮಗಾರಿಗಳಲ್ಲಿ ಅಕುಶಲ ಕೂಲಿಯ ಜೊತೆಗೆ ಸಾಮಾಗ್ರಿಯೂ ಸಹ ಉಚಿತವಾಗಿ ದೊರೆಯುವ ವಿಶೇಷತೆ ನರೇಗಾ ಯೋಜನೆಯು ಹೊಂದಿದೆ ಎಂದು ತಿಳಿಸಿದ್ದಾರೆ.

ದುಡಿಯೋಣ ಬಾ ಅಭಿಯಾನದಲ್ಲಿ ಮುಖ್ಯವಾಗಿ ದುರ್ಬಲ ವರ್ಗಗಳು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು. ಕೆಲಸ/ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವ ಗುರಿ ಹೊಂದಲಾಗಿದೆ.
ಅಭಿಯಾನದ ಮೊದಲ ವಾರದಲ್ಲಿ ಎಲ್ಲಾ ಗ್ರಾಮಗಳಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು; ಉದ್ಯೋಗ ಚೀಟಿ ಹೊಂದಿಲ್ಲದೇ ಇರುವ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಮತ್ತು ಅಗತ್ಯ ದಾಖಲಾತಿ ಪಡೆದುಕೊಳ್ಳುವುದು; ನೋಂದಾಯಿತ ಕೂಲಿಕಾರರಿಂದ ಒಂದೇ ಬಾರಿ 3 ತಿಂಗಳ ಕೆಲಸದ ಬೇಡಿಕೆ ಪಡೆಯುವುದು; ಗ್ರಾಮ ಪಂಚಾಯಿತಿಗಳಲ್ಲಿ ಬೇಡಿಕೆ ಪೆಟ್ಟಿಗೆ ಇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎರಡನೇ ವಾರದಲ್ಲಿ ಬೇಡಿಕೆ ಸಲ್ಲಿಸಿದ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡುವುದು; ಕಾಮಗಾರಿ ಪ್ರಾರಂಭ ಪೂರ್ವಸಿದ್ಧತೆ ಮಾಡಿಕೊಳ್ಳುವುದು. ಕೂಲಿಕಾರರಿಗೆ ನಮೂನೆ-8ರಲ್ಲಿ ಕೆಲಸಕ್ಕೆ ಹಾಜರಾಗಲು ನೋಟೀಸ್ ಮತ್ತು ನಮೂನೆ -9ರಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸುವುದು ಇತ್ಯಾದಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.

ಮೂರನೇ ವಾರದಿಂದ ನಿರಂತರವಾಗಿ ಪ್ರತೀ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆದು 02 ದಿನಗಳೊಳಗಾಗಿ ಕೆಲಸ ಒದಗಿಸುವುದು; ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸುವುದು ಇತ್ಯಾದಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.

ಬೇಸಿಗೆಯ ದಿನಗಳಲ್ಲಿ ಮಾಡಬಹುದಾದ ಬಚ್ಚಲುಗುಂಡಿ ನಿರ್ಮಾಣ, ಸಮಗ್ರ ಕೆರೆ ಅಭಿವೃದ್ಧಿ, ಕಾಲುವೆಗಳ ಅಭಿವೃದ್ಧಿ, ಬೋರ್ವೆಲ್ ರೀಚಾರ್ಜ್ ಕಾಮಗಾರಿಗಳು, ಕೃಷಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳು, ಬದು ನಿರ್ಮಾಣ ಮತ್ತಿತರ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದರು.
ಅಲ್ಲದೇ, 2020-21ನೇ ಆರ್ಥಿಕ ಸಾಲಿನಲ್ಲಿ 16,295 ಕುಟುಂಬಗಳ 28,943 ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ 7.05 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿರುತ್ತದೆ. ಅಂತೆಯೇ, 7,286 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 1,545 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ರೂ. 32.63 ಕೋಟಿ ಮೊತ್ತವು ವಿನಿಯೋಗವಾಗಿದೆ ಎಂದು ಸಿಇಒ ಅವರು ತಿಳಿಸಿದ್ದಾರೆ.

2021-22ನೇ ಆರ್ಥಿಕ ವರ್ಷದಲ್ಲಿ ಕನಿಷ್ಟ 9 ಲಕ್ಷ ಮಾನವ ದಿನಗಳ ಗುರಿಯನ್ನು ಸಾಧಿಸುವುದರೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 100 ದಿನಗಳ ಅಕುಶಲ ಕೂಲಿ ಕೆಲಸ; ಪ್ರತಿ ದಿನಕ್ಕೆ ರೂ. 289 ಕೂಲಿ ಹಣ; ಸಲಕರಣೆ ವೆಚ್ಚಕ್ಕಾಗಿ ರೂ. 10; ಗಂಡು ಹೆಣ್ಣಿಗೆ ಸಮಾನ ಕೂಲಿ; ದುರ್ಬಲ ವರ್ಗದವರಿಗೆ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅವಕಾಶ; ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಸಾಮಾಗ್ರಿ ಪೂರೈಕೆ; 15 ದಿನಗಳೊಳಗಾಗಿ ಕೂಲಿ ಕೆಲಸ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ; 15 ದಿನಗಳೊಳಗಾಗಿ ಕೂಲಿ ಹಣ ನೀಡದಿದ್ದಲ್ಲಿ ವಿಳಂಬ ಪರಿಹಾರ ಭತ್ಯೆ; ಕಾಮಗಾರಿಯ ಸ್ಥಳವು ವಾಸಸ್ಥಳದಿಂದ 5 ಕಿ.ಮೀ.ಗಿಂತ ಹೆಚ್ಚು ದೂರ ಇದ್ದಲ್ಲಿ ಶೇ. 10ರಷ್ಟು ಪ್ರಯಾಣ ಭತ್ಯೆ; ಅಂಗವಿಕಲರಿಗೆ ಶೇ. 10 ರಷ್ಟು ಪ್ರಯಾಣ ಭತ್ಯೆ; ಅಂಗವಿಕಲರಿಗೆ ಮತ್ತು 60 ವಯೋಮಾನ ಮೀರಿದವರಿಗೆ ಕೆಲಸದ ಪರಿಮಾಣದಲ್ಲಿ ಶೇ. 25 ರಷ್ಟು ರಿಯಾಯಿತಿ ಮತ್ತಿತರ ವಿಶೇಷತೆ ಇರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಗ್ರಾಮೀಣ ಭಾಗದ ಅಭಿವೃದ್ಧಿ ಸಾಧಿಸಬಹುದೆಂದು ಅವರು ತಿಳಿಸಿದ್ದಾರೆ.

Search Coorg Media

Coorg's Largest Online Media Network