Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೇ.8,9ಕ್ಕೆ ಮುಲ್ಲೈರೀರ ಕಪ್ ಕ್ರಿಕೆಟ್. ಕೆದಮುಳ್ಳೂರು ಮುಲ್ಲೈರೀರ ಐನ್ ಮನೆಯಲ್ಲಿ ಲಾಂಛನ ಬಿಡುಗಡೆ


ವಿರಾಜಪೇಟೆ: ಕೊಡಗು ಐರಿ ಜನಾಂಗದ ನಡುವೆ ನಡೆಯುವ 8 ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಕೆದಮುಳ್ಳೂರು ಗ್ರಾಮದ ಮುಲ್ಲೈರೀರ ಕುಟುಂಬಸ್ಥರು ಆತಿಥ್ಯವಹಿಸಿದ್ದು, ಕ್ರೀಡಾಕೂಟದ ಲಾಂಛನ ಬಿಡುಗಡೆ ಸಮಾರಂಭ ಕುಟುಂಬದ ಕೆದಮುಳ್ಳೂರು ಐನ್ ಮನೆಯಲ್ಲಿ ನೆರವೇರಿತು. ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಮುಲ್ಲೈರಿರ ಕಪ್ ಕ್ರಿಕೆಟ್ ಸಮಿತಿಯ ಗೌರವಾಧ್ಯಕ್ಷೆ ಚೋಂದಮ್ಮ, ಅಧ್ಯಕ್ಷ ಗೋಪಾಲ, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಮತ್ತು ಉಪನ್ಯಾಸಕ ಡಾ ಧಿಲನ್ ಮುತ್ತಣ್ಣ ಲಾಂಛನ ಬಿಡುಗಡೆ ಮಾಡಿದರು.

ಲಾಂಛನದ ವಿಶೇಷತೆ: ಮುಲ್ಲೈರೀರ ಕಪ್ ಕ್ರಿಕೆಟ್​ ಪಂದ್ಯಾವಳಿಯ ಲಾಂಛನವನ್ನ ಅಂತಾರಾಷ್ಟ್ರೀಯ  ಚಿತ್ರಕಲಾವಿದ ರೂಪೇಶ್ ನಾಣಯ್ಯ ಆಕರ್ಷಕವಾಗಿ ವಿನ್ಯಾಸಗೊಳಿಸಿದ್ದಾರೆ. ಮುಲ್ಲೈರೀರ ಕುಟುಂಬದ ಐನ್​ ಮನೆಯೊಂದಿಗೆ ಕೊಡಗು ಮೂಲನಿವಾಸಿಗಳ ಸಂಸ್ಕೃತಿ ಮತ್ತು ಕ್ರೀಡಾ ಸ್ಫೂರ್ತಿ ಬಿಂಬಿಸುವ ಅಂಶಗಳನ್ನ ಅಳವಡಿಸಲಾಗಿದೆ. 

ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಲ್ಲೈರೀರ ಕಪ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಶ್ರೀ ಗೋಪಾಲ ಅವರು, ಮಳೆ ಅನಾಹುತ ಮತ್ತು ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಈ ಪಂದ್ಯಾವಳಿ ನಡೆದಿರಲಿಲ್ಲ. ಆದ್ರೆ ಇದೀಗ ಕೊನೆಗೂ ಪಂದ್ಯಾವಳಿ ನಡೆಸಲು ಕಾಲವಕಾಶ ಕೂಡಿ ಬಂದಿದ್ದು, ಏನೇ ಕಷ್ಟನಷ್ಟಗಳಾದರೂ ಕ್ರೀಡಾಕೂಟ ಕೈಬಿಡುವುದಿಲ್ಲ ಎಂದರು. 

ಇದೇ ಸಂದರ್ಭ ಮಾತನಾಡಿದ ಐರಿ ಸಮಾಜದ ಆದ್ಯಕ್ಷ ಮೇಲತಂಡ ರಮೇಶ್, ಜಿಲ್ಲೆಯಲ್ಲಿ ಮೂಲ ನಿವಾಸಿಗಳಾದ ಐರಿ ಜನಾಂಗ ಆರ್ಥಿಕವಾಗಿ, ಸಾಮಾಜಿವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಜನಾಂಗದ ಅಭಿವೃದ್ಧಿಗೆ ಎಲ್ಲರೂ ಸಾಕಷ್ಟು ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಮಾತನಾಡಿದ ಉಪನ್ಯಾಸಕ ಡಾ ಧಿಲನ್, ಕೊಡಗಿನ ಸಂಸ್ಕೃತಿಯಲ್ಲಿ ಐರಿ ಜನಾಂಗದ ಪಾತ್ರ ಬಹಳ ಮುಖ್ಯವಾಗಿದ್ದು, ಆಭರಣಗಳು, ಆಯುಧಗಳು ಮತ್ತು ಐನ್ ಮನೆಗಳು ಐರಿ ಜನಾಂಗದ ಕೊಡುಗೆಯಾಗಿದೆ ಎಂದರು. ಈ ಸಂದರ್ಭ ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಕಲಾವಿದ ಐಮಂಡ ರೂಪೇಶ್ ನಾಣಯ್ಯ, ಕ್ರೀಡಾಕೂಟದ ಯಶಸ್ಸಿಗೆ ಹಲವು ಸಲಹೆ ಸೂಚನೆಗಳನ್ನ ನೀಡಿದರು.

ಲೋಗೋ ಬಿಡುಗಡೆಗೂ ಮುನ್ನ ಐನ್​ಮನೆಯ ನಡುಬಾಡೆಯಲ್ಲಿ ಕುಲದೇವರು ಮತ್ತು ನಾಡಿನ ದೇವಾನುದೇವತೆಗಳನ್ನ ಪೂಜಿಸಿ ಕ್ರೀಡಾಕೂಟವನ್ನು ಯಶಸ್ಸುಗೊಳಿಸಿಕೊಡುವಂತೆ ಬೇಡಲಾಯಿತು. ಮುಲ್ಲೈರಿರ ಕಪ್ ಕ್ರಿಕೆಟ್ ಹಬ್ಬ ಇದೇ ಮೇ ತಿಂಗಳ 8 ಮತ್ತು 9 ರಂದು ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು 20 ತಂಡಗಳು ಆಗಮಿಸುವ ನಿರೀಕ್ಷೆ ಇದ್ದು, ಕ್ರೀಡಾ ಕೂಟದ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಮುಲ್ಲೈರೀರ ಮೋಹನ್ ಗಣಪತಿ ತಿಳಿಸಿದರು. ಶಿಕ್ಷಕಿ ಮುಲ್ಲೈರೀರ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. 


Search Coorg Media

Coorg's Largest Online Media Network