Ad Code

Responsive Advertisement

ಕಾಡೆಂದರೆ.... ಹೀಗೆ ಬರೆಯುತ್ತಾ ಹೋದರೆ ಇದು ಮುಗಿಯದ ವಿವರಣೆ

ಇಂದು (ಮಾರ್ಚ್ 3) ವಿಶ್ವ ವನ್ಯಜೀವಿಗಳ ದಿನ ಆ ಹಿನ್ನೆಲೆಯಲ್ಲಿ ವಿಶೇಷ ಲೇಖನ:


ವನ್ಯ ಜೀವಿ ಎಂದರೆ ಪ್ರಾಣಿ ಜೀವಿ ಮತ್ತು ಸಸ್ಯಜೀವಿ ತನ್ನಷ್ಟಕ್ಕ ತಾನೇ ಆಹಾರವನ್ನು ಸಂಪಾದಿಸಿಕೊಂಡು ನಿಸರ್ಗದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ. 

ಮಾನವನು ಇತಿಹಾಸ ಕಾಲದಿಂದಲೂ ವನ್ಯಜೀವಿಗಳಿಗಿಂತ ಪ್ರತ್ಯೇಕ ನಾಗರೀಕತೆಯನ್ನು ಹೊಂದಿದ್ದಾನೆ, ಅದು ಕಾನೂನು, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯಂತಹ ಹಲವು ವಿಷಯಗಳಲ್ಲಿ. ಈ ವಿಷಯಗಳು ದಾಖಲೆಯಾದ ಇತಿಹಾಸದ ಉದ್ದಕ್ಕೂ ಚರ್ಚೆಗೆ ಕಾರಣಗಳಾಗಿವೆ. ಕೆಲವು ಪ್ರಾಣಿಗಳು ಪವಿತ್ರವೆಂದು ಧರ್ಮಗಳು ಆಗಾಗ ಘೋಷಣೆ ಮಾಡಿವೆ, ಆಧುನಿದ ಕಾಲಕ್ಕೆ ಸಂಬಂಧಿಸಿದಂತೆ ಪ್ರಕೃತಿದತ್ತ ಪರಿಸರವು ವನ್ಯಜೀವಿ ಪರಿಸರವನ್ನು ಶೋಷಣೆ ಮಾಡುವ ಹೋರಾಟದಿಂದ ಪ್ರಭಾವಿತಗೂಂಡಿದ್ದು, ಅದು ಮಾನವನ ಉಪಯೋಗಕ್ಕೆ ಅಥವಾ ಮನರಂಜನೆಯಾಗಿದೆ. ಸಾಹಿತ್ಯವು ಕೂಡಾ ಮಾನವನು ಸಾಂಪ್ರದಾಯಿಕವಾಗಿ ವನ್ಯಜೀವಿಗಳಿಂದ ಪ್ರತ್ಯೇಕ ಎಂಬುದರ ಉಪಯೋಗ ಪಡೆದಿಕೊಂಡಿದೆ.

2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ರ ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ. ಸಿಐಟಿಇಎಸ್‌ (ಕನ್-ವೆನ್ಷನ್ ಆನ್ ಇಂಟರ್-ನ್ಯಾಷನಲ್ ಟ್ರೇಡ್ ಇನ್ ಎನ್-ಡೆಂಜರ್ಡ್ ಸ್ಪಿಷೀಸ್ ಆಫ್ ವೈಲ್ಡ್ ಫಾನಾ ಆಂಡ್ ಫ್ಲೋರಾ) ಒಪ್ಪಂದಕ್ಕೆ 1973 ಮಾರ್ಚ್‌ 3ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್‌ 3ರಂದು ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಸಿಐಟಿಇಎಸ್‌ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವದಾದ್ಯಂತ ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳ ಮೇಲೆ ಹಾನಿ ಆಗದಂತೆ ನಿಗಾವಹಿಸುತ್ತದೆ.

ಪ್ರತಿವರ್ಷ ಒಂದು ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. 2021 ರಲ್ಲಿ ಈ ವರ್ಷದ  ವಿಶ್ವ ವನ್ಯಜೀವಿ ದಿನದ ಧ್ಯೇಯ "ಅರಣ್ಯ ಮತ್ತು ಜೀವನೋಪಾಯಗಳು: ಸುಸ್ಥಿರತೆಯೊಂದಿಗೆ ಜನರು ಮತ್ತು ಜಗತ್ತನ್ನು ಉಳಿಸಿಕೊಳ್ಳುವುದು" ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುವುದು.

ವನ್ಯಜೀವಿಗಳು ಎಂದರೆ ತನ್ನ ಆವಾಸದಲ್ಲಿ ತಾನೇ ತಾನಾಗಿ ವಿಕಾಸಗೊಂಡು ಮಾನವನ ಹಸ್ತಕ್ಷೇಪವಿಲ್ಲದೆ ಜೀವಿಸುವ, ಸಂತಾನೋತ್ಪತ್ತಿ ಮಾಡುವ ಜೀವಿಗಳು. ಅಂದರೆ ಅವುಗಳ ಆಹಾರದಿಂದ ತೊಡಗಿ ಯಾವುದಕ್ಕೂ ಮಾನವನ ಸಹಾಯದ ಅವಶ್ಯಕತೆಯಿರುವುದಿಲ್ಲ. ಇದು ಪ್ರಾಣಿಯಿರಬಹುದು, ಸಸ್ಯವಿರಬಹುದು. ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳೋಣ. ಕಾಡಿನಲ್ಲಿ ವಾಸಿಸುವ ಹುಲಿ ಒಂದು ವನ್ಯಜೀವಿ. ನಾಡಿನಲ್ಲಿನ ಹಸು ವನ್ಯಜೀವಿಯಲ್ಲ. 

ಸಾಕುಪ್ರಾಣಿಗಳೆಂದರೆ ಎಲ್ಲರಿಗೂ ಪ್ರೀತಿಯೇ. ಅದರಲ್ಲೂ ಬೆಕ್ಕೆಂದರೆ ಹೆಚ್ಚು ಮುದ್ದು. ಬೆಕ್ಕಿನ ಜಾತಿಗೇ ಸೇರಿದ, ಬಿಗ್ ಕ್ಯಾಟ್​ಗಳೆಂದು ಕರೆಸಿಕೊಳ್ಳುವ ಹುಲಿ, ಚಿರತೆಗಳೆಂದರೆ?! ಕೈಕಾಲುಗಳು ನಡುಗುತ್ತವೆ. ಆದರೆ, ಮಾನವನ ಸ್ವಾರ್ಥ, ದುರಾಸೆ, ಕ್ರೌರ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ ಮನುಷ್ಯನನ್ನು ನೋಡಿ ಈ ಕ್ರೂರ ಪ್ರಾಣಿಗಳೇ ಹೆದರಬೇಕು! ಸಾಕಿದ ಬೆಕ್ಕು ಕೊಂಚ ಮಂಕಾದರೂ ನಾವು ಆರೈಕೆ ಮಾಡುತ್ತೇವೆ. ಆದರೆ, ಕಾಡಿನಲ್ಲಿ ಸಾವು-ಬದುಕಿನ ನಡುವೆ ನಲುಗುತ್ತಿರುವ ವನ್ಯಮೃಗಗಳ ರಕ್ಷಣೆಗೆ ಯಾರಿದ್ದಾರೆ?

ಕಾಡುಪ್ರಾಣಿಗಳ ಬೇಟೆ ಜತೆಗೆ ಅವುಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿವೆ. ಅರಣ್ಯ ಪ್ರದೇಶದ ಒತ್ತುವರಿ, ಮರಗಳ ಮಾರಣಹೋಮದಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್‌ 3ರಂದು ಆಚರಿಸಲಾಗುತ್ತದೆ.

ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ:

ಸರ್ಕಾರವು ವನ್ಯಜೀವಿಗಳ ಸಂರಕ್ಷಣೆಗೆಂದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಮಾಡಿದೆ. ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಿಗೆ ಇರುವ ವತ್ಯಾಸ ಏನೆಂದರೆ, ಅಭಯಾರಣ್ಯದಲ್ಲಿ ಮನುಷ್ಯರ ಯಾವುದೇ ಚಟುವಟಿಕೆಗೆ ಅನುಮತಿ ಇಲ್ಲ. ಸ್ಥಳೀಯರಿಗೂ ಕೂಡ ಇಲ್ಲಿ ನಿರ್ಬಂಧವಿರುತ್ತದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಸ್ಥಳೀಯರು ತಮ್ಮ ಚಟುವಟಿಕೆ ನಡೆಸಲು ಅನುಮತಿ ಇರುತ್ತದೆ. ಅಂದಹಾಗೆ ಸರಕಾರ ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್ ಹೀಗೆ ಅನೇಕ ಯೋಜನೆಗಳನ್ನು ತಂದಿದೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿವೆ.

ಮೂಲ ವಾಸಸ್ಥಳದ ನಾಶ, ಮಾನವನೊಂದಿಗೆ ಸಂಘರ್ಷ ಮೊದಲಾದ ಕಾರಣಗಳಿಂದ ವನ್ಯಜೀವಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ 100 ವರ್ಷಗಳಲ್ಲಿ ಜಗತ್ತಿನಾದ್ಯಂತ ಹುಲಿಗಳ ಸಂಖ್ಯೆ ಶೇ.95ರಷ್ಟು ಇಳಿಕೆಯಾಗಿದೆ. ಆಫ್ರಿಕಾ ಸಿಂಹಗಳ ಸಂಖ್ಯೆ 20 ವರ್ಷಗಳಲ್ಲಿ ಶೇ.40ರಷ್ಟು ಇಳಿದಿದೆ. ಇದು ಹೀಗೆಯೇ ಮುಂದುವರಿದರೆ, ಗರ್ಜನೆ, ಗಾಂಭೀರ್ಯ, ವೇಗಕ್ಕೆ ಹೆಸರಾಗಿರುವ ಸಿಂಹ, ಹುಲಿ ಚಿರತೆಗಳ ವಂಶವೇ ಪೂರ್ಣ ನಾಶವಾಗಬಹುದು. 

ವರ್ಷಕ್ಕೆ 18 ಮಿಲಿಯನ್‌ ಎಕರೆ ಅರಣ್ಯ ನಾಶವಾಗುತ್ತಿದೆ. ಇದಕ್ಕೆ ಮೂಲ‌ ಕಾರಣ‌ ಮನುಷ್ಯ. ಮನುಷ್ಯ ಕಾಣದ ನಕ್ಷತ್ರದಿಂದ, ಅಥವಾ ಮಂಗಳ ಗ್ರಹದಿಂದ ಬಂದಿಲ್ಲ. ಮನುಷ್ಯ ಸಹ ನೈಸರ್ಗಿಕ ಪ್ರಕ್ರಿಯೆಯಲ್ಲೆ ಹುಟ್ಟಿರುವುದು. ಭೂಮಿ ಪರಿಸರದ ಒಂದು‌ ಭಾಗ ಎಂಬ ಭಾವನೆ ನಮಗೆ ಬರಬೇಕು.

ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ತನ್ನ ಸಂತತಿಯನ್ನು ಗಣನೀಯವಾಗಿ ಏರಿಸಿಕೊಂಡಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 442 ಹುಲಿಗಳು ಪತ್ತೆಯಾಗುವ ಮೂಲಕ ಉತ್ತರಾಖಂಡ್​​​​ ಮೂರನೇ ಸ್ಥಾನ ಪಡೆದುಕೊಂಡಿದೆ. ಇತ್ತೀಚಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ 524 ಹುಲಿಗಳು ಕಂಡು ಬಂದಿದ್ದು, ಮಲೆನಾಡು ವಿಭಾಗದಲ್ಲೇ 371 ಹುಲಿಗಳಿವೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯೂಎಸ್) ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ನಗರೀಕರಣ, ಕಾಡುಗಳ ನಾಶ ಮತ್ತು ಮಾನವನ ಹಸ್ತಕ್ಷೇಪದಿಂದ 2012ರಿಂದ 2019ರವರೆಗೂ ಭಾರತದಲ್ಲಿ 750 ಹುಲಿಗಳು ಸತ್ತಿವೆ. 173 ಹುಲಿಗಳು ಮೃತಪಡುವ ಮೂಲಕ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 125 ವ್ಯಾಘ್ರಗಳು, ಕರ್ನಾಟಕದಲ್ಲಿ 111 ಹುಲಿಗಳು ಮೃತಪಟ್ಟಿವೆ ಎಂದು ಆರ್​​ಟಿಐ ಮಾಹಿತಿ ನೀಡಿದೆ. 

ವನ್ಯಜೀವಿ ಸಂರಕ್ಷಣಾ ಕಾಯ್ದೆ:

ವನ್ಯಜೀವಿಗಳ ಸಂರಕ್ಷಣೆಗೆಂದು ಕೇಂದ್ರ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ನು 1972ರಲ್ಲಿ ಜಾರಿ ಮಾಡಿತು. ಅದರಲ್ಲಿ 6 ಶೆಡ್ಯೂಲ್ ಗಳಿವೆ. ಯಾವ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆಯೋ ಅವೆಲ್ಲವನ್ನು ಶೆಡ್ಯೂಲ್ 1ರಲ್ಲಿ ತರಲಾಯಿತು. ಹುಲಿ, ಸಿಂಹ, ಘೇಂಡಾಮೃಗ, ಹುಲ್ಲೇಕರ ಇವೆಲ್ಲ ಶೆಡ್ಯೂಲ್ 1ರ ಅಡಿ ಬರುತ್ತದೆ. ಇವುಗಳನ್ನು ಕೊಂದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿರುತ್ತದೆ. ಅಂದಹಾಗೆ ಹುಲ್ಲೇಕರವನ್ನು ಕೊಂದರೆ ಹುಲಿ ಕೊಂದಷ್ಟೇ ಗಂಭೀರವಾದ ಅಪರಾಧ. (ಹುಲ್ಲೇಕರ ಎಂದರೆ ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿ/ಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ.)

ಕಾಡೆಂದರೆ ಕುತೂಹಲ. ಕಾಡೆಂದರೆ ಪ್ರಾಣಿ ಸಂಕುಲ. ಕಾಡೆಂದರೆ ಶುದ್ಧ ಆಮ್ಲಜನಕ ಹೊತ್ತುನಿಂತಿರುವ ಮರಗಳ ಸಾಲು. ಕಾಡೆಂದರೆ.... ಹೀಗೆ ಬರೆಯುತ್ತಾ ಹೋದರೆ ಇದು ಮುಗಿಯದ ವಿವರಣೆ ಆಗುತ್ತದೆ.

ಕೊನೆಯದಾಗಿ:

ಕಾಡುಪ್ರಾಣಿಗಳೇಕೆ ನಾಡಿಗೆ ಬರುತ್ತಿವೆ? ಅವನ್ನು ಕಾಡಿನಲ್ಲೇ ಉಳಿಸುವ ಉಪಾಯ ಯಾವುದು? ಈ ಎರಡೂ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿದಾಗ ಮಾನವ - ಕಾಡುಪ್ರಾಣಿ ಸಂಘರ್ಷದ ಹಲವು ಆಯಾಮಗಳು ಅನಾವರಣಗೊಂಡವು. ಪ್ರಾಣಿಗಳ ನೆಲೆ ನಮ್ಮಿಂದ ಹಾಳಾಗಿದೆ. ಬದುಕುವ ಹಕ್ಕು ಸ್ಥಾಪಿಸಲು ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಕಾಡು ಸರಿ ಹೋದರೆ ಮಾತ್ರ ನಾಡಿನಲ್ಲಿ ಮನುಷ್ಯ ನೆಮ್ಮದಿಯಾಗಿ ಇರಬಲ್ಲ ಎಂಬ ಉತ್ತರ ಧ್ವನಿಸಿತು.


ಲೇಖಕರು: ಅರುಣ್‌ ಕೂರ್ಗ್


Search Coorg Media

Coorg's Largest Online Media Network