Ad Code

Responsive Advertisement

“ಶಕ್ತಿ” ಯಾವತ್ತಿಗೂ ಶಕ್ತಿಯಾಗಿ ಪ್ರಜ್ವಲಿಸಲಿ

ಮಾರ್ಚ್‌, 04, ಕೊಡಗಿನ ಪ್ರಪ್ರಥಮ ದಿನಪತ್ರಿಕೆ “ಶಕ್ತಿ”ಯ 65ನೇ ಹುಟ್ಟುಹಬ್ಬದ ನಿಮಿತ್ತ ವಿಶೇಷ ಲೇಖನ:6 ದಶಕಗಳ ಹಿಂದೆ ಹಲವು ಏಳು-ಬೀಳುಗಳ ನಡುವೆ ಬಿ.ಎಸ್.ಗೋಪಾಲಕೃಷ್ಣ ಅವರು ಹುಟ್ಟುಹಾಕಿದ “ಶಕ್ತಿ” ಪತ್ರಿಕೆ ಅಂದಿನ ಕಾಲಘಟ್ಟದಲ್ಲಿ ಹಲವು ಸವಾಲುಗಳನ್ನು ಎದುರಿಸಿ ತೃಪ್ತಿಕರ ಬೆಳವಣಿಗೆಯೊಂದಿಗೆ ನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿ ಕೊಂಡಿದೆ. 


ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮಗಳ ಸ್ವರೂಪಗಳು ಬದಲಾಗುತ್ತಿವೆ. ಮಾಧ್ಯಮಗಳ ಚರಿತ್ರೆ ಪ್ರಜ್ಞೆ ಕ್ಷೀಣವಾಗುತ್ತಿದ್ದು, ಸಾಂಪ್ರದಾಯಿಕ ಹಾಗೂ ನವಮಾಧ್ಯಮಗಳ ನಡುವೆ ತೊಳಲಾಟ ಉಂಟಾಗುತ್ತಿದೆ. ಓದುಗರ ಕೊರತೆ ನಡುವೆ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುವ ಇಂದಿನ ಪರಿಸ್ಥಿತಿ. ಮುದ್ರಣ ಮಾಧ್ಯಮ ಕಳೆದ ದಶಕದಿಂದ ಎದುರಿಸುತ್ತಿರುವ ಸವಾಲಿಗೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳು ವಿಪರೀತವಾಗಿ ಬೆಳೆಯುತ್ತಿದ್ದು, ತಂತ್ರಜ್ಞಾನದ ಜಾಲ ಆವರಿಸುತ್ತಿರುವ ಈ ಕಾಲಘಟ್ಟದಲ್ಲಿ, 64 ವರ್ಷಗಳ ಹಿಂದೆ ಅಂದರೆ 1957ರ ಮಾರ್ಚ್‌ 4ರಂದು ಬಿ.ಎಸ್.ಗೋಪಾಲಕೃಷ್ಣ ಅವರು ‌ಕೊಡಗಿನ ಪ್ರಪ್ರಥಮ ದಿನಪತ್ರಿಕೆಯೊಂದಕ್ಕೆ ಹಾಕಿದ ಬುನಾದಿ, ಅವರ ದೂರದೃಷ್ಟಿ “ಶಕ್ತಿ” ಪತ್ರಿಕೆಯನ್ನು ಇಲ್ಲಿಯವರಗೆ ತಂದು ನಿಲ್ಲಿಸಿದೆ.


ಶಕ್ತಿ ದಿನಪತ್ರಿಕೆ ಪ್ರಾರಂಭಿಸುವುದಕ್ಕೂ ಮುನ್ನಾ 1954 ರಲ್ಲಿ ಬಿ.ಎಸ್.ಗೋಪಾಲಕೃಷ್ಣ ಅವರು "ನಂದಾದೀಪಾ" ಎಂಬ ಮಾಸಿಕ ಪತ್ರಿಕೆಯನ್ನು ಹೊರಡಿಸಿದ್ದರು. ಹಣಕಾಸಿನ ತೀವ್ರ ತೊಂದರೆಯ ನಡುವೆಯೂ ಪತ್ರಿಕೆ ನಾಲ್ಕು ವರ್ಷಗಳ  ಕಾಲ ನೆಡೆಯಿತು ಎನ್ನುವುದು ಬಿ.ಎಸ್.ಗೋಪಾಲಕೃಷ್ಣ ಅವರ ಛಲದ ಪ್ರತೀಕ. ಈ ಛಲವೇ ಅವರನ್ನು 1957 ಮಾರ್ಚ್‌ 4ರಂದು ‌ಕೊಡಗಿನ ಪ್ರಪ್ರಥಮ ದಿನಪತ್ರಿಕೆಯನ್ನು ಆರಂಭಿಸಲು ಪ್ರೇರೇಪಿಸಿತು. ಕೊಡಗಿನ ಶಾಂತಳ್ಳಿಯೆಂಬ ಕುಗ್ರಾಮದಿಂದ ಬಂದ ಬಿ.ಎಸ್.‌ ಗೋಪಾಲಕೃಷ್ಣ ಎಂಬ ಸಾಮಾನ್ಯ ವ್ಯಕ್ತಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಪ್ರಸಿದ್ಧರಾದುದು ಸಾಮಾನ್ಯ ಸಂಗತಿಯೇನಲ್ಲ.


ಕೊಡಗಿನ ಧ್ವನಿಯಾಗಿರುವ ಆತ್ಮಸ್ಥೈರ್ಯದ ಮೂಲಕ ಬೆಳೆದು ನಿಂತು ನಿಷ್ಠುರ ವರದಿಗಳ ಮೂಲಕ ಜಿಲ್ಲೆಯ ಮನೆಮನೆ ಮಾತಾಗಿರುವ “ಶಕ್ತಿ” ದಿನಪತ್ರಿಕೆ ಪತ್ರಿಕೋದ್ಯಮದಲ್ಲಿ ತನ್ನದೇ ಆದ  ಛಾಪು ಮೂಡಿಸಿದೆ. ಕೊಡಗು ಜಿಲ್ಲೆಯ ಜನತೆಗೆ ಶಕ್ತಿ ದಿನಪತ್ರಿಕೆ ಬೆಳಗಿನ ಉಪಹಾರದಷ್ಟೇ ಮುಖ್ಯವಾಗಿದ್ದು, ಪತ್ರಿಕೆ ಜನರ ಸಂಪೂರ್ಣ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ಸಾಮರಸ್ಯ ಬೆಳವಣಿಗೆಗೆ ಶಕ್ತಿ ಪೂರಕವಾಗಿ ಕಾರ್ಯನಿರ್ವಹಿಸುವದರೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವ ಮಾಧ್ಯಮವಾಗಿದೆ.

 

ಮಡಿಕೇರಿಯಲ್ಲಿ 1960ರಲ್ಲಿ ಸಂಭವಿಸಿದ ಸಿದ್ದರಾಜು ಕೊಲೆ ಪ್ರಕರಣದ ಸಂದರ್ಭದಲ್ಲಿ ಶಕ್ತಿ ಪತ್ರಿಕೆಯ ಮೂಲಕ ಬಿ.ಎಸ್.‌ ಗೋಪಾಲಕೃಷ್ಣ ಅವರು ಜನಶಕ್ತಿಯನ್ನು ಸಂಘಟಿಸಿ ಪತ್ರಿಕೆ ಹೆಚ್ಚು ಜನಪ್ರಿಯವಾಗುವಂತೆ ಮಾಡಿದರು. ಹಾರಂಗಿ ಅಣೆಕಟ್ಟು, ಕಂಬದಕಡ ಅಣೆಕಟ್ಟು, ಬರಪೊಳೆ ಅಣೆಕಟ್ಟುಗಳ ವಿರುದ್ಧ ಜನರ ಪರವಾಗಿ "ಶಕ್ತಿ" ಧ್ವನಿ ಎತ್ತಿದಾಗ ಸರಕಾರ ಜಾಹೀರಾತುಗಳನ್ನು ನಿಲ್ಲಿಸುವ ಮೂಲಕ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದರೂ, ಗೋಪಾಲಕೃಷ್ಣ ಅವರು ಅದಕ್ಕೆ ಬಗ್ಗಲಿಲ್ಲ. ಸರಕಾರ ಜಾಹೀರಾತು ನೀಡದೆ ಕೈಕೊಟ್ಟಾಗ ಕೊಡಗಿನ ಜನ ಕೈ ಚಾಚಿ "ಶಕ್ತಿ"ಯನ್ನು ಹಿಡಿದುಕೊಂಡು ಮುನ್ನಡೆಸಿದ್ದರು. ಕೊಡಗಿನ ಜನರ "ಶಕ್ತಿ"ಯ ಮೇಲಿನ ಅಭಿಮಾನ ಈ ಪ್ರಕರಣಗಳಿಂದ  ಇನ್ನಷ್ಟು ಹೆಚ್ಚಾಯಿತು.ಸುಮಾರು 64 ವರ್ಷಗಳ ಇತಿಹಾಸ ಹೊಂದಿರುವ ಕೊಡಗಿನ 'ಶಕ್ತಿ' ದಿನ ಪತ್ರಿಕೆಯ ಮಡಿಕೇರಿಯ ಪ್ರಧಾನ ಕಚೇರಿ 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಯ ಆರ್ಭಟಕ್ಕೆ ಪತ್ರಿಕಾ ಕಚೇರಿ ಹಾಗೂ ಮುದ್ರಣ ಯಂತ್ರ ಜಲಾವೃತಗೊಂಡು ಮುದ್ರಣವೇ ಸ್ಥಗಿತಗೊಂಡಿತ್ತು. ಕಚೇರಿಯ ಎದುರು ಭಾಗದ ಗುಡ್ಡ ಕುಸಿದ ಪರಿಣಾಮ ತೋಡಿನ ನೀರು ರಸ್ತೆಗೆ ಹರಿದು ಶಕ್ತಿ ಕಾರ್ಯಾಲಯವನ್ನು ವ್ಯಾಪಿಸಿ, ನೋಡನೋಡುತ್ತಿದ್ದಂತೆ ಕಟ್ಟಡದ ತುಂಬಾ ನೀರು ತುಂಬುತಿತ್ತು. ಸಿಬ್ಬಂದಿಗಳು ಅಪಾಯಕ್ಕೆ ಸಿಲುಕುವ ಹಂತದಲ್ಲಿ ಇರುವಾಗ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣೆ ಮಾಡಿದರು. ಸುಮಾರು ಒಂದು ವಾರ ಕಾಲ ಪತ್ರಿಕೆ ಮುದ್ರಣಗೊಳ್ಳುವುದು ಅಸಾಧ್ಯವಾಯಿತು. ಅದೇ ಮೊದಲ ಬಾರಿಗೆ ಕಳೆದ 60 ವರ್ಷಗಳಲ್ಲಿ ಸುದೀರ್ಘ ದಿನಗಳವರೆಗೆ ಪತ್ರಿಕೆ ಮುದ್ರಣಗೊಳ್ಳದೆ ಇರುವಂತಾಯಿತು.


ತಮ್ಮ ಎಲ್ಲಾ ಮಕ್ಕಳನ್ನು ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸುವಲ್ಲಿ ಬಿ.ಎಸ್.ಗೋಪಾಲಕೃಷ್ಣ ಯಶಸ್ವಿಯಾದರು. ತಂದೆ ನೆಟ್ಟ ಆಲದ ಮರದ ನೆರಳಿನಲ್ಲಿ ಬಾಳದೆ ಪತ್ರಿಕೆಯನ್ನು ಒಂದು ಹೆಮ್ಮರವಾಗಿ ಬೆಳೆಸಿದ ಕೀರ್ತಿ ದಿ|| ಬಿ.ಎಸ್.ಗೋಪಾಲಕೃಷ್ಣರವರ ಮಕ್ಕಳಿಗೆ ಸಲ್ಲುತ್ತದೆ. ದಶಕಗಳ ಹಿಂದೆ ಅವರ ಹಿರಿಯ ಮಗ ಯದುಮಣಿ ಹಾಗೂ ಕಿರಿಯ ಮಗ ಸಂಧ್ಯಾಪ್ರಕಾಶ್‌ರವರ ಅಕಾಲ ಮರಣದಿಂದ. "ಶಕ್ತಿ"ಗೆ ತುಂಬಲಾಗದ ನಷ್ಟವಾಗಿತ್ತು. ಆ ಕಾಲಘಟ್ಟದಲ್ಲಿ ಜಿ. ರಾಜೇಂದ್ರ, ಆನಂತಶಯನ. ಚಿದ್ವಿಲಾಸ್‌ ಎಂಬ ತ್ರಿಮೂರ್ತಿಗಳ ಸಾರಥ್ಯದಲ್ಲಿ ಮತ್ತಷ್ಟು ಪ್ರಭಲವಾಗಿ ನೆಲೆಯೂರಿತು. ಇದೀಗ ಕೊಡಗಿನ ಧ್ವನಿಯಾಗಿರುವ ʼಶಕ್ತಿ" ದಿನಪತ್ರಿಕೆ 64 ವರ್ಷವನ್ನು ಪೂರೈಸಿ 65ನೇ ವರ್ಷದತ್ತ ತನ್ನ ಪಯಣವನ್ನು ಮುಂದುವರಿಸಿದೆ.


ಕೊಡಗಿನ ಪತ್ರಿಕಾರಂಗದ ಪಿತಾಮಹ ಬಿ.ಎಸ್.ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ನೂರಾರು ಪತ್ರಕರ್ತರು ಕಾರ್ಯತತ್ಪರರಾಗಿರುವದನ್ನು ಕಾಣಬಹುದು. ಹಲವಷ್ಟು ಪತ್ರಕರ್ತರನ್ನು, ಸಾಹಿತಿಗಳನ್ನು, ಬರಹಗಾರರನ್ನು, ಹೋರಾಟಗಾರರನ್ನು “ಶಕ್ತಿ” ಹುಟ್ಟು ಹಾಕಿದೆ. ಕೊಡಗಿನ ಯುವ ಪತ್ರಕರ್ತರಿಗೆ ಶಕ್ತಿಯಾಗಿ ಹೋರಾಟಗಾರರ ಶಕ್ತಿಯಾಗಿ, ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಅವಿಭಾಜ್ಯ ಅಂಗವಾಗಿದೆ ಶಕ್ತಿ ದಿನಪತ್ರಿಕೆ. ಪತ್ರಿಕೆಯೊಂದು ಈ ಪರಿ ಜನಸಮೂಹವನ್ನು ಆದರಿಸಿಕೊಳ್ಳುತ್ತದೆ ಎಂಬದಕ್ಕೆ ಶಕ್ತಿ ಪತ್ರಿಕೆಯ 64 ವರ್ಷಗಳ ಸೇವೆಯೇ ಸಾಕ್ಷಿ.


“ಶಕ್ತಿ” ದಿನಪತ್ರಿಕೆ ಒಂದು ದಿನ ಮನೆಗೆ ತಲಪಿಲ್ಲವೆಂದರೆ ನಾವೇನೋ ಕಳೆದುಕೊಂಡಿದ್ದೇವೆ ಅನ್ನಿಸುತ್ತದೆ. ಕೊಡಗು ಎಂದರೆ ಶಕ್ತಿ, ಶಕ್ತಿ ಎಂದರೆ ಕೊಡಗು ಎನ್ನುವಂತೆ ಮನೆ-ಮನೆ, ಮನ-ಮನದ ಮಾತಾಗಿರುವ ಶಕ್ತಿ ಪತ್ರಿಕೆ ಬಗ್ಗೆ ಬರೆಯುವಷ್ಟು ಅಕ್ಷರಗಳನ್ನು ಹುಡುಕುವದು ಕಷ್ಟ.ಶಕ್ತಿ ಯಾವತ್ತಿಗೂ ಶಕ್ತಿಯಾಗಿ ಪ್ರಜ್ವಲಿಸಲಿ. “ಶಕ್ತಿ”ಯ ಪಯಣ ಹೀಗೆ ಮುಂದೆ ಸಾಗುತಲಿರಲಿ.   


“ಶಕ್ತಿ”ಗೆ ಹುಟ್ಟುಹಬ್ಬದ ಶುಭಾಶಯಗಳು.ಲೇಖಕರು: ಅರುಣ್‌ ಕೂರ್ಗ್Search Coorg Media

Coorg's Largest Online Media Network