ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ಏರ್ಪಡಿಸಿರುವ ಅರೆಭಾಷೆ, ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರಕ್ಕೆ ಕೊಡಗು ಗೌಡ ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾದ ತುಂತಜೆ ಗಣೇಶ್ ಅವರು ಗುರುವಾರ ಚಾಲನೆ ನೀಡಿದರು.
ನಗರದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರೆಭಾಷೆ, ಸಂಸ್ಕೃತಿ, ಕಲೆ ವಿಭಿನ್ನವಾಗಿದ್ದು, ಆ ದಿಸೆಯಲ್ಲಿ ಇಲ್ಲಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಭಿಸುವಲ್ಲಿ ಚಿತ್ರಕಲಾ ಶಿಬಿರ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪ್ರಾಕೃತಿಕ, ಪರಿಸರ ಹಾಗೂ ಉಡುಗೆ ತೊಡುಗೆ ಹೀಗೆ ವಿಭಿನ್ನ ಕಲೆಗಳನ್ನು ಪರಿಚಯಿಸುವಲ್ಲಿ ಚಿತ್ರಕಲಾ ಶಿಬಿರ ಅನುಕೂಲವಾಗಲಿದೆ ಎಂದು ತುಂತಜೆ ಗಣೇಶ್ ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಕೊರೊನಾ ವೈರಸ್ ಅಡೆತಡೆಗಳ ನಡುವೆಯು ಅಕಾಡೆಮಿ ವತಿಯಿಂದ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೊಡಗು ಮತ್ತು ದಕ್ಷಿಣ ಕನ್ನಡದ ಸುಳ್ಯ ಭಾಗದ ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆಯನ್ನು ಪರಿಚಯಿಸುವಲ್ಲಿ ಚಿತ್ರಕಲಾ ಶಿಬಿರ ಸಹಕಾರಿಯಾಗಲಿದೆ ಎಂದರು.
ಇಲ್ಲಿನ ಭಾಷೆ, ಪ್ರದೇಶ, ಸಂಸ್ಕೃತಿ ಕಲೆಗಳನ್ನು ದಾಖಲಿಸುವುದು ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದೆ ಎಂದು ಅಧ್ಯಕ್ಷರು ನುಡಿದರು.
ಅರೆಭಾಷಿಕರು ಕೃಷಿ ಚಟುವಟಿಕೆಯನ್ನು ನಂಬಿ ಬದುಕುತ್ತಾರೆ. ಜೊತೆಗೆ ಇಲ್ಲಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಭಿಸುವಲ್ಲಿ ನಾಟಕ, ಸಂಗೀತ, ಸಾಹಿತ್ಯ, ಚಿತ್ರಕಲೆ, ಹೀಗೆ ವಿವಿಧ ವಿಭಿನ್ನ ವಿಶಿಷ್ಟ ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ, ಪುರುಷೋತ್ತಮ ಕಿರ್ಲಾಯ ಇತರರು ಇದ್ದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಧನಂಜಯ ಅಗೋಲಿಕಜೆ ನಿರೂಪಿಸಿದರು. ಕುಸುಮಾದರ ವಂದಿಸಿದರು.
ಚಿತ್ರ ಕಲಾ ಶಿಬಿರದಲ್ಲಿ ಸಯ್ಯದ್ ಆಸಿಫ್ ಅಲಿ(ಮಂಗಳೂರು), ಅಯಿಮಂಡ ರೂಪೇಶ್ ನಾಣಯ್ಯ, ಮೀನಾಕ್ಷಿ ಸದಳಗಿ(ಬೆಳಗಾವಿ), ಅಜೀಶ್(ಮಂಗಳೂರು), ಕಾಶಿನಾಥ್ ವಿ.ಕಾಳೆ(ಸಂಡೂರು), ಸತೀಶ್ ಬಿ.ಆರ್.(ಗೋಣಿಕೊಪ್ಪ), ಪೃಥ್ವಿರಾಜ್(ಮಂಗಳೂರು), ಶಂಕರಪ್ಪ ಕೆ.ಎನ್.(ಹಾಸನ), ಮಂಜುನಾಥ ಕೆ.ಆರ್.(ಮಡಿಕೇರಿ) ಮತ್ತು ಗಂಗಾಧರ ಮೂರ್ತಿ(ಮೈಸೂರು) ಇತರರು ಪಾಲ್ಗೊಂಡಿದ್ದರು.
Search Coorg Media
Coorg's Largest Online Media Network