Header Ads Widget

ಸರ್ಚ್ ಕೂರ್ಗ್ ಮೀಡಿಯ

ಮುಂಗಾರು ಜಾನಪದ ಕಲರವ -2021; ಪುರಾತನ ಪರಿಕರಗಳ ವಿಡಿಯೋ ಪ್ರದರ್ಶನ ಸ್ಪರ್ಧೆ

ಮುಂಗಾರು ಜಾನಪದ ಕಲರವ -2021; ಪುರಾತನ ಪರಿಕರಗಳ ವಿಡಿಯೋ ಪ್ರದರ್ಶನ ಸ್ಪರ್ಧೆ

( ಸಾಂದರ್ಭಿಕ ಚಿತ್ರ )

ಪೊನ್ನಂಪೇಟೆ, ಜೂ.13: ಕೊಡಗು ಜಾನಪದ ಪರಿಷತ್ತಿನ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ 'ಮುಂಗಾರು ಜಾನಪದ ಕಲರವ -2021' ಎಂಬ ಹೆಸರಿನ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರ ಭಾಗವಾಗಿ 'ಮನೆಗಳಲ್ಲಿರುವ ಪುರಾತನ ಪರಿಕರಗಳನ್ನು ಚಿತ್ರೀಕರಿಸಿ ಕಳುಹಿಸುವ ಕೊಡಗು ಜಿಲ್ಲಾ ಮಟ್ಟದ ಪ್ರದರ್ಶನ' ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಘಟಕದ ಅಧ್ಯಕ್ಷರಾದ ಧಿಲನ್ ಚಂಗಪ್ಪ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಪರ್ಧೆಯಲ್ಲಿ ಸಾರ್ವಜನಿಕರೂ ಸೇರಿದಂತೆ  ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳನ್ನು ಹೊರತುಪಡಿಸಿದಂತೆ ಜಿಲ್ಲೆಯಲ್ಲಿರುವ ಜಾನಪದ ಪರಿಷತ್ತಿನ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಮುಕ್ತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರದರ್ಶನ ಸ್ಪರ್ಧೆಯ ಷರತ್ತುಗಳ ಬಗ್ಗೆ ವಿವರಣೆ ನೀಡಿರುವ ಧಿಲನ್ ಚಂಗಪ್ಪ ಅವರು, ವೀಡಿಯೊ ರೂಪದಲ್ಲಿ ಪರಿಕರಗಳನ್ನು ವಿಡಿಯೋ ಚಿತ್ರೀಕರಣಗೊಳಿಸಿ ಸೂಕ್ತ ವಿವರಣೆಯೊಂದಿಗೆ ಪ್ರದರ್ಶಿಸಿ ಕಳಿಸಬೇಕು. ವೀಡಿಯೋದಲ್ಲಿ ಸ್ಪರ್ಧಿಯು ನೀಡುವ ಜಾನಪದೀಯ ವಿಶ್ಲೇಷಣೆಗೆ ಮತ್ತು ಪರಿಕರಗಳ ಸೌಂದರ್ಯಕ್ಕೆ ಪ್ರತ್ಯೇಕ  ಅಂಕಗಳಿರುವುದರಿಂದ ಚಿತ್ರೀಕರಣ ಸಂದರ್ಭದ ನಿರೂಪಣೆಯಲ್ಲಿ ನಿರಂತರತೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.

ವೀಡಿಯೋ ಮತ್ತು ಆಡಿಯೋ ಸ್ಪಷ್ಟವಾಗಿರಬೇಕು. ವಿವರಣೆ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು. ವಿಡಿಯೋ ಚಿತ್ರೀಕರಣದ ಸಮಯದ ಮಿತಿ ಕನಿಷ್ಟ 2 ನಿಮಿಷಗಳು, ಗರಿಷ್ಠ 3 ನಿಮಿಷಗಳು ಮೀರದಂತಿರಬೇಕು. ವೀಡಿಯೋ ನೈಜವಾಗಿರಬೇಕು ಮತ್ತು ಯಾವುದೇ ಎಡಿಟಿಂಗ್ ಗೆ ಒಳಪಟ್ಟಿರಬಾರದು. ಪರಿಕರಗಳು ಹಳೆಯ, ನೈಜ ಮತ್ತು ಸಹಜ ಸ್ಥಿತಿಯಲ್ಲಿರಬೇಕು ಎಂದು ಮಾಹಿತಿ ನೀಡಿದ ಅವರು, ಸ್ಪರ್ಧೆಗೆ ಬರುವ ವೀಡಿಯೋಗಳಲ್ಲಿ ಯಾವುದೇ ಕೃತಕತೆ ಕಂಡುಬಂದರೆ ಅವುಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಪರ್ಧಿಯು ಸ್ವತಃ ವೀಡಿಯೋದಲ್ಲಿರಬೇಕು ಮತ್ತು ವೀಡಿಯೋದಲ್ಲಿ ತಮ್ಮ ಸ್ವಪರಿಚಯವನ್ನು ಮಾಡಿಕೊಂಡಿರಬಾರದು. ಸ್ಪರ್ಧಿಯ ಸ್ವವಿವರವನ್ನು ವೀಡಿಯೋ ಕಳುಹಿಸುವ ವಾಟ್ಸಾಪ್ ಮೊಬೈಲ್ ಸಂಖ್ಯೆಗೆ ಸಂದೇಶದ ರೂಪದಲ್ಲಿ (text message) ಕಳುಹಿಸಿಕೊಡಬೇಕು ಹೇಳಿರುವ ಧಿಲನ್ ಚಂಗಪ್ಪ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಒಬ್ಬರಿಗೆ ಒಂದೇ ಅವಕಾಶವಿದ್ದು, ನಿರ್ದಿಷ್ಟ ಅವಧಿಯ ವೀಡಿಯೋಗಳನ್ನು ಜೂನ್17ರ ಮಧ್ಯರಾತ್ರಿ 12 ಗಂಟೆಯೊಳಗಾಗಿ ವಾಟ್ಸಪ್ ಸಂಖ್ಯೆ 96116 40552 ಕ್ಕೆ ಕಳುಹಿಸಿಕೊಡುವಂತೆ ಕೋರಿದ್ದಾರೆ.

ಸ್ಪರ್ಧೆಗೆ ಮುಂಗಡವಾಗಿ ಯಾವುದೇ ನೋಂದಣಿಯ ಅವಶ್ಯಕತೆ ಇರುವುದಿಲ್ಲ. ಅತ್ಯುತ್ತಮವೆಂದು ಕಂಡುಬರುವ 3 ವಿಡಿಯೋ ಪ್ರದರ್ಶನಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿಸಿದಂತೆ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ನಿರ್ದಿಷ್ಟಾವಧಿಯ ನಂತರದ ಬರುವ ವೀಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಜೂ. 20ರಂದು ಘಟಕದ ವತಿಯಿಂದ 'ಜೂಮ್' ವೇದಿಕೆಯ ಮೂಲಕ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,