ಹಾಡಿಯಿಂದ ಹೊರಬಂದು ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರಿದ ಆದಿವಾಸಿಗಳು
7 ಸಾವಿರ ಆದಿವಾಸಿಗಳಿಗೆ ಲಸಿಕೆ ಹಾಕಿಸುವ ಗುರಿ
ಕೊವೀಡ್ 19 ರ ಮೂರನೇ ಅಲೆ ಬರದಂತೆ ನೋಡಿಕೊಳ್ಳುವಲ್ಲಿ ೧೮ ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬೇಕು. ಆ ದಿಸೆಯಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.
ಜಿಲ್ಲೆಯ ಮಾಲ್ದಾರೆ ಬಳಿಯ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ, ಆದ್ದರಿಂದ ತಪ್ಪು ಕಲ್ಪನೆಯಿಂದ ಆದಿವಾಸಿ ಜನರು ಹೊರಬರಬೇಕು. ಚೆನ್ನಂಗಿ ಬಸವನಹಳ್ಳಿ ವ್ಯಾಪ್ತಿಯಲ್ಲಿ ೨೫೫ ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ, ಆ ದಿಸೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ಎಲ್ಲಾ ಹಾಡಿಗಳಲ್ಲಿ ಕೊರೊನಾ ಮುಕ್ತ ಮಾಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕೋರಿದರು.
ಕೋವಿಡ್ ೧೯ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಕೈತೊಳೆದುಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು. ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಹೀಗೆ ಹಲವು ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ತೆರಳಿ ವೈದ್ಯರನ್ನು ಭೇಟಿ ಮಾಡಬೇಕು ಎಂದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ ಹಿಂದೆ ಆದಿವಾಸಿಗಳು ಸ್ಥಳೀಯವಾಗಿ ದೊರೆಯುವ ಗೆಡ್ಡೆಗೆಣಸು ಉಪಯೋಗಿಸಿ ಗಟ್ಟಿಯಾಗಿದ್ದರೂ, ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ಪಡೆಯಬೇಕು ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಮುಕ್ತವಾಗಬೇಕು. ಚೆನ್ನಂಗಿ ಬಸವನಹಳ್ಳಿ ಭಾಗದಲ್ಲಿನ ಆದಿವಾಸಿ ಜನರಿಗೆ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಲಾಗಿದ್ದು, ಸದ್ಯದಲ್ಲಿಯೇ ಆರ್ ಟಿ ಸಿ ನೀಡಲಾಗುವುದು. ಜೊತೆಗೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಲ್ಲಿ ಶಾಸಕರು ಮುಂದಾಗಿದ್ದಾರೆ ಎಂದರು.
ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಹಾಗೂ ಆದಿವಾಸಿ ಮುಖಂಡರಾದ ಜೆ.ಕೆ.ಅಪ್ಪಾಜಿ ಅವರು ಮಾತನಾಡಿ ಶಾಸಕರಾದ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಎಲ್ಲಾ ಹಾಡಿಯ ಆದಿವಾದಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಎರಡು ತಾಲ್ಲೂಕಿನ ಎಲ್ಲಾ ಹಾಡಿಗಳಿಗೆ ಶಾಸಕರು ಭೇಟಿ ನೀಡಿ ಆದಿವಾಸಿ ಜನರನ್ನು ಮನವೊಲಿಸಿ ಲಸಿಕೆ ಕೊಡಿಸುತ್ತಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಅಪ್ಪಾಜಿ ಅವರು ನುಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಮದ್ಯಪಾನ ಮಾಡುವುದನ್ನು ಬಿಡಬೇಕಾಗುತ್ತದೆ ಎಂಬ ಮನೋಭಾವ ಆದಿವಾಸಿ ಜನರಲ್ಲಿದೆ. ಇದು ಹೋಗಬೇಕು. ಆದಿವಾಸಿ ಜನರ ಜೀವ ಮತ್ತು ಜೀವನ ಅತಿ ಮುಖ್ಯ, ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಕೋರಿದರು.
ಐಟಿಡಿಪಿ ತಾಲ್ಲೂಕು ಅಧಿಕಾರಿ ಗುರುಶಾಂತಪ್ಪ ಅವರು ಮಾಹಿತಿ ನೀಡಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ೭೯ ಹಾಡಿಗಳಿದ್ದು, ೩೮ ಸಾವಿರ ಆದಿವಾಸಿ ಜನರಿದ್ದಾರೆ. ೭ ಸಾವಿರ ಗಿರಿಜನ ಕುಟುಂಬಗಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಈಗಾಗಲೇ ೨೯ ಹಾಡಿಯ ೬೦೦ ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಚೆನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷರಾದ ಗಾಯತ್ರಿ, ಸದಸ್ಯರಾದ ಅರುಣ್ ಕುಮಾರ್, ರತನ್, ವಿಜು, ರಾಜು, ತಹಶಿಲ್ದಾರರಾದ ಯೋಗಾನಂದ, ತಾ.ಪಂ.ಇಒ ಅಪ್ಪಣ್ಣ, ಐಟಿಡಿಪಿ ಇಲಾಖೆ ಜಿಲ್ಲಾ ಅಧಿಕಾರಿ ಶಿವಕುಮಾರ್, ತಾಲ್ಲೂಕು ಆರೋಗ್ಯಧಿಕಾರಿ ಡಾ.ಯತಿರಾಜು, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್, ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್, ವೈದ್ಯಾಧಿಕಾರಿಗಳು, ಆದಿವಾಸಿ ಮುಖಂಡರು ಇದ್ದರು.
ಉತ್ಸಾಹದಿಂದ ಕೋವಿಡ್ ನಿರೋಧಕ ಲಸಿಕೆ ಪಡೆದ ಆದಿವಾಸಿ ಜನರು:
ಶಾಸಕರಾದ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ರಮೇಶ್ ಹೊಳ್ಳ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲೆಯ ಮಾಲ್ದಾರೆ ಮತ್ತು ಚೆನ್ನಯ್ಯನಕೋಟೆ ಗ್ರಾ.ಪಂ.ವ್ಯಾಪ್ತಿಯ ಆದಿವಾಸಿ ಹಾಡಿಗಳಿಗೆ ಭೇಟಿ ನೀಡಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತೆ ಮನವೊಲಿಸಿದರು.
ಇಲ್ಲಿನ ಹಾಡಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಲಸಿಕೆ ಪಡೆದುಕೊಳ್ಳಿ, ಲಸಿಕೆ ಪಡೆಯುವುದರಿಂದ ಕೊರೊನಾ ಬರದಂತೆ ತಡೆಯಬಹುದಾಗಿದೆ ಎಂದು ಶಾಸಕರು ಹೇಳಿದರು.
ಹಾಗೆಯೇ ಗಿರಿಜನರ ಕುಂದುಕೊರತೆ ಬಗ್ಗೆ ಮಾಹಿತಿ ಪಡೆದ ಶಾಸಕರು, ಅರಣ್ಯ ಹಕ್ಕು ಪತ್ರ ನೀಡಲಾಗಿದೆಯೇ, ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆಯೇ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆದಿವಾಸಿ ಜನರು, ಅರಣ್ಯ ಹಕ್ಕುಪತ್ರ ಸಿಕ್ಕಿದ್ದು, ಮನೆ ನಿರ್ಮಿಸಿಕೊಡಬೇಕಿದೆ ಎಂದು ಶಾಸಕರ ಗಮನಕ್ಕೆ ತಂದರು. ಮತ್ತೊಬ್ಬರು ಒಂಟಿ ಜೀವನ, ಬಂಧು ಬಳಗ ಯಾರು ನೋಡುತ್ತಿಲ್ಲ, ಮನೆ ಇಲ್ಲವೆಂದು ಅಳಲು ತೋಡಿಕೊಂಡರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network