ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರೈತ ಸಂಘದಿಂದ ಉಸ್ತವಾರಿ ಸಚಿವರ ಭೇಟಿಯಾಗಿ ಮನವಿ ಸಲ್ಲಿಕೆ
ವಿರಾಜಪೇಟೆ : ಕಳೆದ 3ವರ್ಷಗಳಿಂದ ನಿರಂತರವಾಗಿ ರೈತರು, ಕಾರ್ಮಿಕರು, ಸಾರ್ವಜನಿಕರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದು, ಹಲವಾರು ಸಮಸ್ಯೆಗಳ ನಡುವೆ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಪ್ರವಾಹ, ಪ್ರಕೃತಿ ವಿಕೋಪ,ಬೆಳೆ ನಷ್ಟ , ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಕೋವಿಡ್ ಲಾಕ್ ಡೌನ್ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ಸಮಸ್ಯೆ ಬಗೆಹರಿಸಲಿ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿರಾಜಪೇಟೆಯಲ್ಲಿ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಗಂಭೀರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಡ್ಯಮಾಡ ಮನು ಸೋಮಯ್ಯ, ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರ ಕಾಡಾನೆ, ಹುಲಿ ಹಾವಳಿಯಿಂದ ಬೆಳೆ ನಷ್ಟದೊಂದಿಗೆ ಜಾನುವಾರುಗಳು ಬಲಿಯಾಗುತ್ತಿದ್ದು. ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪರಿಣಾಮ ಸಾವು ನೋವುಗಳು ಸಂಭವಿಸುತ್ತಲೇ ಇದೆ. ಮಳೆ ಹಾಗೂ ಪ್ರಕೃತಿ ವಿಕೋಪದಿಂದ ರೈತರು ಬೆಳೆದ ಫಸಲುಗಳು ಕೈಗೆ ಸಿಗದಂತಾಗಿದ್ದು ಕೃಷಿ ಫಸಲಿಗೆ ಮಾಡಿದ ಸಾಲಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕೊಡಗಿನ ರೈತರ ಸಾಲ ಮನ್ನಾ ಮಾಡಬೇಕಿದೆ ಎಂದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ರೈತರು ಬೆಳೆದ ಫಸಲುಗಳಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೃಷಿ ಫಸಲಿಗೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕು. ರೈತರಿಗೆ ವಿತರಣೆ ಯಾಗುವ ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಸಿಗುವಂತೆ ಆಗಬೇಕು. ಕಾಡುಪ್ರಾಣಿಗಳು ಕಾಫಿ ತೋಟ ಹಾಗೂ ಗ್ರಾಮಗಳತ್ತ ಬರದ ಹಾಗೆ ಶಾಶ್ವತವಾಗಿ ತಡೆಗಟ್ಟಬೇಕು.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಫಸಲು ನಾಶ ಮಾಡುವ ಮೂಲಕ ಬೆಳೆಗಾರರು ಹಾಗೂ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿರುವ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು.ವನ್ಯಪ್ರಾಣಿಗಳ ದಾಳಿಯಿಂದ ಸತ್ತ ಜಾನುವಾರುಗಳಿಗೆ ಪರಿಹಾರ ಹೆಚ್ಚಿಸುವ ಮೂಲಕ ತಕ್ಷಣ ನೀಡಬೇಕು. ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರಿಗೂ ಲಸಿಕೆ ಶೀಘ್ರವಾಗಿ ಸಿಗುವಂತಾಗಬೇಕು, ಕೊಡಗಿನ ಕುಟ್ಟ, ಬಾಳೆಲೆ, ಕಾನೂರು, ಶ್ರೀಮಂಗಲ, ಹುದಿಕೇರಿ, ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಸಾಮಾನ್ಯ ಜನರ ಸೇವೆಗೆ ಆಂಬ್ಯುಲೆನ್ಸ್, ಆಮ್ಲಜನಕ, ಎಕ್ಸರೇಸೇರಿದಂತೆ ಆರೋಗ್ಯ ಸೇವೆಗಳು ಸಿಗುವಂತಾಗಬೇಕು, ಕೋವಿಡ್ ನಿರ್ಮೂಲನೆಗೆ ಎಲ್ಲರೂ ಸಹಕರಿಸುತ್ತಿದ್ದು, ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಲಾಕ್ ಡೌನ್ ಅವಧಿಯನ್ನು ಜೂನ್ ಅಂತ್ಯದ ವರೆಗೆ ಮುಂದುವರಿಸಬೇಕು. ಕೋವಿಡ್ ಸಂದರ್ಭದಲ್ಲೂ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ಹೆಚ್ಚು ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕೊಡಗಿನ ಜನರ ಹಿತ ಕಾಯುವ ಮೂಲಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು .ಈ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ,ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ,ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಣ್ಣ,ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್,ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮದಪ್ಪ, ಪೊನ್ನಂಪೇಟೆ ಸಂಚಾಲಕ ಚೊಟ್ಟೆಕಾಳಪಂಡ ಮನು, ನಲ್ಲೂರು ಅಧ್ಯಕ್ಷ ತೀತ್ರಮಾಡ ರಾಜ,ಸಿದ್ದಾಪುರ ವಲಯದ ಕಾರ್ಯದರ್ಶಿ ಲಿಖಿತ್ , ಪ್ರಮುಖರಾದ ಚೆಪ್ಪುಡಿರ ಕಿರಣ್ ಕುಟ್ಟಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು .
ಬೇಡಿಕೆಗಳು:
1) ಗ್ರಾಮ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಶೀಘ್ರವಾಗಿ ಸಿಗುವಂತಾಗಬೇಕು.
2) ಎರಡನೇ ಬಾರಿ ಲಸಿಕೆ ಪಡೆಯುವರಿಗೆ ಮುಂಜಾಗೃತವಾಗಿ ಆದ್ಯತೆ ಮೇರೆಗೆ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಕೋರುತ್ತೇವೆ.
3) ದಕ್ಷಿಣ ಕೊಡಗಿನ ಕುಟ್ಟ, ಬಾಳೆಲೆ, ಕಾನೂರು, ಶ್ರೀಮಂಗಲ, ಹುದಿಕೇರಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಸರ್ಕಾರದ ಆರೋಗ್ಯ ನಿಧಿಯ ಅನುಧಾನವನ್ನು ಬಳಸಿ ಮೇಲ್ದರ್ಜೆಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿಕೆ ಹಾಗೂ ಈ ಕೇಂದ್ರಗಳಲ್ಲಿ ಆಂಬುಲನ್ಸ್ ವಾಹನ, ಆಮ್ಲಜನಕ ಸಿಲಿಂಡರ್ ಮತ್ತು ಕ್ಷಾಕಿರಣ ವ್ಯವಸ್ತೆ ಕಲ್ಪಿಸಲು ಶ್ರೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
4) ಈಗಾಗಲೇ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಸಂಖ್ಯೆ ಕಡಿಮೆಯಾಗದ ಹಿನ್ನಲೆ ಲಾಕ್ ಡೌನ್ಅ ವದಿಯನ್ನು ಜೂನ್ ಅಂತ್ಯದವರೆಗೆ ಮುಂದುವರಿಸಲು ಕೋರಿಕೆ.
5) ಜಿಲ್ಲೆಯಲ್ಲಿ ರೈತರು 3ವರ್ಷದಿಂದ ಸತತವಾಗಿ ಪ್ರಕೃತಿವಿಕೋಪ ಮತ್ತು ಕೋರೋನ ಮಹಾ ಮಾರಿ ರೋಗದಿಂದ ತತ್ತರಿಸಿ ಕೊಂಡಿರುತ್ತಾರೆ. ಆದ್ದರಿಂದ ರೈತರ ಸಂಕಷ್ಟವನ್ನು ಮನಗಂಡು ರೈತರ ಬೆಳೆಸಾಲವನ್ನು ಸಂಪೂರ್ಣವಾಗಿ ಸಾಲಮನ್ನ ಮಾಡಲು ತಾವುಗಳು ಕ್ರಮ ಕೈಗೊಳ್ಳಬೇಕೆಂದು ಕೋರಿಕೆ.
6) ರಾಜ್ಯಸರ್ಕಾರದ ಆದೇಶದಂತೆ ಎಲ್ಲಾ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕದ ಶೇ 70% ಮಾತ್ರ ವಸೂಲಿ ಮಾಡಲು ಆದೇಶ ವಿದ್ದು ಇದನ್ನು ಮೀರಿ ಹಲವು ಶಾಲಾ ಆಡಳಿತ ಮಂಡಳಿಯೂ 100% ಶುಲ್ಕ ವಸೂಲಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸಂಬಂದ ಪಟ್ಟ ಅಧಿಕಾರಿಗಳಿಗೆ (ಬಿ.ಇ.ಒ ಮತ್ತು ಡಿ.ಡಿ.ಪಿ.ಐ) ಸೂಕ್ತ ಕ್ರಮ ಕೈಗೊಳ್ಳಲು ಕೋರಿಕೆ.
7) ಕೊರೋನ ಕಾಯಿಲೆಯಿಂದ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಯನ್ನು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲು ಸರಿಯಾದ ವ್ಯವಸ್ತೆ ಇಲ್ಲದ ಕಾರಣ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಲ್ಲಿ ಪಡೆದ ಬೆಳೆ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಣೆ ಮಾಡಲು ತಮ್ಮಲ್ಲಿ ಕಳಕಳಿಯ ಮನವಿ.
8) ಕೇಂದ್ರ ಸರ್ಕಾರದ ಅದೇಶದಂತೆ ಪ್ರತಿ ರೈತರೊಬ್ಬರಿಗೆ ತಿಂಗಳಿಗೆ ರಸಗೊಬ್ಬರ 50 ಚೀಲ ಮಾತ್ರ ವಿತರಿಸುವ ಕಾನೂನಿನಿಂದ ರೈತರಿಗೆ ತೊಂದರೆ ಆಗುತ್ತಿದ್ದು ಅವರಿಗೆ ಅವರವರ ಬೇಡಿಕೆಗೆ ತಕ್ಕಂತೆ ಗೊಬ್ಬರ ಸಿಗುವಂತೆ ಆಗಬೇಕು.
9) ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದ್ದು ಈಗಾಗಲೇ ಹಲವು ಜನರು ಪ್ರಾಣ ಕಳೆದು ಕೊಂಡಿದ್ದಾರೆ ಆದರಿಂದ ಪ್ರಾಣ ಹಾನಿ ಮಾಡುತ್ತಿರುವ ಪುಂಡಾನೆಯನ್ನು ಅತೀ ಶೀಘ್ರವಾಗಿ ಹಿಡಿದು ಅರಣ್ಯಕ್ಕೆ ಬಿಡುವಂತೆ ಅಥವಾ ಆನೆ ಶಿಬಿರಕ್ಕೆ ಸಾಗಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿಕೆ. ಅರಣ್ಯಗಳಿಂದ ಬರುತ್ತಿರುವ ಕಾಡಾನೆಗಳನ್ನು ಅರಣ್ಯದಲ್ಲಿ ತಡೆ ಹಿಡಿಯುವಂತೆ ಕ್ರಮ ಕೈಗೊಳ್ಳಬೇಕು. ಆರಣ್ಯದಿಂದ ನಾಡಿಗೆ ಬರುತ್ತಿರುವ ಆನೆಗಳಿಂದ ಮಾನವ ಪ್ರಾಣ ಹಾನಿ ಜೊತೆಯಲ್ಲಿ ಜನರ ತೋಟ, ಗದ್ದೆ, ಮನೆಗಳಿಗೆ ಆರಣ್ಯ ಇಲಾಖೆಯವರು ಆನೆಗಳನ್ನು ಹಿಂದಕ್ಕೆ ಅಟ್ಟಿಸುವಾಗ ಬಹಳಷ್ಟು ಹಾನಿ ಆಗುತ್ತಾ ಇದೆ. ಆದರಿಂದ ಇದನ್ನು ತಡೆ ಕಟ್ಟುವಲ್ಲಿ ತಾವುಗಳು ಅರಣ್ಯ ಸಚಿವರ ಜೊತೆಯಲ್ಲಿ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕೇಳಿಕೊಳ್ಳುತ್ತೇವೆ.
10) ಸರ್ಕಾರ ಈಗಾಗಲೇ ಆದೇಶಿಸಿರುವಂತೆ ವನ್ಯ ಪ್ರಾಣಿ ದಾಳಿಯಿಂದ ಸತ್ತ ಜಾನುವಾರುಗಳಿಗೆ ಪರಿಹಾರ ಮೊತ್ತ ಘೋಷಣೆ ಮಾಡಿದ್ದು, ಅರಣ್ಯ ಇಲಾಖೆಗೆ ಹೊಸ ಆದೇಶದ ಪ್ರತಿಯನ್ನು ಅತೀ ಶೀಘ್ರವಾಗಿ ತಲುಪಿಸಿ ರೈತರ ಕಳೆದುಕೊಂಡ ಜಾನುವಾರಗಳ ನಷ್ಟಕ್ಕೆ ಸರ್ಕಾರದ ಹೊಸ ಆದೇಶದಂತೆ ರೈತರಿಗೆ ಪರಿಹಾರ ಮೊತ್ತವನ್ನು ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ರೈತರ ಕಷ್ಟಗಳಿಗೆ ಅಧಿಕಾರಿಗಳು ಹಾಗೂ ಮಂತ್ರಿ ಮಹೋದಯರುಗಳು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ರೈತ ಸಂಘ ಆಗ್ರಹಿಸುತ್ತದೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network