Header Ads Widget

Responsive Advertisement

ವಿಶ್ರಾಂತ ಬದುಕಿನತ್ತ ಬಡವರ ಬಂಧು ಪೊಲೀಸ್ ಅಧಿಕಾರಿ

ವಿಶ್ರಾಂತ ಬದುಕಿನತ್ತ ಬಡವರ ಬಂಧು ಪೊಲೀಸ್ ಅಧಿಕಾರಿ

ಇಲಾಖೆಯ ಘನತೆ ಹೆಚ್ಚಿಸಿದ ಜನಸ್ನೇಹಿ ಇನ್ಸ್ ಪೆಕ್ಟರ್ ಸಿ. ಎನ್. ದಿವಾಕರ್

3 ದಶಕಗಳ ಸಾರ್ಥಕ ವೃತ್ತಿ ಸೇವೆಯಿಂದ ಇಂದು ನಿವೃತ್ತಿ


✍️ ವಿಶೇಷ ವರದಿ: ರಫೀಕ್ ತೂಚಮಕೇರಿ


ಪೊನ್ನಂಪೇಟೆ, ಮೇ.31: ಪೊಲೀಸ್ ಎಂದರೆ ಭಯ ಮೂಡಿಸುವವರು ಮತ್ತು ಲಂಚ ರುಜುವತ್ತಿಗೆ ಹಪಹಪಿಸುವವರು ಎಂದು ತಿಳಿಯುವ ಇಂದಿನ ಕಾಲದಲ್ಲಿ ಚಿಕ್ಕ ಪುಟ್ಟ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಬೈದು ಬುದ್ಧಿವಾದ ಹೇಳಿ ತಮ್ಮ ಜೇಬಿನಿಂದಲೇ ಬಸ್ಸಿಗೆ ಹಣ ನೀಡಿ ಮನೆಗೆ ಕಳುಹಿಸುತ್ತಿದ್ದ ಬಡವರ ಬಂಧು, 'ರಾಷ್ಟ್ರಪತಿ ಪದಕ' ಪುರಸ್ಕೃತರಾದ ಪೊಲೀಸ್ ಇನ್ಸ್ ಪೆಕ್ಟರ್ ಸಿ.ಎನ್. ದಿವಾಕರ್ ಅವರಿಗೆ ಇಂದು ವೃತ್ತಿ ಜೀವನದ ಅಂತಿಮ ದಿನ. ನಿಜರೂಪದ ಜನ ಸೇವಕರಾಗಿ ಮತ್ತು ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ, ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಿ. ಎನ್. ದಿವಾಕರ್ ಅವರು 3 ದಶಕಗಳಿಗೂ ಹೆಚ್ಚಿನ ಕಾಲದ ಸುದೀರ್ಘವಾದ ಸಾರ್ಥಕ ವೃತ್ತಿ ಸೇವೆಯನ್ನು ಪೂರ್ಣಗೊಳಿಸಿ ಇಂದು(31-05-2021)ನಿವೃತ್ತಿಯಾಗಿದ್ದಾರೆ.

'ಅಧಿಕಾರಿ' ಎಂಬ ಪಟ್ಟಕ್ಕೇರುವ ಕೆಲವರು ತಾವು ಜನಸೇವಕರು ಎಂಬುದನ್ನು ಮರೆತು ತಮ್ಮ ಹುದ್ದೆ 'ಶಾಶ್ವತ' ಎಂಬ ಭ್ರಮೆಯಲ್ಲಿ ಜನರ 'ಯಜಮಾನ' ರಾಗಲು ಪ್ರಯತ್ನಿಸುತ್ತಾರೆ. 'ಜನರ ತೆರಿಗೆ ಹಣದಲ್ಲಿ ನಾವು ವೇತನ ಪಡೆಯುತ್ತಿದ್ದೇವೆ' ಎಂಬುದನ್ನು ಮರೆತು ಜನಸಾಮಾನ್ಯರ ಮೇಲೆಯೇ ಸವಾರಿ ನಡೆಸುತ್ತಾ ಜನರನ್ನು ಕೀಳಾಗಿ ಕಾಣುವ ಪ್ರವೃತ್ತಿ ಆಡಳಿತ ವ್ಯವಸ್ಥೆಯಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ ಕಾರ್ಯನಿರ್ವಹಿಸುತ್ತಾ ಬಂದಿರುವ ಈ ಪೊಲೀಸ್ ಇನ್ಸ್ ಪೆಕ್ಟರ್ 'ಜನಸ್ನೇಹಿ' ಅಧಿಕಾರಿ ಎಂದು ಗುರುತಿಸಲ್ಪಟ್ಟು ಪೊಲೀಸ್ ಇಲಾಖೆಯ ಘನತೆ ಹೆಚ್ಚಿಸಿದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 33 ವರ್ಷ, 1 ತಿಂಗಳು ಹಾಗೂ 20 ದಿನದ ತಮ್ಮ ವೃತ್ತಿ ಸೇವಾವಧಿಯ ಪೈಕಿ 18 ವರ್ಷಗಳ ಕಾಲ ಕೊಡಗಿನಲ್ಲಿ ಕಾರ್ಯನಿರ್ವಹಿಸಿರುವುದು ಇವರ ಮತ್ತೊಂದು ವಿಶೇಷತೆಯಾಗಿದೆ.

ಶೋಷಿತರ ಮತ್ತು ಬಡ ವರ್ಗದವರ ಬಗ್ಗೆ ಅನುಕಂಪ ತೋರುತಿದ್ದ ದಿವಾಕರ್ ಅವರು  ಗಿರಿಜನರ ಸಾಮಾಜಿಕ ಕಲ್ಯಾಣಕ್ಕಾಗಿ ವಹಿಸಿದ್ದ ಕಾಳಜಿ ಅಪಾರ. ಹೆಚ್ಚಾಗಿ ಕೌಟುಂಬಿಕ ಕಲಹಗಳಿಂದಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಗಿರಿಜನರ ಮತ್ತು ಕೂಲಿ ಕಾರ್ಮಿಕರ ಬಹುತೇಕ ಕೇಸುಗಳನ್ನು ರಾಜಿ ಸಂಧಾನದ ಮೂಲಕವೇ ಇತ್ಯರ್ಥಪಡಿಸಿ ಕಳಿಸುತ್ತಿದ್ದರು. ಹೀಗೆ  ಕಳಿಸುವಾಗ 'ಏನಮ್ಮ ಬಸ್ಸಿಗೆ ಕಾಸಿದೆಯಾ?' ಎಂದು ಕೇಳುತ್ತಾ ತಮ್ಮ ಜೇಬಿನಿಂದಲೇ ಅದೆಷ್ಟೋ ಬಾರಿ ಹಣ ನೀಡಿ ಮನೆಗೆ ಕಳಿಸಿದ್ದಾರೆ. ಬಡವರು,  ಅಸಹಾಯಕರು ನ್ಯಾಯವರಸಿ ಪೊಲೀಸ್ ಠಾಣೆಗೆ ಬಂದಾಗ ಅವರನ್ನು ತಮ್ಮ ಮುಂದೆ ಕೂರಿಸಲು ಅಧಿಕಾರಿಗಳು ಹಿಂದೇಟು ಹಾಕುವ ಈ ಕಾಲದಲ್ಲಿಯೂ ದಿವಾಕರ್ ಅವರು ಯಾರೇ ತಮ್ಮ ಕಚೇರಿಗೆ ಬಂದರೆ  ಅವರನ್ನು ಎದುರಿನಲ್ಲಿ ಕೂರಿಸಿ ಅಹವಾಲು ಆಲಿಸುತ್ತಿದ್ದ ಸೌಮ್ಯ ವ್ಯಕ್ತಿತ್ವದವರಾಗಿದ್ದಾರೆ.

1961ರ ಮೇ 5ರಂದು ನರಸಿಂಹ ಜೆಟ್ಟಪ್ಪ ಮತ್ತು ಚಾಮುಂಡಮ್ಮ ದಂಪತಿಗಳ ಪುತ್ರನಾಗಿ ಬೆಂಗಳೂರು ಸಮೀಪದ ಚನ್ನಪಟ್ಟಣದಲ್ಲಿ ಜನಿಸಿದ ದಿವಾಕರ್ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಗೊರೂರಿನಲ್ಲಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಚನ್ನಪಟ್ಟಣದಲ್ಲಿ ಪೂರೈಸಿ, ನಂತರ ಮಂಡ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದರು.

1988ರ ಏಪ್ರಿಲ್ 11ರಂದು ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡ ದಿವಾಕರ್ ಅವರು, ಆರಂಭದಲ್ಲಿ ಬೆಂಗಳೂರು ನಗರದ ವಿಧಾನಸೌಧ, ಎಂ. ಎಸ್. ಕಟ್ಟಡ ಪೊಲೀಸ್ ಠಾಣೆಯಲ್ಲಿ ಹಾಗೂ ಬೆಂಗಳೂರು ನಗರ ವಿಶೇಷ ದಳದಲ್ಲಿ ಕಾರ್ಯನಿರ್ವಹಿಸಿದರು.  2001ರಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಹೊಂದಿದ ಇವರು, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಶ್ರವಣ ಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಎಸ್. ಐ. ಆಗಿ ಸೇವೆ ಆರಂಭಿಸಿದರು. 2002ರಲ್ಲಿ ಕೊಡಗಿಗೆ ಆಗಮಿಸಿದ ದಿವಾಕರ್ ಅವರು, 2002ರಿಂದ 2004ರವರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ, 2004 ರಿಂದ 2005ರವರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ, 2005 ರಿಂದ 2006ರವರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, 2006 ರಿಂದ 2008 ರವರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2008ರಲ್ಲಿ ಹಾಸನ ಜಿಲ್ಲೆಯ ಆಲೂರು. ಚನ್ನರಾಯಪಟ್ಟಣ ನಗರ ಮತ್ತು ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2009ರಲ್ಲಿ ಮತ್ತೆ ಕೊಡಗಿಗೆ ಬಂದ ಇವರು ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2009ರ ಅಕ್ಟೋಬರ್ 20ರಂದು ಇನ್ಸ್ ಪೆಕ್ಟರ್ ಆಗಿ ಬಡ್ತಿ ಹೊಂದಿದರು.

2009 ರಿಂದ 12 ರವರೆಗೆ ರಾಜ್ಯ ಪೊಲೀಸ್ ಗುಪ್ತದಳದ ಕೊಡಗು ಜಿಲ್ಲೆಯ ಇನ್ಸ್ ಪೆಕ್ಟರ್ ಆಗಿ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸಿದ ದಿವಾಕರ್ ಅವರು, ನಂತರ ಮಂಗಳೂರಿಗೆ ವರ್ಗಾವಣೆಯಾದರು. 2012ರಿಂದ 13ರವರೆಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಮತ್ತೆ ಕೊಡಗಿಗೆ ಬಂದು ಸೇವೆ ಮುಂದುವರಿಸಿದರು. 2013ರಿಂದ 2017ರವರೆಗೆ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಇವರು, 2017 ರಿಂದ 2019ರವರೆಗೆ ಗೋಣಿಕೊಪ್ಪಲು ವೃತ್ತದಲ್ಲಿ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.  ನಂತರ ಮಡಿಕೇರಿಯ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಯಾದ ದಿವಾಕರ್ ಅವರು 2019ರಿಂದ ನಿವೃತ್ತಿಯ ಕೊನೆಯವರೆಗೂ  ಮಡಿಕೇರಿಯಲ್ಲೇ ಸೇವೆಯಲ್ಲಿದ್ದರು. ಅಂದಿನ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಸುಮನ್ ಡಿ. ಪನ್ನೇಕ್ಕರ್ ಅವರು ದಿವಾಕರ್ ಅವರ ಕಾರ್ಯದಕ್ಷತೆಯನ್ನು ಗಮನಿಸಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ತಮ್ಮ ಸುದೀರ್ಘ ವರ್ಷದ ಸೇವೆಗೆ ಸಾರ್ಥಕವೆಂಬಂತೆ, ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಕೆಲವೇ ಕೆಲವು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಪ್ರತಿಷ್ಠಿತ 'ರಾಷ್ಟ್ರಪತಿ ಪದಕ'ವನ್ನು 2020ರಲ್ಲಿ ಪಡೆದುಕೊಂಡ ದಿವಾಕರ್ ಅವರು, ರಾಷ್ಟ್ರಪತಿ ಪದಕ ಪುರಸ್ಕೃತರಾದ ಮರು ವರ್ಷದಲ್ಲೇ ವಿಶ್ರಾಂತ ಬದುಕಿಗೆ ಪ್ರವೇಶಿಸಿದ್ದಾರೆ.

ಇನ್ಸ್ ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಕುಟ್ಟ, ಪೊನ್ನಂಪೇಟೆ, ಶ್ರೀಮಂಗಲ, ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿವಿಧ 11 ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರು ತನಿಖಾಧಿಕಾರಿಯಾಗಿ ಸಲ್ಲಿಸಿದ ದೋಷಾರೋಪಣ ಪಟ್ಟಿಯಿಂದಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗಿತ್ತು.  ಅಲ್ಲದೆ ಇದೇ ಅವಧಿಯಲ್ಲಿ ಇವರು ಕೈಗೊಂಡ ತನಿಖೆಯಿಂದಾಗಿ 7 ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ಹಾಗೂ 5 ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ದಿವಾಕರ್ ಅವರು ಶ್ರೀಮಂಗಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ 'ಪತ್ತೆಯಾಗದ ಪ್ರಕರಣ' ಎಂದು ಪರಿಗಣಿಸಲ್ಪಟ್ಟ ಕೇಸೊಂದನ್ನು ಇವರು ಬೇಧಿಸಿದ ಹಿನ್ನೆಲೆಯಲ್ಲಿ 2003ರಲ್ಲಿ ಜಿಲ್ಲೆಯ 'ಅತ್ಯುತ್ತಮ ಪತ್ತೆದಾರಿ ಅಧಿಕಾರಿ' ಎಂಬ ವಿಶೇಷ ಬಹುಮಾನವನ್ನು ಪೋಲಿಸ್ ಇಲಾಖೆ ಇವರಿಗೆ ನೀಡಿತ್ತು. ದಿವಾಕರ್ ಅವರು ಪೊಲೀಸ್ ಕಾನ್ಸ್ಟೇಬಲ್ ಆಗಿ ಆರಂಭದಲ್ಲೇ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗಮನಿಸಿದ ಹರಿಯಾಣ ಸರಕಾರದ ಅಂದಿನ ಕೃಷಿ ಮಂತ್ರಿ ಕರಣ್ ಸಿಂಗ್ ದಾಲಾಲ್ ಅವರು 1996 ರಲ್ಲಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದರು. ಅಲ್ಲದೆ, ಅತ್ಯುತ್ತಮ ಸೇವಾ ದಕ್ಷತೆ ತೋರುವ ಪೊಲೀಸರಿಗೆ ನೀಡಲಾಗುವ  'ಮೆರಿಟೋರಿಯಸ್' ಪ್ರಶಸ್ತಿಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಂದ 1999ರಲ್ಲಿ ಗಿಟ್ಟಿಸಿಕೊಂಡಿರುವ ದಿವಾಕರ್ ಅವರು, ರಾಜ್ಯ ಪೊಲೀಸ್ ಗುಪ್ತದಳದ ಕೊಡಗು ಜಿಲ್ಲಾ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ 2011ರ 'ಅತ್ಯುತ್ತಮ ಗುಪ್ತದಳ ಅಧಿಕಾರಿ' ಮತ್ತು ಉತ್ತಮ ಗುಪ್ತದಳ ವರದಿ ಸಂಗ್ರಹಕ್ಕಾಗಿ 2012ರಲ್ಲಿ 'ಅತ್ಯುತ್ತಮ ಪೊಲೀಸ್ ಅಧಿಕಾರಿ' ಎಂಬ ವಿಶೇಷ ಪ್ರಶಸ್ತಿಯನ್ನು ಅಂದಿನ ರಾಜ್ಯ ಗುಪ್ತದಳದ ಐಜಿಪಿ ಯವರಿಂದ ಇವರು ಪಡೆದುಕೊಂಡಿದ್ದಾರೆ.

ಅತಿಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವಲ್ಲಿ ವಿಶೇಷ ಪರಿಣತಿ ಹೊಂದಿದ್ದ ದಿವಾಕರ್ ಅವರು ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಅಂದಿನ ರಾಷ್ಟ್ರಪತಿ ಆರ್. ವೆಂಕಟರಾಮನ್, ಪ್ರಧಾನಿಗಳಾಗಿದ್ದ ಪಿ.ವಿ. ನರಸಿಂಹ ರಾವ್, ಐ.ಕೆ. ಗುಜ್ರಾಲ್, ಎಚ್ ಡಿ ದೇವೇಗೌಡ, ಪ್ರಸಿದ್ಧ ಹಾಡುಗಾರ್ತಿ ಲತಾ ಮಂಗೇಶ್ಕರ್ ಅವರಿಗೆ ಭದ್ರತೆ ಒದಗಿಸಿದ ಖ್ಯಾತಿಗೆ  ಪಾತ್ರರಾಗಿದ್ದಾರೆ. ಅಲ್ಲದೆ 1990ರ ದಶಕದಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ವ್ಯಾಟಿಕನ್ ಪಟ್ಟಣದ ಆದರಣಿಯ ಪೋಪ್ ಅವರಿಗೂ ಭದ್ರತೆ ಒದಗಿಸಿದ ಅನುಭವವನ್ನು ದಿವಾಕರ್ ಅವರು ಪಡೆದಿದ್ದಾರೆ. ಕರ್ನಾಟಕದ ಪ್ರಸಿದ್ಧ ನಟ ಡಾ. ರಾಜಕುಮಾರ್ ಅವರಿಗೆ ಬೆದರಿಕೆಗಳು ಇದ್ದ ಕಾರಣ ದಿವಾಕರ್ ಅವರು ಒಂದೂವರೆ ವರ್ಷಗಳ ಕಾಲ ರಾಜಕುಮಾರ್ ಅವರ ಸರಕಾರಿ ಭದ್ರತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1992 ರಲ್ಲಿ ಎಸ್. ವತ್ಸಲ ಎಂಬುವವರನ್ನು ವಿವಾಹವಾಗಿರುವ ಇವರಿಗೆ ಡಿ.ಯತಿನ್ ಸಾಯಿ ಎಂಬ ಮಗನಿದ್ದಾನೆ. ಜನಸೇವಕರಾಗಿ ಜನರ ಹೃದಯದಲ್ಲಿರುವ ದಿವಾಕರ್ ಅವರು ನಿವೃತ್ತಿಯ ನಂತರವೂ ಜನ ವಲಯದಲ್ಲಿ ಸದಾ ಸ್ಮರಿಸಲ್ಪಡುವವರ ಸಾಲಿನಲ್ಲಿ ಇರುತ್ತಾರೆ.


✍️ ವಿಶೇಷ ವರದಿ: ರಫೀಕ್ ತೂಚಮಕೇರಿ


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,