Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಹಾಯ ಪಡೆಯಲು ಹರಕಲು ಬಟ್ಟೆ ಮುರಕಲು ಮನೆಗಳೇ ಬೇಕಾ?!!

●ಸಹಾಯ ಪಡೆಯಲು ಹರಕಲು ಬಟ್ಟೆ ಮುರಕಲು ಮನೆಗಳೇ ಬೇಕಾ?!!

■ಮಧ್ಯಮ ವರ್ಗದವರ ಬದುಕು ಮೂರಾಬಟ್ಟೆ..!!

( ಸಾಂದರ್ಭಿಕ ಚಿತ್ರ )

ಇದೀಗ ಕೋರೊನ ಲಾಕ್ ಡೌನ್ ಸಮಯವಾಗಿದ್ದು, ಲಾಕ್ ಡೌನ್ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಇನ್ನು ಎಷ್ಟು ದಿವಸ ಈ ವಿಸ್ತರಣೆ ಯಾವಾಗ ಕೋರೊನ ಅಲೆ ಕಡಿಮೆಯಾಗಿ ಜನರ ಬದುಕು ಮೊದಲಿನಂತಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಇದರ ನಡುವೆ ಇದ್ದವರು ಶಿವಾಲಯ ಮಾಡುವರಯ್ಯ, ನಾನೇನೂ ಮಾಡಲಿ ನಾ ಬಡವನಯ್ಯ ಎಂಬಂತೆ ಕಡುಬಡವನ ಪರಿಸ್ಥಿತಿ ಒಂದೆಡೆಯಾದರೆ ಮದ್ಯಮ ವರ್ಗದ ಪರಿಸ್ಥಿತಿ ಅದೋಗತಿಯತ ತಲುಪಿದೆ ಎಂದರೆ ತಪ್ಪಲ್ಲ.

ಸಹಾಯ ಪಡೆಯಲು ಹರಿದ ಪ್ಯಾಂಟು ಹಾಗೂ ಮುರಿದ ಮನೆಗಳೇ ಬೇಕಾಗಿಲ್ಲ. ಕೂಲಿಂಗ್ ಗ್ಲಾಸ್ ಹಾಕಿರುವ ಕಾಫಿ ಬೆಳೆಗಾರನಂತೆ, ಆತನ ಸಂಕಷ್ಟದ ಹಾಗೂ ಆತನ ಬವಣೆಯ ಶ್ರಮವನ್ನು ಹಾಗೂ ಆತನ ಕಷ್ಟವನ್ನು, ಆತನ ನೋವನ್ನು ಎಲ್ಲಾರ ಎದುರು ಹೊರ ಹಾಕಲಾಗದೆ ಒಳಗೊಳಗೆ ಅಳುತ್ತಿರುತ್ತಾನೆ. ಈ ಕಣ್ಣೀರು ಯಾರಿಗೂ ಕಾಣುವುದೇ ಇಲ್ಲ. ಆತನ ಕಣ್ಣಿನ ಕೂಲಿಂಗ್ ಗ್ಲಾಸ್ ಒಳಗಿನ ಕಣ್ಣೀರನ್ನು ಕಾಣಬೇಕಾದರೆ ಅದನ್ನು ಸರಿಸಿ ನೋಡಬೇಕು ಹಾಗಾದರೆ ಮಾತ್ರ ಆತನ ನೋವು ನಮಗೆ ಕಾಣಸಿಗುತ್ತದೆ. ಹಾಗೇ ಇದೀಗ ಕೋವಿಡ್ ಸಂಕಷ್ಟ ಕಾಲದಲ್ಲಿ ಮಧ್ಯಮ ವರ್ಗದವರ ಪಾಡು ಹೇಳತೀರದಾಗಿದೆ ಎಂದರೆ ತಪ್ಪಲ್ಲ. ದೂರದಲ್ಲಿ ಕಾಣುವ ಬೆಟ್ಟ ನುಣ್ಣಗೆ ಎಂಬಂತೆ ಒಂದಷ್ಟು ಜನರು ತುತ್ತು ಕೂಳಿಗೂ ಗತಿಯಿಲ್ಲದೆ ಹೊರಗೆ ಹೇಳಿಕೊಳ್ಳಲು ಆಗದೆ ಬದುಕಿನೊಂದಿಗೆ ಹೊರಾಟ ಮಾಡುತ್ತಿದ್ದು, ಇವರ ಹತ್ತಿರ ಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಇವರ ಕಷ್ಟ ನಮಗೆ ಗೊತ್ತಾಗುತ್ತೆ. ಅದುಬಿಟ್ಟು ಅವರಿಗೇನೂ ತೊಂದರೆ ಇಲ್ಲ ಅವರು ಚೆನ್ನಾಗಿಯೇ ಕಾಣುತ್ತಾರೆ. ಹರಕಲು ಬಟ್ಟೆ ಇಲ್ಲಾ, ಮುರಕಲು ಮನೆ ಇಲ್ಲ ಎಂದು ನಿಮಗೆ ನೀವೇ ಅವರು ಚೆನ್ನಾಗಿದ್ದಾರೆಂದು ಊಹಿಸಿಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ.

ಹೌದೂ ಇತ್ತೀಚಿನ ದಿನಗಳಲ್ಲಿ ಸರಕಾರವಿರಲಿ ಅಥವಾ ಸಂಘ ಸಂಸ್ಥೆಗಳಿರಲಿ ಅವರ ಮನೆ ಹಾಗೂ ಅವರ ಉಡುಪನ್ನು ನೋಡಿ ಸಹಾಯ ಮಾಡುತ್ತಿದೆಯೇ ಹೊರತು ಅವರ ಪರಿಸ್ಥಿತಿಯ ಒಳಹೊಕ್ಕು ಸಹಾಯ ಮಾಡುವ ಕೆಲಸ ಮಾಡುತ್ತಿಲ್ಲ ಎನ್ನುವುದು ಅನೇಕ ಮಧ್ಯಮ ವರ್ಗದವರ ಮಾತು. ಒಂದು ದೃಷ್ಟಿ ಕೋನದಲ್ಲಿ ನೋಡುವುದಾದರೆ ಇದು ನಿಜ ಅನಿಸದೆ ಇರಲಾರದು. ಸಾಮಾಜದಲ್ಲಿ ನಾಲ್ಕು ವರ್ಗದ ಜನರಿದ್ದು ಆಗರ್ಭ ಶ್ರೀಮಂತ, ಸುದಾರಿತ ಮಧ್ಯಮ ಶ್ರೀಮಂತ ವರ್ಗ, ಚೇತರಿಸಿಕೊಳ್ಳುತ್ತಿರುವ ಮಧ್ಯಮ ವರ್ಗ ಹಾಗೂ ಬಡ ವರ್ಗ. ಇದರಲ್ಲಿ ಆಗರ್ಭ ಶ್ರೀಮಂತ ಹಾಗೂ ಸುದಾರಿತ ಮಧ್ಯಮ ವರ್ಗದ ಶ್ರೀಮಂತ ಹೇಗೋ ಒಂದಷ್ಟು ಸುದಾರಿಸಿಕೊಳ್ಳುತ್ತಾನೆ. ಇನ್ನು ಅತ್ಯಂತ ಬಡವರ್ಗದ ಮಂದಿ ಇತರರಿಂದ ಕೇಳಿಯಾದರು ಪಡೆಯುತ್ತಾರೆ ಹಾಗೂ ಅವರಿಗೆ ಸಂಘ ಸಂಸ್ಥೆ ಹಾಗೂ ಸರಕಾರ ಬೆಂಬಲಕ್ಕೆ ನಿಲ್ಲುತ್ತದೆ. ಆದರೆ ತಾನೂ ಎಲ್ಲಾರಂತೆ ಬೆಳೆಯಬೇಕು ಎಂದು ಒಂದಷ್ಟು ಸಾಲವನ್ನು ಮಾಡಿ ಅಥವಾ ಕಷ್ಟಪಟ್ಟು ದುಡಿದು ಇದೀಗ ತಾನೇ ಚೇತರಿಸಿಕೊಳ್ಳುತ್ತಿರುವ ಮಧ್ಯಮ ವರ್ಗದ ಮಂದಿಯ ಬದುಕು ಇವತು ಅತಂತ್ರವಾಗಿದೆ ಎಂದರೆ ತಪ್ಪಲ್ಲ. 

ಅತ್ತಾ ಕೈಚಾಚಲು ಆಗದೆ, ಇತ್ತಾ ಹೊಟ್ಟೆ ಹಸಿವು ತಡೆಯಲಾಗದೆ ಪರಿತಪಿಸುತ್ತಿದ್ದು ಇವರನ್ನು ಸೂಕ್ಷ್ಮವಾಗಿ ಗಮನಿಸಿ ಸಂಘಸಂಸ್ಥೆಗಳು ಸಹಾಯ ಹಸ್ತ ನೀಡಬೇಕಿದೆ. ಇದೀಗಲೂ ಕೂಡ ಜಿಲ್ಲೆಯಲ್ಲಿ ಇಂತಹ ವರ್ಗ ಬಹಳಷ್ಟು ಮಂದಿ ಇದ್ದು ಇದರಲ್ಲಿ ದಿನಗೂಲಿ ನೌಕರರಿಂದ ಹಿಡಿದು ಸಣ್ಣ ಬೆಳೆಗಾರ ಕೂಡ ಒಳಗೊಂಡಿದ್ದಾನೆ ಎಂದರೆ ತಪ್ಪಲ್ಲ. ಸಾಲ ಮಾಡಿ ಅಥವಾ ಹೊಟ್ಟೆಯನ್ನು ಕಟ್ಟಿ ಅರ್ದ ಹೊಟ್ಟೆ ಹಸಿವಿನಿಂದ ನಾಳೆಗೆ ಎಂದು  ಕೂಡಿಟ್ಟ ಹಣದಲ್ಲಿ ಚಿಕ್ಕದೊಂದು ಮನೆ ಹಾಗೂ ಸಾಲಪಡೆದು ಖರೀದಿಸಿದ ವಾಹನದಿಂದ ಅವರ ಸಂಪತ್ತನ್ನು ಅಳೆಯಲು ಸಾದ್ಯವಿಲ್ಲ. 

ಒಂದಿಷ್ಟು ಕೂಡಿಟ್ಟ ಹಣ ಎಲ್ಲಾ ಕರಗಿ ಇದೀಗ ಸಂಕಷ್ಟ ಕಾಲದಲ್ಲಿ ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ ಕೆಲವರದಾದರೆ. ನಾಳಿನ ಪರಿಸ್ಥಿತಿ ಹೇಗೆ ಎಂಬ ಚಿಂತೆ ಬಹುತೇಕ ಮಂದಿಯದಾಗಿದೆ. ಇಂತಹವರು ಹಸಿವಿನಿಂದ ಇದ್ದರು ಮತ್ತೊಬ್ಬರೆದು ಕೈ ಚಾಚಲಾರರು ಎಂಬ ಮಾತು ಎಲ್ಲಾರಿಗೂ ಗೊತ್ತಿರುವ ವಿಷಯ. ಈ ರೀತಿಯ ವರ್ಗದಲ್ಲಿ ಒಂದಷ್ಟು ಮಂದಿ ಇದೀಗ ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದಾನಿಗಳು ಇಂತಹವರನ್ನು ಹುಡುಕಿ ಅವರ ಮನೆ ಬಾಗಿಲಿಗೆ ಸಹಾಯ ಮಾಡುವ ಕೆಲಸ ಮಾಡಬೇಕಾಗಿದೆ, ಹಾಗೂ ಸರಕಾರ ಕೂಡ ಇವರ ಸಂಕಷ್ಟಕ್ಕೆ ನೆರವಾಗಬೇಕಿದೆ.

ಅವರಿಗೇನು ಕಾಣಲು ಚೆನ್ನಾಗಿಯೇ ಇದ್ದಾರೆ ಎಂದು ಅವರನ್ನು ನಿರ್ಲಕ್ಷ್ಯ ಮಾಡಿ ಕೊಡುವವರಿಗೆ ಕೊಡುತ್ತಾ ಹೋದರೆ ಪಡೆಯುವವರು ಪಡೆದುಕೊಳ್ಳುತ್ತಾ ಇರುತ್ತಾರೆ. ಅವರಿಗೇನು ಬೇಡ ಎನ್ನುವುದಿಲ್ಲ. ಈ ರೀತಿಯ ಕೆಲಸ ಇದೀಗ ಸಮಾಜದಲ್ಲಿ ಆಗಬೇಕಿದೆ. ಹರಕಲು ಬಟ್ಟೆ ಹಾಗೂ ಮುರಕಲು ಮನೆ ನೋಡಿ ಅವರು ಚೆನ್ನಾಗಿ ಇದ್ದಾರೆ ಎಂದೂ ಊಹಿಸುವ ಬದಲು ಒಂದಷ್ಟು ಅಕ್ಕಪಕ್ಕದವರನ್ನು ವಿಚಾರಿಸಿ ಎನ್ನುವುದು ಈ ಲೇಖನದ ಉದ್ದೇಶ.


ಬರಹ: ✍️ಚಮ್ಮಟೀರ ಪ್ರವೀಣ್ ಉತ್ತಪ್ಪ

                   ( ಪತ್ರಕರ್ತರು )

ಮೊ: 9880967573


( ಚಮ್ಮಟೀರ ಪ್ರವೀಣ್ ಉತ್ತಪ್ಪ)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,