Header Ads Widget

Responsive Advertisement

ರಾಜ್ಯ ಅನ್ ಲಾಕ್ ಆದರೂ ಮಳೆಗಾಲ ಮುಗಿಯುವವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿ ಕೊಡಬಾರದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ

ರಾಜ್ಯ ಅನ್ ಲಾಕ್ ಆದರೂ ಮಳೆಗಾಲ ಮುಗಿಯುವವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿ ಕೊಡಬಾರದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ

ಒಂದು ಸಮಯ ಅವಕಾಶ ಕೊಟ್ಟರೆ ಜಿಲ್ಲೆಯಲ್ಲಿ ಸಂಘಟಿತ ಹೋರಾಟ ಅನಿವಾರ್ಯ


ಜೂನ್ 14ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಅನ್ ಲಾಕ್ ಆಗುವ ಸಂದರ್ಭಗಳು ಹೆಚ್ಚಾಗಿದ್ದು, ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುವ ಕಾರಣ ಕೊಡಗಿನ ಜಲತೊರೆಗಳನ್ನು ವೀಕ್ಷಿಸಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಲು ಮತ್ತೆ ಜನಸಾಗರ ಹರಿದು ಬರುವ ಸಾದ್ಯತೆ ಇದ್ದು ಇದಕ್ಕೆ ಈಗಲೇ ಕಡಿವಾಣ ಹಾಕಬೇಕಿದೆ, ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮವನ್ನು ಕೊಡಗಿನಲ್ಲಿ ಆರಂಭಿಸಬಾರದು, ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಟ್ಟರೆ ಕೊಡಗಿನಾದ್ಯಂತ ಸಂಘಟಿತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಕೊಡಗಿನ ಜನರು ಕಳೆದ ಮೂರು ವರ್ಷಗಳಿಂದ ನಿರಂತರ ನೆರೆಹಾವಳಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದು, ಇದೀಗ ಕೋರೊನ ಸಾವು ನೋವುಗಳು ಹಾಗೂ ಲಾಕ್ ಡೌನ್'ನಿಂದ ಜನರು ತತ್ತರಿಸಿದ್ದಾರೆ. ಅನೇಕ ಜನರು ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿದ್ದು ಇದೀಗ ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾರೆ, ಹೀಗಿರುವಾಗ ಮತ್ತೆ ಪ್ರವಾಸೋದ್ಯಮ ತೆರೆದುಕೊಂಡರೆ ಹೆಮ್ಮಾರಿ ಕೋರೊನ ಅಲೆ ಬಂದು ಅಪ್ಪಳಿಸಲಿದೆ, ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವಕಾಶ ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. 

ಪ್ರವಾಸೋದ್ಯಮದಿಂದಲೇ ಕೊಡಗಿನಂತಹ ಪುಟ್ಟ ಜಿಲ್ಲೆ ಡೇಂಜರ್ ವಲಯಕ್ಕೆ ತಲುಪಿದ್ದು, ಇದೀಗ ಕೊಡಗು ಜಿಲ್ಲೆ ಒಂದಷ್ಟು ಚೇತರಿಸಿಕೊಂಡಿದೆ ಹೊರತು ಸಂಪೂರ್ಣವಾಗಿ ಕೋರೊನ ಮುಕ್ತವಾಗಿಲ್ಲ. ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿರುವ ಕೋರೊನ ಅಲೆ ಅದೆಷ್ಟೋ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮತ್ತೆ ನಮ್ಮವರನ್ನು ಸಾವಿನ ದವಡೆಗೆ ತಳ್ಳಲು ನಾವು ಸಿದ್ದರಿಲ್ಲ ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಗಳು ಸಂಪೂರ್ಣ ಬಂದ್ ಆಗಿಯೇ ಇರಬೇಕು. ಇವರಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವವರಿಗೆ ಸರಕಾರವೇ ಸಹಕಾರ ನೀಡಲಿ ಹೊರತು ಜಿಲ್ಲೆಯ ಜನರನ್ನು ಬಲಿಕೊಡುವುದು ಬೇಡ. ರಾಜ್ಯದಲ್ಲಿ ಅನ್ ಲಾಕ್ ಆದರೂ ಜಿಲ್ಲೆಯಲ್ಲಿ ಲಾಕ್ ಡೌನ್ ಒಂದಿಷ್ಟು ಸಡಿಲಿಕೆ ಇರಲಿ ಹೊರತು ಸಂಪೂರ್ಣ ಸಡಿಲಿಕೆ ಬೇಡ. ಗಡಿ ತಪಾಸಣೆ ಮಳೆಗಾಲ ಮುಗಿಯುವವರೆಗೂ ಮುಂದುವರಿಯಲಿ ಕೇವಲ ಹೊರಜಿಲ್ಲೆಯಲ್ಲಿರುವ ಕೊಡಗು ಮೂಲದವರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದ್ದರೆ ಮಾತ್ರ ಸಾಕು. ಅವರು ಕೂಡ ಎಲ್ಲೆಂದರಲ್ಲಿ ಓಡಾಡಡದೆ ಜಿಲ್ಲೆಯ ಜನರ ಆರೋಗ್ಯ ಕಡೆ ಕೂಡ ಗಮನ ಹರಿಸಬೇಕಿದೆ. ಹೊರ ಜಿಲ್ಲೆಯಲ್ಲಿರುವ ಕೊಡಗು ಮೂಲದ ಕೃಷಿಕರಿಗೆ ಹೊರತುಪಡಿಸಿ ಪ್ರವಾಸಕ್ಕಾಗಿ ಬರುವವರಿಗೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ.

ಮಳೆಗಾಲದಲ್ಲಿ ಸೋಂಕು ಬಹಳ ಸುಲಭವಾಗಿ ಹರಡುವ ಸಾಧ್ಯತೆ ಇದ್ದು, ಮುಂದೆ ಬರುತ್ತಿರುವ ಮೂರನೇ ಅಲೆಯನ್ನು ಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಹಾಗೂ ಕೊಡಗಿನ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಈ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಈಗಾಗಲೇ ಕೊಡಗನ್ನು 15ರಿಂದ 20 ದಿವಸ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಒತ್ತಾಯಿಸಿ ಸಾಕಾಯಿತು ಹೊರತು ಏನು ಪ್ರಯೋಜನ ಆಗಿಲ್ಲ. ಇಷ್ಟೊಂದು ಸಮಯ ಲಾಕ್ ಡೌನ್ ಮಾಡಿ ಏನೂ ಪ್ರಯೋಜನವಿಲ್ಲದಾಗಿದೆ. ಸಂಪೂರ್ಣ ಲಾಕ್ ಡೌನ್ ಅನಿವಾರ್ಯವಾಗಿತ್ತು. ಆದರೆ ಇದೀಗ ಕೃಷಿ ಚಟುವಟಿಕೆಯ ಸಮಯವಾಗಿದ್ದು, ಜನರಿಗೆ ವರ್ಷದ ಬದುಕನ್ನು ಕಟ್ಟಿಕೊಳ್ಳುವ ಸಮಯವಾಗಿದೆ, ಇದಕ್ಕಾಗಿ ಹೊರಜಿಲ್ಲೆಯ ಮಂದಿಗೆ ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹಾಕುವುದು ಒಂದೇ ನಮಗಿರುವ ಹಾದಿ. ಹೊರಜಿಲ್ಲೆಯಲ್ಲಿರುವ ಕೊಡಗು ಮೂಲದ ರೈತರಿಗೆ ಕೃಷಿ ಆದಾರದ ಮೇಲೆ ಕೊಡಗಿನೊಳಗೆ ಪ್ರವೇಶಿಸಲು ಅವಕಾಶ ಬಿಟ್ಟು ಪ್ರವಾಸಿಕರಿಗೆ ಅವಕಾಶ ಮಾಡಿಕೊಟ್ಟು, ಪ್ರವಾಸೋದ್ಯಮದ ಬಾಗಿಲು ಮತ್ತೆ ತೆರೆದುಕೊಂಡರೆ ಕೊಡಗಿನಾದ್ಯಂತ ಎಲ್ಲಾ ಸಂಘ ಸಂಸ್ಥೆಗಳು ಸೇರಿದಂತೆ ಕೊಡಗಿನಲ್ಲಿರುವ ಎಲ್ಲಾ ಕೊಡವ ಸಮಾಜಗಳನ್ನು ಸಂಘಟಿಸಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.

ಈಗಾಗಲೇ ಈ ವಿಷಯವನ್ನು ಮಾನ್ಯ ಜಿಲ್ಲಾಧಿಕಾರಿಗಳು ಸೇರಿದಂತೆ ಉಸ್ತುವಾರಿ ಸಚಿವರು, ಶಾಸಕರುಗಳು ಹಾಗೂ ಸಂಸದರ ಗಮನಕ್ಕೆ ತರಲಾಗಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,