Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರವಾಸೋದ್ಯಮ ಚಟುವಟಿಕೆಗೆ ಅಡ್ಡಿಪಡಿಸಿದರೆ ಕಾನೂನು ಹೋರಾಟ: ವೆಲ್ಫೇರ್ ಅಸೋಸಿಯೇಷನ್ ಆಫ್ ಕೊಡವ ಎಂಟ್ರೊಪ್ರನಸ್ ಎಚ್ಚರಿಕೆ

ಪ್ರವಾಸೋದ್ಯಮ ಚಟುವಟಿಕೆಗೆ ಅಡ್ಡಿಪಡಿಸಿದರೆ ಕಾನೂನು ಹೋರಾಟ: ವೆಲ್ಫೇರ್ ಅಸೋಸಿಯೇಷನ್ ಆಫ್ ಕೊಡವ ಎಂಟ್ರೊಪ್ರನಸ್ ಎಚ್ಚರಿಕೆ 

( ಸಾಂದರ್ಭಿಕ ಚಿತ್ರ )

ರಾಜ್ಯ ಸಕಾ೯ರ ಕೊಡಗು ಜಿಲ್ಲೆಯಲ್ಲಿ ಅನ್ ಲಾಕ್  ಆದೇಶ ಜಾರಿಗೆ ತರುವುದರೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗೂ ಅವಕಾಶ ನೀಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಕೆಲವರು ಇದನ್ನು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯವೆಂದು ವೆಲ್ಫೇರ್ ಅಸೋಸಿಯೇಷನ್ ಆಫ್ ಕೊಡವ ಎಂಟ್ರೊಪ್ರನಸ್ ಸಂಘಟನೆ ತಿಳಿಸಿದೆ. 

ಸಂಘಟನೆಯ ಜಿಲ್ಲಾಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಪದಾಧಿಕಾರಿಗಳಾದ ಕುಕ್ಕೇರ ಜಯಾಚಿಣ್ಣಪ್ಪ, ಚೆಯ್ಯಂಡ ಸತ್ಯ, ತಮ್ಮುಪೂವಯ್ಯ ಹಾಗೂ ಅಂಚೆಟ್ಟಿರ ಮನುಮುದ್ದಪ್ಪ  ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅಡ್ಡಿ ಪಡಿಸುವವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಬಹುತೇಕ ಮಂದಿ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಾಲೀಕನಿಂದ ಹಿಡಿದು ಕಾಮಿ೯ಕನವರೆಗೆ, ವ್ಯಾಪಾರಿಯಿಂದ ಆಟೋ, ಟ್ಯಾಕ್ಸಿ ಚಾಲಕನವರೆಗೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರವಾಸೋದ್ಯಮದ ಮೂಲಕ ಜೀವನ ಕಟ್ಟಿಕೊಂಡವರೇ ಆಗಿದ್ದಾರೆ. 

ಸುಮಾರು ಮೂರು ತಿಂಗಳಿನಿಂದ ಪ್ರವಾಸೋದ್ಯಮವೇ ಬಂದ್ ಆಗಿ ಎಲ್ಲಾ ವರ್ಗದ ಜನರು ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ. 

ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಈಗಾಗಲೇ ಅವಕಾಶ ನೀಡಿದ್ದು, ಎಲ್ಲಾ ಕಡೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ವಿನಾಕಾರಣ ಪ್ರವಾಸೋದ್ಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಸಕಾ೯ರ ಮತ್ತು ಜನರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆ. ಇದೀಗ ಜಿಲ್ಲೆ ಅನ್ ಲಾಕ್ ಆದ ಬೆನ್ನಲ್ಲೆ ಪ್ರವಾಸೋದ್ಯಮ ಚಟುವಟಿಕೆಗೆ ತಡೆಯೊಡ್ಡುವುದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇದನ್ನು ಸಂಘಟನೆಯು ತೀವ್ರವಾಗಿ ಖಂಡಿಸುವುದಲ್ಲದೆ, ರಾಜ್ಯ ಸಕಾ೯ರದ ಆದೇಶಕ್ಕೆ ವಿರುದ್ಧವಾಗಿ ಪ್ರವಾಸಿ ಚಟುವಟಿಕೆಗೆ ಅಡ್ಡಿಪಡಿಸಲು ಮುಂದಾದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕಾಶ್ಮಿರ ಎಂದೇ ಪ್ರಖ್ಯಾತವಾಗಿರುವ ಕೊಡಗು ಇಡೀ ವಿಶ್ವದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿತ್ತು. ಆದರೆ ಕೆಲವು ದುರುದ್ದೇಶದ ವ್ಯಕ್ತಿಗಳಿಂದಾಗಿ ಜಿಲ್ಲೆಯ ಖ್ಯಾತಿಗೆ ಮಸಿಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿರುವವರು ಪ್ರಮಾಣಿಕವಾಗಿ ದುಡಿದು ಜೀವನ ನಡೆಸುತ್ತಿದ್ದಾರೆಯೇ ಹೊರತು ಯಾವುದೇ ದಂಧೆಯಲ್ಲಿ ತೊಡಗಿಲ್ಲ. ಪ್ರವಾಸೋದ್ಯಮದಿಂದ ಕೋವಿಡ್ ಸೋಂಕು ವ್ಯಾಪಿಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವವರು ಈ ಬಗ್ಗೆ ಒಂದೇ ಒಂದು ಉದಾಹರಣೆಯನ್ನು ನೀಡಲಿ ಎಂದು ದಿನೇಶ್ ಕಾರ್ಯಪ್ಪ ಸವಾಲು ಹಾಕಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಕೊಡಗಿನ ಪ್ರವಾಸಿ ಕ್ಷೇತ್ರದಲ್ಲಿ ಯಾವುದೇ ಕೋವಿಡ್ ಪ್ರಕರಣ ಕಂಡು ಬಂದಿಲ್ಲ. ಕಳೆದ ವರ್ಷ ಜಿಲ್ಲೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಇಲ್ಲಿನ ಹೋಂಸ್ಟೇ, ಹೊಟೇಲ್, ಲಾಡ್ಜ್ ರೆಸಾಟ್೯ಗಳ ಮಾಲೀಕರುಗಳು ಸೋಂಕಿತರಿಗೆ ಹಾಗೂ ವೈದ್ಯರುಗಳಿಗಾಗಿ ಕೊಠಡಿಗಳನ್ನು ಉದಾರವಾಗಿ ಬಿಟ್ಟುಕೊಟ್ಟು ದೊಡ್ಡತನ ಮೆರೆದಿದ್ದಾರೆ. 

ವೆಲ್ಫೇರ್ ಅಸೋಷಿಯೇಶನ್ ಆಫ್ ಕೊಡವ ಎಂಟ್ರೊಪ್ರನಸ್ ಸಂಸ್ಥೆಯಲ್ಲಿ ಪ್ರವಾಸಿ ಕ್ಷೇತ್ರದಲ್ಲಿ ದುಡಿಯುತ್ತಿರುವ ನೂರಾರು ಮಂದಿ ಇದ್ದು, ಎಲ್ಲರೂ  ಸಮಾಜಿಕ ಕಳಕಳಿಯನ್ನೇ ಹೊಂದಿದವರಾಗಿದ್ದಾರೆ. ಕೇವಲ ಲಾಭ ಮಾಡುವುದಕ್ಕಾಗಿ ಪ್ರವಾಸೋದ್ಯಮವನ್ನು ಅವಲಂಬಿಸದೆ ಬಂದ ಆದಾಯದಲ್ಲಿ ಸಮಾಜದ ಆಗುಹೋಗುಗಳಿಗೂ ವಿನಿಯೋಗಿಸಲಾಗುತ್ತಿದೆ. 

ನಮ್ಮ ಸಂಘಟನೆ 2016ರಲ್ಲಿ ಪ್ರಾರಂಭವಾಗಿದ್ದು, ಹಲವು ಸಮಾಜ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸುಮಾರು 6 ಲಕ್ಷ ವೆಚ್ಚದ ಹೀಟ್ ಪಂಪ್ ನ್ನು ಸಾಯಿಶಂಕರ ಶಾಲೆಗೆ ಕೊಡುಗೆಯಾಗಿ ನೀಡಿದೆ. ಅಲ್ಲದೆ ಸುಮಾರು 21 ವಿದ್ಯಾಥಿ೯ಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾಥಿ೯ ವೇತನವನ್ನು ನೀಡಿದೆ. 

ವೇಕ್ ಸಂಸ್ಥೆಯು ರೋಟರಿ ಇನ್ನರ್ವೀಲ್ ಸಂಸ್ಥೆಯೊಂದಿಗೆ ಸುಮಾರು 21 ಮನೆಗಳಿಗೆ ಮಿನಿ ಹೈಡ್ರೋ ಎಲೆಕ್ಟ್ರಿಕಲ್ ಪ್ರೊಜೆಕ್ಟ್ ರೂಪದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿದೆ.

ಸುಮಾರು 100 ಆಹಾರ ಕಿಟ್ ಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ. ಅಲ್ಲದೆ  ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಮ್ಮಿಯಾಲ, ಕಾಲೂರು, ಮುಟ್ಲು, ಸೂರ್ಲಬಿ ಭಾಗದ ಸಂತ್ರಸ್ತರಿಗೆ 7 ನೂತನ ಮನೆಗಳನ್ನು ನಿಮಿ೯ಸಿಕೊಡಲಾಗಿದೆ. 

ಸೇವಾ ಕೇಂದ್ರ ಕೆಇಎಸ್ಎಸ್ಟಿ ಮತ್ತು ಇನ್ನರ್ ವೀಲ್ ಸಂಸ್ಥೆಯನ್ನು ಒಳಗೊಂಡು ಹಲವು ಸಮಾಜ ಸೇವೆಗಳನ್ನು ಮಾಡಲಾಗುತ್ತಿದೆ. ಆದರೆ ಎಲ್ಲೂ ಪ್ರಚಾರವನ್ನು ಪಡೆದುಕೊಂಡಿಲ್ಲ. ಪ್ರವಾಸೋದ್ಯಮ ಕ್ಷೇತ್ರದ ನೈಜ ಪರಿಸ್ಥಿತಿ ಹೀಗಿದ್ದರೂ ಪ್ರವಾಸೋದ್ಯಮದಿಂದ ಕೊಡಗಿಗೆ ಕೆಡುಕಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. 

ಈಗಾಗಲೇ ಕೆಲವರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪರೋಕ್ಷವಾಗಿ ಬೆದರಿಕೆಗಳು ಬರುತ್ತಿದ್ದು, ಒಂದು ವೇಳೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ದಿನೇಶ್ ಕಾರ್ಯಪ್ಪ, ಮುಂದಿನ ದಿನಗಳಲ್ಲಿಯೂ ಕಾನೂನು ಬದ್ದವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸುವುದಾಗಿ ತಿಳಿಸಿದ್ದಾರೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,