Header Ads Widget

Responsive Advertisement

ಎಲ್ಲವೂ ಆರಂಭಗೊಂಡು ಜನಜೀವನ ಒಂದು ಹಳಿ ಹಿಡಿಯಿತೆಂದರೆ ಸಮಾಧಾನ ಪಡಬೇಕಿಲ್ಲ !

ಎಲ್ಲವೂ ಆರಂಭಗೊಂಡು ಜನಜೀವನ ಒಂದು ಹಳಿ ಹಿಡಿಯಿತೆಂದರೆ ಸಮಾಧಾನ ಪಡಬೇಕಿಲ್ಲ !

    


ಬದುಕನ್ನು ನಾವು ನೋಡುವ ರೀತಿ, ಬದುಕಿನ ಬಗೆಗಿನ ನಮ್ಮ ಬಯಕೆ, ಜೀವನವನ್ನು ಅನುಭವಿಸುವ ರೀತಿ, ಜೀವನದಲ್ಲಿ ನಾವು ಯಾವ ಮಟ್ಟಕ್ಕೆರಬೇಕೆಂದು ಬಯಸುವುದು, ಬದುಕನ್ನು ಹೇಗೆ ತೆಗೆದುಕೊಳ್ಳುತ್ತೇವೆ, ಅಂದರೆ ಸೀರಿಯಸ್‌ ಆಗಿಯೋ ಅಥವಾ ಪ್ರಾಮಾಣಿಕವಾಗಿಯೋ ಹೀಗೆ ಬದುಕಿನ ಬಗ್ಗೆಯೇ ಹಲವು ಪ್ರಶ್ನೆಗಳು ನಮ್ಮ ನಡವಳಿಕೆಯಲ್ಲಿದೆ. ನಾವು ಬೆವರು ಸುರಿಸಿ, ಕಷ್ಟ ಪಟ್ಟು ದುಡಿಯುತ್ತೇವೆ. ಬದುಕಿಗಾಗಿ ಯುದ್ಧವನ್ನೇ ಮಾಡುತ್ತೇವೆ. ಅದೆಷ್ಟು ಬವಣೆಗಳು ! 

    ಕಳೆದ ಮೂರು ವರ್ಷಗಳು ಕೊಡಗಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ರಸ್ತೆ, ಗದ್ದೆ, ಹೊಂಡ, ಕಟ್ಟಡ ಎಲ್ಲವೂ ಜಲಮಯ. ಎಲ್ಲಿ ನೋಡಿದರೂ ನೀರು... ನೀರು... ನೀರು. ಆದರೆ ಪ್ರವಾಹ ಇಳಿದ ಬಳಿಕವೂ ಅಲ್ಲಿ ನೆಮ್ಮದಿಯಿಲ್ಲ. ಅದೆಷ್ಟೋ ಜನರ ಬದುಕೂ ನೀರಿನೊಂದಿಗೇ ಮುಳುಗಿತ್ತು. ಪ್ರವಾಹಕ್ಕೆ ಅದೆಷ್ಟೋ ಗ್ರಾಮಗಳು ಅಕ್ಷರಶಃ ನಲುಗಿದವು. ನೆರೆ ಇಳಿದ ಬಳಿಕ ಓಡೋಡಿ ಬಂದು ಮನೆಯ ಬಾಗಿಲು ತೆರೆದರೆ ಒಳಗೆ ನಾಲ್ಕೈದು ಇಂಚುಗಳಷ್ಟು ಕೆಸರು ನಿಂತಿತ್ತು.

    2018ರ ಮಹಾಮಳೆ ನಮ್ಮ ಬದುಕನ್ನೂ ಮುಳುಗಿಸಿತು. ಇನ್ನೇನು ಮೈಕೊಡವಿ ಎಚ್ಚೆತ್ತುಕೊಳ್ಳುವ ಹಂತದಲ್ಲಿ 2019ರ ಮತ್ತೊಂದು ಮಹಾಮಳೆ ಬದುಕನ್ನು ತತ್ತರಿಸಿ ಕೊಂಡು ಹೋಯಿತು. ಅಬ್ಬಾ ಇನ್ನಾದರು ಮುಂದೆ ಹೆಜ್ಜೆಯಿಡುವ ಎನ್ನುವ ತವಕದಲ್ಲಿರುವಾಗ 2020ರ ಆದಿಯಲ್ಲಿ ಕೊರೋನಾ ಮಾಹಮಾರಿ, ಅದರೊಂದಿಗೆ ಮಹಾಮಳೆಯು ಗಾಯದ ಮೇಲೆ ಬರೆ ಎಳೆದಂತೆ ಕಳೆದ ಮೂರು ವರ್ಷಗಳು ಕುಸಿದು ಹೊಯಿತು. 2021ರಲ್ಲಿ ಕೊರೋನಾ ಎರಡನೇ ಅಲೆ ನಿಧಾನವಾಗಿ ತಣ್ಣಗೆ ಆಗುತ್ತಿದೆ ಎನ್ನುವಷ್ಟರಲ್ಲಿ ಮಳೆ ಕಳೆದು ಕೊರೋನಾ ಮೂರನೇ ಅಲೆಯ ಆತಂಕ.  

    ಕೋವಿಡ್-19 ಅಸಂಖ್ಯ ವೃತ್ತಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಯಕದಿಂದ ಬದುಕಿನ ಬಂಡಿ ನಡೆಸುತ್ತಿದ್ದ  ಕುಟುಂಬಗಳು ಮುಂದೇನು ಎಂದು ತೋಚದೆ ಕಂಗಾಲಾಗಿವೆ. ಕಳೆದ ಒಂದು ವರುಷ 2020ರ ಮಾರ್ಚ್ ತಿಂಗಳಿಂದಲೂ ನಿಂತು ಹೋಗಿರುವ ಆದಾಯ ಇನ್ನೂ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.‌ ಒಟ್ಟಿನಲ್ಲಿ ಕೊರೊನಾ ವೈರಾಣು ಹಲವು ರೀತಿಯಲ್ಲಿ ಜನರ ಬದುಕನ್ನು ಹೈರಾಣಾಗಿಸಿದೆ. ಕಪ್ಪು ಫಂಗಸ್, ಡೆಲ್ಟಾ ವೈರಸ್‌ ಇದೆಲ್ಲಾ ನಿವಾರಣೆಯಾಗಿ ಹೊಸ ಬದುಕು ರೂಪುಗೊಳ್ಳುವುದು ಯಾವಾಗ ಎನ್ನುವಂತಹ ಆತಂಕ ಸ್ಥಿತಿ ನಿರ್ಮಾಣವಾಗಿದೆ.

    ಇಡೀ ದೇಶವೆ ಲಾಕ್ ಡೌನ್ ನಲ್ಲಿ ಸಿಲುಕಿ ಒದ್ದಾಡುತ್ತಿದೆ.  ಎಷ್ಟೋ ಜನರಿಗೆ ಹೊಟ್ಟೆಗೆ ಆಹಾರ ಸಿಗದೇ ಪರದಾಡುವಂತಾಗಿದೆ. ಕೋಟ್ಯಂತರ ಜನರು ಉದ್ಯೋಗ ವ್ಯವಹಾರಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರಗಳು, ಸಂಘ ಸಂಸ್ಥೆಗಳು, ಮಾನವೀಯತೆ ಇರುವ ವ್ಯಕ್ತಿಗಳು ತಮ್ಮ ಕೈಲಾದಷ್ಟು ನೆರವನ್ನು ತೊಂದರೆಯಲ್ಲಿರುವ ಜನರಿಗೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಮನುಷ್ಯ ಮನುಷ್ಯನಿಗಾಗೇ ಆಗುತ್ತಾನೆ ಎಂಬ ಸಂದೇಶ ಸಾರಿದ್ದಾರೆ. ತಿನ್ನುವ ಅನ್ನಕ್ಕೆ ಅಹಂ ಅಡ್ಡಿಯಾಗಬಾರದು. ಹಸಿವಿಗೆ ಅನ್ನವಷ್ಟೇ ಪರಿಹಾರ. ಹೀಗೆ ಅನ್ನ ನೀಡುವ ಕೈಗಳು ಎಂದೂ ಬರಿದಾಗುವುದಿಲ್ಲ ಎಂಬ ಭಾವನೆ ಬಹಳ ಹಿಂದಿನಿಂದಿಲೂ ಬಳಕೆಯಲ್ಲಿದೆ.

    ಜೀವನದಲ್ಲಿ ನೈತಿಕತೆ ಬಹಳ ಮುಖ್ಯ ಎಂಬುದನ್ನು ಈ ಕೊರೋನಾ ಈಗಾಗಲೇ ಕಲಿಸಿಕೊಟ್ಟಿದೆ. ವೈಯಕ್ತಿಕ ಸ್ವಚ್ಛತೆ ಯ ಪಾಠವನ್ನು ಮಕ್ಕಳಿಗೂ ಹೇಳಿಕೊಡುವ ಜವಾಬ್ದಾರಿ ಹೆಚ್ಚಿದೆ. ವಿನಾಕಾರಣ ಮನೆ ಬಿಟ್ಟು ಹೊರಗೆ ಹೋಗಬಾರದು ಎಂಬ ಪಾಠವನ್ನು ಕೂಡ ಇದು ಕಲಿಸಿದೆ. ಬದುಕಿನ ಯಶಸ್ಸಿಗೆ ಹಣ ಅಧಿಕಾರ ಕೀರ್ತಿಗಳ ಬೆನ್ನು ಹತ್ತುತ್ತೇವೆ. ಆದರೆ ಇವುಗಳ ಬೆನ್ನು ಬಿಟ್ಟು ನಮ್ಮ ದೃಷ್ಟಿಯನ್ನು ಬದಲಿಸಿದರೆ ಬದುಕು ಬದಲಾಗುತ್ತದೆ.

    ಒಂದು ವೈರ‍‍ಸ್ ಮನುಕುಲದ ಅಹಂಕಾರ‍‍ಕ್ಕೆ ಸವಾಲಾಗಿಬಿಟ್ಟಿದೆ. ಮುಂದೇನು ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಯಾವ ಜ್ಯೋತಿಷಿಗೂ ಗೊತ್ತಿಲ್ಲ, ಯಾವ ರ‍ಾಷ್ಟ್ರ ನಾಯಕರಿಗೂ ಗೊತ್ತಿಲ್ಲ ನಾವು ಈ ಸಂಕಷ್ಟದಿಂದ ಪಾರಾಗುತ್ತೇವೋ ಇಲ್ಲವೋ ಎಂದು! ಕಾಪಾಡುವ ದೇವನ ಮಂದಿರ‍‍ಕ್ಕೂ ಕೂಡ ಹೋಗಲಾರ‍‍ದ ಸ್ಥಿತಿಗೆ ಮಾನವ ಬಂದು ಬಿಟ್ಟಿದ್ದಾನೆ. ಉಳಿದಿರೋದು ಭರ‍‍ವಸೆ ಮಾತ್ರ‍ ! ನಾವು ಈ ಸಂಕಷ್ಟದಿಂದ ಪಾರ‍ಾಗಬಹುದೇನೋ ಎನ್ನುವ ವಿಶ್ವಾಸ. 

    ಆದರೆ ಎಲ್ಲವೂ ಆರಂಭಗೊಂಡು ಜನಜೀವನ ಒಂದು ಹಳಿ ಹಿಡಿಯಿತೆಂದರೆ ಸಮಾಧಾನ ಪಡಬೇಕಿಲ್ಲ. ಈ ಕೊರೋನಾ ಎಂಬ ಮಾರಿ ಇನ್ನೂ ಮುಸುಕಿನಲ್ಲಿ ಕುಳಿತು ನಮ್ಮನ್ನು ಕಾಡುತ್ತಲೇ ಇರುತ್ತದೆ. ನಮ್ಮ ನಿತ್ಯದ ಬದುಕನ್ನು ಮೊದಲಿನಂತೆ ಬಾಳುವುದೇ ಇದಕ್ಕೆ ಮದ್ದು.

    ನಗರ ಪ್ರದೇಶಗಳಿಂದ ‌ತಮ್ಮ ತಮ್ಮ ಹಳ್ಳಿಗೆ ಬಂದಿರುವ ಸಾವಿರಾರು ಜನರಿಗೆ ನಿಜವಾಗಿಯೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳಿವೆ. ತಕ್ಷಣಕ್ಕೆ ಅವು ಸೃಷ್ಟಿಯಾಗದೇ ಇರಬಹುದು. ದೂರಗಾಮಿ ನೆಲೆಯಲ್ಲಿ ಹಳ್ಳಿಯಲ್ಲಿಯೇ ದುಡಿಯುವ ಕೈಗಳಿಗೆ ಉದ್ಯೋಗಗಳನ್ನು ಹುಟ್ಟು ಹಾಕಬೇಕಿದೆ. ಇದಕ್ಕೆ ಹೊಸ ಆಲೋಚನೆಗಳು ಬೇಕಷ್ಟೆ. 

✍️.... ಅರುಣ್‌ ಕೂರ್ಗ್‌

 (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,