ಜಮೀನಿನ ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ
ಫಲವತ್ತಾದ ಮಣ್ಣು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಸಾಯನಿಕಗಳ ಹಾಗೂ ಪೀಡೆನಾಶಕಗಳ ಬಳಕೆಯಿಂದ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಗೊಂಡು ಬಳಕೆ ಮಾಡಿದ ನಮಗೆಲ್ಲಾ ಆರೋಗ್ಯ ಸಂಬಂದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇದಕ್ಕೆಲ್ಲಾ ಮೂಲ ಮಣ್ಣಿನ ಆರೋಗ್ಯ ಹದಗೆಡುತ್ತಿರುವುದು. ಮಣ್ಣು ಕೂಡ ಜೀವ ಹೊಂದಿರುವ ವಸ್ತುವಾಗಿದ್ದು, ಇದರ ಅರಿವಿಲ್ಲದೆ ರೈತರು ಬೆಳೆಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಸೇರಿಸುತ್ತಿರುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬ ತಪ್ಪು ಕಲ್ಪನೆ ಮಣ್ಣಿನ ಆರೋಗ್ಯ ಹಾಳುಗುವುದಕ್ಕೆ ಕಾರಣವಾಗಿದೆ.
ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಫಲವತ್ತಾದ ಮಣ್ಣು ಬೆಳೆಗಳಿಗೆ ಬೇಕಾದ ಎಲ್ಲಾ 16 ಪೋಷಕಾಂಶಗಳನ್ನು ಸರಿಯಾದ ಪ್ರಮಾಣ, ಬೇಕಾದ ರೂಪದಲ್ಲಿ ಹಾಗೂ ಸಮಯದಲ್ಲಿ ಪೂರೈಸುವಂತಿರಬೇಕು. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೊ ಹಾಗೆಯೇ, ಮಣ್ಣುಗಳ ಗುಣಧರ್ಮಗಳಲ್ಲಿ ಹಾಗೂ ಫಲವತ್ತತೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ವಿಭಿನ್ನತೆಯಿದ್ದು ಇದನ್ನು ಸರಿದೂಗಿಸಿ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯವನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯಗತ್ಯವಾಗಿರುತ್ತದೆ.
ಮಣ್ಣು ಪರೀಕ್ಷೆ ಮಾಡಿಸದೆ ಭೂಮಿಗೆ ರಸಗೊಬ್ಬರಗಳನ್ನು ಹಾಕುವುದರಿಂದ ಬೆಳೆಗೆ ಬೇಕಾದ ಪೂರ್ತಿ ಪ್ರಮಾಣದ ಪೋಷಕಾಂಶಗಳನ್ನು ಒದಗಿಸಿದಂತಾಗುವುದಿಲ್ಲ ಇನ್ನೂ ಕೆಲವೊಮ್ಮೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಗೊಬ್ಬರ ನೀಡಿ, ಪೋಷಕಾಂಶಗಳು ನಿಷ್ಫಲವಾಗಿ, ವಿನಾಕಾರಣ ಹೆಚ್ಚಿನ ಖರ್ಚು ಮಾಡಿದಂತಾಗುತ್ತದೆ. ಆದುದರಿಂದ ಮಣ್ಣು ಪರೀಕ್ಷೆ ಆದರಿಸಿ ಬೆಳೆಗಳಿಗೆ ಶಿಫಾರಸ್ಸಿನಂತೆ ಸೂಕ್ತ ರಸಗೊಬ್ಬರಗಳನ್ನು ಕೊಡಬೇಕು. ಜೊತೆಗೆ ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಮಟ್ಟ, ಸಾವಯವ ಇಂಗಾಲ, ಮಣ್ಣಿನ ರಸಸಾರ ಇತ್ಯಾದಿಗಳ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಫಲವತ್ತತೆ ಆಧಾರದ ಮೇಲೆ ಬೆಳೆಗಳನ್ನು ನಿರ್ಧರಿಸಿ, ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಮಣ್ಣು ಮಾದರಿ ಸಂಗ್ರಹಣೆ ಎಲ್ಲಿ ಮತ್ತು ಹೇಗೆ?:
ಒಂದು ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕಾದಾಗ, ಆ ಜಮೀನಿನಲ್ಲಿರುವ ಎಲ್ಲಾ ಮಣ್ಣನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುವುದು ಸಾಧ್ಯವೇ ? ಹೀಗೆ ಸಂಗ್ರಹಿಸಿದ ಮಣ್ಣು ನಿಜವಾಗಿ ಜಮೀನಿನ ಪರಿಸ್ಥಿತಿಗಳನ್ನು ಪ್ರತಿನಿಧಿಸುವಂತಹ ಮಣ್ಣಿನ ಮಾದರಿಯಾಗಿರುತ್ತದೆಯೇ ? ಇಲ್ಲ ಆದ್ದರಿಂದ ಮಣ್ಣು ಪರೀಕ್ಷೆ ಮಾಡಿಸಬೇಕಾದ ಜಮೀನಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಅತ್ಯವಶ್ಯಕ.
ಮಣ್ಣು ಮಾದರಿಯನ್ನು ಸಂಗ್ರಹಿಸುವ ಮೊದಲು ರೈತರು ತಮ್ಮ ಜಮೀನಿನಲ್ಲಿ ತಿರುಗಾಡಿ ಭೂಮಿಯ ಇಳಿಜಾರು, ಬಣ್ಣ, ಕಣ ವಿನ್ಯಾಸ, ಬೆಳೆ ಪದ್ದತಿ ಹಾಗು ಪೂರ್ವ ನಿರ್ವಹಣೆ ಪದ್ದತಿಗಳಲ್ಲಿ ಇರುವ ವ್ಯತ್ಯಾಸವನ್ನು ತಿಳಿದು ಒಂದೇ ರೀತಿಯ ಭಾಗಗಳನ್ನು ಗುರುತಿಸಿಕೊಳ್ಳಬೇಕು. ನಂತರ ಪ್ರತಿ ಭಾಗದ ಜಮೀನಿನಿಂದ ಸುಮಾರು 8-10 ಜಾಗಗಳನ್ನು ಗುರುತು ಮಾಡಿಕೊಂಡು ಗುದ್ದಲಿಯಿಂದ ’ವಿ’ ಆಕಾರದ ಗುಂಡಿಯನ್ನು ತೆಗೆಯಬೇಕು. ಗುಂಡಿಯ ಆಳವನ್ನು ಬೆಳೆಯ ಬೇರಿನ ಬೆಳವಣಿಗೆ ಆಧರಿಸಿ ನಿರ್ಧರಿಸಬೇಕು. (ಉದಾ: ಭತ್ತ, ಕಬ್ಬು, ರಾಗಿ ಬೆಳೆಗಳಲ್ಲಿ ಒಂದು ಅಡಿ ಆಳದವರೆಗೆ, ಹಿಪ್ಪುನೇರಳೆ ಹಾಗೂ ತೋಟಗಾರಿಕಾ ಬೆಳೆಗಳಾಗಿದ್ದಲ್ಲಿ ಎರಡು ಅಡಿಯವರೆಗೂ ಆಳ ತೆಗೆಯಬೇಕು). ನಂತರ ಗುಂಡಿಯಲ್ಲಿರುವ ಮಣ್ಣನ್ನು ಹೊರ ಹಾಕಿ ಗುಂಡಿಯ ಒಂದು ಬದಿಯಿಂದ ಎರಡು ಅಂಗುಲ ದಪ್ಪದ ಮಣ್ಣಿನ ಪದರವನ್ನು ಗುಂಡಿಯ ಮೇಲಿಂದ ತಳ ಭಾಗದವರೆಗೂ ಕತ್ತರಿಸಿ ತೆಗೆಯುವುದು.
ಸಂಗ್ರಹಿಸಿದ ಎಲ್ಲಾ ಮಾದರಿ ಮಣ್ಣನ್ನು ಒಂದು ಸ್ವಚ್ಚ ಪ್ಲಾಸ್ಟಿಕ್ ಬಾಣಲಿಯಲ್ಲಿ ಹಾಕಿಕೊಂಡು ಒಂದು ಶುಭ್ರವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಸುರಿದು ಚೆನ್ನಾಗಿ ಮಿಶ್ರಣ ಮಾಡಬೇಕು. ಅನಂತರ ಹೆಂಟೆಗಳೇನಾದರೂ ಇದ್ದಲ್ಲಿ ಒಡೆದು ಪುಡಿ ಮಾಡುವುದು, ಕಲ್ಲು, ಗಾಜು, ಸಸ್ಯಗಳ ಬೇರು ಮುಂತಾದ ವಸ್ತುಗಳನ್ನು ಆರಿಸಿ ತೆಗೆಯುವುದು. ಹೀಗೆ ಸಂಗ್ರಹಿಸಿದ ಮಾದರಿ ತೂಕವು ಸುಮಾರು 8 ರಿಂದ 10 ಕೆ.ಜಿ ಗಳಿರಬಹುದು. ಆದರೆ, ಮಣ್ಣಿನ ವಿಶ್ಲೇಷಣೆಗೆ ಸುಮಾರು ಅರ್ಧ ಕೆ.ಜಿ. ಮಣ್ಣು ಸಾಕಾಗುವುದರಿಂದ ಕ್ವಾರ್ಟರಿಂಗ್ ಪದ್ಧತಿ ಬಳಸಿ ಅವಶ್ಯಕವಾದ ಮಣ್ಣನ್ನು ತೆಗೆಯುವುದು.
ಕ್ವಾರ್ಟರಿಂಗ್ ಪದ್ಧತಿಯೆಂದರೆ ಸಂಗ್ರಹಿಸಿದ ಎಲ್ಲಾ ಉಪ ಮಾದರಿಗಳನ್ನು ಮಿಶ್ರಣ ಮಾಡಿ ಅಗಲವಾದ ಪಾಲಿಥೀನ್ ಹಾಳೆ ಮೇಲೆ ಸುರಿದು ಸಮನಾಗಿ ಹರಡಿ ನಾಲ್ಕು ಭಾಗಗಳಾಗಿ ಮಾಡುವುದು. ಮೊದಲನೆಯ ಸಲ 1 ಮತ್ತು 3 ನೇ ಭಾಗದ ಮಣ್ಣನ್ನು ತೆಗೆದುಕೊಳ್ಳುವುದು. ತೆಗೆದ ಮಣ್ಣನ್ನು ಪುನಃ ಮಿಶ್ರಣ ಮಾಡಿ ಮೊದಲಿನಂತೆ ನಾಲ್ಕು ಭಾಗಗಳಾಗಿ ಮಾಡಿ ಈ ಸಲ 2 ಮತ್ತು 4 ನೇ ಭಾಗದ ಮಣ್ಣನ್ನು ತೆಗೆದುಕೊಳ್ಳುವುದು. ಈ ವಿಧಾನವನ್ನು ಸುಮಾರು 1/2 ಕೆ.ಜಿ. ಮಣ್ಣು ಸಿಗುವವರೆಗೂ ಪುನರಾವರ್ತಿಸಬೇಕು.
ಮಣ್ಣು ಮಾದರಿ ಸಂಗ್ರಹಣೆಯಲ್ಲಿ ಗಮನಿಸಬೇಕಾದ ಅಂಶಗಳು:
ಗೊಬ್ಬರದ ಗುಂಡಿ, ರಸ್ತೆ, ಕಾಲುವೆಗಳ ಹತ್ತಿರ, ಬದುಗಳ ಪಕ್ಕ, ಮರದ ಕೆಳಗೆ, ಜಮೀನಿಗೆ ಗೊಬ್ಬರ ಸೇರಿಸಿದ ನಂತರ ಮಾದರಿಗಳನ್ನು ತೆಗೆಯಬಾರದು. ಮಣ್ಣು ಮಾದರಿಗಳನ್ನು ಸಂಗ್ರಹಿಸುವಾಗ ಬೆಳೆಯಿದ್ದಲ್ಲಿ ಬೆಳೆಗಳ ಸಾಲುಗಳ ಮಧ್ಯದ ಭಾಗದಲಿ ತೆಗೆಯಬೇಕು. ಹಾಗೆಯೇ ಸಂಗ್ರಹಿಸುವಾಗ ರಸಗೊಬ್ಬರದ ಚೀಲಗಳನ್ನ್ಲು ಬಳಸಬಾರದು. ಸಂಗ್ರಹಿಸಿದ ಮಣ್ಣಿನಲ್ಲಿ ತೇವಾಂಶವಿದ್ದರೆ ನೆರಳಿನಲ್ಲಿ ಒಣಗಿಸುವುದು ಬಹಳ ಮುಖ್ಯ.
ಹೀಗೆ ಸಂಗ್ರಹಿಸಿದ ಮಣ್ಣಿನ ಮಾದರಿಯ ಜೊತೆಗೆ ರೈತರು ತಮ್ಮ ಹೆಸರು, ವಿಳಾಸ, ಸರ್ವೆ ನಂಬರ್, ಹಿಂದಿನ ಬೆಳೆ, ಗೊಬ್ಬರದ ಬಳಕೆ ಮತ್ತು ಮುಂದಿನ ಬೆಳೆ ಇತ್ಯಾದಿ ಅಂಶಗಳ ಮಾಹಿತಿಯೊಂದಿಗೆ ಹತ್ತಿರದ ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕೊಡುವುದು. ಮಣ್ಣು ಪರೀಕ್ಷಾ ವರದಿಯಲ್ಲಿ ತಿಳಿಸಿದ ಮಾಹಿತಿ ಆಧರಿಸಿ ರಸಗೊಬ್ಬರಗಳ ಬಳಕೆ ಮಾಡಿದ್ದೇ ಆದಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಇಳುವರಿ ಪಡೆಯಬಹುದು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network